ಮಳೆಯಿಂದ ತಾಲೂಕಿನ ವಿವಿಧೆಡೆ ಮನೆಗಳು ಕುಸಿದಿದ್ದು, ಮೇಲ್ಛಾವಣಿ, ಗೋಡೆ ಕುಸಿತಗೊಂಡಿರುವುದರಿಂದ ಬಡ ಜನರು ಸಂಕಷ್ಟದಲ್ಲಿದ್ದಾರೆ. ಅಂಥವರನ್ನು ಗುರುತಿಸಿ ತಲಾ 10 ಸಾವಿರ ರು. ತಾತ್ಕಾಲಿಕ ಪರಿಹಾರ ಕೊಡಬೇಕೆಂದು ಶಾಸಕ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಭಾಲ್ಕಿ (ಆ.13) : ಮಳೆಯಿಂದ ತಾಲೂಕಿನ ವಿವಿಧೆಡೆ ಮನೆಗಳು ಕುಸಿದಿದ್ದು, ಮೇಲ್ಛಾವಣಿ, ಗೋಡೆ ಕುಸಿತಗೊಂಡಿರುವುದರಿಂದ ಬಡ ಜನರು ಸಂಕಷ್ಟದಲ್ಲಿದ್ದಾರೆ. ಅಂಥವರನ್ನು ಗುರುತಿಸಿ ತಲಾ 10 ಸಾವಿರ ರು. ತಾತ್ಕಾಲಿಕ ಪರಿಹಾರ ಕೊಡಬೇಕೆಂದು ಶಾಸಕ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಟ್ಟಣದ ತಹಸೀಲ್ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಟ್ಟಣ ಸೇರಿ ಗಣೇಶಪೂರ್ ವಾಡಿ, ಅಂಬೇಸಾಂಗವಿ, ಸಾಯಿಗಾಂವ, ಬೋಳೆಗಾಂವ ಸೇರಿ ವಿವಿಧೆಡೆ ಭೇಟಿ ನೀಡಿ ಮಳೆಗೆ ಮನೆ ಕುಸಿತ ಕಂಡಿರುವುದು, ಮನೆಗಳಿಗೆ ನೀರು ನುಗ್ಗಿರುವುದು ವೀಕ್ಷಿಸಿ ಸಂತ್ರಸ್ತರಿಗೆ ತಾತ್ಕಾಲಿಕವಾಗಿ ಪರಿಹಾರ ನೀಡುವ ಭರವಸೆ ನೀಡಿದ್ದೇನೆ. ಮನೆ ಕುಸಿತ ಕಂಡಿರುವ ಎಲ್ಲ ಸಂತ್ರಸ್ತರ ಪಟ್ಟಿಸಿದ್ಧಪಡಿಸಿ ಶೀಘ್ರ ಪರಿಹಾರ ಕೊಡಬೇಕೆಂದು ತಹಸೀಲ್ದಾರರಿಗೆ ಸೂಚನೆ ನೀಡಿದರು.
ತೇಗಂಪೂರ್ ಕೆರೆಗೆ ವಿಷಪೂರಿತ ನೀರು: ಖಂಡ್ರೆ ಭೇಟಿ
ಕಳವು ಪ್ರಕರಣ ನಿಯಂತ್ರಿಸಿ: ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದು ಸಿಸಿ ಕ್ಯಾಮರಾ ಸೇರಿ ಆಧುನಿಕ ತಂತ್ರಜ್ಞಾನ ಬಳಸಿ ಕಳವು ಪ್ರಕರಣಗಳನ್ನು ನಿಯಂತ್ರಿಸಬೇಕು. ಈಚೆಗೆ ಪಟ್ಟಣದ ಗೊಬ್ಬರ ಅಂಗಡಿ ಕಳುವಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿಗಳಿಗೂ ಧಕ್ಕೆ ಉಂಟಾಗುತ್ತಿದೆ. ಜನಬೀಡ ಇರುವ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ, ರಾತ್ರಿ ಪಾಳಯದಲ್ಲಿ ಪೊಲೀಸ್ ಸಿಬ್ಬಂದಿ ಹೆಚ್ಚಿಸಬೇಕು. ಜತೆಗೆ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಟ್ರಾಫಿಕ್ ಕಿರಿಕಿರಿ ಉಂಟಾಗಿದ್ದು ನಿಯಂತ್ರಿಸಬೇಕೆಂದರು.
ತಾಲೂಕಿನ ವಿವಿಧೆಡೆ ನಡೆಯುತ್ತಿರುವ ಜಲ ಜೀವನ ಮಿಷÜನ್(ಜೆಜೆಎಂ) ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದೆ. ಸಾಕಷ್ಟುಮುತುವರ್ಜಿ ವಹಿಸಿ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ರಸ್ತೆ ಮಾಡಲಾಗುತ್ತಿದೆ. ಆದರೆ ಜೆಜೆಎಂ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳಲು ಎಲ್ಲೆಂದರಲ್ಲಿ ರಸ್ತೆ ಅಗೆದು ಗುಣಮಟ್ಟದ ರಸ್ತೆ ಹಾಳು ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಅಗೆದ ರಸ್ತೆ ಹಾಗೇ ಬಿಡಲಾಗುತ್ತಿದೆ. ಇದರಿಂದ ರಸ್ತೆಗಳು ಸಂಪೂರ್ಣ ಹಾಳಾಗುತ್ತವೆ. ಅಧಿಕಾರಿಗಳು ಅಗೆದ ರಸ್ತೆಗಳನ್ನು ಸಂಬಂಧಿತ ಗುತ್ತಿಗೆದಾರರಿಂದ ಸರಿಪಡಿಸಿಕೊಳ್ಳಬೇಕು. ಇನ್ಮುಂದೆ ಬೇಕಾಬಿಟ್ಟಿರಸ್ತೆಗಳು ಅಗೆಯದಂತೆ ಎಚ್ಚರ ವಹಿಸಬೇಕು ಎಂದು ಸೂಚನೆ ನೀಡಿದರು.
ಗೋರಚಿಂಚೋಳಿ, ಭಾಟಸಾಂಗವಿ ಮುಂತಾದ ಕಡೆಗಳಲ್ಲಿ ಕಿರಾಣಾ ಅಂಗಡಿ, ಹೋಟೆಲ್ ಸೇರಿ ಎಲ್ಲೆಂದರಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿರುವ ಬಗ್ಗೆ ಮಹಿಳೆಯರು ದೂರು ನೀಡುತ್ತಿದ್ದಾರೆ ಅಬಕಾರಿ ಇಲಾಖೆ ಅಧಿಕಾರಿಗಳು ಅಕ್ರಮ ಸಾರಾಯಿ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದರು.ಈ ಸಂದರ್ಭದಲ್ಲಿ ತಹಸೀಲ್ದಾರ ಕೀರ್ತೀ ಚಾಲಕ್, ತಾಪಂ ಇಓ ದೀಪಿಕಾ ನಾಯ್ಕರ್ ಸೇರಿದಂತೆ ಹಲವರು ಇದ್ದರು.