ಮಡಿಕೇರಿ (ಅ.04): ದಸರಾ (Dasara) ಹಾಗೂ ತಲಕಾವೇರಿ (Talacauvery) ತೀರ್ಥೋದ್ಭವ ಹಿನ್ನೆಲೆಯಲ್ಲಿ ಅ.7ರಿಂದ 17ರವರೆಗೆ ಮಡಿಕೇರಿ ನಗರದಲ್ಲಿರುವ ಪ್ರವಾಸಿ ತಾಣಗಳನ್ನು (Tourist place) ಬಂದ್ ಮಾಡಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ (charulatha Somul) ಆದೇಶ ಹೊರಡಿಸಿದ್ದಾರೆ. ಅ.7ರಿಂದ 15ರವರೆಗೆ ಮಡಿಕೇರಿ (Madikeri) ದಸರಾ ಹಾಗೂ ಅ.17ರಂದು ತಲಕಾವೇರಿಯಲ್ಲಿ ತೀರ್ಥೋದ್ಭವ ಕಾರ್ಯಕ್ರಮ ನಡೆಯಲಿದೆ.
ಈ ಸಮಯದಲ್ಲಿ ಕೋವಿಡ್ (Covid) ನಿಯಮಗಳನ್ನು ಪಾಲಿಸಬೇಕಿದೆ. ಆದ್ದರಿಂದ ಮಡಿಕೇರಿ ನಗರದಲ್ಲಿರುವ ಪ್ರವಾಸಿ ತಾಣಗಳಾದ ರಾಜಾಸೀಟು, ಜನರಲ್ ತಿಮ್ಮಯ್ಯ ಮ್ಯೂಸಿಯಂ, ಗದ್ದಿಗೆ, ಕೋಟೆ, ನೆಹರು ಮಂಟಪಗಳಿಗೆ ಸಾರ್ವಜನಿಕರು ಹಾಗೂ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿದೆ. ಉಳಿದಂತೆ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಸ್ಯಾನಿಟೈಸರ್ ಬಳಕೆ ಮತ್ತಿತರ ಕೋವಿಡ್ ನಿಯಮವನ್ನು (Covid Norms) ಪಾಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ತಲಕಾವೇರಿ ತಿರ್ಥೋದ್ಬವಕ್ಕೆ ನಿರ್ಬಂಧ
ತಲಕಾವೇರಿಯಲ್ಲಿ ಅ.17 ರಂದು ನಡೆಯುವ ತೀರ್ಥೋದ್ಭವದ ಸಂದರ್ಭ ಕ್ಷೇತ್ರ ದರ್ಶನಕ್ಕೆ ಕೆಲವು ನಿರ್ಬಂಧಗಳ ನಡುವೆ ಭಕ್ತರು ತೆರಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ (Kota shrinivas Poojary) ನೀಡಿರುವ ಹೇಳಿಕೆ ಖಂಡನೀಯವೆಂದು ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್‌ಮಾಡ ರಾಜೀವ್ ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾವೇರಿ ನದಿಯಲ್ಲಿ ರಿವರ್ ರ್ಯಾಫ್ಟಿಂಗ್ ಆರಂಭ
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಾವೇರಿ ಭಕ್ತರಿಗೆ ನಿರ್ಬಂಧ ಹೇರುವುದು ಸರಿಯಲ್ಲ, ಒಂದು ವೇಳೆ ಸಹನೆ ಮೀರಿ ಸಂಘರ್ಷ ಎದುರಾದರೆ ಅದಕ್ಕೆ ಸಚಿವರು, ಶಾಸಕರು ಹಾಗೂ ಜಿಲ್ಲಾಡಳಿತವೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ತೀರ್ಥರೂಪಿಣಿಯಾಗಿ ಕಾವೇರಿ ತಾಯಿ ದರ್ಶನ ನೀಡುವ ಕ್ಷಣವನ್ನು ಕಣ್ತುಂಬಿಕೊಳ್ಳಲು ಅವಕಾಶ ನೀಡದೆ ತಡೆಯುವುದು ಸರಿಯಲ್ಲ. ನೈಜ ಕಾವೇರಿ ಭಕ್ತರ (Devotees) ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡುವ ರೀತಿ ಸಚಿವರು ಹೇಳಿಕೆ ನೀಡುವಾಗ ಶಾಸಕರು ಮೌನಕ್ಕೆ ಶರಣಾಗಿರುವುದನ್ನು ಗಮನಿಸಿದರೆ ಇದರ ಹಿಂದೆ ಪಿತೂರಿ ಅಡಗಿರುವ ಬಗ್ಗೆ ಸಂಶಯವಿದೆ. ಉಸ್ತುವಾರಿ ಸಚಿವರ ಸಭೆಯಲ್ಲಿ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಹಾಜರಿದ್ದರೂ ಕೊಡಗಿನ ಭಕ್ತರ ಭಾವನೆಗೆ ಪೂರಕವಾಗಿ ಮಾತನಾಡದೆ ಇರುವುದನ್ನು ನೋಡಿದರೆ ಶಾಸಕರಿಂದಲೇ ಭಕ್ತರನ್ನು ತಡೆಯುವ ಹುನ್ನಾರ ನಡೆಯುತ್ತಿದೆ ಎನ್ನುವ ಭಾವನೆ ವ್ಯಕ್ತವಾಗುತ್ತದೆ ಎಂದು ಆರೋಪಿಸಿದ್ದಾರೆ.
ಹೊಸ ರೂಪದಲ್ಲಿ ಕಣ್ಮನ ಸೆಳೆಯುತ್ತಿದೆ ರಾಜಾಸೀಟ್, ವ್ಯೂ ಪಾಯಿಂಟ್ ಅಂತೂ ಸೂಪರ್..!
ತಾರತಮ್ಯದ ಆರೋಪ:
ಪ್ರವಾಸಿತಾಣಗಳಲ್ಲಿ ಸಾವಿರಾರು ಜನ ಸೇರಬಹುದು, ಆದರೆ ಪವಿತ್ರ ಕ್ಷೇತ್ರ ತಲಕಾವೇರಿಗೆ ಭಕ್ತರು ಬರಬಾರದು ಎಂದಾದರೆ ಏನರ್ಥ, ಪ್ರವಾಸಿಗರ ಆಗಮನವನ್ನು ಕೂಡ ನಿರ್ಬಂಧಿಸಬಹುದಲ್ಲವೇ, ಅಸ್ಸಾಂ ಸೇರಿದಂತೆ ಇತರ ರಾಜ್ಯಗಳ ಸಾವಿರಾರು ಕಾರ್ಮಿಕರು ಜಿಲ್ಲೆಗೆ ಆಗಮಿಸಿದ್ದಾರೆ. ಇವರ ಆರೋಗ್ಯದ ಸಂಪೂರ್ಣ ದಾಖಲೆ ಜಿಲ್ಲಾಡಳಿತದ ಬಳಿ ಇದೆಯೇ ಎಂದು ರಾಜೀವ್ ಬೋಪಯ್ಯ ಪ್ರಶ್ನಿಸಿದ್ದಾರೆ.
ತೀರ್ಥೋದ್ಭವದ ದಿನ ಸ್ಥಳೀಯರಿಗೆ ಮಾತ್ರ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗುವುದು ಎಂದು ಕೋಡಿ ಮೋಟಯ್ಯ ಅವರು ನೀಡಿರುವ ಹೇಳಿಕೆ ಸರಿಯಲ್ಲ. ಸೆ.26 ರಂದು ಪತ್ತಾಯಕ್ಕೆ ಅಕ್ಕಿ ಹಾಕುವ ಪದ್ಧತಿಯಲ್ಲಿ ಪಾಲ್ಗೊಳ್ಳಲು ಮೂಲ ತಕ್ಕಾಮೆಯ ಮಂಡೀರ, ಮಣವಟ್ಟಿರ ಕುಟುಂಬ ಆಗಮಿಸಿದ ಸಂದರ್ಭ ಆಕ್ಷೇಪ ವ್ಯಕ್ತಪಡಿಸಲಾಗಿದೆ.
ಇದನ್ನು ಗಮನಿಸಿದರೆ ಕೊಡವ ಭಕ್ತರನ್ನು ದೂರವಿಡಲು ಪಿತೂರಿ ನಡೆಯುತ್ತಿದೆ ಎನ್ನುವ ಸಂಶಯ ವ್ಯಕ್ತವಾಗುತ್ತಿದೆ ಎಂದು ತಿಳಿಸಿರುವ ಅವರು ಪತ್ತಾಯಕ್ಕೆ ಅಕ್ಕಿ ಹಾಕುವ ಪದ್ಧತಿ ಬಗ್ಗೆ ಮಾಧ್ಯಮಕ್ಕೆ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಶಾಸಕರು ಮೌನ ಮುರಿದು ನೈಜ ಕಾವೇರಿ ಭಕ್ತರ ಪರ ಸರ್ಕಾರದೊಂದಿಗೆ ಚರ್ಚಿಸಿ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂದು ರಾಜೀವ್ ಬೋಪಯ್ಯ ಒತ್ತಾಯಿಸಿದ್ದಾರೆ.