ಬರೋಬ್ಬರಿ 56,000ಕ್ಕೂ ಹೆಚ್ಚಿನ ಹುದ್ದೆ ಭರ್ತಿಗೆ ಕ್ರಮ, ಇದರಲ್ಲಿ 8,000 ಪೇದೆಗಳ ನೇಮಕಕ್ಕೆ ನಿರ್ಧಾರ: ಡಾ.ಪರಮೇಶ್ವರ

Published : Mar 13, 2026, 03:23 PM IST
Parameshwara

ಸಾರಾಂಶ

ರಾಜ್ಯದಲ್ಲಿ 56 ಸಾವಿರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ 8 ಸಾವಿರ ಪೊಲೀಸ್ ಕಾನ್ಸ್‌ಟೇಬಲ್‌ಗಳನ್ನು ನೇಮಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ. ಇದರ ಜೊತೆಗೆ, ನೇಮಕಾತಿಗಳಲ್ಲಿ 371ಜೆ ನಿಯಮ ಪಾಲನೆಯಾಗದಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದೆ.

ವಿಧಾನಪರಿಷತ್ತು: ಹೊಸದಾಗಿ ನೇಮಕಾತಿ ಮಾಡಲಾಗುವ 56 ಸಾವಿರ ಹುದ್ದೆಗಳಲ್ಲಿ 8 ಸಾವಿರ ಪೊಲೀಸ್‌ ಕಾನ್ಸ್‌ಟೇಬಲ್‌ಗಳ ನೇಮಕಾತಿ ಮಾಡಲು ನಿರ್ಧರಿಸಲಾಗಿದೆ. ಆ ಮೂಲಕ ಪೊಲೀಸ್‌ ಇಲಾಖೆಯಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ತಿಳಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಕಿಶೋರ್‌ ಕುಮಾರ್‌ ಪುತ್ತೂರ್‌ ಅವರ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್‌, ಪೊಲೀಸ್‌ ಇಲಾಖೆಯಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ 545 ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡು, ತರಬೇತಿಯೂ ಮುಗಿದಿದೆ. ಇನ್ನೊಂದು ವಾರದಲ್ಲಿ ಅವರನ್ನು ಕರ್ತವ್ಯಕ್ಕೆ ನಿಯೋಇಸಲಾಗುವುದು. ಜತೆಗೆ 402 ಪಿಎಸ್ಐಗಳ ತರಬೇತಿ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.

56,000ಕ್ಕೂ ಹೆಚ್ಚಿನ ಹುದ್ದೆ ಭರ್ತಿಗೆ ಕ್ರಮ: ಪರಂ

ಅದರ ಜತೆಗೆ ಇದೀಗ 56 ಸಾವಿರಕ್ಕೂ ಹೆಚ್ಚಿನ ಹುದ್ದೆ ಭರ್ತಿಗೆ ಸರ್ಕಾರ ಮುಂದಾಗಿದ್ದು, ಅದರಲ್ಲಿ 8 ಸಾವಿರ ಕಾನ್ಸ್‌ಟೇಬಲ್‌ಗಳನ್ನು ನೇಮಕಾತಿ ಮಾಡಲಾಗುತ್ತದೆ ಎಂದರು. ಪೊಲೀಸ್‌ ಕಾನ್ಸ್‌ಟೇಬಲ್‌ ವರ್ಗಾವಣೆಗೆ ಸಂಬಂಧಿಸಿ ಅಂತರ ಜಿಲ್ಲಾ ವರ್ಗಾವಣೆ ನಿಯಮ ರೂಪಿಸಲಾಗಿದೆ. ಅದರಂತೆ ಕಳೆದ ಮೂರು ವರ್ಷಗಳಲ್ಲಿ 1,189 ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನು ಅಂತರ ಜಿಲ್ಲಾ ವರ್ಗಾವಣೆ ಮಾಡಲಾಗಿದೆ. ಸೇವಾ ಹಿರಿತನ ಹಾಗೂ ಪತಿ-ಪತ್ನಿ ಪೊಲೀಸ್ ಪ್ರಕರಣಗಳಿಗೆ ವರ್ಗಾವಣೆಗೆ ಆದ್ಯತೆ ನೀಡುತ್ತಿದ್ದು, ಈ ಪ್ರಮಾಣ ಶೇ.15ರಷ್ಟು ಮೀರದಂತೆ ಎಚ್ಚರ ವಹಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.

‘ನೇಮಕಾತಿಯಲ್ಲಿ ನಿಯಮ ಪಾಲನೆ ಬಗ್ಗೆ ಪರಿಶೀಲನೆ’

ವಿಧಾನಪರಿಷತ್ತು: ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿರುವಲ್ಲಿ 371ಜೆ ನಿಯಮ ಪಾಲನೆಯಾಗಿಲ್ಲದಿದ್ದರೆ, ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಹಾಗೂ ಈ ಕುರಿತು ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗುವುದು ಎಂದು ಸಭಾನಾಯಕ ಎನ್‌.ಎಸ್. ಬೋಸರಾಜು ತಿಳಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಶಶೀಲ್‌ ಜಿ.ನಮೋಶಿ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಬೋಸರಾಜು ಉತ್ತರಿಸಿದರು.

371ಜೆ ನಿಯಮ ಪಾಲನೆಯಾಗದಿದ್ದರೆ ಕ್ರಮ, ಪರಿಷತ್‌ನಲ್ಲಿ ಸಿಎಂ ಪರ ಭೋಸರಾಜು ಉತ್ತರ

ಅದಕ್ಕೂ ಮುನ್ನ ಮಾತನಾಡಿದ ಶಶೀಲ್‌ ಜಿ.ನಮೋಶಿ, ಕಳೆದ 3 ವರ್ಷಗಳಲ್ಲಿ ವಿವಿಧ ನೇಮಕಾತಿ ಪ್ರಾಧಿಕಾರಗಳ ಮೂಲಕ 8,157 ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಆದರೆ, ಈ ನೇಮಕಾತಿಯಲ್ಲಿ 371ಜೆ ನಿಯಮ ಪಾಲನೆಯಾಗಿಲ್ಲ. ಇದು ದೊಡ್ಡ ತಪ್ಪಾಗಿದ್ದು, ಈ ನೇಮಕಾತಿಗೆ ತಡೆ ನೀಡಬೇಕು ಎಂದು ಆಗ್ರಹಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಬೋಸರಾಜು, ಈಗಾಗಲೇ ನೇಮಕಾತಿಗೆ ಸಂಬಂಧಿಸಿ ರಚಿಸಲಾಗಿರುವ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಅವರಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಯಾವುದೇ ನೇಮಕಾತಿಯಲ್ಲೂ 371ಜೆ ಸೇರಿ ಯಾವುದೇ ನಿಯಮ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವಂತೆ ನಿರ್ದೇಶಿಸಿದ್ದೇವೆ. ಜತೆಗೆ ಏನಾದರೂ ತಪ್ಪಾದರೆ ಸಂಬಂಧಪಟ್ಟ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರನ್ನು ಹೊಣೆ ಮಾಡಲಾಗುವುದು ಎಂದೂ ಎಚ್ಚರಿಕೆ ನೀಡಲಾಗಿದೆ. ಇನ್ನು, ಶಶೀಲ್‌ ನಮೋಶಿ ಹೇಳಿರುವ ತಪ್ಪಿನ ಕುರಿತು ಪರಿಶೀಲಿಸಲಾಗುವುದು. ಜತೆಗೆ ಮುಖ್ಯಮಂತ್ರಿ ಅವರ ಗಮನಕ್ಕೂ ತರಲಾಗುತ್ತದೆ ಎಂದು ತಿಳಿಸಿದರು.

PREV
Read more Articles on
click me!

Recommended Stories

ಫುಲ್ ಟೈಮ್ ಕಂಟೆಂಟ್ ಕ್ರಿಯೇಟರ್ ಆಗಲು ಗೂಗಲ್‌ನ 2 ಕೋಟಿ ವೇತನದ ಕೆಲಸ ಬಿಟ್ಟ ಬೆಂಗಳೂರು ಟೆಕ್ಕಿ
ಭಾರತದ ದೈತ್ಯ ಐಟಿ ಕಂಪನಿ ಇನ್ಫೋಸಿಸ್, ತನ್ನ ಉದ್ಯೋಗಿಗಳಿಗೆ 'ಮನೆಯಿಂದಲೇ ಊಟದ ಬಾಕ್ಸ್' ತರುವಂತೆ ಸೂಚನೆ!