Monsoon deficit: ಕೂಡ್ಲಿಗಿ ಆಯ್ತು, ಕೊಟ್ಟೂರಿಂದಲೂ ರಾತ್ರೋರಾತ್ರಿ 2000 ಜನ ಗುಳೆ!

Kannadaprabha News   | Kannada Prabha
Published : Jul 07, 2026, 06:26 AM IST
 Kottur villagers migrate to cities

ಸಾರಾಂಶ

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನಲ್ಲಿ ಮೇ ಕೊನೆಯ ವಾರದಲ್ಲಿ ಸುರಿದ ಮಳೆ ನಂಬಿ ರೈತರು ಬಿತ್ತನೆ ಮಾಡಿದ್ದರು. ಆದರೆ, ಜೂನ್‌ನಿಂದ ಜುಲೈ ತಿಂಗಳ ಇಲ್ಲಿವರೆಗೆ ಮಳೆ ಬರುವ ಯಾವ ಲಕ್ಷಣವೂ ಕಂಡು ಬರುತ್ತಿಲ್ಲ. ಹೀಗಾಗಿ, ಆತಂಕಗೊಂಡ ಇಲ್ಲಿನ ಜನ ಸುಮಾರು 2000ದಷ್ಟು ಸಂಖ್ಯೆಯಲ್ಲಿ ಗುಳೆ ಹೊರಟಿದ್ದಾರೆ.

- ತಾಲೂಕಲ್ಲಿ ಭೀಕರ ಬರದ ಛಾಯೆ

  •  ರಾಜ್ಯದ ಅನೇಕ ಭಾಗಗಳಂತೆ ವಿಜಯನಗರ ಜಿಲ್ಲೆಯಲ್ಲೂ ಬರ
  •  ಕೊಟ್ಟೂರಿನ 33000 ಹೆಕ್ಟೇರ್ ಪೈಕಿ 8000 ಹೆಕ್ಟೇರ್‌ ಅಷ್ಟೇ ಬಿತ್ತನೆ
  •  ಭಣಗುಡುತ್ತಿವೆ ಕೆರೆ-ಕಟ್ಟೆಗಳು, ಜಮೀನುಗಳು ಬರಡೋ ಬರಡು

ಜಿ.ಸೋಮಶೇಖರ

 ಕೊಟ್ಟೂರು (ಜು.7): ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನಲ್ಲಿ ಮೇ ಕೊನೆಯ ವಾರದಲ್ಲಿ ಸುರಿದ ಮಳೆಯನ್ನು ನಂಬಿ ರೈತರು ಅಲ್ಪ ಸ್ವಲ್ಪ ಬಿತ್ತನೆ ಕಾರ್ಯ ಕೈಗೊಂಡಿದ್ದರು. ಆದರೆ, ಜೂನ್‌ನಿಂದ ಜುಲೈ ತಿಂಗಳ ಇಲ್ಲಿವರೆಗೆ ಮಳೆ ಬರುವ ಯಾವ ಲಕ್ಷಣವೂ ಕಂಡು ಬರುತ್ತಿಲ್ಲ. ಹೀಗಾಗಿ, ಆತಂಕಗೊಂಡ ಇಲ್ಲಿನ ಜನ ಸುಮಾರು 2000ದಷ್ಟು ಸಂಖ್ಯೆಯಲ್ಲಿ ಗುಳೆ ಹೊರಟಿದ್ದಾರೆ.

ದೂಪದಹಳ್ಳಿ ಮತ್ತು ದೂಪದಹಳ್ಳಿ ತಾಂಡಾದ 500 ಜನ, ಮೋತಿಕಲ್‌ ತಾಂಡಾ- 480, ತಿಮಲ್ಲಾಪುರ ದೊಡ್ಡ ತಾಂಡಾ- 450, ತಿಮಲ್ಲಾಪುರ ಸಣ್ಣ ತಾಂಡಾ- 300, ಅಕ್ಕಾಪುರ- 120, ಗಜಾಪುರ- 110, ಕಂದಗಲ್‌ 50 ಮಂದಿ ಸೇರಿದಂತೆ ತಾಲೂಕಿನ ವಿವಿಧ ಹಳ್ಳಿಗಳಿಂದ ಸುಮಾರು 2,000ಕ್ಕೂ ಅಧಿಕ ಮಂದಿ ಗುಳೆ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಗುಳೆ ಹೋಗುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

ರಾತ್ರೋರಾತ್ರಿ ಬಸ್ಸಲ್ಲಿ ಗುಳೆ:

ತಾಲೂಕಿನ ರೈತ ಕುಟುಂಬಗಳು ಉದ್ಯೋಗ ಅರಸಿ ಬಹುತೇಕ ಮಂದಿ ಮೈಸೂರು ಸೀಮೆಯತ್ತ ಗುಳೆ ಹೋಗತೊಡಗಿದ್ದಾರೆ. ಇನ್ನುಳಿದವರು ಚಿಕ್ಕಮಗಳೂರಿನ ಕಾಫಿ ತೋಟಗಳತ್ತ ತೆರಳಿದ್ದಾರೆ. ಕೃಷಿಕರು ತಮ್ಮ ತುತ್ತಿನ ಚೀಲವನ್ನು ತುಂಬಿಕೊಳ್ಳಲು ಕುಟುಂಬ ಸಮೇತ ರಾತ್ರೋರಾತ್ರಿ ಬಸ್ಸಿನಲ್ಲಿ ತೆರಳುತ್ತಿದ್ದಾರೆ.

ಚಿಕ್ಕಮಗಳೂರಿನ ಕಾಫಿ ತೋಟಗಳಲ್ಲಿ ಕೆಲಸ ಮಾಡಿದರೆ ಕೈತುಂಬ ಕೂಲಿ ಸಿಗುವ ಆಶಯ ಹೊಂದಿ ರೈತರು ಕುಟುಂಬ ಸದಸ್ಯರನ್ನು ಕರೆದೊಯ್ಯುತ್ತಿದ್ದಾರೆ. ಮುಂದಿನ ವರ್ಷದವರೆಗೆ ಜೀವನ ಸಾಗಿಸಲು ಬೇಕಾದಷ್ಟು ದುಡ್ಡು ಮಾಡಿಕೊಂಡು ವಾಪಸ್ಸಾಗಲಿದ್ದಾರೆ. ಎರಡು-ಮೂರು ತಿಂಗಳ ನಂತರ ತಾಲೂಕಿನ ತಾಂಡಾಗಳಿಗೆ ಮರಳಲಿದ್ದಾರೆ.

ಮೇ ತಿಂಗಳಲ್ಲಿ ಅಲ್ಪ ಸ್ವಲ್ಪ ಮಳೆ ಸುರಿದ ಹಿನ್ನೆಲೆಯಲ್ಲಿ ರೈತರು ಸಾಲ ಮಾಡಿ, ಹೆಚ್ಚಿನ ಹಣ ವ್ಯಯಿಸಿ ಬಿತ್ತನೆ ಮಾಡಿದ್ದಾರೆ. ಈಗ ಮಳೆಯ ಅವಕೃಪೆಯಿಂದಾಗಿ ಸಾಲ ತೀರಿಸಲು ದಾರಿ ಕಾಣದೆ ಗುಳೆ ಹೋಗುತ್ತಿದ್ದಾರೆ.

ಗಂಭೀರ ಬರದ ಸ್ಥಿತಿ:

ತಾಲೂಕಿನಲ್ಲಿ 33 ಸಾವಿರ ಹೆಕ್ಟೇರ್ ಪ್ರದೇಶಗಳ ಕೃಷಿ ಭೂಮಿ ಪೈಕಿ ಕೇವಲ 8 ಸಾವಿರ ಹೆಕ್ಟೇರ್ ಪ್ರದೇಶಗಳಲ್ಲಿ ಮಾತ್ರ ಬಿತ್ತನೆಯಾಗಿದೆ. ಬಿತ್ತಿರುವ ಮೆಕ್ಕೆಜೋಳ, ಸೂರ್ಯಕಾಂತಿ ಬೆಳೆಗಳು ಮಳೆ ಕಾಣದೆ ಕಮರಿ ಹೋಗುತ್ತಿವೆ. ಕೊಟ್ಟೂರು ಕೆರೆಯಲ್ಲಿ ಮಾತ್ರ ಸ್ವಲ್ಪ ನೀರಿದೆ. ತಾಲೂಕಿನ ಇತರ ಕೆರೆಗಳು ನೀರಿಲ್ಲದೆ ಬಣಗುಡುತ್ತಿವೆ. ತಾಲೂಕಿನಲ್ಲಿ ಜಲಸಂಕಷ್ಟ ಎದುರಾಗುವ ಲಕ್ಷಣಗಳು ಕಂಡು ಬರುತ್ತಿದೆ.

ಮೇ ಬಳಿಕ ದೊಡ್ಡ ಮಳೆ ಇಲ್ಲ

ಕೊಟ್ಟೂರು ತಾಲೂಕಿನಲ್ಲಿ ಮೇ ತಿಂಗಳಲ್ಲಿ ಮಾತ್ರ ಒಂದು ದೊಡ್ಡ ಮಳೆ ಸುರಿಯಿತು. ಅದನ್ನು ಬಿಟ್ಟರೆ ಅಂತಹ ಮಳೆ ಬಂದಿಲ್ಲ. ರೈತರು ಬಿತ್ತಿರುವ ಅಲ್ಪ ಸ್ವಲ್ಪ ಬೆಳೆಗಳು ಬೆಳವಣಿಗೆ ಕಾಣದೆ ನೆಲಕಚ್ಚುತ್ತಿವೆ. ಮುಂಬರುವ ದಿನಗಳಲ್ಲಿ ಮಳೆ ಬರುವ ನಿರೀಕ್ಷೆ ಹೊಂದಿ ರೈತರಿಗೆ ಬೇಕಾಗುವ ಎಲ್ಲ ಬಗೆಯ ಬೀಜಗಳನ್ನು ಇಲಾಖೆ ಸಾಕಷ್ಟು ದಾಸ್ತಾನು ಮಾಡಿಕೊಂಡಿದೆ.

- ಶ್ಯಾಮ್ ಸುಂದರ್, ಕೃಷಿ ಸಹಾಯಕ ಅಧಿಕಾರಿ ಕೊಟ್ಟೂರು.

ಗುಳೆ ತಡೆಯಬೇಕು

ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕೊಟ್ಟೂರಿನ ಹಳ್ಳಿಗಳು, ಕೆಲ ತಾಂಡಾಗಳ ರೈತರು ಪ್ರತಿದಿನ ತಂಡೋಪತಂಡವಾಗಿ ನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಅಲ್ಲಿ ಸಿಗುವ ಹೆಚ್ಚಿನ ದುಡ್ಡು ಜೀವನ ಕಟ್ಟಿಕೊಳ್ಳಲು ಸಹಾಯ ಮಾಡುತ್ತದೆ ಎಂಬ ಬಯಕೆಯಿಂದ ವಿಧಿಯಿಲ್ಲದೆ ಗುಳೆ ಹೋಗುತ್ತಿದ್ದಾರೆ. ಸರ್ಕಾರದವರು ಗುಳೆ ಹೋಗುವುದನ್ನು ತಡೆಯಬೇಕು. ಅವರಿಗೆ ಇಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕು.

- ವೆಂಕಟೇಶ ನಾಯ್ಕ, ದೂಪದಹಳ್ಳಿ ತಾಂಡಾ ರೈತ.

PREV
Read more Articles on
click me!

Recommended Stories

Belagavi No-Fly Zone Declared: ಬೆಳಗಾವಿಗೆ ಆಗಮಿಸಿದ ಆರೆಸ್ಸೆಸ್‌ ಮುಖ್ಯಸ್ಥ ಮೋಹನ್ ಭಾಗವತ್, ಭಾರೀ ಬಿಗಿ ಭದ್ರತೆ! ಕಾರ್ಯಕ್ರಮಕ್ಕೆ ಅನುಮತಿ ಸಿಗುತ್ತಾ?
ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಲ್ಲ: ಬಿಜೆಪಿ ವಿರುದ್ಧ ಸಿಎಂ ಡಿಕೆಶಿ ವಾಗ್ದಾಳಿ