Vijayapura: ಕೊರೋನಾ ಅಟ್ಟಹಾಸಕ್ಕೆ ಬಾಣಂತಿ ಬಲಿ: ಆರು ದಿನದ ಮಗು ತಬ್ಬಲಿ

By Kannadaprabha News  |  First Published Jan 15, 2022, 12:51 PM IST

*  ಮೂರಂಕಿಗೆ ಜಿಗಿತ ಕಂಡ ಕೊರೋನಾ
*  ಶುಕ್ರವಾರ 107ಕ್ಕೇರಿದ ಪಾಸಿಟಿವ್‌ ಕೇಸ್‌, ಓರ್ವ ಮಹಿಳೆ ಸಾವು
*  ಬೆಚ್ಚಿ ಬಿದ್ದ ಗುಮ್ಮಟನಗರಿ ಜನತೆ
 


ರುದ್ರಪ್ಪ ಆಸಂಗಿ

ವಿಜಯಪುರ(ಜ.15):  ಜಿಲ್ಲೆಯಲ್ಲಿ ಕಳೆದ ಹಲವಾರು ದಿನಗಳಿಂದ ಎರಡಂಕಿಯಲ್ಲಿಯೇ ಇದ್ದ ಕೊರೋನಾ(Coronavirus) ಮಹಾಮಾರಿ ಶುಕ್ರವಾರ ಮೂರಂಕಿ ಗಡಿ ತಲುಪಿಸಿದೆ. ಇದರಿಂದಾಗಿ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಿದೆ. ಹೌದು. ಕಳೆದ ಎರಡು ವಾರಗಳಿಂದ ಎರಡಂಕಿಯಲ್ಲಿಯೇ ಮುನ್ನುಗ್ಗುತ್ತಿದ್ದ ಕೊರೋನಾ ಶುಕ್ರವಾರ ಏಕಾಏಕಿ 107 ಪಾಸಿಟಿವ್‌ ಕೇಸ್‌ ದಾಖಲಾಗುವ ಮೂಲಕ ಮೂರಂಕಿಗೆ ಜಿಗಿತ ಕಂಡಿದೆ. ಇದರಿಂದಾಗಿ ನೆರೆಯ ಮಹಾರಾಷ್ಟ್ರದಲ್ಲಿ(Maharashtra) ದಾಂಗುಡಿ ನಡೆಸಿದ್ದ ಕೊರೋನಾ ಈಗ ವಿಜಯಪುರ(Vijayapura) ಜಿಲ್ಲೆಯ ಜನರ ಮನೆ ಬಾಗಿಲಿಗೆ ಬಂದು ಅಪ್ಪಳಿಸಿದೆ. 

Tap to resize

Latest Videos

undefined

ಅಕ್ಕಪಕ್ಕದ ಬೆಳಗಾವಿ(Belagavi), ಕಲಬುರಗಿ(Kalaburagi) ಜಿಲ್ಲೆಯಲ್ಲಿ ಮೂರನೇ ಅಲೆ ಆರಂಭದಲ್ಲಿಯೇ ಮೂರಂಕಿ ತಲುಪಿ ಅಲ್ಲಿನ ಜನರಲ್ಲಿ ನಡುಕ ಹುಟ್ಟಿಸಿತ್ತು. ವಿಜಯಪುರ ಜಿಲ್ಲೆಯಲ್ಲಿ ಎರಡಂಕಿ ಕೊರೋನಾ ಇರುವುದರಿಂದಾಗಿ ಜಿಲ್ಲೆಯ ಜನರು ಸ್ವಲ್ಪ ಸಮಾಧಾನದಿಂದ ಇದ್ದರು. ಜಿಲ್ಲೆಯಲ್ಲಿ ಕೊರೋನಾ ಕಡಿಮೆ ಪ್ರಮಾಣದಲ್ಲಿದೆ ಎಂದು ಜನರು ಮಾಸ್ಕ್‌, ಸ್ಯಾನಿಟೈಸರ್‌, ಸಾಮಾಜಿಕ ಅಂತರ ಮರೆತು ಜಾತ್ರೆ, ಸಭೆ, ಸಮಾರಂಭ, ಉತ್ಸವಗಳಲ್ಲಿ ಸರಳ ರೀತಿಯಲ್ಲಿ ಆಚರಿಸುವ ನೆಪದಲ್ಲಿ ಕೋವಿಡ್‌ ನಿಯಮಗಳನ್ನು ಸಾರಾಸಗಟಾಗಿ ಉಲ್ಲಂಘನೆ ಮಾಡಿ ನಡೆದುಕೊಂಡಿದ್ದರಿಂದಾಗಿ ಕೊರೋನಾ ಈಗ ಜಿಲ್ಲೆಯಲ್ಲಿಯೂ ಅಟ್ಟಹಾಸದಿಂದ ಮೆರೆಯುವಂತಾಗಿದೆ.

Ballari: ವಿದ್ಯಾರ್ಥಿಗಳ ಮೇಲೆ ಕೋವಿಡ್‌ ದಾಳಿ: ಆತಂಕದಲ್ಲಿ ಪೋಷಕರು

ಓರ್ವ ಮಹಿಳೆ ಸಾವು:

ಜಿಲ್ಲೆಯಲ್ಲಿ ಶುಕ್ರವಾರ ಜಿಲ್ಲಾ ಹೆಲ್ತ್‌ ಬುಲೆಟಿನ್‌ ಆಘಾತಕಾರಿ ಮಾಹಿತಿ ನೀಡಿದೆ. 107 ಮಂದಿಗೆ ಕೋವಿಡ್‌ ಸೋಂಕು ತಗುಲಿದ ವರದಿ ಬಂದಿದ್ದು, ಓರ್ವ ಮಹಿಳೆ ಮೃತಪಟ್ಟಿದ್ದಾರೆ. ವಿಜಯಪುರದಲ್ಲಿ ಒಂದು ಎರಡಂಕಿಗೆ ಸೀಮಿತವಾಗಿದ್ದ ಕೊರೋನಾ ಪಾಸಿಟಿವ್‌ ಕೇಸ್‌ ಒಂದೇ ದಿನಕ್ಕೆ ವಿಜಯಪುರದಲ್ಲಿ 60 ಮಂದಿಗೆ ಕೊರೋನಾ ತಗುಲಿದೆ. ಜತೆಗೆ ಮುದ್ದೇಬಿಹಾಳ 13, ಬಸವನವ ಬಾಗೇವಾಡಿ 6, ಕೊಲ್ಹಾರ, ಇಂಡಿ, ಸಿಂದಗಿ ತಾಲೂಕುಗಳಲ್ಲಿ ತಲಾ 5 ಮಂದಿಗೆ ಪಾಸಿಟಿವ್‌ ಬಂದಿದೆ. ವಿಜಯಪುರ ಗ್ರಾಮೀಣ ಪ್ರದೇಶದಲ್ಲಿ 4, ದೇವರ ಹಿಪ್ಪರಗಿ, ಚಡಚಣ, ಬಬಲೇಶ್ವರ ತಲಾ 1, ನಿಡಗುಂದಿ, ತಾಳಿಕೋಟೆ ತಲಾ 2 ಕೊರೋನಾ ಪ್ರಕರಣಗಳು ವರದಿಯಾಗಿವೆ. ತಿಕೋಟಾ ತಾಲೂಕಿನಲ್ಲಿ ಮಾತ್ರ ಯಾವುದೇ ಕೊರೋನಾ ಪ್ರಕರಣ ವರದಿಯಾಗಿಲ್ಲ.

ವೇಗ ಪಡೆದ ಕೊರೋನಾ:

ಜಿಲ್ಲೆಯಲ್ಲಿ 315 ಸಕ್ರಿಯ ರೋಗಿಗಳು ಇದ್ದು, ಈ ಪೈಕಿ 36 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ(Treatment) ಪಡೆಯುತ್ತಿದ್ದಾರೆ. 279 ಮಂದಿ ಹೋಮ್‌ ಐಸೋಲೇಶನ್‌ನಲ್ಲಿದ್ದಾರೆ. ಕೊರೋನಾ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆಯೇ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವಿಟಿ ದರ ಕೂಡ ಏರು ಗತಿಯಲ್ಲಿ ಸಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ ಒಂದು ವಾರದ ವರದಿಯನ್ನು ಆಧರಿಸಿ ಲೆಕ್ಕ ಹಾಕಿದಾಗ ಪಾಸಿಟಿವಿಟಿ ದರ(Positivity Rate) ಶೇ.2.72ಕ್ಕೇರಿದೆ. ಈ ಎಲ್ಲ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ ಜಿಲ್ಲೆಯಲ್ಲಿಯೂ ಕೊರೋನಾ ವೇಗದಿಂದ ಹರಡುತ್ತಿದೆ ಎಂಬುವುದು ಸ್ಪಷ್ಟವಾಗುತ್ತದೆ.

Corona Update ಕರ್ನಾಟಕದಲ್ಲಿ ಕೊರೋನಾ ಏರಿಕೆ, ಸಾವಿನ ಸಂಖ್ಯೆಯಲ್ಲೂ ಹೆಚ್ಚಳ

ಜಿಲ್ಲೆಯಲ್ಲಿ ಕೊರೋನಾ ದಿನೇ ದಿನೇ ಹೆಚ್ಚುತ್ತಿದೆ. ಆದರೆ ಜನರು ಮಾತ್ರ ಕೋವಿಡ್‌ ಯಾವುದೇ ನಿಯಮ ಪಾಲಿಸುವಲ್ಲಿ ಕನಿಷ್ಠ ಕಾಳಜಿಯನ್ನು ಹೊಂದಿಲ್ಲ. ಕೊರೋನಾ ಕಳೆದ ಎರಡು ವಾರದಿಂದ ಅತಿ ವೇಗವಾಗಿ ಹರಡುವುದಕ್ಕೆ ಸರ್ಕಾರ ಕಾರಣರಲ್ಲ. ಅದಕ್ಕೆ ಜನರೇ ನೇರ ಹೊಣೆಗಾರರಾಗಿದ್ದಾರೆ. ಸರ್ಕಾರ ಕೊರೋನಾ ಸಂಪರ್ಕ ಕೊಂಡಿಯನ್ನು ಮುರಿಯಲು ಕಳೆದ ಎರಡು ವಾರಗಳ ಹಿಂದೆಯೇ ನೈಟ್‌ ಕರ್ಫ್ಯೂ(Night Curfew) ಜಾರಿ ಮಾಡಿದೆ. ಕಳೆದ ವಾರದಿಂದ ವೀಕೆಂಡ್‌ ಕರ್ಫ್ಯೂ(Weekend Curfew) ಶನಿವಾರ, ಭಾನುವಾರ ವಿಧಿಸಿದೆ. ಜಿಲ್ಲೆಗೆ ಬೇರೆ ರಾಜ್ಯ ಹಾಗೂ ಪಕ್ಕದ ಜಿಲ್ಲೆಗಳ ಗಡಿ ಪ್ರದೇಶದಲ್ಲಿ ವಿಜಯಪುರ ಜಿಲ್ಲೆ ಸಂಪರ್ಕ ಕಲ್ಪಿಸುವ 11 ಕಡೆಗಳಲ್ಲಿ ಚೆಕ್‌ ಪೋಸ್ಟ್‌ಗಳನ್ನು ಸ್ಥಾಪಿಸಿ ಹಗಲು ಇರುಳು ತಪಾಸಣೆ ನಡೆಸುತ್ತಿದೆ. ಆದರೆ ಜನರು ಮಾತ್ರ ಸಾಸಿವೆ ಕಾಳಿನಷ್ಟು ಕೊರೋನಾ ಮುಂಜಾಗ್ರತೆ ಅನುಸರಿಸದೇ ಬಿಂದಾಸ್‌ ಆಗಿ ಓಡಾಡಿಕೊಂಡಿದ್ದಾರೆ. ಮೂರನೇ ಅಲೆಯ ಓಮಿಕ್ರೋನ್‌(Omicron) ಕೊರೋನಾ ತಳಿ ಭಾರಿ ವೇಗದಿಂದ ಮುನ್ನುಗ್ಗುತ್ತಿದೆ. ಆದರೆ ಜನರು ಮುನ್ನೆಚ್ಚರಿಕೆ ಕೈಗೊಳ್ಳದಿದ್ದರೆ ಎರಡನೇ ಅಲೆಯಲ್ಲಿ ಕಂಡ ಸಾವಿಗಿಂತಲೂ ಹೆಚ್ಚಿನ ಅನಾಹುತಗಳನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಜನರು ಕಟ್ಟುನಿಟ್ಟಿನಿಂದ ಕೋವಿಡ್‌ ನಿಯಮಗಳನ್ನು ಪಾಲಿಸುವುದು ಈಗ ಅತಿ ಜರೂರಾಗಿದೆ.

ನಿಯಮ ಪಾಲನೆ ಇಲ್ಲ

ಜಿಲ್ಲೆಯಲ್ಲಿ ಮದುವೆ ಮುಂಜಿವೆ, ಜಾತ್ರೆ ಎಗ್ಗಿಲ್ಲದೆ ನಡೆಯುತ್ತಿವೆ. ಸರ್ಕಾರ ಜಾತ್ರೆ, ಮದುವೆ, ಸಭೆ, ಸಮಾರಂಭಗಳಿಗೆ ಜನರ ಮಿತಿ ಹೇರಿದೆ. ಆದರೆ ಯಾವುದೇ ಈ ಕಾರ್ಯಕ್ರಮಗಳಲ್ಲಿ ಜನರ ಮಿತಿ ಕಡ್ಡಾಯವಾಗಿ ಪಾಲಿಸುತ್ತಿಲ್ಲ. ಮದುವೆಯಲ್ಲಿ 200 ಜನರ ಇರಬೇಕು. ಆದರೆ ಸಾವಿರಾರು ಮಂದಿ ಮದುವೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜಾತ್ರೆಯಲ್ಲಿ ಸರಳ ಆಚರಣೆ ಎಂದು ಹೇಳಲಾಗುತ್ತದೆ. ಆದರೆ ವಿಜಯಪುರದ ಸಿದ್ದೇಶ್ವರ ದೇವರ ಜಾತ್ರಾ ಮಹೋತ್ಸವದಲ್ಲಿ ನಂದಿಕೋಲ, ಹೋಮ, ಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸರ್ಕಾರ ವಿಧಿಸಿದ ಜನಸಂಖ್ಯೆ ಮಿತಿ ಪಾಲನೆಯಾಗುತ್ತಿಲ್ಲ. ಜಿಲ್ಲೆಯಲ್ಲಿ ಇದೇ ರೀತಿ ಬಹಳಷ್ಟು ಜಾತ್ರೆ, ಮದುವೆ ಸಮಾರಂಭಗಳು ನಡೆಯುತ್ತಿವೆ. ವಿಜಯಪುರ ಸಿದ್ದೇಶ್ವರ ಜಾತ್ರೆ ಬರೀ ಒಂದು ಉದಾಹರಣೆ.

Karnataka Lockdown ಕರ್ನಾಟಕ ಲಾಕ್‌ಡೌನ್ ಆಗುತ್ತಾ? ಮೋದಿ ಸಭೆ ಬಳಿಕ ಸ್ಪಷ್ಟನೆ ಕೊಟ್ಟ ಆರೋಗ್ಯ ಸಚಿವ

13 ದಿನಗಳಲ್ಲಿ 131 ಮಕ್ಕಳಲ್ಲಿ ಕೊರೋನಾ ಸೋಂಕು ದೃಢ

ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ಕೊರೋನಾ ದಿನೇ ದಿನೇ ಹೆಚ್ಚಾಗುತ್ತಿದೆ. ಕೇವಲ 13 ದಿನಗಳಲ್ಲಿ 131 ಮಕ್ಕಳಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಜ.1ರಿಂದ 13ರವರೆಗೆ ಒಟ್ಟು 131 ಮಕ್ಕಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ ತಿಳಿಸಿದ್ದಾರೆ. 11ರಿಂದ 18 ವರ್ಷದೊಳಗಿನ ಮಕ್ಕಳಲ್ಲಿಯೇ ಹೆಚ್ಚು ಸೋಂಕು ಕಂಡು ಬಂದಿದೆ. ಒಂದು ವರ್ಷದ ಮಕ್ಕಳಿಗೆ ಸೋಂಕು ತಗುಲಿಲ್ಲ. 2ರಿಂದ 5 ವರ್ಷದೊಳಗಿನ 4, 6ರಿಂದ 10 ವರ್ಷದೊಳಗಿನ 7, 11ರಿಂದ 15 ವರ್ಷದ ಒಳಗಿನ 59 ಮತ್ತು 16ರಿಂದ 18 ವರ್ಷದೊಳಗಿನ 61 ಮಕ್ಕಳಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೋವಿಡ್‌ಗೆ ಬಾಣಂತಿ ಬಲಿ, ಆರು ದಿನದ ಮಗು ಬಲಿ

ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತ 21 ವರ್ಷದ ಬಾಣಂತಿ ಸಾವನ್ನಪ್ಪಿದ್ದಾಳೆ ಎಂದು ಡಿಸಿ ತಿಳಿಸಿದ್ದಾರೆ. ಇದರಿಂದ ಆರು ದಿನದ ಮಗು ಇದೀಗ ತಾಯಿ ಇಲ್ಲದೇ ತಬ್ಬಲಿಯಾಗಿದೆ. 

ಜಿಲ್ಲೆಯ ಮೂರನೇ ಅಲೆ ಆರಂಭದ ಮೊದಲ ಸಾವು ಇದಾಗಿದೆ. ಈ ಮಹಿಳೆ(Woman) ಜ.08 ರಂದು ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ(Child) ಜನ್ಮ ನೀಡಿದ್ದಳು. ಈ ವೇಳೆ ಬಾಣಂತಿಗೆ ತೀವ್ರ ಉಸಿರಾಟದ ತೊಂದರೆ, ಜ್ವರ ಸಾರಿ ಸಂಬಂಧಿತ ಕಾಯಿಲೆಗಳು ಕಾಣಿಸಿಕೊಂಡಿದ್ದವು. ಹೀಗಾಗಿ ಜ.9 ರಂದು ಮತ್ತೊಂದು ಆಸ್ಪತ್ರೆಗೆ ದಾಖಲಾಗಿದ್ದಳು. ಜ.10 ರಂದು ಕೋವಿಡ್‌ ಪರೀಕ್ಷೆ ಮಾಡಲಾಗಿತ್ತು. ಜ. 11 ರಂದು ಕೋವಿಡ್‌ ವರದಿ ಪಾಸಿಟಿವ್‌ ಬಂದಿತ್ತು. ಅದೇ ದಿನ ಮಹಿಳೆ ಸಾವನ್ನಪ್ಪಿದ್ದಾಳೆ. ಶಿಷ್ಟಾಚಾರದಂತೆ ಮಹಿಳೆಯ ಅಂತ್ಯಸಂಸ್ಕಾರ(Funeral) ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. 
 

click me!