KPSC Exam : ರೈಲು ವಿಳಂಬದಿಂದ ವಂಚಿತರಿಗೆ ಮತ್ತೆ ಪರೀಕ್ಷೆ

By Kannadaprabha NewsFirst Published Dec 16, 2021, 7:03 AM IST
Highlights
  • ರೈಲು ವಿಳಂಬದಿಂದ ವಂಚಿತರಿಗೆ ಮತ್ತೆ ಕೆಪಿಎಸ್‌ಸಿ ಪರೀಕ್ಷೆ
  •   ಡಿ.22ರೊಳಗೆ ಹಾಲ್‌ ಟಿಕೆಟ್‌ ಸಲ್ಲಿಸಲು ಸೂಚನೆ
     

 ಬೆಂಗಳೂರು (ಡಿ.16):  ರೈಲು (Train) ಪ್ರಯಾಣದ ವಿಳಂಬದಿಂದ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್‌(ಎಇ) ಹುದ್ದೆಗಳ ನೇಮಕಾತಿ ಪರೀಕ್ಷೆಯಿಂದ ವಂಚಿತರಾಗಿದ್ದ ಅಭ್ಯರ್ಥಿಗಳಿಗೆ ಡಿ.29ರಂದು ಮರು ಪರೀಕ್ಷೆ ನಡೆಸಲು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ - KPSC) ತೀರ್ಮಾನಿಸಿದೆ.  ಪರೀಕ್ಷೆಯಿಂದ (Exam) ವಂಚಿತರಾಗಿರುವ ಅಭ್ಯರ್ಥಿಗಳು ಮರು ಪರೀಕ್ಷೆಗೆ ಅವಕಾಶ ನೀಡುವಂತೆ ಮನವಿ ಪತ್ರ, ಹಾಸನ-ಸೊಲ್ಲಾಪುರ ಎಕ್ಸ್‌ಪ್ರೆಸ್‌, ಉದ್ಯಾನ್‌ ರೈಲಿಲ್ಲಿ (Train) ಪ್ರಯಾಣ ನಡೆಸಿರುವುದಕ್ಕೆ ಸಂಬಂಧಿಸಿದ ಟಿಕೆಟ್‌ ಪ್ರತಿ ಮತ್ತು ಆಯೋಗದಿಂದ ಪಡೆದುಕೊಂಡಿರುವ ಪ್ರವೇಶ ಪತ್ರವನ್ನು ಡಿ.22ರ ಅಂತ್ಯದ ವೇಳೆಗೆ ಸ್ಪೀಡ್‌ ಪೋಸ್ಟ್‌ ಮೂಲಕ ಕೆಪಿಎಸ್‌ಸಿ ಕಚೇರಿಗೆ ಕಳುಹಿಸಬೇಕು ಅಥವಾ ಮೇಲ್ ಮೂಲಕ ಕಳಿಸಬೇಕು  ಎಂದು ಕೆಪಿಎಸ್‌ಸಿ (KPSC) ಕಾರ್ಯದರ್ಶಿ ಜಿ.ಸತ್ಯವತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರೈಲು ವಿಳಂಬದಿಂದ ಡಿ.14ರಂದು ನಡೆದ ಪರೀಕ್ಷೆಯ ಬೆಳಗಿನ ಅಧಿವೇಶನ ಸಮಾನ್ಯ ಪತ್ರಿಕೆ-1ನ್ನು ವಂಚಿತರಾದವರಿಗೆ ಮಾತ್ರ ಮರು ಪರೀಕ್ಷೆ ಮಾಡಲಾಗುತ್ತಿದೆ ಎಂದಿದ್ದಾರೆ.

ಪರೀಕ್ಷಾ ಅಕ್ರಮಗಳನ್ನು ತಡೆಯುವ ಸಲುವಾಗಿ ದಕ್ಷಿಣ ಜಿಲ್ಲೆಗಳ ಅಭ್ಯರ್ಥಿಗಳಿಗೆ ಉತ್ತರ ಕರ್ನಾಟಕದ (Karnataka) ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ನಿಯೋಜಿಸಲಾಗಿತ್ತು. ಇದರಿಂದ ಪರೀಕ್ಷೆಗೆ ಹಾಜರಾಗಲು ಡಿ.14ರಂದು ಬೆಂಗಳೂರಿನಿಂದ (Bengaluru) ಕಲಬುರಗಿಗೆ ತೆರಳುತ್ತಿದ್ದ ಉದ್ಯಾನ್‌ ಎಕ್ಸ್‌ಪ್ರೆಸ್‌ ರೈಲು ವಿಳಂಬ ವಾಗಿತ್ತು. ಇದರಿಂದ ನೂರಾರು ಅಭ್ಯರ್ಥಿಗಳು ಸೂಕ್ತ ಸಮುಯಕ್ಕೆ ಪರೀಕ್ಷಾ ಕೇಂದ್ರಗಳನ್ನು ತಲುಪಲು ಸಾಧ್ಯವಾಗಿರಲಿಲ್ಲ. ಅಂತಹ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ನಡೆಸಲು ಕೆæಪಿಎಸ್‌ಸಿ ತೀರ್ಮಾನಿಸಿರುವುದಾಗಿ ಅವರು ತಿಳಿಸಿದ್ದಾರೆ.

ರೈಲು ತಡವಾಗಿ ತಪ್ಪಿತ್ತು :  ತಾಂತ್ರಿಕ ಕಾರಣದಿಂದಾಗಿ ಬೆಂಗಳೂರು-ಮುಂಬೈ (Bengaluru - Mumbai) ಉದ್ಯಾನ ಎಕ್ಸ್‌ಪ್ರೆಸ್‌, ಹಾಸನ-ಸೊಲ್ಲಾಪುರ ಸೂಪರ್‌ ಫಾಸ್ಟ್‌ ರೈಲುಗಳ ಸಂಚಾರದಲ್ಲಿ ಏಳು ಗಂಟೆ ವಿಳಂಬವಾಗಿ ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್ಸಿ)ದ ಸಹಾಯಕ ಎಂಜಿನಿಯರ್‌ ಹುದ್ದೆಯ ಬೆಳಗ್ಗಿನ ಪರೀಕ್ಷೆ ಬರೆಯುವುದರಿಂದ ಸಾವಿರಾರು ವಿದ್ಯಾರ್ಥಿಗಳು ವಂಚಿತರಾಗಬೇಕಾದ ಪ್ರಸಂಗ ಮಂಗಳವಾರ ನಡೆದಿತ್ತು.

ತಮ್ಮದಲ್ಲದ ತಪ್ಪಿಗೆ ಪರೀಕ್ಷೆಯಿಂದ ವಂಚಿತರಾದ ಅಭ್ಯರ್ಥಿಗಳು ರಾಯಚೂರು (Raichur) ರೈಲು ನಿಲ್ದಾಣದಲ್ಲಿ ಮಿಂಚಿನ ಧರಣಿ ನಡೆಸಿದ್ದು, ಇದರಿಂದ ಎಚ್ಚೆತ್ತ ಕಲಬುರಗಿ ಜಿಲ್ಲಾಡಳಿತ ಎರಡೂ ರೈಲುಗಳು ಕಲಬುರಗಿ ತಲುಪುವುದರೊಳಗೆ 20ಕ್ಕೂ ಹೆಚ್ಚು ಬಸ್‌, ಹತ್ತಾರು ಆಟೋಗಳನ್ನು ವ್ಯವಸ್ಥೆ ಮಾಡಿ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ತಲುಪಿಸುವ ಕೆಲಸ ಮಾಡಿತು. ಈ ಮೂಲಕ ಮಧ್ಯಾಹ್ನದ ಪರೀಕ್ಷೆಗೆ ತೊಂದರೆಯಾಗದಂತೆ ನೋಡಿಕೊಂಡಿತು.

ಲೆಕ್ಕಾಚಾರ ಉಲ್ಟಾಪಲ್ಟಾ: ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್‌ ಹುದ್ದೆಯ ಪರೀಕ್ಷೆ (Exam) ಬರೆಯಲು ಬೆಂಗಳೂರು, ಹಾಸನದಿಂದ ಸಾವಿರಾರು ಮಂದಿ ಸೋಮವಾರ ರಾತ್ರಿಯೇ ಉದ್ಯಾನ ಎಕ್ಸ್‌ಪ್ರೆಸ್‌, ಸೊಲ್ಲಾಪುರ ಎಕ್ಸ್‌ಪ್ರೆಸ್‌ ರೈಲು ಹತ್ತಿದ್ದರು. ನಿತ್ಯ ಸಂಚರಿಸುವ ಈ ರೈಲುಗಳು ಬೆಳಗ್ಗೆ 7ರೊಳಗೆ ಕಲಬುರಗಿ ತಲುಪಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದ 9 ಗಂಟೆಯಾದರೂ ರಾಯಚೂರಿನಲ್ಲೇ ಉಳಿದಾಗ ರೊಚ್ಚಿಗೆದ್ದ ಪರೀಕ್ಷಾರ್ಥಿಗಳು ರೈಲು ಹಳಿಗಳ ಮೇಲೆ ಕುಳಿತು ಧರಣಿ ನಡೆಸಿದರಲ್ಲದೆ ಕೆಪಿಎಸ್‌ಸಿ ವಿರುದ್ಧ ಘೋಷಣೆ ಕೂಗಿದ್ದರು.

ಇದರಿಂದ ಎಚ್ಚೆತ್ತುಕೊಂಡ ಕಲಬುರಗಿ (kalaburagi) ಜಿಲ್ಲಾಡಳಿತ ಈ ಎರಡೂ ರೈಲುಗಳು ಕಲಬುರಗಿ ತಲುಪುವುದರೊಳಗೆ ರೈಲು ನಿಲ್ದಾಣದಿಂದಲೇ ಸಾರಿಗೆ ಸೌಕರ್ಯ ವ್ಯವಸ್ಥೆ ಮಾಡಿತ್ತು. ಸಹಾಯಕ ಆಯುಕ್ತೆ ಸುರೇಖಾ, ಕೆಕೆಆರ್‌ಟಿಸಿಯ ನಾಗರಾಜ್‌, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಸಂಚಾರ ಠಾಣೆ ಪಿಐ ಶಾಂತಿನಾಥ ರೈಲು ನಿಲ್ದಾಣದಲ್ಲೇ ಇದ್ದು ಮಧ್ಯಾಹ್ನ 1.30ರ ವೇಳೆಗೆ ಪರೀಕ್ಷಾರ್ಥಿಗಳೆಲ್ಲರೂ ನಿಲ್ದಾಣದಂದ ಹೊರಬರುತ್ತಿದ್ದಂತೆ ಬಸ್‌, ಆಟೋಗಳ ಮೂಲಕ ಪರೀಕ್ಷಾ ಕೇಂದ್ರ ತಲುಪಿಸುವ ವ್ಯವಸ್ಥೆ ಮಾಡಿದರು. ಈ ವೇಳೆ ನಗರದ ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್‌ ಸಿಗ್ನಲ್‌ಗಳನ್ನು ಕೆಲಕಾಲ ಬಂದ್‌ ಮಾಡಿ ಸಂಚಾರ ದಟ್ಟಣೆ ಆಗದಂತೆ ನೋಡಿಕೊಂಡರು. ಕೊನೇ ಕ್ಷಣದಲ್ಲಿ ಪರೀಕ್ಷಾ ಕೇಂದ್ರಗಳು ಅದಲು-ಬದಲಾಗಿದ್ದು, ರೈಲು ಸಂಚಾರ ಕೂಡ ವಿಳಂಬವಾಗಿದ್ದರಿಂದ ಅಭ್ಯರ್ಥಿಗಳು ಆತಂಕದಲ್ಲೇ ಪರೀಕ್ಷೆ ಬರೆದಿದ್ದರು.

click me!