Dharwad; ಮಲಪ್ರಭಾ ಬಲದಂಡೆ ಕಾಲುವೆ ಭೂಸ್ವಾಧಿನ ರೈತರ ಜಮೀನು ದಾಖಲೆ ಸರಿಪಡಿಸಲು ಸೂಚನೆ

Published : Aug 08, 2022, 09:10 PM IST
Dharwad; ಮಲಪ್ರಭಾ ಬಲದಂಡೆ ಕಾಲುವೆ ಭೂಸ್ವಾಧಿನ ರೈತರ ಜಮೀನು ದಾಖಲೆ  ಸರಿಪಡಿಸಲು ಸೂಚನೆ

ಸಾರಾಂಶ

ಮಲಪ್ರಭಾ ಬಲದಂಡೆ ಕಾಲುವೆ ಭೂಸ್ವಾಧಿನ ರೈತರ ಜಮೀನು ದಾಖಲೆಗಳನ್ನು ಸರಿಪಡಿಸಲು ಸಚಿನ ಶಂಕರ ಪಾಟೀಲ್ ಮುನೇನಕೊಪ್ಪ ಸೂಚನೆ.

ವರದಿ : ಪರಮೇಶ್ವರ ಅಂಗಡಿ‌ ಏಷ್ಯಾನೆಟ್ ಸುವರ್ಣ ನ್ಯೂಸ್

ಧಾರವಾಡ (ಆ.8): ಮಲಪ್ರಭಾ ಬಲದಂಡೆ ಕಾಲುವೆ ನಿರ್ಮಾಣಕ್ಕೆ ಈ ಹಿಂದೆ ಭೂಸ್ವಾಧಿನ ಪಡಿಸಿಕೊಂಡ ನಕ್ಷೆಯ ಪ್ರಕಾರವೇ ಯೋಜನೆ ಇರಬೇಕು. ರೈತರ ಜಮೀನಿನ ಹಕ್ಕು ದಾಖಲೆಗಾಗಿ ಉದ್ಬವಿಸಿರುವ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಬೇಕು ಎಂದು ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಮಲಪ್ರಭಾ ಬಲದಂಡೆ ಕಾಲುವೆಗೆ ಭೂಸ್ವಾಧೀನ ಪಡಿಸಿಕೊಂಡ ಜಮೀನುಗಳ ಹಕ್ಕು ದಾಖಲೆಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಲಪ್ರಭಾ ಬಲದಂಡೆ ಕಾಲುವೆ ನಿರ್ಮಾಣಕ್ಕಾಗಿ 1965 ರಿಂದ 1980 ರವರೆಗೆ ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ. ಆದರೆ ಇತ್ತೀಚೆಗೆ ಭೂ ದಾಖಲೆಗಳನ್ನು ತಂತ್ರಾಂಶದಲ್ಲಿ ಸೇರ್ಪಡೆ ಮಾಡುವ ಸಂದರ್ಭದಲ್ಲಿ ಕೆಲವು ರೈತರ ಜಮೀನಿನ ಪ್ರಮಾಣ ಎರಡು ಬಾರಿ ನಮೂದಾಗಿರುವದರಿಂದ ರೈತರು ಅಗತ್ಯವಾಗಿ ಸಮಸ್ಯೆ  ಎದುರಿಸುವಂತಾಗಿದೆ. ಧಾರವಾಡ, ಗದಗ, ಬಾಗಲಕೋಟ ಜಿಲ್ಲೆಗಳ ವ್ಯಾಪ್ತಿಯಲ್ಲಿ ಇಂತಹ ಹಲವಾರು ಪ್ರಕರಣಗಳಿವೆ. ಸಮಸ್ಯೆ ಇತ್ಯರ್ಥಕ್ಕಾಗಿ ರೈತರು ಅಲೆದಾಡುವ ಪರಿಸ್ಥಿತಿ ಉದ್ಭವವಾಗಿದೆ.

ಅಧಿಕಾರಿಗಳ ತಪ್ಪಿಗೆ ರೈತರು ಶಿಕ್ಷೆ ಅನುಭವಿಸುವಂತಾಗಬಾರದು ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸಬೇಕು. ತಪ್ಪು ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು. ಅಗತ್ಯ ಬಿದ್ದರೆ ವಿಶೇಷ ಭೂಸ್ವಾಧಿನ ಅಧಿಕಾರಿಗಳು, ನೀರಾವರಿ, ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಂಬಂಧಿಸಿದ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆಯನ್ನು ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ಆಯೋಜಿಸಲಾಗುವುದು ಎಂದರು.

ಅಮರಗೋಳ-ಗೊಬ್ಬರಗುಂಪಿ ಏತ ನೀರಾವರಿ ಯೋಜನೆಗೆ ಭೂಸ್ವಾಧೀನ ಪಡಿಸಿಕೊಂಡ ರೈತರಿಗೆ 4 ವರ್ಷಗಳಿಂದ ಪರಿಹಾರ ಹಣ ಪಾವತಿಸದೇ ವಿಳಂಬ ಮಾಡಿರುವ ಕ್ರಮ ಸರಿಯಲ್ಲ.ಸರ್ಕಾರದ ಗೌರವ ಹೆಚ್ಚಿಸುವ ರೀತಿಯಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ತಕ್ಷಣ ಪರಿಹಾರ ಪಾವತಿಸಬೇಕು ಎಂದು ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಸೂಚಿಸಿದರು.

ಮಹದಾಯಿ ನದಿ ವಿಚಾರ; ರಾಜಕಾರಣಿಗಳು ಪ್ರಮಾಣಿಕ ಪ್ರಯತ್ನ ಮಾಡಿಲ್ಲ

ರೈತ ಮುಖಂಡರಾದ ಸುಭಾಸಚಂದ್ರಗೌಡ ಪಾಟೀಲ್, ಸಿದ್ದಪ್ಪ ಮುಪ್ಪಯ್ಯನವರ ಮತ್ತಿತರರು ಮಾತನಾಡಿ, ಮಲಪ್ರಭಾ ಬಲದಂಡೆ ಕಾಲುವೆಗೆ ಭೂಸ್ವಾಧೀನ ಪಡಿಸಿಕೊಂಡ ರೈತರ ಜಮೀನಿನ ಪ್ರಮಾಣವನ್ನು ದಾಖಲೆಗಳಲ್ಲಿ ಎರಡು ಬಾರಿ ನಮೂದಿಸಿರುದರಿಂದ ರೈತರು ಅನಗತ್ಯವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಬ್ಯಾಂಕುಗಳು ನೋಟಿಸ್ ನೀಡುತ್ತಿವೆ. ಸರ್ಕಾರ ಕೂಡಲೇ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.

 

 ಬಾಗಲಕೋಟೆ ಒತ್ತುವರಿ ತೆರವಿಗೆ ನಲುಗಿದ ಮಲಪ್ರಭೆ, ಕಣ್ತೆರೆಯಬೇಕಿದೆ ಸರ್ಕಾರ

ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಗದಗ ಪ್ರಭಾರ ಜಿಲ್ಲಾಧಿಕಾರಿ ಡಾ.ಬಿ.ಸುಶೀಲಾ, ಧಾರವಾಡ ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಗದಗ  ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ಮಲಪ್ರಭಾ ಬಲದಂಡೆ ಕಾಲುವೆ ಯೋಜನೆಯ ಅಧೀಕ್ಷಕ ಇಂಜಿನಿಯರ್ ಶ್ರೀನಿವಾಸ ಮಲ್ಲಿಗವಾಡ, ರೈತ ಮುಖಂಡರಾದ ಎಲ್.ಕೆ.ಶಿವನಗೌಡ, ಶಂಕ್ರಪ್ಪ ನಾಯಕ್, ವಾಯ್.ವಾಯ್.ಗಣಿ, ನಿಂಗಪ್ಪ ತಿರ್ಲಾಪುರ, ನಿಂಗನಗೌಡ ಧರ್ಮಗೌಡ್ರ, ಸಿ.ಕೆ.ಕಡಕೋಳ, ಬಸವರಾಜ ಹತ್ತಿಶೆಟ್ಟರ್ ಮತ್ತಿತರರು ಇದ್ದರು.

PREV
Read more Articles on
click me!

Recommended Stories

ಗಡೀಪಾರು ಸಂಕಷ್ಟದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ್ ದೇಗುಲದ್ಲಿ ಪ್ರಾರ್ಥನೆ
ಅಧಿವೇಶನದ ಮೊದಲ ದಿನವೇ ಕೇಬಲ್‌ ಆಪರೇಟರ್‌ಗಳಿಗೆ ಸಿಹಿಸುದ್ದಿ ನೀಡಿದ ಇಂಧನ ಸಚಿವ ಕೆಜೆ ಜಾರ್ಜ್‌!