ಅಟಲ್ ಸ್ಟೇಡಿಯಂ ನೆಲಸಮಕ್ಕೆ ಕಳಪೆ ಕಾಮಗಾರಿ ಕಾರಣ?: ಉದ್ಘಾಟನೆಯಾದ 2 ತಿಂಗಳಲ್ಲೇ ಅವಾಂತರ

By Govindaraj SFirst Published May 10, 2022, 3:10 AM IST
Highlights

ಕಳಪೆ ಕಾಮಗಾರಿಯಿಂದ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಎರಡು ತಿಂಗಳ ಹಿಂದೆ ಉದ್ಘಾಟನೆಯಾದ ಅಟಲ್‌ ಬಿಹಾರಿ ವಾಜಪೇಯಿ ಕ್ರೀಡಾಂಗಣದ ಎರಡು ಗ್ಯಾಲರಿ ನೆಲಸಮವಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿಬಂದಿದೆ.

ಬೆಂಗಳೂರು (ಮೇ.10): ಕಳಪೆ ಕಾಮಗಾರಿಯಿಂದ ಎಚ್‌.ಎಸ್‌.ಆರ್‌.ಲೇಔಟ್‌ನಲ್ಲಿ (HSR Layout) ಎರಡು ತಿಂಗಳ ಹಿಂದೆ ಉದ್ಘಾಟನೆಯಾದ ಅಟಲ್‌ ಬಿಹಾರಿ ವಾಜಪೇಯಿ ಕ್ರೀಡಾಂಗಣದ (Atal Bihari Vajpayee Stadium) ಎರಡು ಗ್ಯಾಲರಿ ನೆಲಸಮವಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿಬಂದಿದೆ. ಅಟಲ್‌ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಬಿಬಿಎಂಪಿಯಿಂದ (BBMP) ಸುಮಾರು 3.25 ಕೋಟಿ ವೆಚ್ಚದಲ್ಲಿ ನಾಲ್ಕು ಗ್ಯಾಲರಿ, ವಾಲಿಬಾಲ್‌, ಕಬಡ್ಡಿ, ಬ್ಯಾಸ್ಕೆಟ್‌ ಬಾಲ್‌ ಕೋರ್ಚ್‌, 10 ಫ್ಲಡ್‌ ಲೈಟ್‌ಗಳನ್ನು ನಿರ್ಮಿಸಲಾಗಿತ್ತು. ನಾಲ್ಕು ಗ್ಯಾಲರಿಗಳ ಪೈಕಿ ಎರಡು ಗ್ಯಾಲರಿಗಳು ಭಾನುವಾರದ ಭಾರೀ ಗಾಳಿ ಮಳೆಗೆ ನೆಲಕ್ಕುರುಳಿದವು. ಕಬ್ಬಿಣದ ಸರಳುಗಳು ಗ್ಯಾಲರಿ ಹಿಂಭಾಗದಲ್ಲಿ ನಿಲ್ಲಿಸಲಾದ ವಾಹನಗಳ ಮೇಲೆ ಬಿದ್ದಿದವು. 

ಇನ್ನು ಗ್ರಾನೈಟ್‌ ಮತ್ತು ಸ್ಲಾಬ್‌ಗಳು ಕಿತ್ತುಕೊಂಡು ಹೋಗಿದ್ದವು. ಮಾ.1ರಂದು ಮುಖ್ಯಮಂತ್ರಿಗಳಿಂದ ಉದ್ಘಾಟನೆಯಾಗಿ ಕೇವಲ ಎರಡು ತಿಂಗಳಲ್ಲಿ ಗ್ಯಾಲರಿ ನೆಲಕ್ಕುರುಳಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಮಾಜಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಅವರು, ಉದ್ಘಾಟನೆಯಾಗಿ ಕೇವಲ ಎರಡು ತಿಂಗಳಲ್ಲಿ ಗ್ಯಾಲರಿ ನೆಲಸಮವಾಗಿದೆ ಎಂದರೆ ಸಂಬಂಧಪಟ್ಟಎಂಜಿನಿಯರ್‌ ವಿರುದ್ಧ ಕಠಿಣ ಕ್ರಮಗೊಳ್ಳಬೇಕು. ಇಡೀ ಕಾಮಗಾರಿಯ ಗುಣಮಟ್ಟವನ್ನು ಮರು ಪರಿಶೀಲಿಸಿ ನಿರ್ವಹಣೆ ಅವಧಿ ಪೂರ್ಣಗೊಳ್ಳುವವರೆಗೆ ಬಿಲ್‌ ಪಾವತಿ ಮಾಡಬಾರದು. ಜತೆಗೆ, ಗುತ್ತಿಗೆದಾರ ಬಿಬಿಎಂಪಿಯಲ್ಲಿ ನಡೆಸಲಾದ ಇತರೆ ಕಾಮಗಾರಿಗಳನ್ನು ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

Latest Videos

ಮೆಟ್ರೋ ಪಿಲ್ಲರ್‌ಗೆ ಡಿಕ್ಕಿ ಹೊಡೆದ KSRTC ಬಸ್, 29 ಜನ ಪ್ರಯಾಣಿಕರಿಗೆ ಗಾಯ!

ಗುತ್ತಿಗೆದಾರರಿಂದ ಮರು ನಿರ್ಮಾಣ: ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೊಮ್ಮನಹಳ್ಳಿ ವಲಯದ ವಿಶೇಷ ಆಯುಕ್ತ ಡಾ ಕೆ.ಹರೀಶ್‌ ಕುಮಾರ್‌ ಅವರು, ಗುತ್ತಿಗೆದಾರ ಎಂ.ನಾಗರಾಜು ಕ್ರೀಡಾಂಗಣದ ಕಾಮಗಾರಿ ಮಾಡಿದ್ದರು. ನಿರ್ವಹಣೆ ಅವಧಿ ಇನ್ನು ಬಾಕಿದೆ. ಹಾಗಾಗಿ, ಗುತ್ತಿಗೆದಾರರಿಂದಲೇ ಗ್ಯಾಲರಿ ಮರು ನಿರ್ಮಾಣ ಮಾಡಿಸಲಾಗುವುದು. ಗ್ಯಾಲರಿ ಮರು ನಿರ್ಮಾಣಕ್ಕೆ 15ರಿಂದ 20 ಲಕ್ಷ ವೆಚ್ಚವಾಗಲಿದೆ. ಬಿಬಿಎಂಪಿ ಮತ್ತು ಸರ್ಕಾರಕ್ಕೆ ಯಾವುದೇ ಹೊರ ಆಗದಂತೆ ಗುತ್ತಿಗೆದಾರರಿಂದಲೇ ಮರು ನಿರ್ಮಾಣ ಮಾಡಿಸಲಾಗುವುದು ಎಂದು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಗುಣಮಟ್ಟದಲ್ಲಿ ರಾಜಿ ಆಗಿಲ್ಲ: ಸೋಮವಾರ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬೊಮ್ಮನಹಳ್ಳಿ ಶಾಸಕ ಸತೀಶ್‌ ರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡಿ, ಭಾನುವಾರ ಸಂಜೆ ಭಾರೀ ಪ್ರಮಾಣದ ಗಾಳಿ ಬೀಸಿದ್ದರಿಂದ ಎರಡು ಗ್ಯಾಲರಿಗೆ ಹಾನಿಯಾಗಿದೆ. ಸುಮಾರು .25 ಲಕ್ಷ ವೆಚ್ಚದಲ್ಲಿ ಗ್ಯಾಲರಿ ನಿರ್ಮಿಸಲಾಗಿತ್ತು. ಅದನ್ನು ಮತ್ತೆ ಗುತ್ತಿಗೆದಾರರಿಂದಲೇ 15ರಿಂದ 20 ದಿನದಲ್ಲಿ ಮರು ನಿರ್ಮಿಸುವ ಕೆಲಸ ಮಾಡುತ್ತೇವೆ ಎಂದರು. ಕಳಪೆ ಕಾಮಗಾರಿ ಆಗಿಲ್ಲ. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಬಿರುಗಾಳಿಯಿಂದ ಈ ರೀತಿ ಘಟನೆ ಆಗಿದೆ. ಭಾನುವಾರದ ಮಳೆ-ಗಾಳಿಗೆ ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ 100ಕ್ಕೂ ಅಧಿಕ ಮರಗಳು ಧರೆಗುರುಳಿವೆ. ಮರ ಬಿದ್ದು 20ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ ಎಂದು ಇದೇ ವೇಳೆ ಮಾಹಿತಿ ನೀಡಿದರು.

Sunetra Pandit: ಹಂಪಲ್ಲಿ ಎಗರಿ ಬಿದ್ದ ಸ್ಕೂಟರ್‌: ನಟಿ ಜೀವ ಉಳಿಸಿದ ಹೆಲ್ಮೆಟ್‌!

ಎಚ್‌ಎಸ್‌ಆರ್‌ ಲೇಔಟ್‌ನ ಅಟಲ್‌ ಬಿಹಾರಿ ವಾಜಪೇಯಿ ಕ್ರೀಡಾಂಗಣದ ಎರಡು ಗ್ಯಾಲರಿ ಮಳೆ-ಗಾಳಿಗೆ ಕುಸಿದು ಬಿದ್ದಿರುವ ಬಗ್ಗೆ ತನಿಖೆ ನಡೆಸಿ ಗುತ್ತಿಗೆದಾರರು ಮತ್ತು ಸಂಬಂಧಪಟ್ಟಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
-ತುಷಾರ್‌ ಗಿರಿನಾಥ, ಮುಖ್ಯ ಆಯುಕ್ತರು, ಬಿಬಿಎಂಪಿ

click me!