
ನವದೆಹಲಿ: ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ್ದು, ರಾಜ್ಯಪಾಲರು ಬಿಜೆಪಿಗೆ ಸರಕಾರ ರಚಿಸಲು ಆಹ್ವಾನಿಸಿದ್ದನ್ನು ಪ್ರಶ್ನಿಸಿ, ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೆಟ್ಟಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಎಲ್ಲವಕ್ಕೂ ಬಹುಮತ ಸಾಬೀತುಪಡಿಸುವುದೇ ಸೂಕ್ತ ಪರಿಹಾರವೆಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಕಾಲಾವಕಾಶ ಕೋರಿದ ಬಿಜೆಪಿ ಆಗ್ರಹವನ್ನು ಕೋರ್ಟ್ ತಿರಸ್ಕರಿಸಿದೆ.
ಸುಪ್ರೀಂ ಕೋರ್ಟ್ ತ್ರಿ ಸದಸ್ಯ ಪೀಠಿ ಮೇ 19ರ ಸಂಜೆ 4 ಗಂಟೆಗೇ ಬಿಜೆಪಿಗೆ ಬಹುಮತ ಸಾಬೀತುಪಡಿಸಲು ಆದೇಶಿಸಿದ್ದು, ರಾಜ್ಯ ರಾಜಕೀಯದಾಟ ಏನಾಗಬಹುದೆಂಬ ಕುತೂಹಲ ಮತ್ತಷ್ಟು ಹೆಚ್ಚಿದೆ. ಬಿಜೆಪಿಯ ರಹಸ್ಯ ಮತದಾನ ಆಗ್ರಹಕ್ಕೂ ಸುಪ್ರೀಂ ಕೋರ್ಟ್ ನಕಾರವೆಂದಿದೆ.
ಆಂಗ್ಲೋ ಇಂಡಿಯನ್ ಶಾಸಕರನ್ನು ಸ್ಪೀಕರ್ ಆಗಿ ನೇಮಿಸಲು ಕಾಂಗ್ರೆಸ್ ಆಗ್ರಹಿಸಿದ್ದು, ಇದನ್ನೂ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
'ಚುನಾವಣಾ ಫಲಿತಾಂಶವು ಕೇವಲ ಸಂಖ್ಯೆಯಾಟವಾಗಿದ್ದು, ಬಹುಮತ ಪಡೆದ ಪಕ್ಷಕ್ಕೆ ಸರಕಾರ ರಚಿಸಲು ಆಹ್ವಾನಿಸುವುದು ರಾಜ್ಯಪಾಲರ ಕರ್ತವ್ಯ,' ಎಂದೂ ಕೋರ್ಟ್ ಹೇಳಿದೆ.
ಅತಿ ದೊಡ್ಡ ಏಕೈಕ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಗೆ ಸರಕಾರ ರಚಿಸಲು ರಾಜ್ಯಪಾಲರು ಆಹ್ವಾನಿಸಿದ್ದರಿಂದ, ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಸರಕಾರ ರಚಿಸಲು ಅಗತ್ಯವಾದ ಸಂಖ್ಯಾಬಲ ಹೊಂದಿದ್ದರೂ, ರಾಜ್ಯಪಾಲರು ಸರಕಾರ ರಚಿಸಲು ಅವಕಾಶ ನೀಡಲಿಲ್ಲ. ಇದನ್ನು ಪ್ರಶ್ನಿಸಿ, ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಪ್ರಮಾಣವಚನ ರದ್ದುಗೊಳಿಸಬೇಕು ಅಥವಾಮುಂದೂಡಬೇಕು ಎಂದು ಕಾಂಗ್ರೆಸ್ ನಾಯಕ, ವಕೀಲ ಅಭಿಷೇಕ್ ಮನು ಸಿಂಘ್ವಿ ಶತಪ್ರಯತ್ನ ನಡೆಸಿದರೂ ಅದು ಫಲ ನೀಡಲಿಲ್ಲ. ಪ್ರಮಾಣವಚನಕ್ಕೆ ತಡೆ ನೀಡಲು ನಿರಾಕರಿಸಿದ ತ್ರಿಸದಸ್ಯ ನ್ಯಾಯಪೀಠ, ಯಡಿಯೂರಪ್ಪ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಲು ರಾಜ್ಯಪಾಲರಿಗೆ ನೀಡಿದ ಪತ್ರಗಳನ್ನು ತನಗೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಮೇ 18ಕ್ಕೆ ನಿಗದಿಪಡಿಸಿತ್ತು.
ಸುಪ್ರೀಂಕೋರ್ಟ್ ತೀರ್ಮಾನ ಯಡಿಯೂರಪ್ಪ ಭವಿಷ್ಯವನ್ನು ನಿರ್ಧರಿಸುವುದು ಒಂದೆಡೆಯಾದರೆ, ಅವರು ವಿಶ್ವಾಸಮತ ಗಳಿಸಲು ವಿಪಕ್ಷಗಳ ಸದಸ್ಯರ ಬೆಂಬಲ ಪಡೆಯುವುದೂ ಸುಪ್ರೀಂ ತೀರ್ಪಿನ ಮೇಲೆ ಅವಲಂಬಿತವಾಗಿದೆ.