ಪ್ರತಿಯೊಬ್ಬರೂ ಸರ್ಕಾರದ ಮಾರ್ಕ್ಸ್ ಕಾರ್ಡ್‌ ಕೇಳಬೇಕು: ಪ್ರಕಾಶ್‌ ರಾಜ್‌

By Govindaraj SFirst Published Aug 8, 2022, 9:58 PM IST
Highlights

ಈಗ ಕುಸಿಯುತ್ತಿರುವ ದೇಶದ ಬಗ್ಗೆ ಚಿಂತಿಸುವ ಜೊತೆಗೆ ಪ್ರತಿಯೊಬ್ಬರೂ ಸರ್ಕಾರದ ಮಾರ್ಕ್ಸ್ ಕಾರ್ಡ್‌ ಕೊಡುವಂತೆ ಕೇಳಬೇಕಿದೆ ಎಂದು ಬಹುಭಾಷ ನಟ ಪ್ರಕಾಶ್‌ ರಾಜ್‌ ಹೇಳಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮೈಸೂರು (ಆ.08): ಈಗ ಕುಸಿಯುತ್ತಿರುವ ದೇಶದ ಬಗ್ಗೆ ಚಿಂತಿಸುವ ಜೊತೆಗೆ ಪ್ರತಿಯೊಬ್ಬರೂ ಸರ್ಕಾರದ ಮಾರ್ಕ್ಸ್ ಕಾರ್ಡ್‌ ಕೊಡುವಂತೆ ಕೇಳಬೇಕಿದೆ ಎಂದು ಬಹುಭಾಷ ನಟ ಪ್ರಕಾಶ್‌ ರಾಜ್‌ ಹೇಳಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಧಾನಿ ಭೇಟಿ ವೇಳೆ ಕೋಟ್ಯಂತರ ವೆಚ್ಚ ಮಾಡಿ ತರಾತುರಿಯಲ್ಲಿ ರಸ್ತೆ ಮಾಡಿದರು. ನಮ್ಮ ಹಣ ಖರ್ಚು ಮಾಡಿ ಕಳಪೆ ರಸ್ತೆ ನಿರ್ಮಿಸಿದರೆ ಪ್ರಶ್ನಿಸಬಾರದೆ? ಪ್ರಧಾನಿಯಾಗಲಿ, ಮುಖ್ಯಮಂತ್ರಿಯಾಗಲಿ, ಸಂಸದರಾಗಲಿ ಯಾರೊಬ್ಬರೂ ಒಂದು ರೂಪಾಯಿಯನ್ನು ತಮ್ಮ ಮನೆಯಿಂದ ತರುವುದಿಲ್ಲ. 

ಜನರು ತಮ್ಮ ದುಡ್ಡುಕೊಟ್ಟು ನಮ್ಮನ್ನು ನೋಡಿಕೊಳ್ಳುವಂತೆ ಹೇಳಿದ್ದಾರೆ. ಈ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಿದರೆ ಕೇಳಬಾರದೆ ಎಂದರು. ದೇಶದಲ್ಲಿ ಶೇ. 20ಕ್ಕಿಂತ ಹೆಚ್ಚು ಜನರು 25 ಸಾವಿರಕ್ಕಿಂತ ಹೆಚ್ಚು ಸಂಬಳ ಪಡೆಯುತ್ತಿಲ್ಲ ಎಂಬುದು ದುರಂತ. 10 ಸಾವಿರ ಸಂಬಳ ಪಡೆಯುವವರು ಜೀವನ ಹೇಗೆ ನಡೆಸುತ್ತಾರೆ ಎಂಬುದು ಚಿಂತೆಯಾಗುತ್ತದೆ. ಉದ್ಯೋಗ ಸೃಷ್ಟಿಯಾಗುವುದಿರಲಿ, ಇರುವ ಉದ್ಯೋಗ ನಷ್ಟವಾಗುತ್ತಿರುವುದು ಆತಂಕಕಾರಿ ಸಂಗತಿ ಎಂದು ಅವರು ಹೇಳಿದರು.

ಸಿದ್ದರಾಮೋತ್ಸವದಿಂದ ವಾಪಸ್‌ ಆಗುತ್ತಿದ್ದಾಗ ಮೃತಪಟ್ಟಿದ್ದ ಅಭಿಮಾನಿ ನಿವಾಸಕ್ಕೆ ಸಿದ್ದು ಭೇಟಿ

ವಿದೇಶದಲ್ಲಿನ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಸಂದಾಯ ಮಾಡುವುದಾಗಿ ಮಾತು ಕೊಟ್ಟಿದ್ದರು. ಇದನ್ನು ಪ್ರಶ್ನಿಸಿದರೆ ಹೆದರಿಸಲಾಗುತ್ತಿದೆ. ಹೆದರಿಸುವುದು ಹೇಡಿಗಳ ಕೆಲಸ. ಇದೇ ಸರ್ಕಾರ ಶೇ. 18 ಜಿಎಸ್‌ಟಿ ವಿಧಿಸಿ ಬೀಡಿ ಕಾರ್ಮಿಕರನ್ನು ಸಂಕಷ್ಟಕ್ಕೆ ದೂಡಲಾಗಿದೆ ಎಂದರು. ಓದಿ ಅನುಭವ ಗಳಿಸಿಕೊಳ್ಳಬಾರದು ಎಂಬುದು ಆಳುವವರ ಅಜೆಂಡಾ. ಹಾಗಾಗಿಯೇ ರಂಗಾಯಣಕ್ಕೆ ನೀಡುತ್ತಿದ್ದ ಅನುದಾನ ಕಡಿತವಾಗಿದೆ. ಈಗ ಯಾವ ನಾಟಕ ಮಾಡಬೇಕು ಎಂಬ ಸೆನ್ಸಾರ್‌ ಬಂದಿರುವುದು ದುರಂತ ಎಂದು ಅವರು ಹೇಳಿದರು.

ಮುಂದಿನ ರಾಜಕೀಯ ನಡೆ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಕಾಶ್‌ ರಾಜ್‌, ರಾಜಕೀಯಕ್ಕೆ ಬಂದು ಬಹಳ ದಿನವಾಗಿದೆ. ಇಂದಿಗೂ ನನ್ನ ನಿಲುವು ಬದಲಾಗಿಲ್ಲ. ನಟನಾಗಿ ನನ್ನ ಜವಾಬ್ದಾರಿ ನಿಭಾಯಿಸುತ್ತಲೇ, ರಾಜಕೀಯ ನಿಲುವು, ಜನ ಸಾಮಾನ್ಯರ ಕೆಲಸ ಮಾಡುತ್ತಿದ್ದೇನೆ. ಜಸ್ಟ್‌ ಆಸ್ಕಿಂಗ್‌ ಅಭಿಯಾನ ನಿಂತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಪ್ರಶ್ನೆ ಕೇಳುತ್ತಲೇ ಇದ್ದೇನೆ. ಆದರೆ, ಈವರೆಗೂ ನಾನು ಕೇಳಿದ ಒಂದೂ ಪ್ರಶ್ನೆಗೂ ಉತ್ತರ ಬಂದಿಲ್ಲ. ದನಿ ಎತ್ತದಿದ್ದರೆ ಪ್ರಕಾಶ್‌ ರಾಜ್‌ ಸತ್ತು ಹೋಗುತ್ತಾನೆ ಎಂದರು.

ಒಳ್ಳೆಯ ನಟ ಎಂದು ತೋರಿಸಿಕೊಳ್ಳುವುದು ಸವಾಲು: ನಾನು ವ್ಯಾಪಾರದ ದೃಷ್ಟಿಯಿಂದ ನಿರ್ಮಾಪಕನಾಗಿಲ್ಲ. ಒಂದು ಒಳ್ಳೇಯ ಕತೆ ಬಂದಿದೆ. ಡಿಸೆಂಬರ್‌ ವೇಳೆಗೆ ಅಂತಿಮವಾಗುತ್ತದೆ. ಸಿನಿಮಾದಲ್ಲಿ ಕೆಟ್ಟದು ಒಳ್ಳೇಯದು ಎಂಬುದಿಲ್ಲ. ಮಲೆಯಾಳಂ, ಕನ್ನಡದಲ್ಲಿ ಉತ್ತಮ ಸಿನಿಮಾ ಬರುತ್ತಿವೆ. ಹೊಸ ಪ್ರತಿಭೆಗಳಿಗೆ ಅವಕಾಶ ದೊರೆಯುತ್ತಿವೆ. ಈಗ ನಾನು ಒಳ್ಳೆಯ ನಟ ಎಂದು ತೋರಿಸಿಕೊಳ್ಳುವ ಸವಾಲು ಎದುರಾಗಿದೆ ಎಂದು ಅವರು ವಿವರಿಸಿದರು. ಪ್ರಾದೇಶಿಕ ಸಿನಿಮಾಗಳು ಭಾರತದ ಮಟ್ಟದಲ್ಲಿ ಗೆಲ್ಲುತ್ತಿರುವುದು ಒಳ್ಳೆಯ ಬೆಳವಣಿಗೆ. ವಿಜ್ಞಾನ ಬೆಳೆದಂತೆ ಚಿತ್ರರಂಗದಲ್ಲೂ ಸಾಕಷ್ಟುಬದಲಾವಣೆ ಆಗಿದೆ. ನಾನು ಕರ್ನಾಟಕದಿಂದ ಹೋಗಿ ತಮಿಳುನಾಡು, ಮುಂಬೈ ಮುಂತಾದ ಕಡೆ ನನ್ನ ಸಾಮರ್ಥ್ಯ ಪ್ರದರ್ಶಿಸಬೇಕಾಯಿತು. 

ಇಂದು ಪರಿಸ್ಥಿತಿ ಬದಲಾಗಿದೆ. ತನ್ನ ನೆಲದಿಂದಲೇ ಬೇರೆ ಕಡೆಯೂ ವಿಸ್ತರಿಸಿಕೊಳ್ಳಲು ಅವಕಾಶ ಇದೆ ಎಂದು ಅವರು ತಿಳಿಸಿದರು. ಅನೇಕ ಸುತ್ತಾಟಗಳ ನಡುವೆಯೂ ವ್ಯವಸಾಯ ಹೆಚ್ಚಾಗಿದೆ. ತಮಿಳುನಾಡು, ಆಂಧ್ರಪದೇಶದಲ್ಲಿ ಮನೆ ಇದ್ದರೂ ಮೈಸೂರಿನಲ್ಲಿ ಮನೆ ಮಾಡುವ ಆಸೆ ಇತ್ತು. ಶ್ರೀರಂಗಪಟ್ಟಣದಲ್ಲಿ ತೋಟದ ಮನೆ ಮಾಡಿದ್ದೇನೆ. ಕೃಷಿ ಸಂತೃಪ್ತಿ ಕೊಟ್ಟಿದೆ ಎಂದು ಅವರು ಹೇಳಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್‌.ಟಿ. ರವಿಕುಮಾರ್‌, ಪ್ರಧಾನ ಕಾರ್ಯದರ್ಶಿ ಎಂ. ಸುಬ್ರಹ್ಮಣ್ಯ, ನಗರ ಕಾರ್ಯದರ್ಶಿ ರಂಗಸ್ವಾಮಿ ಇದ್ದರು.

ಮೈಸೂರಿನಲ್ಲಿ ಹಲಸಿನ ಹಬ್ಬ, ಗಮನಸೆಳೆದ ಹಲಸಿನ ಹಣ್ಣಿನ ಖಾದ್ಯಗಳು

ಧ್ವಜದ ಮೂಲಕ ಕೇಂದ್ರ ಸರ್ಕಾರ ರಾಷ್ಟ್ರಪ್ರೇಮ ಪ್ರದರ್ಶಿಸುವ ಮುನ್ನ ಬೆಲೆ ಏರಿಕೆ ಇಳಿಸಿ ಮತ್ತು ಯುವಕರಿಗೆ ಉದ್ಯೋಗ ನೀಡಬೇಕು. ಖಾದಿ ಬಿಟ್ಟು ಪಾಲಿಸ್ಟರ್‌ ಧ್ವಜ ಬಳಸಿ ಎನ್ನುವುದು ಹೇಗೆ ಮೇಕ್‌ ಇನ್‌ ಇಂಡಿಯಾ ಆಗುತ್ತದೆ.
-ಪ್ರಕಾಶ್‌ ರಾಜ್‌, ಬಹುಭಾಷಾ ನಟ

click me!