
AI ಬಂದಿದ್ದೇ ಬಂದು, ಅನೇಕ ಕೆಲಸಗಳಿಗೆ ಕತ್ತರಿ ಬೀಳ್ತಿದೆ. ಈಗ Ai ತಂತ್ರಜ್ಞಾನವು ಸಾಫ್ಟ್‌ವೇರ್ ಕ್ಷೇತ್ರವನ್ನು ಬದಲಾಯಿಸುತ್ತಿದೆ. ಭಾರತದ ಕಂಪ್ಯೂಟರ್ ಸೈನ್ಸ್ (CS) ಶಿಕ್ಷಣ ವ್ಯವಸ್ಥೆಯ ಕುರಿತು ಸ್ಟಾರ್ಟ್‌ಅಪ್ ಸಂಸ್ಥಾಪಕಿ ಶ್ವೇತಾ ಅವರು ಮಾಡಿರುವ ಪೋಸ್ಟ್ ಭಾರಿ ಚರ್ಚೆ ಹುಟ್ಟುಹಾಕಿದೆ. ಭಾರತದ ಸಿಎಸ್ ಪದವಿ ಬಿಕ್ಕಟ್ಟಿಗೆ ಕಾಲೇಜುಗಳು, ಪೋಷಕರು ಮತ್ತು ವಿದ್ಯಾರ್ಥಿಗಳೇ ಹೊಣೆ ಎಂದು ಅವರು ವಾದಿಸಿದ್ದಾರೆ.
ಎಂಜಿನಿಯರಿಂಗ್ ಕಾಲೇಜುಗಳು ಲಕ್ಷಾಂತರ ರೂಪಾಯಿ ಫೀಸ್ ವಸೂಲಿ ಮಾಡುತ್ತಿದ್ದರೂ, ಸುಮಾರು ಒಂದು ದಶಕದಷ್ಟು ಹಳೆಯದಾದ ಪಠ್ಯಕ್ರಮವನ್ನೇ ಬೋಧಿಸುತ್ತಿವೆ. ಪ್ರಸ್ತುತ AI ಪರಿಕರಗಳು ಸುಲಭವಾಗಿ ಮಾಡಬಲ್ಲ ಪರಿಕಲ್ಪನೆಗಳನ್ನು ಕಲಿಯಲು ವಿದ್ಯಾರ್ಥಿಗಳು ಭಾರಿ ವೆಚ್ಚ ಮಾಡುತ್ತಿದ್ದಾರೆ.
"ಎಂಜಿನಿಯರಿಂಗ್ ಎಂದರೆ ಉದ್ಯೋಗದ ಭರವಸೆ" ಎಂಬ ಸೂತ್ರವು 2020 ರಲ್ಲೇ ಕೊನೆಗೊಂಡಿದೆ. ಆದಾಗ್ಯೂ, ಪೋಷಕರು ಅಸ್ತಿತ್ವದಲ್ಲೇ ಇಲ್ಲದ ಹಳೆಯ ಉದ್ಯೋಗ ಮಾರುಕಟ್ಟೆಯನ್ನು ನಂಬಿ, ತಮ್ಮ ಮಕ್ಕಳ ಐಷಾರಾಮಿ ಸಂಬಳ ಅಥವಾ ವಿದೇಶಿ ಅವಕಾಶಗಳಿಗಾಗಿ ಭಾರಿ ಸಾಲಗಳನ್ನು ಪಡೆಯುತ್ತಿದ್ದಾರೆ.
ಮೂರನೆಯದಾಗಿ, ವಿದ್ಯಾರ್ಥಿಗಳು ಕುರುಡಾಗಿ ಈ ಹಾದಿ ಅನುಸರಿಸುತ್ತಿದ್ದಾರೆ. ನಾಲ್ಕು ವರ್ಷಗಳ ಸಮಯ ಮತ್ತು ಹಣ ಹೂಡುವ ಮುನ್ನ ಅವರು ಮಾರುಕಟ್ಟೆಯ ಟ್ರೆಂಡ್‌ಗಳನ್ನು ಪ್ರಶ್ನಿಸುತ್ತಿಲ್ಲ. ಕೇವಲ 3.5 ಲಕ್ಷ ರೂ.ಗಳ ಆರಂಭಿಕ ಪ್ಯಾಕೇಜ್‌ಗಳಿಗಾಗಿ ಸಾವಿರಾರು ಅಭ್ಯರ್ಥಿಗಳೊಂದಿಗೆ ಸ್ಪರ್ಧಿಸುವ ತರ್ಕವನ್ನು ಶ್ವೇತಾ ಪ್ರಶ್ನಿಸಿದ್ದಾರೆ.
AI ಯುಗದಲ್ಲಿ ಉದ್ಯೋಗ ಪಡೆಯಲು ಶ್ವೇತಾ ಕೆಲವು ಮಾರ್ಗಸೂಚಿಗಳನ್ನು ನೀಡಿದ್ದಾರೆ. ಮೊದಲ ವರ್ಷದ ವಿದ್ಯಾರ್ಥಿಗಳು ಪ್ರೋಗ್ರಾಮಿಂಗ್ ಬೇಸಿಕ್ಸ್ ಮತ್ತು ಗಿಟ್‌ಹಬ್ (GitHub) ಪೋರ್ಟ್‌ಫೋಲಿಯೊ ಕಡೆ ಗಮನ ನೀಡಬೇಕು.
ಎರಡನೇ ವರ್ಷದಲ್ಲಿ ಸ್ಟಾರ್ಟ್‌ಅಪ್‌ಗಳಲ್ಲಾದರೂ ಇಂಟರ್ನ್‌ಶಿಪ್ ಮಾಡಬೇಕು.
ಮೂರನೇ ವರ್ಷದಲ್ಲಿ AI, ಕ್ಲೌಡ್ ಕಂಪ್ಯೂಟಿಂಗ್‌ನಂತಹ ವಿಶೇಷ ಕ್ಷೇತ್ರಗಳನ್ನು ಆಯ್ದುಕೊಳ್ಳಬೇಕು.
ಅಂತಿಮ ವರ್ಷದಲ್ಲಿ ಕೇವಲ ಕ್ಯಾಂಪಸ್ ಪ್ಲೇಸ್‌ಮೆಂಟ್‌ಗಳ ಮೇಲಷ್ಟೇ ಅವಲಂಬಿತರಾಗದೆ, ಕ್ಯಾಂಪಸ್‌ನಿಂದ ಹೊರಗಿನ (off-campus) ಅವಕಾಶಗಳಿಗೂ ಸಕ್ರಿಯವಾಗಿ ಪ್ರಯತ್ನಿಸಬೇಕು. ಮಾರುಕಟ್ಟೆ ಮತ್ತು AI ಬದಲಾಗಿದ್ದರೂ ಜನರ ಮನಸ್ಥಿತಿ ಬದಲಾಗಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.