ಲೋಕಾಪುರದವರೆಗಿನ 6 ರೈಲು ನಿಲ್ದಾಣಗಳಿಗೆ 3 ಪ್ಯಾಸೆಂಜರ್‌ ರೈಲು ಆರಂಭಿಸಲು ಸ್ಪಂದನೆ

Published : Jul 07, 2026, 07:34 AM IST
Lokapur

ಸಾರಾಂಶ

ಬಾಗಲಕೋಟೆಯ ರೈಲ್ವೆ ಹೋರಾಟ ಸಮಿತಿಯು ಲೋಕಾಪುರದವರೆಗೆ ಪ್ಯಾಸೆಂಜರ್ ರೈಲು ಸೇವೆ ಆರಂಭಿಸಲು ಸಂಸದ ಗದ್ದಿಗೌಡರ ಅವರನ್ನು ಒತ್ತಾಯಿಸಿದೆ. ಬಳಕೆಯಾಗದ ನಿಲ್ದಾಣಗಳು ಹಾಳಾಗುತ್ತಿದ್ದು, ಶೀಘ್ರ ರೈಲು ಆರಂಭಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದೆ.

ಬಾಗಲಕೋಟೆ: ನಗರದ ಸಂಸದರ ಕಚೇರಿಗೆ ರೈಲ್ವೆ ಹೋರಾಟ ಸಮಿತಿಯ ಪದಾಧಿಕಾರಿಗಳು ಸೋಮವಾರ ಭೇಟಿ ನೀಡಿ ಲೋಕಾಪುರದ ವರೆಗೆ ಪ್ಯಾಸೆಂಜರ್ ರೈಲು ಪ್ರಾರಂಭಿಸಲು ಸಂಸದರನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಕುತಬುದ್ದೀನ ಖಾಜಿ ಮಾತನಾಡಿ, ಲೋಕಾಪುರದವರೆಗೆ ಆರು ರೈಲು ನಿಲ್ದಾಣಗಳ ನಿರ್ಮಾಣಕ್ಕಾಗಿ ನೂರಾರು ಕೋಟಿ ರೂ.ಗಳನ್ನು ಖರ್ಚು ಮಾಡಿದ್ದು, ರೈಲ್ವೆ ಸೌಲಭ್ಯ ಇಲ್ಲದಿರುವುದರಿಂದ ಆ ಕಟ್ಟಡಗಳು ಹಾಳಾಗುತ್ತಿದ್ದು, ಅನೈತಿಕ ಚಟುವಟಿಕೆಗಳ ಕೇಂದ್ರವಾಗುತ್ತಿವೆ ಎಂದು ದೂರಿದರು.

ಮೂರು ರೈಲುಗಳು

ಲೋಕಾಪುರ ಮಾರ್ಗದಲ್ಲಿ 1) ಬಾಗಲಕೋಟ ಮೈಸೂರು ಬಸವ ಎಕ್ಸಪ್ರೆಸ್‌ (17307/17308) 2) ಬೆಂಗಳೂರು ಹೊಸಪೇಟೆ ಪ್ಯಾಸೆಂಜರ್ (56419/56420) 3) ವಿಜಯಪುರ ಹೈದರಾಬಾದ ಎಕ್ಸಪ್ರೆಸ್‌ (17029/17030) ಈ ಮೂರು ರೈಲುಗಳನ್ನು ಲೋಕಾಪುರದ ವರೆಗೆ ವಿಸ್ತರಿಸಲು ಸರಳ ಅವಕಾಶವಿದ್ದು, ಹುಬ್ಬಳ್ಳಿ ನೈರುತ್ಯ ರೇಲ್ವೆ ಅಧಿಕಾರಿಗಳನ್ನು ಸಂಪರ್ಕಿಸಿ ಚಾಲನೆ ನೀಡಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಅದರಂತೆ ಲೋಕಾಪುರದಿಂದ ಯಾದವಾಡ, ಮುಧೋಳ, ಜಮಖಂಡಿ ಭಾಗದಲ್ಲಿ ರೇಲ್ವೆ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿಗೆ ಯಾವುದೇ ರೀತಿಯ ಅಡಚಣೆಗಳು ಬಂದರೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಸಮನ್ವಯ ಸಾಧಿಸಿ ಅಡಚಣೆ ಬಗೆಹರಿಸಲು ತಾವು ಪ್ರಮುಖ ಪಾತ್ರ ವಹಿಸಬೇಕು ಎಂದು ಮನವಿ ಮಾಡಿದರು.

ಈಚೆಗೆ ರೇಲ್ವೆ ಹೋರಾಟ ಸಮಿತಿಯು ಬೆಳಗಾವಿ ಜಿಲ್ಲಾ ಅಧಿಕಾರಿಗಳು ಚಿಕ್ಕೋಡಿ ಭೂಸ್ವಾಧೀನ ಅಧಿಕಾರಿಗಳಿಗೆ ಭೇಟಿಯಾಗಿ ಜಮಖಂಡಿಯಿಂದ ಕುಡಚಿ ವರೆಗೆ ಅಗತ್ಯವಿರುವ ಭೂಮಿಯನ್ನು ರೇಲ್ವೆ ಇಲಾಖೆಗೆ ಹಸ್ತಾಂತರಿಸಲು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಹಾಗೂ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಸಂಪರ್ಕಿಸಲಾಗಿದೆ. ಅವರು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. 

ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅದರಂತೆ ತಾವುಗಳು ಬಾಗಲಕೋಟೆ ಜಿಲ್ಲೆಯ ಮಹತ್ವಾಕಾಂಕ್ಷಿ ಯೋಜನೆಯಾದ ಕುಡಚಿ ರೇಲ್ವೆ ಮಾರ್ಗ ಅತೀ ಶೀಘ್ರದಲ್ಲಿ ಪೂರ್ಣಗೊಳಿಸುವ ಇಚ್ಚಾಶಕ್ತಿ ತೋರಬೇಕೆಂದು ಕುತುಬುದ್ದೀನ ಖಾಜಿ ಒತ್ತಾಯಿಸಿದರು.

ಬೇಡಿಕೆಗೆ ಸ್ಪಂದನೆ

ಸಂಸದ ಗದ್ದಿಗೌಡರ ಅವರು, ತತಕ್ಷಣ ರೇಲ್ವೆ ಇಲಾಖೆ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿ ಅತಿ ಶೀಘ್ರದಲ್ಲಿ ಲೋಕಾಪುರದ ವರೆಗೆ ಪ್ಯಾಸೆಂಜರ್ ರೈಲು ಪ್ರಾರಂಭಿಸಬೇಕು. ಕುಡಚಿವರೆಗೂ ಏಕಕಾಲಕ್ಕೆ ಕಾಮಗಾರಿ ಪ್ರಾರಂಭಿಸಲು ಕ್ರಮಕೈಗೊಳ್ಳಬೇಕು. ನನಗೆ ಜಿಲ್ಲೆಯ ಜನರ ಬಹಳ ಒತ್ತಡವಿದೆ, ಅತೀಶೀಘ್ರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಜಿಲ್ಲೆಯಲ್ಲಿ ಹೋರಾಟ ನಡೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.

ಇದನ್ನೂ ಓದಿ: ಕುಡಚಿ-ಬಾಗಲಕೊಟೆ ರೈಲು ಕಾಮಗಾರಿ ವಿಳಂಬಕ್ಕೆ ಕಾರಣ ಏನು? ಸಂಸದರು ಸಿಟ್ಟಾಗಿದ್ದೇಕೆ?

ಈ ಸಂದರ್ಭದಲ್ಲಿ ಜಯಶ್ರೀ ಗುಳಬಾಳ, ಮಹೇಶ ಹುಗ್ಗಿ, ಡಾ.ರವಿ ಜಮಖಂಡಿ, ಬ್ರಿಜ್ ಮೋಹನ ಢಾಗಾ, ದಯಾನಂದ ಬಿಜ್ಜರಗಿ, ಮೈನುದ್ದೀನ ಖಾಜಿ ಇತರರು ಇದ್ದರು.

ಇದನ್ನೂ ಓದಿ: ಉತ್ತರ ಕರ್ನಾಟಕ ರೈಲು ಅಭಿವೃದ್ಧಿ ಬಗ್ಗೆ ಮಹತ್ವದ ಸಭೆ, ಗದಗ-ಮುಂಬೈ ವಂದೇ ಭಾರತ್ ಎಕ್ಸಪ್ರೆಸ್‌ಗೆ ಡಿಮ್ಯಾಂಡ್

PREV
Read more Articles on
click me!

Recommended Stories

ಸ್ಲಂಗೆ ಬಿಎಲ್‌ಒಗಳು ಹೋಗದ ಕಾರಣ SIRಗೆ ಕಾಂಗ್ರೆಸ್ ನೆರವು: ಬಿಕೆ ಹರಿಪ್ರಸಾದ್ ಸಮರ್ಥನೆ
46 ಸೆಕೆಂಡಲ್ಲಿ ಮಾನವನಲ್ಲಿನ 206 ಮೂಳೆ ಹೆಸರೇಳಿ ಮಾಚೇನಹಳ್ಳಿಯ 5 ವರ್ಷದ ಚಾರ್ವಿಕ್