ಕೃಷ್ಣಾ ನದಿಗೆ 2.30 ಲಕ್ಷ ಕ್ಯುಸೆಕ್‌: ಮತ್ತೆ ಪ್ರವಾಹ ಆತಂಕ

By Kannadaprabha NewsFirst Published Aug 13, 2022, 10:00 AM IST
Highlights
  • ನಾರಾಯಣಪುರ ಜಲಾಶಯದಿಂದ ಶುಕ್ರವಾರ ಕೃಷ್ಣಾ ನದಿಗೆ 2.30 ಲಕ್ಷ ಕ್ಯುಸೆಕ್‌ ನೀರು ಹರಿಬಿಟ್ಟಿರುವ ಹಿನ್ನೆಲೆ ಮತ್ತೆ ಪ್ರವಾಹ ಆತಂಕ 
  • ನದಿ ತೀರಕ್ಕೆ ಜನ ಜಾನುವಾರು ಹೋಗದಂತೆ ತಾಲೂಕು ಆಡಳಿತ ಡಂಗುರ

ದೇವದುರ್ಗ (ಆ.12) : ನಾರಾಯಣಪುರ ಜಲಾಶಯದಿಂದ ಶುಕ್ರವಾರ ಕೃಷ್ಣಾ ನದಿಗೆ 2.30 ಲಕ್ಷ ಕ್ಯುಸೆಕ್‌ ನೀರು ಹರಿಬಿಟ್ಟಿರುವ ಹಿನ್ನೆಲೆ ಮತ್ತೆ ಪ್ರವಾಹ ಆತಂಕ ಆವರಿಸಿದೆ.

ನದಿ ತೀರದ ಗ್ರಾಮಗಳಲ್ಲಿ ತಾಲೂಕು ಆಡಳಿತ ಕಟ್ಟೆಚ್ಚರ ವಹಿಸಲಾಗಿದೆ. ಪದೇ ಪದೆ ಪ್ರವಾಹ ಆತಂಕ ನೆರೆ ಸಂತ್ರಸ್ತರ ಜೀವ ಹಿಂಡುತ್ತಿದೆ. ನದಿ ತೀರಕ್ಕೆ ಜನ ಜಾನುವಾರುಗಳು ಹೋಗದಂತೆ ಗ್ರಾಪಂ ಮೂಲಕ ಡೆಂಗುರ ಸಾರಲಾಗಿದೆ. ಪ್ರವಾಹದಲ್ಲಿ ಕೈಗೊಳ್ಳಬಹುದಾದ ಎಲ್ಲ ಮುನ್ನೆಚ್ಚರಿಕೆಯನ್ನು ತಾಲೂಕು ಆಡಳಿತ ಕೈಗೊಂಡಿದೆ. ತಿಂಥಿಣಿ ಬ್ರಿಜ್‌ನಿಂದ ಗೂಗಲ್‌ವರೆಗೆ ಸುಮಾರ 56 ಕಿಮೀ ಕೃಷ್ಣಾ ನದಿ ತೀರದಲ್ಲಿರುವ ಸಾವಿರಾರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ, ಹತ್ತಿ, ಸೂರ್ಯಕಾಂತಿ ಬಿತ್ತನೆ ಮಾಡಲಾಗಿದೆ. ಬಿತ್ತನೆಗಾಗಿ ಲಕ್ಷಾಂತರ ರು. ವೆಚ್ಚ ಮಾಡಿದ್ದ ರೈತರಿಗೆ ಪ್ರವಾಹ ಆತಂಕ ಕಾಡಲಾರಂಭಿಸಿದೆ. ಹೂವಿನಹೆಡಗಿ, ಜೋಳದಹೆಡಗಿ, ಗಾಗಲ್‌, ಗೂಗಲ್‌ ಸೇರಿದಂತೆ ಇತರೆ ಹಳ್ಳಿಗಳಲ್ಲಿ ಅತಿ ಹೆಚ್ಚು ಗದ್ದೆಯಲ್ಲಿ ಭತ್ತ ನಾಟಿ ಮಾಡಲಾಗಿದೆ. ಮೊದಲೇ ಭತ್ತ ಇಳುವರಿ ಕೊರತೆ ಹಿನ್ನೆಲೆ ಕೈಸೊಟ್ಟಿಕೊಂಡಿದ್ದ ರೈತರಿಗೆ ಇದೀಗ ಪ್ರವಾಹ ಆತಂಕ ಆವರಿಸಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ನದಿ ತೀರದಲ್ಲಿ ಬೀಡುಬಿಟ್ಟಿದ್ದಾರೆ. ನದಿ ಹತ್ತಿರಕ್ಕೆ ಯಾರೂ ಹೋಗದಂತೆ ಎಚ್ಚರಕೆ ವಹಿಸಲಾಗಿದೆ.

ಬಾಗಲಕೋಟೆ: ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ, ಪ್ರವಾಹದ ಎಚ್ಚರಿಕೆ

12ಡಿವಿಡಿ2:ದೇವದರ್ಗ ಪಟ್ಟಣದ ಹೂವಿನಹೆಡಗಿ ಗ್ರಾಮದ ಕೃಷ್ಣಾ ನದಿಗೆ ಹೆಚ್ಚುವರಿ ನೀರು ಹರಿಬಿಟ್ಟಹಿನ್ನೆಲೆ ಗಡ್ಡೆಗೊಳಿ ಬಸವೇಶ್ವರ ದೇವಸ್ಥಾನ ಸಂಪೂರ್ಣ ಮುಳಗಿದೆ.

ನದಿ ಪಾತ್ರದಲ್ಲಿ ಆತಂಕ: ಲಿಂಗಸುಗೂರು(Lingasuguru): ಕೃಷ್ಣಾನದಿಗೆ(Krishna River) ಬಸವಸಾಗರ ಜಲಾಶಯ(Basavasagar Dam)ದಿಂದ 25 ಕ್ರಸ್ಟ್‌ಗೇಟ್‌ಗಳ ಮೂಲಕ ನೀರು ಹರಿಬಿಟ್ಟಹಿನ್ನೆಲೆಯಲ್ಲಿ ನದಿಪಾತ್ರದಲ್ಲಿ ಪ್ರವಾಹದ ಆತಂಕ ಹೆಚ್ಚುತ್ತಿದೆ. ತಾಲೂಕಿನ ಕಡದರಗಡ್ಡಿ, ಯಳಗುಂದಿ, ಹಂಚಿನಾಳ, ಯರಗೋಡಿ ಸೇರಿದಂತೆ ನಡುಗಡ್ಡೆ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಶೀಲಹಳ್ಳಿ ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದ್ದು ಜನ-ಜೀವನದ ಸಂಪರ್ಕಕ್ಕೆ ತೀವ್ರ ಅಡಚಣೆ ಉಂಟಾಗಿದೆ. ನದಿಗೆ 2.20 ಲಕ್ಷ ಕ್ಯುಸೆಕ್‌ ಒಳ ಹರಿವು ಇದೆ. 2.30 ಲಕ್ಷ ಕ್ಯುಸೆಕ್‌ ನೀರು ನದಿಗೆ ಬಿಡಲಾಗುತ್ತಿದೆ. 492.25 ಮೀಟರ್‌ ಎತ್ತರದ ಜಲಾಶಯ 33.31 ಟಿಂಎಂಸಿ ನೀರಿನ ಸಾಮರ್ಥ್ಯ ಹೊಂದಿದೆ. ಸದ್ಯ ಅಣೆಕಟ್ಟೆಯಲ್ಲಿ 491.10 ಮೀಟರ್‌, 28.24 ಟಿಎಂಸಿ ನೀರು ಸಂಗ್ರಹವಿದೆ.

ಮಹಾಮಳೆಯಿಂದ ಕೃಷ್ಣಾ ನದಿ ಪಾತ್ರದಲ್ಲಿ ನೆರೆ ಭೀತಿ

ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ಮಳೆ ಪ್ರಭಾವ ಇಳಿಮುಖವಾಗಿದ್ದರೂ ಮಹಾರಾಷ್ಟ್ರದ ಪಶ್ಚಿಮ ಘಟ್ಟಪ್ರದೇಶದಲ್ಲಿ ಮುಂದುವರಿದಿರುವುದರಿಂದ ಕೃಷ್ಣಾ, ಘಟಪ್ರಭಾ ನದಿಗಳು ಉಕ್ಕಿ ಹರಿಯುತ್ತಿದ್ದು, ತೀರ ಪ್ರದೇಶಗಳಲ್ಲಿ ಪ್ರವಾಹಾತಂಕ ಎದುರಾಗಿದೆ. ಇದರೊಂದಿಗೆ ನಾರಾಯಣಪುರದ ಬಸವರಾಜಸಾಗರ ಜಲಾಶಯದಿಂದ 2 ಲಕ್ಷಕ್ಕೂ ಅಧಿಕ ನೀರನ್ನು ಹೊರಬಿಟ್ಟಿರುವುದರಿಂದ ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ ಕೆಲ ಗ್ರಾಮಗಳು ಮುಳುಗಡೆ ಭೀತಿಯನ್ನು ಎದುರಿಸುತ್ತಿವೆ.

ನಾರಾಯಣಪುರ ಡ್ಯಾಂ ಭರ್ತಿ: ಯಾವುದೇ ಕ್ಷಣದಲ್ಲಿ ಕೃಷ್ಣಾ ನದಿಗೆ ಪ್ರವಾ​ಹ, ಜನತೆ ಎಚ್ಚರದಿಂದರಲು ಸೂಚನೆ

ಬೆಳಗಾವಿ ಜಿಲ್ಲೆಯಲ್ಲಿ ಶುಕ್ರವಾರ ಮಳೆ ಶುಕ್ರವಾರ ತುಸು ತಗ್ಗಿದ್ದರೂ ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವುದರಿಂದ ಮುಳುಗಡೆಯಾಗಿರುವ 20 ಸೇತುವೆಗಳು ಯಥಾಸ್ಥಿತಿಯಲ್ಲಿವೆ. ಆಲಮಟ್ಟಿಜಲಾಶಯಕ್ಕೆ 183667 ಕ್ಯುಸೆಕ್‌ ಒಳಹರಿವಿದ್ದು, 225000 ಕ್ಯುಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ.

\ಕಳೆದ ಮೂರು ದಿನಗಳಿಂದ ತುಂಗಭದ್ರಾ ಜಲಾಶಯದಿಂದ ಅಧಿಕ ಪ್ರಮಾಣದಲ್ಲಿ ಹರಿದು ಬರುತ್ತಿದ್ದ ನೀರಿನ ಪ್ರಮಾಣ ಇಳಿಮುಖವಾಗಿರುವುದರಿಂದ ನವ ವೃಂದಾವನಗಡ್ಡೆ, ಪಂಪಾಸರೋವರ, ಚಿಂತಾಮಣಿ, ವಿರೂಪಾಪುರಗಡ್ಡೆ ಸೇತುವೆ, ಋುಷಿಮುಖ ಪರ್ವತ ಮಾರ್ಗದಲ್ಲಿರುವ ಮಂಟಪಗಳು ಕಾಣಲಾರಂಭಿಸಿವೆ. ಆದರೂ ಬೋಟಿಂಗ್‌ ಸಂಚಾರ ರದ್ದು ಪಡಿಸಲಾಗಿದೆ. ಗಂಗಾವತಿ-ಕಂಪ್ಲಿ ನದಿ ಸೇತುವೆ ಮೇಲೆ ನೀರಿನ ಪ್ರಮಾಣ ಕಡಿಮೆಯಾಗಿದ್ದರೂ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

click me!