* ಜಲಜೀವನ ಮಿಷನ್ ವಿವಾದ
* ಜಂಗಮರ ಕಲ್ಗುಡಿ ಗ್ರಾಮದಲ್ಲಿ ಘಟನೆ
* ಗುತ್ತಿಗೆದಾರ ಪ್ರಸಾದಗೆ ಗಾಯ
ಗಂಗಾವತಿ(ಅ.04): ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್- ಬಿಜೆಪಿ(BJP) ಕಾರ್ಯಕರ್ತರಿಬ್ಬರ ಮಧ್ಯೆ ಘರ್ಷಣೆ ಉಂಟಾಗಿ ಯೋಜನೆಯ ಗುತ್ತಿಗೆದಾರನಾಗಿರುವ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಟ್ರ್ಯಾಕ್ಟರ್ ಹಾಯಿಸಿ ಗಾಯಗೊಳಿಸಿದ ಘಟನೆ ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಕಾಂಗ್ರೆಸ್(Congress) ಕಾರ್ಯಕರ್ತ ಪ್ರಸಾದ ಎನ್ನುವವರು ಗಾಯಗೊಂಡಿದ್ದು ಗಂಗಾವತಿ(Gangavati) ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಗೆ ಏನು ಕಾರಣ:
ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಜಲಜೀವನ ಮಿಷನ್ ಯೋಜನೆಯ ಕಾಮಗಾರಿಗೆ .80 ಲಕ್ಷ ಅನುದಾನ ಮಂಜೂರಿಯಾಗಿತ್ತು. ಈ ಕಾಮಗಾರಿಯನ್ನು ಬಿಜೆಪಿ ಮುಖಂಡ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸೋಮಶೇಖರಗೌಡ ಮತ್ತು ಕಾಂಗ್ರೆಸ್ ಮುಖಂಡ ಪ್ರಸಾದ ಎನ್ನುವವರು ಕಾಮಗಾರಿ ಕೈಗೆತ್ತಿಕೊಂಡಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ಬಿಜೆಪಿಯ ಮುರುಳಿಕೃಷ್ಣ ಎನ್ನುವವರು ಈ ಕಾಮಗಾರಿಗೆ ಬಿಜೆಪಿ ಶಾಸಕರು ಅನುದಾನ ನೀಡಿದ್ದಾರೆ. ಹಾಗಾಗಿ ನಾವೇ ಕಾಮಗಾರಿ ಮಾಡುತ್ತೇವೆ ಎಂದು ತಕರಾರು ನಡೆಸಿದರು. ಇದಕ್ಕೆ ಪ್ರಸಾದ ಅವರು ಈಗಾಗಲೇ ಶೇ. 70ರಷ್ಟು ಕಾಮಗಾರಿ ಪೂರ್ಣಗೊಳಿಸಿದ್ದೇವೆ. ಕಾರಣ ನಾವು ಖರ್ಚು ಮಾಡಿದ ಹಣ ನೀಡಿ ಎಂದು ತಿಳಿಸಿದ್ದರು. ಅದಕ್ಕೆ ಮುರುಳಿಕೃಷ್ಣ ಸಹ ಒಪ್ಪಿದ್ದರು.
ಕೊಪ್ಪಳ: ಪೊಲೀಸ್ ಅಧಿಕಾರಿಗಳೆಂದು ಹೇಳಿ ಹಣ ವಸೂಲಿ, ಇಬ್ಬರು ಯುವಕರ ಬಂಧನ
ಆದರೆ, ಹಲವಾರು ದಿನ ಕಳೆದರೂ ಸಹ ಹಣ ನೀಡದೇ ಇರುವ ಹಿನ್ನೆಲೆಯಲ್ಲಿ ಪ್ರಸಾದ ಅವರು 5ನೇ ವಾರ್ಡ್‌ನಲ್ಲಿ ಮತ್ತೆ ಕಾಮಗಾರಿ ಪ್ರಾರಂಭ ಮಾಡಿದ್ದು, ಭಾನುವಾರ ಮುಂಜಾನೆ ಮುರುಳಿಕೃಷ್ಣ ಟ್ರ್ಯಾಕ್ಟರ್ ತಂದು ಅಡ್ಡ ನಿಲ್ಲಿಸಿ ಕಾಮಗಾರಿ ಕೈಗೊಳ್ಳದಂತೆ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಪರಸ್ಪರ ಜಗಳ ಪ್ರಾರಂಭವಾಗಿದ್ದು, ಮಾತಿನ ಚಕಮಕಿ ನಡೆದಿದೆ. ಆ ಸಂದರ್ಭದಲ್ಲಿ ಟ್ರ್ಯಾಕ್ಟರ್ ಮುಂದೆ ನಿಂತಿದ್ದ ಪ್ರಸಾದ ಮೇಲೆ ಮುರುಳಿಕೃಷ್ಣ ಟ್ರ್ಯಾಕ್ಟರ್ ಹಾಯಿಸಿದ್ದರಿಂದ ಅವರ ಬೆನ್ನು ಮತ್ತು ಹೊಟ್ಟೆಗೆ ತೀವ್ರ ಗಾಯಗಳಾಗಿದ್ದು, ಇವರನ್ನು ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್(Police) ಠಾಣೆಯಲ್ಲಿ ದೂರು ದಾಖಲಾಗಿದ್ದು, ಗ್ರಾಮದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.