ಜೆಡಿಎಸ್‌ಗೆ ಬೇಷರತ್‌ ಬೆಂಬಲದಿಂದ ಈಗ ಷರತ್ತಿನೆಡೆಗೆ ಕಾಂಗ್ರೆಸ್‌

First Published May 21, 2018, 11:55 AM IST
Highlights

ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶವಿನ್ನೂ ಸಂಪೂರ್ಣ ಹೊರ ಬೀಳುವ ಮುನ್ನವೇ, ಸರಕಾರ ರಚಿಸುವುದು ಕಷ್ಟವೆಂದು ಅರಿತ ಕಾಂಗ್ರೆಸ್, ಜೆಡಿಎಸ್‌ಗೆ ಬೇಷರತ್‌ ಬೆಂಬಲ ನೀಡುವುದಾಗಿ ಘೋಷಿಸಿತು. ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿಸಲು ಒಪ್ಪಿಗೆ ನೀಡಿತು. ಆದರೆ, ಇದೀಗ ಸರಕಾರ ರಚಿಸುವ ಹೊಸ್ತಿಲಲ್ಲಿ ಎರಡೂ ಪಕ್ಷಗಳೂ ನಿಂತಿದ್ದು, ಒಂದೊಂದೇ ಷರತ್ತುಗಳು ಹಾಕ ತೊಡಗಿದೆ ಕಾಂಗ್ರೆಸ್. 

ಬೆಂಗಳೂರು: ಸಮ್ಮಿಶ್ರ ಸರ್ಕಾರ ರಚನೆಯ ಪೂರ್ವದಲ್ಲಿ ಬೇಷರತ್‌ ಬೆಂಬಲ ನೀಡಲು ಮುಂದಾಗಿದ್ದ ಮತ್ತು ಜೆಡಿಎಸ್‌ಗೆ ಬಾಹ್ಯ ಬೆಂಬಲದ ಪ್ರಸ್ತಾಪವನ್ನು ಇಟ್ಟಿದ್ದ ಕಾಂಗ್ರೆಸ್‌ ಪಕ್ಷ ಕ್ರಮೇಣ ಷರತ್ತುಗಳನ್ನು ವಿಧಿಸುವ ದಿಸೆಯಲ್ಲಿ ಮುಂದುವರೆದಿದ್ದು, ಅಧಿಕಾರ ಹಂಚಿಕೆಯು ಸಮಾನ ಹಾಗೂ ಪರಸ್ಪರ ಚರ್ಚೆಯ ಮೂಲಕ ನಡೆಯಬೇಕು ಎಂಬ ಸಂದೇಶವನ್ನು ಜೆಡಿಎಸ್‌ ಪಾಳೆಯಕ್ಕೆ ರವಾನಿಸತೊಡಗಿದೆ.

ಇದಕ್ಕೆ ಪೂರಕ ಎಂಬಂತೆ, ಭಾನುವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, 'ಕಾಂಗ್ರೆಸ್‌-ಜೆಡಿಎಸ್‌ ಲೋಕಸಭಾ ಚುನಾವಣೆಯಲ್ಲೂ ಹೊಂದಾಣಿಕೆ ಮಾಡಿಕೊಳ್ಳಬೇಕಿದೆ. ಹೀಗಾಗಿ ಅಧಿಕಾರ ಹಂಚಿಕೆ ವಿಚಾರದಲ್ಲಿ ಪರಸ್ಪರ ಹೊಂದಾಣಿಕೆ ಹಾಗೂ ಮಾತುಕತೆಯ ಮೂಲಕ ಯಾವುದೇ ಸಮಸ್ಯೆ ನಿರ್ಮಾಣವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನೂ ಎರಡೂ ಕಡೆಯ ನಾಯಕರು ನಿರ್ವಹಿಸಬೇಕು. ಇದಕ್ಕಾಗಿ ಎರಡು ಪಕ್ಷಗಳ ನಡುವೆ ಸಮನ್ವಯ ನಿರ್ಮಾಣವಾಗಬೇಕು,' ಎಂದು ಕಿವಿಮಾತು ನುಡಿದಿದ್ದಾರೆ.

ಕಾಂಗ್ರೆಸ್‌ ಕಸರತ್ತು:

ಏತನ್ಮಧ್ಯೆ, ಮುಖ್ಯಮಂತ್ರಿ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಕಾಂಗ್ರೆಸ್‌ ಈ ಪದವಿ ಹೊರತಾಗಿ ಉಳಿದ ಸ್ಥಾನಗಳಲ್ಲಿ ಸಿಂಹ ಪಾಲು ಸಿಗಬೇಕು ಎಂಬ ನಿಲುವಿಗೆ ಬಂದಿದೆ. ಇದಕ್ಕೆ ಮುಖ್ಯ ಕಾರಣ ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ಹಾಗೂ ಇತರ ಪದವಿಗಳಿಗೆ ಆಕಾಂಕ್ಷಿಗಳ ಪಟ್ಟಿದೊಡ್ಡದಿರುವುದು. ಅಧಿಕಾರಕ್ಕಾಗಿ ಶಾಸಕರಿಂದ ನಿರ್ಮಾಣವಾಗುತ್ತಿರುವ ಒತ್ತಡವನ್ನು ನಿಭಾಯಿಸಲು ಹೆಣಗುತ್ತಿರುವ ಕಾಂಗ್ರೆಸ್‌ ಪಕ್ಷ ಜೆಡಿಎಸ್‌ ಕಡೆಯಿಂದ ಸಾಧ್ಯವಾದಷ್ಟುಹೆಚ್ಚು ಅಧಿಕಾರವನ್ನು ಪಡೆದುಕೊಳ್ಳಲು ಪ್ರಯತ್ನ ಆರಂಭಿಸಿದೆ.

ಹೀಗಾಗಿಯೇ ಅಧಿಕಾರ ಹಂಚಿಕೆ ವಿಚಾರದಲ್ಲಿ ಹೊಂದಾಣಿಕೆಯಿರಬೇಕು ಹಾಗೂ ಪರಸ್ಪರ ಮಾತುಕತೆ ಮೂಲಕ ಇದು ನಡೆಯಬೇಕು. ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಳ್ಳದಂತೆ ಜೆಡಿಎಸ್‌ ಹಾಗೂ ಕುಮಾರಸ್ವಾಮಿ ಅವರಿಗೆ ಈಗಲೇ ಷರತ್ತು ವಿಧಿಸಬೇಕು ಎಂದು ಕಾಂಗ್ರೆಸ್‌ ಹೈಕಮಾಂಡನ್ನು ಪಕ್ಷದ ನಾಯಕರು ಆಗ್ರಹಿಸತೊಡಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೊಂದಾಣಿಕೆಯ ಪೂರ್ವದಲ್ಲಿ ಇಡೀ ಐದು ವರ್ಷಗಳ ಅವಧಿಗೆ ಮುಖ್ಯಮಂತ್ರಿ ಪದವಿ ಜೆಡಿಎಸ್‌ ಪಾಲಾಗಿದೆ ಎಂಬ ಸಂದೇಶಗಳು ಕಾಂಗ್ರೆಸ್‌ನಿಂದ ಬರುತ್ತಿದ್ದವು. ಆದರೆ, ಸರ್ಕಾರ ರಚನೆಯಾಗುವುದು ಖಾತರಿಯಾಗುತ್ತಿದ್ದಂತೆಯೇ ಭಿನ್ನ ಧ್ವನಿ ಕೇಳಿಬರುತ್ತಿದ್ದು, ಐದು ವರ್ಷ ಪೂರ್ತಿ ಕುಮಾರಸ್ವಾಮಿ ಅವರಿಗೆ ಪದವಿ ಬಿಟ್ಟುಕೊಡುವ ಷರತ್ತನ್ನು ಕಾಂಗ್ರೆಸ್‌ ಒಪ್ಪಿಲ್ಲ ಎಂದು ಕಾಂಗ್ರೆಸ್‌ ಹಿರಿಯ ಮುಖಂಡರೊಬ್ಬರು ಹೇಳುತ್ತಾರೆ.

ಮುಖ್ಯಮಂತ್ರಿ ಹುದ್ದೆಯನ್ನು ತಲಾ 30 ತಿಂಗಳ ಅವಧಿಗೆ ಎರಡು ಪಕ್ಷಗಳು ಹಂಚಿಕೊಳ್ಳುವುದು ಕಾಂಗ್ರೆಸ್‌ ಪ್ರಸ್ತಾಪ. ಹೊಂದಾಣಿಕೆಯ ಆರಂಭದಲ್ಲಿ ಮೊದಲ ಅವಧಿಗೆ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಪದವಿ ನೀಡುವ ಕುರಿತು ಮಾತ್ರ ಚರ್ಚೆಯಾಗಿತ್ತು. ಅನಂತರದ ವಿಚಾರಗಳ ಬಗ್ಗೆ ಹೈಕಮಾಂಡ್‌ನಲ್ಲಿ ಮಾತುಕತೆ ನಡೆಯಬೇಕಿದೆ. ಕಾಂಗ್ರೆಸ್‌ ಈ ವೇಳೆ 30-30 ತಿಂಗಳ ಅವಧಿಗೆ ಮುಖ್ಯಮಂತ್ರಿ ಹುದ್ದೆ ಹಂಚಿಕೊಳ್ಳುವ ಪ್ರಸ್ತಾಪವನ್ನು ಮುಂದಿಡಲಿದೆ ಎಂದೇ ಇವರು ಹೇಳುತ್ತಾರೆ.

ಇದಲ್ಲದೆ, ಉಳಿದ ಪದವಿಗಳ ವಿಚಾರದಲ್ಲೂ ಕಾಂಗ್ರೆಸ್‌ಗೆ ತನ್ನ ಸಂಖ್ಯಾಬಲದಷ್ಟೇ ಅಧಿಕಾರವೂ ಸಿಗಬೇಕು. ಕುಮಾರಸ್ವಾಮಿ ಮುಖ್ಯಮಂತ್ರಿ ಹುದ್ದೆಯಲ್ಲಿದ್ದರೂ ಎಲ್ಲಾ ನಿರ್ಧಾರಗಳನ್ನು ಏಕಪಕ್ಷೀಯವಾಗಿ ಕೈಗೊಳ್ಳಬಾರದು. ಪರಸ್ಪರ ಹೊಂದಾಣಿಕೆ ಹಾಗೂ ಮಾತುಕತೆಯ ಮೂಲಕ ಅಧಿಕಾರ ಹಂಚಿಕೆಯಾಗಬೇಕು ಎಂದು ಕಾಂಗ್ರೆಸ್‌ ವಾದ ಆರಂಭಿಸಿದೆ.

ಇದೆಲ್ಲದರ ಅರ್ಥವಿಷ್ಟೇ, ಯಾವುದೇ ಷರತ್ತಿಲ್ಲದೇ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟಕ್ಕೆ ಮುಂದಾಗಿದ್ದ ಕಾಂಗ್ರೆಸ್‌ ನಾಯಕತ್ವ, ಪದವಿಗಾಗಿ ತೀವ್ರ ಲಾಬಿ ನಡೆಸುತ್ತಿರುವ ತನ್ನ ಶಾಸಕರಿಂದ ಒತ್ತಡಕ್ಕೆ ಒಳಗಾಗಿದೆ. ಶಾಸಕರನ್ನು ಒಟ್ಟಿಗೆ ಇಟ್ಟುಕೊಂಡು ಹೋಗಬೇಕು ಎಂದರೆ ಅಧಿಕಾರದಲ್ಲಿ ಸಿಂಹಪಾಲನ್ನು ಪಡೆಯಬೇಕಿದ್ದು, ಅದಕ್ಕಾಗಿ ಜೆಡಿಎಸ್‌ ಜತೆಗಿನ ತನ್ನ ಸಂವಹನವನ್ನು ಬೇಷರತ್ತಿನಿಂದ ಷರತ್ತಿನೆಡೆಗೆ ಒಯ್ಯಲು ಪ್ರಯತ್ನಿಸುತ್ತಿದೆ.

ಕಾಂಗ್ರೆಸ್ ಪರಾಜಿತ ಅಭ್ಯರ್ಥಿಯಿಂದ ವಿವಾದಾತ್ಮಕ ಹೇಳಿಕೆ
 

click me!