ದೊಡ್ಡ ಡಿಗ್ರಿನೂ ಇಲ್ಲ, ಅನುಭವನೂ ಜೀರೋ: ಮೊದಲ ವರ್ಷದ ಪದವಿಯಲ್ಲೇ 50 ಲಕ್ಷ ಆದಾಯ ಗಳಿಸ್ತಿರೋ ಯುವಕನ ಸ್ಟೋರಿ ಕೇಳಿ

Published : Jul 15, 2026, 12:06 PM IST
Siddharth Dubey

ಸಾರಾಂಶ

ದೊಡ್ಡ ಪದವಿ ಅಥವಾ ಅನುಭವವಿಲ್ಲದೆಯೂ ಯಶಸ್ಸು ಸಾಧಿಸಬಹುದು ಎಂಬುದಕ್ಕೆ ಮೊದಲ ವರ್ಷದ ಕಾಲೇಜು ವಿದ್ಯಾರ್ಥಿ ಸಿದ್ಧಾರ್ಥ್ ದುಬೆ ಸಾಕ್ಷಿಯಾಗಿದ್ದಾರೆ. ಟಾಪ್‌ಮೇಟ್ ಎಂಬ ಸ್ಟಾರ್ಟ್ಅಪ್‌ನಲ್ಲಿ ಸೇಲ್ಸ್ ಇಂಟರ್ನ್ ಆಗಿ ಕೆಲಸ ಮಾಡುತ್ತಿರುವ ಇವರು, ತಮ್ಮ ಅದ್ಭುತ ಸಂವಹನ ಕೌಶಲ್ಯದಿಂದ ತಿಂಗಳಿಗೆ ನಾಲ್ಕು ಲಕ್ಷ ರೂಪಾಯಿ ಗಳಿಸಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.

ಒಂದೆಡೆ ಹತ್ತಾರು ಲಕ್ಷ ಕೊಟ್ಟು ದೊಡ್ಡ ದೊಡ್ಡ ಪದವಿ ಪಡೆದು, ಕೊನೆಗೆ 20-25 ಸಾವಿರ ರೂಪಾಯಿಗಳು ಸಂಬಳ ಸಿಗುವ ಉದ್ಯೋಗವೂ ಸಿಗದೇ ಪರದಾಡುತ್ತಿರುವ ಹಲವಾರು ಯುವಕರು ನಮ್ಮ ಕಣ್ಣಮುಂದೆ ಇದ್ದಾರೆ. ಅದೇ ಇನ್ನೊಂದೆಡೆ, ದೊಡ್ಡ ದೊಡ್ಡ ಐಟಿ ಕಂಪೆನಿಗಳಲ್ಲಿ ಬೃಹತ್​ ಪ್ರಮಾಣದ ಉದ್ಯೋಗ ಕಡಿತ. ಉದ್ದುದ್ದ ಡಿಗ್ರಿಯ ರೆಸ್ಯೂಮ್​ ಇದ್ದರೂ ಉದ್ಯೋಗವೇ ಸಿಗದ, ಸಿಕ್ಕರೂ ತಮ್ಮ ಡಿಗ್ರಿಗೆ ತಕ್ಕಂಥ ಸಂಬಳ ಪಡೆಯದೇ ನಿರಾಸೆಯಿಂದ ಬಳಲುತ್ತಿರುವ ಅದೆಷ್ಟೋ ಯುವಕರ ನಡುವೆ ಇಲ್ಲೊಬ್ಬ ಯುವಕ ಮೊದಲ ವರ್ಷದ ಕಾಲೇಜು ಇಂಟರ್ನ್​ಷಿಪ್​ ಮಾಡುತ್ತಿರುವಾಗಲೇ ತಿಂಗಳಿಗೆ ನಾಲ್ಕು ಲಕ್ಷಕ್ಕೂ ಹೆಚ್ಚು ಗಳಿಸುತ್ತಿದ್ದಾನೆ! ಅಂದರೆ ವರ್ಷಕ್ಕೆ  ಸುಮಾರು 50 ಲಕ್ಷ ರೂಪಾಯಿ! 

ಈ ಯುವಕನ ಹೆಸರು ಸಿದ್ಧಾರ್ಥ್ ದುಬೆ. ಇದೀಗ ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಸಾಧನೆಯಿಂದಾಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಉದ್ದುದ್ದ ಡಿಗ್ರಿ, ಫ್ಯಾನ್ಸಿ ರೆಸ್ಯೂಮ್​ ಏನೂ ಇಲ್ಲದೇ ಇದ್ದರೂ ಕೇವಲ ಟ್ಯಾಲೆಂಟ್​, ಸಾಧಿಸುವ ಛಲ ಇದ್ದರೆ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಸಿದ್ಧಾರ್ಥ್​ ಸಾಕ್ಷಿಯಾಗಿ ನಿಂತಿದ್ದಾರೆ. ಟೆಕ್ ಸ್ಟಾರ್ಟ್ಅಪ್ ಟಾಪ್‌ಮೇಟ್‌ನಲ್ಲಿ ಸೇಲ್ಸ್ ಇಂಟರ್ನ್ ಆಗಿ ಕೆಲಸ ಮಾಡುತ್ತಿರುವ ಮೊದಲ ವರ್ಷದ ಕಾಲೇಜು ವಿದ್ಯಾರ್ಥಿಯಾಗಿರುವ ಇವರು, ತಮ್ಮ ಕಾರ್ಯಕ್ಷಮತೆಯಿಂದ ಕಂಪೆನಿಯನ್ನು ಪ್ರಭಾವಿತಗೊಳಿಸುವ ಮೂಲಕ ಈ ಪರಿಯ ಆದಾಯ ಗಳಿಸುತ್ತಿದ್ದಾರೆ. ಇಷ್ಟೇ ಅಲ್ಲದೇ, ಇವರ ಟ್ಯಾಲೆಂಟ್​ ಗಮನಿಸಿ, ಇವರಿಗೆ ಕಂಪೆನಿ ಈಗ ಸಂಪೂರ್ಣ ಸಂಬಳ ಕೊಟ್ಟು ಥಾಯ್ಲೆಂಡ್​ ರಜೆಯನ್ನೂ ನೀಡಿದೆ!

ಸಿದ್ಧಾರ್ಥ್ ಕಥೆ ಹೇಗೆ ಬೆಳಕಿಗೆ ಬಂದಿತು?

ಐಐಟಿ ಹಳೆಯ ವಿದ್ಯಾರ್ಥಿ ಮತ್ತು ಟಾಪ್‌ಮೇಟ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ದಿನೇಶ್ ಸಿಂಗ್ ಅವರು ಲಿಂಕ್ಡ್‌ಇನ್‌ನಲ್ಲಿ ಅವರ ಬಗ್ಗೆ ಪೋಸ್ಟ್ ಹಂಚಿಕೊಂಡಾಗ ಸಿದ್ಧಾರ್ಥ್ ದುಬೆ ಅವರ ಕಥೆ ಬೆಳಕಿಗೆ ಬಂದಿದೆ. ಟಾಪ್‌ಮೇಟ್‌ನಲ್ಲಿ ಮೊದಲ ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬರು ತಿಂಗಳಿಗೆ ₹4 ಲಕ್ಷ ಗಳಿಸುತ್ತಿದ್ದಾರೆ ಎಂದು ದಿನೇಶ್ ಸಿಂಗ್ ಬರೆದಿದ್ದಾರೆ. ನಮ್ಮ ಮಾರಾಟ ಇಂಟರ್ನ್ ಮತ್ತು ಕಂಪೆನಿಯ ಕಿರಿಯ ಸದಸ್ಯ ಸಿದ್ಧಾರ್ಥ್ ದುಬೆ ಅವರ ಯಶೋಗಾಥೆ ಎಲ್ಲರಿಗೂ ಸ್ಫೂರ್ತಿ ಎಂದು ಅವರು ಬರೆದಿದ್ದಾರೆ.

ಸಿದ್ಧಾರ್ಥ್ ಅವರ ವಿಶೇಷತೆ ಏನು?

ಉತ್ತಮ ಉದ್ಯೋಗ ಪಡೆಯಲು ಅಥವಾ ಹೆಚ್ಚಿನ ಆದಾಯ ಗಳಿಸಲು ಉನ್ನತ ಮಟ್ಟದ ಪದವಿ, ವ್ಯಾಪಕ ಅನುಭವ ಮತ್ತು ಅತ್ಯುತ್ತಮ ರೆಸ್ಯೂಮ್ ಅತ್ಯಗತ್ಯ ಎಂದು ಸಾಮಾನ್ಯವಾಗಿ ನಂಬಲಾಗುತ್ತದೆ. ಆದರೆ ಅದು ಅಗತ್ಯವಿಲ್ಲ ಎಂದಿರುವ ದಿನೇಶ್ ಸಿಂಗ್ ಅವರು, ಸಿದ್ಧಾರ್ಥ್ ಅವರಿಗೆ ವರ್ಷಗಳ ಅನುಭವ ಮತ್ತು ದೊಡ್ಡ ಹೆಸರುಗಳಿಂದ ತುಂಬಿದ ಅದ್ಭುತ ರೆಸ್ಯೂಮ್ ಇರಲಿಲ್ಲ. ಆದರೆ ಅವರು ಕೆಲವೇ ಜನರು ಹೊಂದಿರುವ ಕೌಶಲವನ್ನು ಹೊಂದಿದ್ದಾರೆ. ಅದೇನೆಂದರೆ, ಸಿದ್ಧಾರ್ಥ್ ಅವರು ಅಪರಿಚಿತರೊಂದಿಗೆ ಯಾವುದೇ ಮುಜುಗರವಿಲ್ಲದೇ ಧೈರ್ಯದಿಂದ ಮಾತನಾಡುವ ಚಾಕಚಕ್ಯತೆ ಹೊಂದಿದ್ದಾರೆ. ಅವರ ಅಗತ್ಯಗಳನ್ನು ಒಂದೇ ಕ್ಷಣದಲ್ಲಿ ಅರ್ಥಮಾಡಿಕೊಳ್ಳುವ ಟ್ಯಾಲೆಂಟ್​ ಅವರಲ್ಲಿ ಇದೆ. ಆ ಆತ್ಮವಿಶ್ವಾಸ ಅವರಲ್ಲಿ ತುಂಬಿದೆ, ಮಾತ್ರವಲ್ಲದೇ ತಮಗೆ ಕೊಟ್ಟಿರುವ ಕೆಲಸವನ್ನು ಹೇಗೆ ಎದುರಿಗೆ ಇದ್ದವರ ವಿಶ್ವಾಸ ಪಡೆದು ಸುಲಭದಲ್ಲಿ ಆ ಕೆಲಸವನ್ನು, ಬೇರೆಯವರ ಜೊತೆಗಿನ ಒಪ್ಪಂದವನ್ನು ಮುಕ್ತಾಯಗೊಳಿಸಬಹುದು ಎನ್ನುವ ಜಾಣ್ಮೆ ಅವರಲ್ಲಿ ಇದೆ. ಆದರೆ ಈ ಎಲ್ಲಾ ಕೌಶಲಗಳು ಅವರ ಬಯೋಡೇಟಾ, ಸಿವಿಯಲ್ಲಿ ಬರೆದಿಲ್ಲ, ಇದು ಯಾವ ಕಾಲೇಜಿನ ಪದವಿಯೂ ಒದಗಿಸಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಅವರು ಇಷ್ಟೊಂದು ಬೆಳೆದಿದ್ದಾರೆ ಎಂದು ಬರೆದಿದ್ದಾರೆ.

ಸಿದ್ಧಾರ್ಥ್ ಅವರ ಯಶಸ್ಸು ಟಾಪ್‌ಮೇಟ್‌ನ ನೇಮಕಾತಿ ವಿಧಾನದ ಮೇಲೂ ಪ್ರಭಾವ ಬೀರಿದೆ. ಕಂಪೆನಿಯ ಪ್ರಕಾರ, ಅವರು ಇನ್ನು ಮುಂದೆ ಉತ್ತಮ ಕಾಲೇಜು, ಉನ್ನತ ಮಟ್ಟದ ಪದವಿ ಅಥವಾ ಅತ್ಯುತ್ತಮ ಪ್ರೊಫೈಲ್ ಅನ್ನು ಆಧರಿಸಿ ಅವಕಾಶಗಳನ್ನು ನೀಡಲು ಬಯಸುವುದಿಲ್ಲ. ದಿನೇಶ್ ಸಿಂಗ್ ಅವರು ಈಗ ಪ್ರೊಫೈಲ್‌ಗಳನ್ನು ನಯಗೊಳಿಸುವ ಬದಲು ನಿಜವಾಗಿಯೂ ತಲುಪಿಸಬಲ್ಲ ಜನರನ್ನು ಹುಡುಕಲು ಪ್ರಾರಂಭಿಸಿದ್ದಾರಂತೆ! ಅವರ ಪ್ರಕಾರ, ಯಾರಾದರೂ ಚಿಕ್ಕವರಾಗಿದ್ದರೆ, ಕಲಿಯುವ ಹಸಿವನ್ನು ಹೊಂದಿದ್ದರೆ ಮತ್ತು ಉತ್ತಮ ಮಾರಾಟ ಮಾಡಲು ಸಾಧ್ಯವಾದರೆ, ಅವರ ಕಾಲೇಜು ವರ್ಷಗಳು, ಅಂಕಗಳು ಅಥವಾ ಶಿಕ್ಷಣವು ಅತ್ಯಂತ ಮುಖ್ಯವಾದ ವಿಷಯಗಳಲ್ಲ ಎನ್ನುತ್ತಾರೆ. ಸಂವಹನ, ವಿಶ್ವಾಸವನ್ನು ಬೆಳೆಸುವ ಸಾಮರ್ಥ್ಯ, ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಫಲಿತಾಂಶಗಳನ್ನು ನೀಡುವಂತಹ ಕೌಶಲ್ಯಗಳು ಯಾವುದೇ ವೃತ್ತಿಜೀವನದಲ್ಲಿ ಗಮನಾರ್ಹ ವ್ಯತ್ಯಾಸವನ್ನುಂಟುಮಾಡುತ್ತವೆ ಎಂದಿದ್ದಾರೆ.

PREV
Read more Articles on
click me!

Recommended Stories

ತಿಂಗಳಿಗೆ 15,500 ಸಂಬಳ, ಶೇ.15 ಪರ್ಸೆಂಟ್ ಹೈಕ್ ನೀಡಿದ್ರೂ ಮನೆ ಕೆಲ್ಸದಾಕೆ ಕೆಲ್ಸ ಬಿಟ್ಟಿದ್ದೇಕೆ? ಪ್ರತಿಯೊಬ್ಬರೂ ಕಲಿಯಬೇಕು ಪಾಠ
Google ಉದ್ಯೋಗ ಬಿಟ್ಟು ಬ್ರಷ್ ಹಿಡಿದ ಮಹಿಳೆ, ಹಣಕ್ಕಿಂತ ನೆಮ್ಮದಿಯೇ ಮುಖ್ಯ ಎಂದ ಸಾರಾ