
ಬೆಂಗಳೂರು (ಏ.08): ತಮಿಳುನಾಡಿನಿಂದ ಸಿಲಿಕಾನ್ ಸಿಟಿ ಬೆಂಗಳೂರಿಗೆ ಉದ್ಯೋಗ ಅರಸಿಕೊಂಡು ಬಂದ ಮಹಿಳೆ ಕೆಲಸಕ್ಕೆ ಸೇರಿದ ಕೇವಲ ಎರಡೇ ಎರಡು ದಿನದಲ್ಲಿ ತನ್ನ ಕೈಚಳಕವನ್ನು ತೋರಿಸಿ ಮಾಲೀಕರಿಗೆ ಬೆಚ್ಚಿ ಬೀಳಿಸಿದ್ದಾಳೆ. ಅಂದರೆ, ಪ್ರತಿ ದಿನವೊಂದಕ್ಕೆ ಮಾಲೀಕ ₹5 ಲಕ್ಷ ರೂ. ಬೆಲೆ ತೆರಬೇಕಾದ ಪರಿಸ್ಥಿತಿ ಬಂದಿತ್ತು.
ಬೆಂಗಳೂರಿನಲ್ಲಿ ನೂರಾರು ಮಾದರಿಯ ಉದ್ಯೋಗಗಳು ಲಭ್ಯವಿದ್ದು, ಅವರವರ ಸಾಮರ್ಥ್ಯಮ ವಿದ್ಯಾರ್ಹತೆ, ಕೌಶಲ್ಯಗಳ ಮೇಲೆ ಉದ್ಯೋಗ ಪಡೆದು ಜೀವನ ನಡೆಸುತ್ತಾರೆ. ಇನ್ನು ಕೆಲವರು ಸಂಬಳಕ್ಕಾಗಿ ಹಲವು ಕೆಲಸಗಳನ್ನು ಬದಲಿಸುವವರೂ ಇರುತ್ತಾರೆ. ಇನ್ನು ಕೆಲವರು ಕೆಲಸದ ಸ್ಥಳದಲ್ಲಿ ತಮ್ಮ ಕೈಚಳಕ ತೋರಿಸಿ, ಅಲ್ಲಿ ಲಕ್ಷಾಂತರ ರೂ. ನಷ್ಟ ಮಾಡಿ ಪರಾರಿ ಆಗುವವರೂ ಇದ್ದಾರೆ. ಮತ್ತಷ್ಟು ಜನರು ಕೆಲಸ ಮಾಡುವ ಸ್ಥಳದಲ್ಲಿಯೇ ಕಳ್ಳತನ ಮಾಡಿ ಪೊಲೀಸರ ಅತಿಥಿ ಆಗುತ್ತಾರೆ. ಈ ಕೆಟಗರಿಯಲ್ಲಿ ನಾವು ಹೇಳುತ್ತಿರುವ ಮಹಿಳೆ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾಳೆ.
ಬೆಂಗಳೂರಿನ ಸದ್ದುಗುಂಟೆಪಾಳ್ಯದಲ್ಲಿ ಮನೆ ಕೆಲಸಕ್ಕೆ ಸೇರಿದ ಮಹಿಳೆ ಕಲ್ಪನಾ(40) ಎರಡೇ ದಿನಕ್ಕೆ ಮನೆಯಲ್ಲಿದ್ದ ಚಿನ್ನಾಭರಣವನ್ನು ಕಳ್ಳತನ ಮಾಡಿದ್ದಾಳೆ. ಇದೀಗ ಸದ್ದುಗುಂಟೆಪಾಳ್ಯ ಪೊಲೀಸರಿಂದ ಮನೆಗಳ್ಳಿಯ ಬಂಧನ ಮಾಡಲಾಗಿದೆ. ಸದ್ದುಗುಂಟೆಪಾಳ್ಯದ ರಾಘವ್ ರೆಡ್ಡಿ ಎಂಬುವವರ ಮನೆಯಲ್ಲಿ ಕಳೆದ 2 ದಿನಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದಳು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಿನ್ನಾಭರಣ ಕದ್ದಿದ್ದಳು. ₹10 ಲಕ್ಷ ಮೌಲ್ಯದ 128 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿ ಯಾಮಾರಿಸಿದ್ದಳು. ಈಕೆ ಚಿನ್ನಾಭರಣ ಕದಿಯುವ ಮೂಲಕ ಪ್ರತಿ ದಿನದ ದುಡಿಮೆಗೆ ₹5 ಲಕ್ಷ ಗಿಟ್ಟಿಕೊಳ್ಳಲು ಮುಂದಾಗಿದ್ದಳು.
ಇದನ್ನೂ ಓದಿ: ಆರೋಗ್ಯ ಇಲಾಖೆಯ ಖಾಲಿ ಹುದ್ದೆಗಳ ಭರ್ತಿಗೆ ಸಂದರ್ಶನದ ಮೂಲಕ ನೇರ ನೇಮಕಾತಿ!
ಇನ್ನು ಮನೆಯಲ್ಲಿ ಚಿನ್ನಾಭರಣ ಕಳವಾಗಿದ್ದು ತಿಳಿಯುತ್ತಿದ್ದಂತೆ ಮನೆ ಮಾಲೀಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರ ತನಿಖೆಯಲ್ಲಿ ಮನೆ ಕೆಲಸಕ್ಕೆ ಸೇರಿದ್ದ ಮಹಿಳೆ ಕಳ್ಳತನ ಮಾಡಿರುವುದು ಪತ್ತೆಯಾಗಿದೆ. ಆಕೆಯಿಂದ ಚಿನ್ನಾಭರಣವನ್ನು ವಶಕ್ಕೆ ಪಡೆದು, ಸಂಬಂಧಿಸಿದ ಮಾಲೀಕರಿಗೆ ಒಪ್ಪಿಸಲಾಗುತ್ತಿದೆ. ಇನ್ನು ಹೆಚ್ಚಿನ ವಿಚಾರಣೆಗೆ ಮಹಿಳೆಯನ್ನು ಬಂಧಿಸಿದ ಪೊಲೀಸರು, ಈ ಹಿಂದೆಯೂ ಇಂತಹದೇ ಕೃತ್ಯಗಳನ್ನು ಎಸಗಿದ್ದಾರೆಯೇ ಎಂಬುದನ್ನು ತನಿಖೆ ಮಾಡುತ್ತಿದ್ದಾರೆ.