Azan Row: ಹುಬ್ಳೀಲಿ ಆಜಾನ್‌ಗೂ ಮೊದಲು ಮೊಳಗಿದ ಭಜನೆ

By Girish Goudar  |  First Published May 10, 2022, 4:22 AM IST

*  ದೇವಸ್ಥಾನದ ಪಕ್ಕವೇ ಇರುವ ಮಸೀದಿಯಲ್ಲಿ ಧ್ವನಿವರ್ಧಕದ ಮೂಲಕ ನಡೆಯದ ಆಜಾನ್‌
*  ಬೆಳಗ್ಗೆ 5ರಿಂದ 6ರ ವರೆಗೆ ಭಜನೆ, ಹನುಮಾನ್‌ ಚಾಲಿಸ್‌
*  ಹಳೆ ಹುಬ್ಬಳ್ಳಿಯಲ್ಲಿ ಬಿಗಿ ಭದ್ರತೆ 
 


ಹುಬ್ಬಳ್ಳಿ(ಮೇ.10): ಹುಬ್ಬಳ್ಳಿಯಲ್ಲೂ ಆಜಾನ್‌(Azan) ವಿರುದ್ಧ ಸುಪ್ರಭಾತ ಮೊಳಗಿದೆ. ಈಚೆಗೆ ಹಳೆ ಹುಬ್ಬಳ್ಳಿ ಗಲಭೆ ವೇಲೆ ಕಲ್ಲು ತೂರಾಟಕ್ಕೆ ಒಳಗಾಗಿದ್ದ ದಿಡ್ಡಿ ಹನುಮಂತ ದೇವಸ್ಥಾನ ಸೇರಿ ನಗರದ ಹಲವು ದೇವಸ್ಥಾನದಲ್ಲಿ ನಸುಕಿಗೆ ಭಕ್ತಿಗೀತೆ ಕೇಳಿಸಲಾಯಿತು. ದೇವಸ್ಥಾನದ ಪಕ್ಕವೇ ಇದ್ದ ಕೆಲವು ಮಸೀದಿಗಳು ಧ್ವನಿವರ್ಧಕದ ಮೂಲಕ ಆಜಾನ್‌ ಮಾಡಲಿಲ್ಲ.

ಪ್ರತಿಭಟನಾರ್ಥವಾಗಿ ಶ್ರೀರಾಮ ಸೇನೆ(Sir Ram Sene) ಕರೆಯಂತೆ ಸೋಮವಾರ ಬೆಳಗ್ಗೆ 5ರಿಂದ 6ಗಂಟೆ ವರೆಗೆ ಧ್ವನಿವರ್ಧಕದ ಮೂಲಕ ಭಕ್ತಿಗೀತೆ ಕೇಳಿಸಲಾಯಿತು. ದಿಡ್ಡಿ ಹನುಮಂತ ದೇವಸ್ಥಾನ, ಜಂಗ್ಲಿಪೇಟ ಬಸವೇಶ್ವರ ಗುಡಿ, ಕಲ್ಮೇಶ್ವರ ನಗರದ ಬನ್ನಿ ಮಹಾಕಾಳಿ ದೇವಸ್ಥಾನ, ಸಿದ್ಧಾರೂಢ ಮಠದಲ್ಲಿ ಭಕ್ತಿಗೀತೆ ಹಾಕಲಾಗಿತ್ತು.

Tap to resize

Latest Videos

Azan vs Hanuman Chalisa ಅಜಾನ್ ವಿರುದ್ಧ ಹನುಮಾನ್ ಚಾಲೀಸಾ, ಕಾನೂನು ಕೈಗೆತ್ತಿಕೊಂಡವರಿಗೆ ಸರ್ಕಾರದ ಎಚ್ಚರಿಕೆ!

ಶ್ರೀರಾಮ ಸೇನೆಯ ತಲಾ ಹತ್ತು ಕಾರ್ಯಕರ್ತರು ಎರಡು ತಂಡಗಳಲ್ಲಿ ವಿವಿಧ ದೇವಸ್ಥಾನಗಳಿಗೆ ತೆರಳಿ ಭಜನೆ ಮಾಡಿದರು. ಆಜಾನ್‌ ಪ್ರಾರಂಭ ಆಗುವುದಕ್ಕೂ ಮೊದಲೆ ಶ್ರೀರಾಮ ಸ್ತೋತ್ರ, ಹನುಮಾನ್‌ ಚಾಲಿಸಾ(Hanuman Chalis), ಓಂ ನಮಃ ಶಿವಾಯ(Om Namaha Shivaya) ಪಠಿಸಿದರು. ಘಂಟಾವಾದ್ಯ ಮೊಳಗಿಸಿದರು. ಹಳೆ ಹುಬ್ಬಳ್ಳಿಯ ದಿಡ್ಡಿ ಹನುಮಂತ ದೇವಸ್ಥಾನಕ್ಕೆ(Temples) ಭೇಟಿ ನೀಡಿದ ಶ್ರೀರಾಮ ಸೇನೆಯ 8 ಕಾರ್ಯಕರ್ತರು ಅಣ್ಣಪ್ಪ ದಿವಟಗಿ ನೇತೃತ್ವದಲ್ಲಿ ಭಜನೆ ಮಾಡಿದರು.

ಇನ್ನು ಎಂದಿನಂತೆ ಸಿದ್ಧಾರೂಢ ಮಠದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ನಡೆಯುವ ಪ್ರಥಮ ಪೂಜೆಗೆ ನೂರಾರು ಭಕ್ತರು ಸೇರಿದ್ದರು. ಇಲ್ಲಿ ಸಾಮಾನ್ಯವಾಗಿ ನಡೆಯುವಂತೆ ಬೆಳಗಿನ ಮಹಾಮಂಗಳಾರತಿ ಜರುಗಿತು. ಅಂತಿಮವಾಗಿ ಶ್ರೀರಾಮ ಸೇನೆ ಮುಖಂಡರು ಇಲ್ಲಿಗೆ ಆಗಮಿಸಿ ಆರೂಢರ ದರ್ಶನ ಪಡೆದು ತೆರಳಿದರು.

ಆಜಾನ್‌:

ಮಂಟೂರು ರಸ್ತೆ, ಆನಂದ ನಗರ, ಹಜರತ್‌ ಸೈಯದ್‌ ಫತೇಷಾವಲಿ ದರ್ಗಾ ಸೇರಿ ಪ್ರಮುಖ ಮಸೀದಿಗಳಲ್ಲಿ ಮಾತ್ರ ಆಜಾನ್‌ ಪ್ರಾರ್ಥನೆ ನಡೆಯಿತು. ದಿಡ್ಡಿ ಹನುಮಂತ ದೇವಸ್ಥಾನ, ಜಂಗ್ಲಿಪೇಟ ದೇವಸ್ಥಾನದ ಪಕ್ಕದಲ್ಲೆ ಇರುವ ಮಸೀದಿಗಳಲ್ಲಿ ಧ್ವನಿವರ್ಧಕದ ಮೂಲಕ ಆಜಾನ್‌ ಮಾಡಲಿಲ್ಲ.

ಬಿಗಿ ಭದ್ರತೆ:

ಈಚೆಗೆ ಹಳೆಯ ಹುಬ್ಬಳ್ಳಿ(Hubballi) ಗಲಭೆ ವೇಳೆ ಈ ದೇವಸ್ಥಾನಕ್ಕೆ ಕಲ್ಲು ತೂರಾಟ ಆಗಿದ್ದ ಹಿನ್ನೆಲೆಯಲ್ಲಿ ಹಾಗೂ ಸನಿಹವೇ ಮುಸಲ್ಮಾನರ ಫತೇಷಾವಲಿ ದರ್ಗಾ, ಮಸೀದಿ ಇದ್ದ ಕಾರಣದಿಂದ ಹೆಚ್ಚಿನ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು. ಅದಲ್ಲದೆ, ರೈಲ್ವೆ ಸ್ಟೆಷನ್‌ ರಸ್ತೆಯ ಹನುಮಾನ ಮಂದಿರ, ಸಿದ್ಧಾರೂಢ ಮಠ, ಮೂರುಸಾವಿರ ಮಠ ಸೇರಿ ಸೂಕ್ಷ್ಮ ಪ್ರದೇಶದಲ್ಲಿ ಇರುವ ಮಸೀದಿಗಳ ಬಳಿ ಹೆಚ್ಚಿನ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು. ಡಿಸಿಪಿ ಡಾ. ಗೋಪಾಲ ಎಂ. ಬ್ಯಾಕೋಡ ಹಾಗೂ ಆಯಾ ವ್ಯಾಪ್ತಿಯ ಇನ್‌ಸ್ಪೆಕ್ಟರ್‌ಗಳು ಗಸ್ತು ತಿರುಗಿ ಪರಿಸ್ಥಿತಿ ಮೇಲೆ ನಿಗಾ ವಹಿಸಿದ್ದರು.
 

click me!