ಕುವೆಂಪು ವಿವಿಯಲ್ಲಿ 74ನೇ ಗಣರಾಜ್ಯೋತ್ಸವ ಆಚರಣೆ, ಧ್ವಜಾರೋಹಣ ನೆರವೇರಿಸಿದ ಪ್ರೊ. ವೀರಭದ್ರಪ್ಪ

By Suvarna NewsFirst Published Jan 26, 2023, 4:08 PM IST
Highlights

74ನೇ ಗಣರಾಜ್ಯೋತ್ಸವ ಆಚರಣೆ ಭಾಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ದೇಶದಲ್ಲಿ ಹೆಚ್ಚುತ್ತಿರುವ ಹಿಂಸಾ ಪ್ರವೃತ್ತಿಗಳನ್ನು ನಿಯಂತ್ರಿಸಲು ಎಲ್ಲರಿಗೂ ಉನ್ನತ ಶಿಕ್ಷಣ ನೀಡುವುದೇ ಪರಿಹಾರ ಎಂದರು.

ವರದಿ: ರಾಜೇಶ್ ಕಾಮತ್, ಏಷ್ಯಾನೆಟ್ ಸುವರ್ಣನ್ಯೂಸ್

ಶಿವಮೊಗ್ಗ (ಜ.26): ದೇಶದಲ್ಲಿ ಹೆಚ್ಚುತ್ತಿರುವ ಹಿಂಸಾ ಪ್ರವೃತ್ತಿಗಳನ್ನು ನಿಯಂತ್ರಿಸಲು ಎಲ್ಲರಿಗೂ ಉನ್ನತ ಶಿಕ್ಷಣ ನೀಡುವುದೇ ಪರಿಹಾರ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಅಭಿಪ್ರಾಯಪಟ್ಟರು. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಶಂಕರಘಟ್ಟ ಗ್ರಾಮದಲ್ಲಿನ ಕುವೆಂಪು ವಿವಿಯ ಪರೀಕ್ಷಾಂಗ ಭವನದ ಮುಂಭಾಗದಲ್ಲಿ 74ನೇ ಗಣರಾಜ್ಯೋತ್ಸವ ಆಚರಣೆ ಭಾಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ದೇಶಾದ್ಯಂತ ದಲಿತರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಮೇಲೆ ವಿವಿಧ ರೀತಿಯ ದೌರ್ಜನ್ಯ, ದೈಹಿಕ ಪೀಡನೆಗಳನ್ನು ನಡೆಸುತ್ತಿರುವ ಅಹಿತಕರ ಘಟನೆಗಳ ವರದಿಗಳು ಹೆಚ್ಚಳವಾಗುತ್ತಿವೆ. ಇಂತಹ ಪ್ರವೃತ್ತಿಗಳನ್ನು ಕಡಿತಗೊಳಿಸಲು ಸಮಾಜದೊಳಗೆ ಉನ್ನತ ಶಿಕ್ಷಣವನ್ನು ಹೆಚ್ಚಿಸುವುದೇ ಪರಿಹಾರೋಪಾಯ ಎಂದರು.

ಕಸ್ತೂರಿ ರಂಗನ್ ವರದಿಯ ಪ್ರಕಾರ ದೇಶದ ಉನ್ನತ ಶಿಕ್ಷಣ ಪ್ರವೇಶಾತಿಯು ಶೇ. 26 ಇದೆ. ಇದನ್ನು ಶೇ. 50ಕ್ಕಿಂತ ಅಧಿಕಗೊಳಿಸಲು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಪ್ರಯತ್ನಿಸಲಿದೆ. ವಿದ್ಯಾರ್ಥಿಗಳು ಮತ್ತು ಯುವಜನಾಂಗವು ಹೆಚ್ಚು ಹೆಚ್ಚು ಉನ್ನತ ಶಿಕ್ಷಣ ಪಡೆದಲ್ಲಿ ಸಾಮಾಜಿಕ ಅಗತ್ಯಗಳು, ಉನ್ನತಿ, ಸಮಸ್ಯೆಗಳ ಕುರಿತು ಚಿಂತನಕ್ರಮ ರೂಢಿಸಿಕೊಂಡು  ಪರಿಹಾರೋಪಾಯಗಳನ್ನು ಕಂಡುಹಿಡಿಯುವುದು ಸಾಧ್ಯವಿದೆ. ಶಿಕ್ಷಣಕ್ಕೆ ಜ್ಞಾನ, ಪ್ರೀತಿ, ಭ್ರಾತೃತ್ವ, ಮಾನವೀಯತೆ, ಸಹಬಾಳ್ವೆಗಳನ್ನು ಕಲಿಸುವ ಶಕ್ತಿಯಿದೆ. ಈ ನಿಟ್ಟಿನಲ್ಲಿ ಡಾ. ಅಂಬೇಡ್ಕರ್ ಅವರ ವ್ಯಾಪಕ ಓದು, ಶಿಕ್ಷಣಗಳು ಭಾರತಕ್ಕೆ ಬಲಿಷ್ಠವಾದ ಸಂವಿಧಾನ ನೀಡಿತು. 

Republic Day 2023: ಕೋಮು ಶಕ್ತಿಗಳ ಅಡಗಿಸಲು ನಾವೆಲ್ಲಾ ಒಟ್ಟಾಗಿ ಹೋರಾಡಬೇಕು: ಡಿಕೆಶಿ

ಅಂತಯೇ ಇಂದಿನ ಯುವಸಮೂಹ ಉನ್ನತ ಶಿಕ್ಷಣದ ಜೊತೆಗೆ ಸಾಹಿತ್ಯ ಓದು, ವೃತ್ತಿಪರ ಕೌಶಲ್ಯಗಳ ಕಲಿಕೆ, ಮೂಲಭೂತ ಕರ್ತವ್ಯಗಳ ಅರಿವಿನೊಂದಿಗೆ ತಮ್ಮತಮ್ಮ ಕ್ಷೇತ್ರದಲ್ಲಿ ಸಂವೇದನಾಶೀಲವಾಗಿ ಕಾರ್ಯನಿರ್ವಹಿಸಬೇಕು. ಇದು ಅಹಿಂಸಾ ಪ್ರವೃತ್ತಿ ಹೆಚ್ಚಿಸುತ್ತದೆ ಮತ್ತು ಮಾನವ ಅಭ್ಯುದಯಕ್ಕೆ ದುಡಿದಂತೆ ಆಗುತ್ತದೆ. ಇದುವೇ ಲಕ್ಷಾಂತರ ಹೋರಾಟಗಾರರು ಅಹಿಂಸಾ ಮಾರ್ಗದ ಮೂಲಕ ಪಡೆದ ಸ್ವಾತಂತ್ರವನ್ನು ಗೌರವಿಸುವ ಪರಿಯಾಗಬೇಕು ಎಂದು ತಿಳಿಸಿದರು.

ಬೆಳಗಾವಿ, ಹುಬ್ಬಳ್ಳಿ, ಬೀದರ್‌ನಲ್ಲಿ ಸಂಭ್ರಮದ 74 ನೇ ಗಣರಾಜ್ಯೋತ್ಸವ ಆಚರಣೆ

ಈ ಸಂದರ್ಭದಲ್ಲಿ ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ. ನವೀನ್ ಕುಮಾರ್ ಎಸ್. ಕೆ., ದೈಹಿಕ ಶಿಕ್ಷಣ ವಿಭಾಗದ ಡಾ. ಎನ್. ಡಿ. ವಿರೂಪಾಕ್ಷ ಮತ್ತು ವಿಭಾಗದ ವಿದ್ಯಾರ್ಥಿಗಳು, ವಿವಿಧ ವಿಭಾಗಗಳ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ, ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

click me!