ಕೊಪ್ಪಳ: ನದಿ ಒಡಲು ಬಗೆಯುತ್ತಿರುವ ಮರಳು ಮಾಫಿಯಾ

By Kannadaprabha News  |  First Published Jun 10, 2021, 12:09 PM IST

* ಕೊಪ್ಪಳ ಜಿಲ್ಲೆಯ ಹಳ್ಳಕೊಳ್ಳ, ನದಿಗಳು ನಾಶದತ್ತ
* ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೋ ಅಥವಾ ಶ್ಯಾಮಿಲಾಗಿದ್ದಾರೋ?
* ಸ್ಟಾಕ್‌ ಯಾರ್ಡ್‌ನಲ್ಲಿ ನಡೆಯುತ್ತಿರುವುದಾದರೂ ಏನು?
 


ಸೋಮರಡ್ಡಿ ಅಳವಂಡಿ

ಕೊಪ್ಪಳ(ಜೂ.10): ಜಿಲ್ಲಾದ್ಯಂತ ಮರಳು ಮಾಫಿಯಾ ಅಟ್ಟಹಾಸ ಮೆರೆಯುತ್ತಿದೆ. ಹಳ್ಳ, ಕೊಳ್ಳ, ನದಿಗಳ ಗರ್ಭವನ್ನೇ ಬಗೆಯುತ್ತಿದ್ದಾರೆ ಮರಳು ದಂಧೆಕೋರರು. ಅಧಿಕಾರಿಗಳಿಗೆ ಇದು ಗೊತ್ತಿದೆಯೋ ಅಥವಾ ಗೊತ್ತಿಲ್ಲವೋ ಗೊತ್ತಿಲ್ಲ. ಆದರೆ, ಇದರಲ್ಲಿ ಅವರು ಶಾಮೀಲಾಗಿರುವುದರಿಂದಲೇ ಇಷ್ಟೊಂದು ಅವ್ಯಾಹತವಾಗಿ ನಡೆಯುತ್ತಿದೆ ಎನ್ನುವ ಆರೋಪವಂತೂ ಬಲವಾಗಿ ಕೇಳಿ ಬರುತ್ತಿದೆ.

Latest Videos

undefined

ಇದು ಜಲಗಂಡಾಂತರ ತರುವುದರಲ್ಲಿ ಅನುಮಾನವೇ ಇಲ್ಲ. ಹಳ್ಳಕೊಳ್ಳ, ಗಳನ್ನು ಈ ರೀತಿಯಾಗಿ ಬಗೆದಿದ್ದೇ ಆದರೆ, ಅದು ಮುಂದೊಂದು ದಿನ ಅಂತರ್ಜಲ ಕುಸಿತಕ್ಕೆ ಕಾರಣವಾಗುತ್ತದೆ. ಹಳ್ಳಗಳಲ್ಲಿ ಮರಳು ಇಲ್ಲದೆ ನೀರು ಸಂಗ್ರಹ ಸಾಮರ್ಥ್ಯವೇ ಕುಸಿಯುತ್ತದೆ. ಇದು ಅಕ್ಕಪಕ್ಕದಲ್ಲಿ ನೀರಿನ ಮಟ್ಟವನ್ನು ತಗ್ಗಿಸುತ್ತದೆ. ಇದರ ವಿರುದ್ಧ ಹೋರಾಟ ಮಾಡಿ ಮಾಡಿ ರೈತರು ಸುಸ್ತಾಗಿ ಹೋಗಿದ್ದಾರೆ. ಆದರೂ ಈ ಮರಳು ದಂಧೆಗೆ ಬ್ರೇಕ್‌ ಬೀಳುತ್ತಿಲ್ಲ.

ಹಿರೇಹಳ್ಳದ ಗೋಳು:

ನಶಿಸಿ ಹೋಗುತ್ತಿದ್ದ ಹಿರೇಹಳ್ಳ ಪುನಶ್ಚೇತನ ಮಾಡಿದರು. ಇದಕ್ಕಾಗಿ ವರ್ಷಪೂರ್ತಿ ಅಭಿಯಾನ ಮಾಡಿ, ಅದನ್ನು ನದಿಯಂತೆ ಮಾಡಿದರು. ದುರಂತ ಎಂದರೆ ಹೀಗೆ ನದಿಯಂತಾಗಿರುವ ಹಿರೇಹಳ್ಳದ ಗರ್ಭವನ್ನೇ ಈಗ ಮರಳು ದಂಧೆಕೋರರು ಅಗೆಯುತ್ತಿದ್ದಾರೆ. ಹಗಲು, ರಾತ್ರಿ ಎನ್ನದೆ ಸ್ಟಾಕ್‌ ಯಾರ್ಡ್‌ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದಾರೆ. ಇದರಿಂದ ದೊಡ್ಡ ಸಮಸ್ಯೆಯಾಗುತ್ತಿದ್ದರೂ ಜಿಲ್ಲಾಡಳಿತ ಮಾತ್ರ ತನಗೂ ಇದಕ್ಕೂ ಸಂಬಂಧ ಇಲ್ಲ ಎನ್ನುವಂತೆ ಇದ್ದಾರೆ.

ಗಂಗಾವತಿ: ರೈತರ ಹೊಲದಲ್ಲಿ ಬಿತ್ತನೆ ಮಾಡಿದ ಶಾಸಕ ಮುನವಳ್ಳಿ

ಕೊಪ್ಪಳ ತಾಲೂಕಿನ ಹಿರೇಹಳ್ಳದುದ್ದಕೂ ಸುಮಾರು 6 ಸ್ಟಾಕ್‌ ಯಾರ್ಡ್‌ ಅಧಿಕೃತವಾಗಿ ಇವೆ ಎನ್ನಲಾಗುತ್ತದೆ. ಆದರೆ, ವಾಸ್ತವದಲ್ಲಿ ಇಲ್ಲಿ ಮೀಟರ್‌ಗೊಂದು ಸ್ಥಳದಲ್ಲಿ ಮರಳು ಅಗೆದು ತೆಗೆದುಕೊಂಡು ಹೋಗುವ ಕಾರ್ಯ ಹಗಲು, ರಾತ್ರಿ ನಿರಂತರವಾಗಿ ನಡೆಯುತ್ತದೆ.

ಜಿಲ್ಲಾದ್ಯಂತ ಪರಿಸ್ಥಿತಿ ಭಿನ್ನವಾಗಿಲ್ಲ:

ಇದು ಕೇವಲ ಹಿರೇಹಳ್ಳದ ಗೋಳು ಅಲ್ಲ, ಜಿಲ್ಲಾದ್ಯಂತ ನದಿ, ಹಳ್ಳ, ಕೊಳ್ಳಗಳಲ್ಲಿ ಭಾರಿ ಪ್ರಮಾಣದಲ್ಲಿ ಮರಳು ದಂಧೆ ನಡೆಯುತ್ತಿದೆ. ಗಂಗಾವತಿ ತಾಲೂಕಿನಲ್ಲಿ, ಕನಕಗಿರಿ ತಾಲೂಕಿನಲ್ಲಿ ತುಂಗಭದ್ರಾ ನದಿಯುದ್ದಕ್ಕೂ ಮರಳು ದಂಧೆ ಭರ್ಜರಿಯಾಗಿ ನಡೆಯುತ್ತಿದೆ. ಕೊಪ್ಪಳ ತಾಲೂಕಿನ ಹಿನ್ನೀರು ಪ್ರದೇಶದ ತುಂಗಭದ್ರಾ ನದಿಯಲ್ಲಿಯೂ ಮರಳು ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಜಿಲ್ಲೆಯ ಯಾವುದೇ ಏರಿಯಾಗೆ ಹೋದರೂ ಅಲ್ಲಿರುವ ಹಳ್ಳ, ಕೊಳ್ಳಗಳು ಹಾಗೂ ನದಿಗಳು ಅವುಗಳ ಮೂಲಸ್ವರೂಪವನ್ನು ಕಳೆದುಕೊಂಡಿವೆ.

ಕೋವಿಡ್‌ ವರದಾನ:

ಲಾಕ್‌ಡೌನ್‌ ಇರುವುದೇ ಮರಳು ದಂಧೆಗೆ ದೊಡ್ಡ ವರದಾನವಾಗಿದೆ. ಬಂದೋಬಸ್‌್ತನಲ್ಲಿಯೇ ಭರ್ಜರಿಯಾಗಿ ಮರಳು ಗಾಡಿಗಳು ತೆರಳುತ್ತವೆ. ಅವುಗಳನ್ನು ತಪಾಸಣೆ ಮಾಡುವವರು ಇಲ್ಲ, ತಡೆಯುವವರು ಇಲ್ಲದಂತೆ ಆಗಿದೆ. ಟ್ರಾಫಿಕ್‌ ಇಲ್ಲದ ರಸ್ತೆಗಳಲ್ಲಿ ಮರಳು ವಾಹನಗಳ ಓಡಾಟವೇ ಅಧಿಕ ಎನ್ನುವಂತೆ ಆಗಿದೆ.

ಖ್ಯಾತನಾಮರು:

ಮರಳು ದಂಧೆಯ ಹಿಂದೆ ಖ್ಯಾತನಾಮರು, ಅಧಿಕಾರಿಗಳ ಕೈವಾಡ ಇರುವುದು ಪಕ್ಕಾ ಎನ್ನಲಾಗುತ್ತಿದೆ. ಆದ್ದರಿಂದಲೇ ಇದು ಇಷ್ಟೊಂದು ರಾಜಾರೋಷವಾಗಿ ನಡೆಯುತ್ತಿದೆ. ಸಾಮಾನ್ಯರಿಗೂ ಮರಳು ಸಿಗುವಂತೆ ಆಗಬೇಕು ಎನ್ನುವುದು ಈಗಿನ ಸರ್ಕಾರದ ನೀತಿಯಂತೆ. ಆದರೆ, ವಾಸ್ತವದಲ್ಲಿ ಅದು ಹಾಗೆ ಅಲ್ಲವೇ ಅಲ್ಲ, ಸಾಮಾನ್ಯರ ಹೆಸರಿನಲ್ಲಿ ಮತ್ತು ಸ್ಟಾಕ್‌ಯಾರ್ಡ್‌ ಹೆಸರಿನಲ್ಲಿ ಅನ್ಯಜಿಲ್ಲೆಗೆ ಮರಳನ್ನು ದೊಡ್ಡ ಪ್ರಮಾಣದಲ್ಲಿ ಸಾಗಿಸಿ, ಕೋಟಿ ಕೋಟಿ ರುಪಾಯಿ ವ್ಯವಹಾರ ನಡೆಯುತ್ತಿದೆ ಅಕ್ರಮವಾಗಿದೆ. ಇದಕ್ಕೆ ಕಡಿವಾಣ ಹಾಕುವವರು ಯಾರು ?
 

click me!