ರೈಲ್ವೆ ಇಲಾಖೆಯಲ್ಲಿ ಸುರಕ್ಷತೆ ಬಲಪಡಿಸಲು ಮೆಗಾ ಭರ್ತಿ: 4,098 ತಾಂತ್ರಿಕ ಹುದ್ದೆಗಳ ನೇಮಕಾತಿಗೆ ಸಚಿವಾಲಯ ಅಸ್ತು!

Published : Jul 09, 2026, 03:37 PM IST
Bangladesh Railway

ಸಾರಾಂಶ

ರೈಲ್ವೆ ಸಚಿವಾಲಯವು ದೇಶಾದ್ಯಂತ ರೈಲ್ವೆ ಕಾರ್ಯಾಚರಣೆಯ ಸುರಕ್ಷತೆ ಮತ್ತು ದಕ್ಷತೆಯನ್ನು ಹೆಚ್ಚಿಸಲು 4,098 ತಾಂತ್ರಿಕ ಹುದ್ದೆಗಳ ನೇಮಕಾತಿಗೆ ಅಧಿಕೃತ ಅನುಮೋದನೆ ನೀಡಿದೆ. ಜೂನಿಯರ್ ಇಂಜಿನಿಯರ್‌ಗಳು ಮತ್ತು ತಂತ್ರಜ್ಞರನ್ನು ಒಳಗೊಂಡ ಈ ನೇಮಕಾತಿ ಪ್ರಕ್ರಿಯೆಯ ಅಧಿಸೂಚನೆಯು ಜುಲೈ 21 ರಿಂದ ಪ್ರಾರಂಭವಾಗಲಿದೆ.

ನವದೆಹಲಿ (ಜು.9): ರೈಲ್ವೆ ಕಾರ್ಯಾಚರಣೆಯ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ದಕ್ಷತೆಯನ್ನು ಗಣನೀಯವಾಗಿ ಹೆಚ್ಚಿಸಲು ರೈಲ್ವೆ ಸಚಿವಾಲಯವು ದೇಶಾದ್ಯಂತ ವಿವಿಧ ರೈಲ್ವೆ ವಲಯಗಳಲ್ಲಿ ಖಾಲಿ ಇರುವ ಒಟ್ಟು 4,098 ತಾಂತ್ರಿಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಅಧಿಕೃತ ಅನುಮೋದನೆ ನೀಡಿದೆ. ಜೂನಿಯರ್ ಇಂಜಿನಿಯರ್ಸ್ (JE) ಮತ್ತು ತಂತ್ರಜ್ಞರು (Technicians) ಸೇರಿದಂತೆ ರೈಲ್ವೆಯ ಅತ್ಯಂತ ನಿರ್ಣಾಯಕವಾಗಿರುವ 35 ತಾಂತ್ರಿಕ ವಿಭಾಗಗಳಲ್ಲಿ ಈ ನೇಮಕಾತಿ ನಡೆಯಲಿದೆ. ಈ ಕುರಿತು ಜುಲೈ 21 ರಿಂದ ಕೇಂದ್ರೀಕೃತ ಉದ್ಯೋಗ ಅಧಿಸೂಚನೆಗಳನ್ನು (CEN) ಹೊರಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲಾ ರೈಲ್ವೆ ವಲಯಗಳ ಜನರಲ್ ಮ್ಯಾನೇಜರ್‌ಗಳಿಗೆ (ಜಿಎಂ) ಸಚಿವಾಲಯ ಕಳುಹಿಸಿರುವ ಇತ್ತೀಚಿನ ಸುತ್ತೋಲೆಯಲ್ಲಿ, ಆಂತರಿಕ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (HRMS) ಪೋರ್ಟಲ್ ಮೂಲಕ ಆಯಾ ವಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವರಗಳನ್ನು ಪರಿಶೀಲಿಸಲಾಗಿದೆ ಎಂದು ತಿಳಿಸಲಾಗಿದೆ. ಈ ಕಟ್ಟುನಿಟ್ಟಿನ ಮೌಲ್ಯಮಾಪನದ ಬಳಿಕವೇ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣವೇ ಪ್ರಾರಂಭಿಸಲು ನಿರ್ದೇಶನ ನೀಡಲಾಗಿದೆ. ಜೂನಿಯರ್ ಇಂಜಿನಿಯರ್‌ಗಳು, ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್‌ಗಳು ಮತ್ತು ಕೆಮಿಕಲ್ ಹಾಗೂ ಮೆಟಲರ್ಜಿಕಲ್ ಅಸಿಸ್ಟೆಂಟ್‌ಗಳಂತಹ ರೈಲ್ವೆ ಸುರಕ್ಷತೆಗೆ ನೇರವಾಗಿ ಸಂಬಂಧಿಸಿದ ಹುದ್ದೆಗಳನ್ನು ಈ ಪ್ರಕ್ರಿಯೆಯ ಮೂಲಕ ಭರ್ತಿ ಮಾಡಲಾಗುತ್ತಿದೆ.

ಯಾವ ವಿಭಾಗದಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ?:

ವಿವಿಧ ವಲಯಗಳು ಸಲ್ಲಿಸಿದ ವರದಿಯ ಪ್ರಕಾರ, ಈ ಕೆಳಗಿನ ಪ್ರಮುಖ ವಿಭಾಗಗಳಲ್ಲಿ ಅತಿ ಹೆಚ್ಚು ಹುದ್ದೆಗಳು ಖಾಲಿ ಇವೆ

  • ಪರ್ಮನೆಂಟ್ ವೇ (Permanent Way) ವಿಭಾಗ: 845 ಹುದ್ದೆಗಳು (ಅತಿ ಹೆಚ್ಚು)
  • ವರ್ಕ್ಸ್ (Works) ವಿಭಾಗ: 470 ಹುದ್ದೆಗಳು
  • ಕ್ಯಾರೇಜ್ ಮತ್ತು ವ್ಯಾಗನ್ (Carriage and Wagon) ವಿಭಾಗ: 450 ಹುದ್ದೆಗಳು

ನೇಮಕಾತಿಯ ಟೈಮ್‌ಲೈನ್ ಮತ್ತು ಮೀಸಲಾತಿ ನಿಯಮ

ರೈಲ್ವೆ ನೇಮಕಾತಿ ಮಂಡಳಿ (RRB) ಬೆಂಗಳೂರಿನ ಅಧ್ಯಕ್ಷರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ರೈಲ್ವೆ ಸಚಿವಾಲಯವು ಈ ನೇಮಕಾತಿಗೆ ನಿರ್ದಿಷ್ಟ ಕಾಲಮಿತಿಯನ್ನು (Timeline) ನಿಗದಿಪಡಿಸಿದೆ. ಇದರ ಪ್ರಕಾರ, ನೋಡಲ್ ಆರ್‌ಆರ್‌ಬಿಗಳು ಜುಲೈ 21, 2026 ರಿಂದ ಕೇಂದ್ರೀಕೃತ ಉದ್ಯೋಗ ಅಧಿಸೂಚನೆಯನ್ನು (CEN) ಹೊರಡಿಸಲಿವೆ. ಇದೇ ವೇಳೆ, ಅಂತಿಮ ಖಾಲಿ ಹುದ್ದೆಗಳ ಪಟ್ಟಿಯನ್ನು ಆಂತರಿಕ ವ್ಯವಸ್ಥೆಗೆ ಅಪ್‌ಲೋಡ್ ಮಾಡುವಾಗ ಎಸ್‌ಸಿ (SC), ಎಸ್‌ಟಿ (ST), ಒಬಿಸಿ (OBC) ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ (EWS) ಮೀಸಲಾತಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆಯಾ ವಲಯದ ರೈಲ್ವೆ ಇಲಾಖೆಗಳಿಗೆ ಸೂಚಿಸಲಾಗಿದೆ.

ಈಗಾಗಲೇ ಪ್ರಕಟವಾಗಿದೆ 6,565 ಟೆಕ್ನಿಷಿಯನ್ ಹುದ್ದೆಗಳ ನೋಟಿಫಿಕೇಶನ್

ಇದಕ್ಕೂ ಮುನ್ನ, ಸಚಿವಾಲಯದ ಒಪ್ಪಿಗೆಯ ಮೇರೆಗೆ ಈಗಾಗಲೇ ಒಟ್ಟು 6,565 ಟೆಕ್ನಿಷಿಯನ್ (ತಂತ್ರಜ್ಞರು) ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಇದರಲ್ಲಿ ಸಿಗ್ನಲ್ ಟೆಕ್ನಿಷಿಯನ್ ಗ್ರೇಡ್-1 ಹುದ್ದೆಗಳಿಗೆ 323 ಮತ್ತು ಟೆಕ್ನಿಷಿಯನ್ ಗ್ರೇಡ್-3 ಹುದ್ದೆಗಳಿಗೆ 6,242 ಹುದ್ದೆಗಳನ್ನು ಮೀಸಲಿಡಲಾಗಿದೆ ಎಂದು ಸುತ್ತೋಲೆಯಲ್ಲಿ ನೆನಪಿಸಲಾಗಿದೆ.

ರೈಲ್ವೆ ಒಕ್ಕೂಟಗಳು ಮತ್ತು ಸಂಘಟನೆಗಳ ಸುದೀರ್ಘ ಹೋರಾಟಕ್ಕೆ ಸಂದ ಜಯ

ರೈಲ್ವೆ ಇಲಾಖೆಯ ಈ ನಿರ್ಧಾರಕ್ಕೆ ವಿವಿಧ ರೈಲ್ವೆ ಕಾರ್ಮಿಕ ಸಂಘಟನೆಗಳು ತೀವ್ರ ಸಂತಸ ವ್ಯಕ್ತಪಡಿಸಿವೆ. ಅಖಿಲ ಭಾರತ ರೈಲ್ವೆ ಉದ್ಯೋಗಿಗಳ ಒಕ್ಕೂಟದ (AIRF) ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಮಾತನಾಡಿ, "ಲಕ್ಷಾಂತರ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸುರಕ್ಷತಾ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದು ಅತ್ಯಗತ್ಯವಾಗಿತ್ತು. ರೈಲ್ವೆ ಸಚಿವಾಲಯದ ಈ ಹೆಜ್ಜೆಯನ್ನು ನಾನು ಶ್ಲಾಘಿಸುತ್ತೇನೆ ಮತ್ತು ಭವಿಷ್ಯದಲ್ಲೂ ಕಾರ್ಯಾಚರಣೆಯ ಸುರಕ್ಷತೆಯ ಮೇಲೆ ಇಲಾಖೆ ಇದೇ ರೀತಿ ಗಮನ ಹರಿಸುತ್ತದೆ ಎಂದು ಭಾವಿಸುತ್ತೇನೆ" ಎಂದಿದ್ದಾರೆ.

ಇನ್ನು ಭಾರತೀಯ ರೈಲ್ವೆ ಎಸ್‌ ಆಂಡ್ ಟಿ (ಸಿಗ್ನಲ್ ಮತ್ತು ಟೆಲಿಕಾಂ) ಮೇಂಟೇನರ್ಸ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಆಲೋಕ್ ಚಂದ್ರ ಪ್ರಕಾಶ್ ಮಾತನಾಡಿ, "ದೇಶಾದ್ಯಂತ ಸಿಗ್ನಲ್ ಮತ್ತು ಟೆಲಿಕಾಂ ನೌಕರರು ನಡೆಸಿದ ಬೃಹತ್ ಪ್ರತಿಭಟನೆಯ ನಂತರವೇ ಈ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ದೀರ್ಘಕಾಲದಿಂದ ಖಾಲಿ ಉಳಿದಿದ್ದ ಸುರಕ್ಷತಾ ವಿಭಾಗದ ಹುದ್ದೆಗಳನ್ನು ಭರ್ತಿ ಮಾಡಲು ಸಚಿವಾಲಯ ಮುಂದಾಗಿರುವುದು ನಮ್ಮ ಹೋರಾಟಕ್ಕೆ ಸಿಕ್ಕ ಜಯ" ಎಂದಿದ್ದಾರೆ.

ಸಚಿವಾಲಯದ ಹೊಸ ಸುತ್ತೋಲೆಯ ಪ್ರಕಾರ, ಒಟ್ಟು ಹುದ್ದೆಗಳ ಪೈಕಿ 197 ಜೂನಿಯರ್ ಇಂಜಿನಿಯರ್ (ಸಿಗ್ನಲ್) ಮತ್ತು 79 ಜೂನಿಯರ್ ಇಂಜಿನಿಯರ್ (ಟೆಲಿಕಮ್ಯುನಿಕೇಶನ್) ಹುದ್ದೆಗಳ ನೇಮಕಾತಿಗೂ ಹಸಿರು ನಿಶಾನೆ ಸಿಕ್ಕಿದೆ. "ರೈಲ್ವೆ ನೆಟ್‌ವರ್ಕ್ ಮತ್ತು ಮೂಲಸೌಕರ್ಯಗಳು ವೇಗವಾಗಿ ವಿಸ್ತರಣೆಯಾಗುತ್ತಿರುವುದರಿಂದ, ಸಚಿವಾಲಯವು ಕೇವಲ ಹಂತ-ಹಂತವಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಷ್ಟೇ ಅಲ್ಲದೆ, ಅಗತ್ಯಕ್ಕೆ ತಕ್ಕಂತೆ ಹೊಸ ಹುದ್ದೆಗಳನ್ನು ಸೃಷ್ಟಿಸಬೇಕು" ಎಂದು ಆಲೋಕ್ ಚಂದ್ರ ಪ್ರಕಾಶ್ ಒತ್ತಾಯಿಸಿದ್ದಾರೆ.

 

PREV
Read more Articles on
click me!

Recommended Stories

ಬ್ಯಾಂಕ್ ಜಾಬ್ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಸುವರ್ಣಾವಕಾಶ, 6715 ಹುದ್ದೆಗಳಿಗೆ IBPS ಆಹ್ವಾನ, 80 ಸಾವಿರ ವೇತನ
ಪ್ರತಿಷ್ಠಿತ ಪವನ್ ಹನ್ಸ್ ಲಿಮಿಟೆಡ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ: 22 ಹುದ್ದೆಗಳಿಗೆ ನೇಮಕಾತಿ, 1ಲಕ್ಷಕ್ಕೂ ಅಧಿಕ ವೇತನ!