ಕಾರ್ಯಕರ್ತನ ಮನೆಯಲ್ಲಿ ನೆಲದ ಮೇಲೆ ಊಟ ಮಾಡಿದ ಕೇಂದ್ರ ಸಚಿವ ಜೈಶಂಕರ್‌

By Kannadaprabha NewsFirst Published Aug 13, 2022, 8:09 AM IST
Highlights

ಬಿಜೆಪಿ ಕಾರ್ಯಕರ್ತ ಹುಲ್ಲಹಳ್ಳಿ ಶ್ರೀನಿವಾಸ್‌ ಮನೆಯಲ್ಲಿ ನೆಲದ ಮೇಲೆ ಕುಳಿತು ಬಾಳೆ ಎಲೆ ಊಟವನ್ನು ತೃಪ್ತಿಯಾಗಿ ಸವಿದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ 

ಬೆಂಗಳೂರು(ಆ.13):  ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ನೆಲದ ಮೇಲೆ ಕುಳಿತು ಬಾಳೆ ಎಲೆಯಲ್ಲಿ ಊಟ ಸವಿದು ಸರಳತೆ ಮೆರೆದರು.ಎಲೆಕ್ಟ್ರಾನಿಕ್‌ ಸಿಟಿಯ ಎಂಎನ್‌ಸಿ ಕಂಪನಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಶಾಸಕ ಎಂ.ಕೃಷ್ಣಪ್ಪ ಅವರ ಜೊತೆ ಬಿಜೆಪಿಯ ಕಾರ್ಯಕರ್ತ ಹುಲ್ಲಹಳ್ಳಿ ಶ್ರೀನಿವಾಸ್‌ ಅವರ ಮನೆಯಲ್ಲಿ ನೆಲದ ಮೇಲೆ ಕುಳಿತು ಬಾಳೆ ಎಲೆ ಊಟವನ್ನು ತೃಪ್ತಿಯಾಗಿ ಸವಿದರು. ಅವರಿಗಾಗಿ ಸಿದ್ಧಪಡಿಸಿದ್ದ ಸಸ್ಯಾಹಾರಿ ಊಟದಲ್ಲಿ ದಕ್ಷಿಣ ಭಾರತ ತಿನಿಸುಗಳಾದ ಹೋಳಿಗೆ, ಪಾಯಸ, ಪುಲ್ಕಾ ದಾಲ್‌, ಕೋಸಂಬರಿ, ಪಲ್ಯ, ಅನ್ನ ಸಾರು, ಮೊಸರನ್ನು ತೃಪ್ತಿಯಾಗಿ ಸವಿದರು. ನಂತರ ಬಾಳೆ ಹಣ್ಣು ತಿನ್ನುತ್ತಾ ಪತ್ರಕರ್ತರೊಂದಿಗೆ ಮಾತಿಗಿಳಿದರು. ಹಾಗೆಯೇ ‘ನೀವು ಊಟ ಮಾಡಿ’ ಎಂದು ಮಾಧ್ಯಮದವರನ್ನು ಕರೆದದ್ದು ಅವರ ಸರಳತೆ ಜೊತೆಗೆ ಸ್ನೇಹಮಯ ಎಂಬುದನ್ನೂ ರುಜುವಾತು ಮಾಡಿತು.

ವಿದ್ಯಾರ್ಥಿಗಳು ತಾವು ಅಧ್ಯಯನ ನಡೆಸುತ್ತಿರುವ ವಿಷಯಕ್ಕಷ್ಟೇ ಸೀಮಿತರಾಗಿರದೇ ದೇಶ ಮತ್ತು ಜಗತ್ತಿನಲ್ಲಿ ಆಗುತ್ತಿರುವ ಬೆಳವಣಿಗೆ, ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ಇಂದು ದೇಶ ಕ್ಷಿಪ್ರ ಗತಿಯಲ್ಲಿ ವಿವಿಧ ವಲಯಗಳಲ್ಲಿ ಪ್ರಗತಿ ಕಾಣುತ್ತಿರುವುದರ ಅರಿವು ವಿದ್ಯಾರ್ಥಿಗಳಿಗಿರಬೇಕು ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ.

ಗಣೇಶ ಮೂರ್ತಿ ಬೇಡ ಎನ್ನಲು ಜಮೀರ್‌ ಯಾರು?: ಸಿ.ಟಿ.ರವಿ

ವಿದ್ಯಾರ್ಥಿಗಳು ಜಗತ್ತಿನ ಬೆಳವಣಿಗೆ ಗಮನಿಸಿ: 

ಬಳಿಕ ಹೊರವರ್ತುಲ ರಸ್ತೆಯಲ್ಲಿರುವ ಪಿಇಎಸ್‌ ವಿಶ್ವವಿದ್ಯಾಲಯದ ರಜತ ಮಹೋತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾನು ವಿದ್ಯಾರ್ಥಿ ದೆಸೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಆಸಕ್ತನಾಗಿದ್ದೆ. ನಾನು ವಿಜ್ಞಾನದಲ್ಲಿ ಪದವಿ ಪಡೆದೆ. ಬಳಿಕ ಸ್ನಾತಕೋತ್ತರ ಪದವಿಯನ್ನು ಕಲಾ ವಿಷಯದಲ್ಲಿ ಪಡೆದುಕೊಂಡೆ. ಇತಿಹಾಸಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಆಸಕ್ತಿಯಿಂದ ಓದುತ್ತಿದೆ. ವಿವಿಧ ವಿಷಯಗಳ ಬಗ್ಗೆಗಿನ ಅಲ್ಪಸ್ವಲ್ಪ ಅರಿವು ನನ್ನ ವೃತ್ತಿ ಜೀವನಕ್ಕೆ ನೆರವು ನೀಡಿದೆ. ವಿದ್ಯಾರ್ಥಿಗಳು ವಿವಿಧ ಜ್ಞಾನ ಶಾಖೆಗಳ ಮಾಹಿತಿ ಹೊಂದಿರುವುದು ಒಳ್ಳೆಯದು ಎಂಬುದಕ್ಕೆ ನಾನೇ ಉದಾಹರಣೆ ಎಂದು ಅವರು ಹೇಳಿದರು.

ನಾನು ಹುಟ್ಟಿಬೆಳೆದದ್ದು ದೆಹಲಿಯಲ್ಲಿ. ಆದರೆ ನನ್ನ ಅಜ್ಜ-ಅಜ್ಜಿ ಬೆಂಗಳೂರಿನಲ್ಲಿದ್ದರು. ಆವರನ್ನು ಭೇಟಿಯಾಗಲು ನಾನು ಬೆಂಗಳೂರಿಗೆ ಬರುತ್ತಿದ್ದೆ. ಇಲ್ಲಿ ಶಾಲೆಗೂ ಹೋಗಿದ್ದೇನೆ. ಆದ್ದರಿಂದ ನನಗೆ ಬೆಂಗಳೂರಿನ ಪರಿಚಯವಿದೆ. ಇಂದು ಬೆಂಗಳೂರು ಒಂದು ದಂತಕತೆಯಾಗಿ ಬೆಳೆದಿದೆ. ನವೋದ್ಯಮ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಬೆಂಗಳೂರಿಗೆ ವಿಶೇಷ ಮಾನ್ಯತೆ ಇದೆ. ಬೆಂಗಳೂರಿನವರು ಎಲ್ಲರಿಗಿಂತ ಎರಡು ಹೆಜ್ಜೆ ಮುಂದಿರುತ್ತಾರೆ ಎಂದು ಜೈಶಂಕರ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಪಿಇಎಸ್‌ ವಿಶ್ವವಿದ್ಯಾಲಯದ ಕುಲಾಧಿಪತಿ ಎಂ.ಆರ್‌.ದೊರೆಸ್ವಾಮಿ ಮಾತನಾಡಿ, 25 ವರ್ಷದ ಹಿಂದೆ ಭಾರತಕ್ಕೆ ಜಾಗತಿಕ ಮಾನ್ಯತೆ ಇರಲಿಲ್ಲ. ಆದರೆ ಈಗ ಜಗತ್ತಿನ ಪ್ರಬಲ ರಾಷ್ಟ್ರವಾಗಿ ಭಾರತ ರೂಪುಗೊಂಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನವನ್ನು ಜಗತ್ತಿನ ಬಲಾಢ್ಯ ದೇಶಗಳು ನಿರೀಕ್ಷಿಸುತ್ತಿವೆ ಎಂದು ಹೇಳಿದರು.

ಬಿಜೆಪಿಗರ ಢೋಂಗಿತನದ ರಾಷ್ಟ್ರಭಕ್ತಿ ಬೇಡ: ಸಿದ್ದರಾಮಯ್ಯ

ಪ್ರತಿ ವಿದ್ಯಾರ್ಥಿಯು ತನ್ನ ಸುತ್ತಮುತ್ತ, ದೇಶ ವಿದೇಶದಲ್ಲಿ ಏನೇನು ನಡೆಯುತ್ತಿದೆ ಎಂಬುದರ ಮೇಲೆ ಗಮನವಿಟ್ಟಿರಬೇಕು. ಹಾಗೆಯೇ ಆಯಾ ವಿಷಯಗಳ ಬಗ್ಗೆ ದೇಶದ ನಿಲುವು ಏನಿದೆ ಎಂಬುದನ್ನು ತಿಳಿದುಕೊಂಡಿರಬೇಕು ಎಂದು ಹೇಳಿದರು.

ಉಪಕುಲಪತಿ ಸೂರ್ಯಪ್ರಸಾದ್‌, ಮುಖ್ಯ ಕಾರ್ಯಾಚರಣ ಅಧಿಕಾರಿ ಅಜಯ್‌ ಕುಮಾರ್‌, ರಿಜಿಸ್ಟ್ರಾರ್‌ ಶ್ರೀಧರ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನಮ್ಮ ನೀತಿ ನಮ್ಮದು

ನಮ್ಮ ವಿದೇಶಾಂಗ ನೀತಿಯ ಮೇಲೆ ಅನ್ಯರು ಪ್ರಭಾವ ಬೀರಲು ಸಾಧ್ಯವಿಲ್ಲ. ನಾವು ಇನ್ನೊಂದು ದೇಶಕ್ಕೊಸ್ಕರ ನಮ್ಮ ನಿಲುವು ತಾಳಲು ಸಾಧ್ಯವಿಲ್ಲ. ನಾವು ನಮ್ಮ ಇತಿಹಾಸ, ಅನುಭವ ಮತ್ತು ಹಿತಾಸಕ್ತಿಯ ಆಧಾರದಲ್ಲೇ ನಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಜಗತ್ತಿನಲ್ಲಿ ವಿವಿಧ ಬೆಳವಣಿಗೆಗಳು ನಡೆಯುತ್ತಿರುತ್ತದೆ. ಈ ಬೆಳವಣಿಗೆಗಳನ್ನು ನನ್ನ ದೇಶದ ಹಿತಾಸಕ್ತಿಗೆ ಅನುಗುಣವಾಗಿ ಬಳಸಿಕೊಳ್ಳುವುದು ನನ್ನ ಕರ್ತವ್ಯ. ಇಂದು ಭಾರತ ನೆರೆಹೊರೆಯ ದೇಶಗಳ ಜೊತೆಗೆ ಉತ್ತಮ ಸಂಬಂಧ ಕಾಪಾಡಿಕೊಂಡಿದೆ. ಅನ್ಯ ದೇಶಗಳಿಗೆ ಅಗತ್ಯವಿದ್ದಾಗ ಮಾನವೀಯ ನೆರವು ನೀಡಿದ್ದೇವೆ. ಹಾಗೆಯೇ ಬೇರೆ ದೇಶಗಳು ಭಾರತಕ್ಕೆ ಸಹಾಯಹಸ್ತ ಚಾಚಿವೆ ಎಂದು ಜೈಶಂಕರ್‌ ಹೇಳಿದರು.
 

click me!