ಕಲ್ಯಾಣ ಕರ್ನಾಟಕದಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಸುರೇಶ್ ಕುಮಾರ್ ಮಹತ್ವದ ನಿರ್ಧಾರ| ಕಲ್ಯಾಣ ಕರ್ನಾಟಕದಲ್ಲಿ 7000 ಶಿಕ್ಷಕರ ನೇಮಕಾತಿಗೆ ಸುರೇಶ್ ಕುಮಾರ್ ಭರವಸೆ|ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್
ಕಲಬುರಗಿ, [ಸೆ.28]: ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ದೈಹಿಕ ಶಿಕ್ಷಕರು, ಕ್ರಾಫ್ಟ್ ಹಾಗೂ ಸಂಗೀತ ಶಿಕ್ಷಕರ ಹುದ್ದೆ ಸೇರಿದಂತೆ ಇತರ ಇಲಾಖೆಗಳ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿ ಆದಷ್ಟು ಶೀಘ್ರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸುರೇಶ್ ಕುಮಾರ್, ಕಲ್ಯಾಣ ಕರ್ನಾಟಕದಲ್ಲಿ 7000 ಶಿಕ್ಷಕರ ಹುದ್ದೆ ಖಾಲಿಯಿದೆ ಎಂಬುದು ಗೊತ್ತಾಗಿದೆ. ಇದು ಕೇವಲ ಶಿಕ್ಷಣ ಇಲಾಖೆ ಅಷ್ಟೇ ಉಳಿದ ಇಲಾಖೆಗಳಲ್ಲಿಯೂ ಹುದ್ದೆಗಳ ಭರ್ತಿಯಾಗಬೇಕು. ಕೇಂದ್ರ ಸರ್ಕಾರವು ಇತ್ತೀಚೆಗೆ ಫಿಟ್ ಇಂಡಿಯಾಗೆ ಕರೆ ಕೊಟ್ಟಿದ್ದಾರೆ. ಇದರಿಂದಾಗಿ ದೈಹಿಕ ಶಿಕ್ಷಕರ ನೇಮಕಾತಿಗೆ ಅನುಕೂಲವಾಗುವುದು. ಈ ಕುರಿತು ಸಮಗ್ರ ಅಧ್ಯಯನ ಮಾಡಿ ಭರ್ತಿಗೆ ಕ್ರಮಕೈಗೊಳ್ಳಲಾಗುವುದು ಎಂದರು.
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕಲ್ಯಾಣ ಕರ್ನಾಟಕದಲ್ಲಿ ಹಲವಾರು ಶಾಲೆಗಳು ಮೇಲ್ಛಾವಣಿ ಗೋಡೆಗಳು ಕುಸಿಯುವ ಹಂತಕ್ಕೆ ಬಂದಿವೆ ಎಂದು ಪ್ರಶ್ನೆಗೆ ಉತ್ತರಿಸಿದ ಅವರು, ಪ್ರವಾಹದಿಂದಾಗಿ ಉತ್ತರ ಕರ್ನಾಟಕದ ಹಲಾವರು ಶಾಲಾ ಕಾಲೇಜುಗಳು ಬಿದ್ದಿವೆ. ಕೆಲವು ಕಡೆ ಟೆಂಟ್ ಹಾಕಿ ಕಲಿಸಲಾಗುತ್ತಿದೆ. ಬಿರುಕುಬಿಟ್ಟ ಶಾಲೆಗಳನ್ನು ಕೆಡವು ಮತ್ತೆ ಕಟ್ಟಡ ಕಟ್ಟಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಕಲ್ಯಾಣ ಕರ್ನಾಟಕದಲ್ಲಿರುವ ಶಾಲೆಗಳ ದುಸ್ಥಿತಿ ಬಗ್ಗೆ ವರದಿ ತರಿಸಿ ಕಲ್ಯಾಣ ಕರ್ನಾಟಕ ಬೋರ್ಡ್ ಜೊತೆ ಮಾತಾಡಿ ಬಿರುಕುಬಿಟ್ಟ ಶಾಲೆಗಳನ್ನು ಕಟ್ಟಲು ಚರ್ಚಿಸಲಾಗುವುದು ಎಂದು ಹೇಳಿದರು.
ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕೆಂದು ಬೇಡಿಕೆಗಳು ಬರುತ್ತಿವೆ. ಬಹಳಷ್ಟು ಕಡೆ ಪ್ರೌಢಶಾಲೆಯ ಜೊತೆಗೆ ಕಾಲೇಜುಗಳು ಇವೆ. ಒಂದೇ ಕಂಪೌಂಡ್‍ನಲ್ಲಿ ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳಿವೆ. ಒಂದೆರಡು ಕಾಲೇಜಿಗೆ ವಿಸ್ತರಿಸಲು ಬರುವುದಿಲ್ಲ. ಈ ಕುರಿತು ಸಮಗ್ರವಾಗಿ ಚರ್ಚಿಸಿ ಕಾಲೇಜುಗಳಿಗೆ ವಿಸ್ತರಿಸುವ ಚಿಂತನೆ ನಡೆದಿದೆ ತಿಳಿಸಿದರು.
16000 ಪೊಲೀಸ್ ಪೇದೆ, 630 PSI ನೇಮಕಾತಿ: ಗೃಹ ಸಚಿವರ ಮಹತ್ವದ ಘೋಷಣೆ
ಅಕ್ಟೋಬರ್ ತಿಂಗಳಲ್ಲಿ ಕಲಬುರಗಿ ಜಿಲ್ಲೆಯ ಸರ್ಕಾರಿ ಶಾಲೆಗಳ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸುತ್ತೇನೆ. ನೇರವಾಗಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಕುರತು ಮಕ್ಕಳಿಂದ ಮಾಹಿತಿ ಪಡೆಯುತ್ತೇನೆ. ಮಕ್ಕಳಿಲ್ಲದೆ ಶಿಕ್ಷಕರು ಇಲ್ಲ ಎಂಬುದನ್ನು ಶಿಕ್ಷಕರಿಗೆ ಮನವರಿಕೆ ಮಾಡಲಾಗುವುದು. ಯಾವ ಸರ್ಕಾರಿ ಶಾಲಾ ಮಕ್ಕಳಲ್ಲೂ ಕೀಳರಿಮೆ ಇರಬಾರದು. ಹಿಂದುಳಿದಿದ್ದೇವೆ ಎಂಬ ಮನಸ್ಥಿತಿ ಬದಲಾಗಬೇಕಾಗಿದೆ ಎಂದರು.
ಶಿಕ್ಷಣ ಕೊಡುವುದು ವೃತ್ತಿಯಾಗಬಾರದು. ಅದೊಂದು ಪ್ರವೃತ್ತಿಯಾಗಬೇಕು. ಈಗಾಗಲೇ ಸರ್ಕಾರಿ ವೈದ್ಯರು ಖಾಸಗಿಯಾಗಿ ಕ್ಲಿನಿಕ್ ತೆರೆಯಬಾರದು ಎಂದು ಆರೋಗ್ಯ ಸಚಿವರು ಸೂಚಿಸಿದ್ದಾರೆ. ಇದು ಶಿಕ್ಷಣ ಇಲಾಖೆಗೂ ಅನ್ವಯಿಸುತ್ತದೆ. ಯಾವ ಸರ್ಕಾರಿ ಶಿಕ್ಷಕರು ಶಿಕ್ಷಣ ಸಂಸ್ಥೆಗಳನ್ನು ನಡೆಸಬಾರದು. ಪಿಯು ಉಪನ್ಯಾಸಕರ ನೇಮಕಾತಿಯಲ್ಲಾಗುತ್ತಿರುವ ಗೊಂದಲ, ಪ್ರಶ್ನೆಪತ್ರಿಕೆಯಲ್ಲಾದ ಲೋಪ ಹಾಗೂ ಪದವೀಧರ ಶಿಕ್ಷಕರ ನೇಮಕಾತಿಯಲ್ಲಿ ತಾಂತ್ರಿಕ ದೋಷದಿಂದಾಗಿ ಮೂರನೇ ಮೌಲ್ಯಮಾಪನದಲ್ಲುಂಟಾದ ಲೋಪದೋಷಗಳ ಬಗ್ಗೆ ಚರ್ಚಿ ಮಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
6 ಮತ್ತು 8ನೇ ತರಗತಿಯಿಂದಲೇ ಪರೀಕ್ಷೆ ಅನುಭವವಾಗಲಿ ಎಂಬ ಉದ್ದೇಶದಿಂದ ಪರೀಕ್ಷೆಯಲ್ಲಿ ಬದಲಾವಣೆ ತರಲು ಚಿಂತಿಸಲಾಗುತ್ತಿದೆ. 1 ನೇ ತರಗತಿಯ ಮಕ್ಕಳು 10ನೇ ತಗತಿಗೆ ಬಂದು ಪರೀಕ್ಷೆ ಬರೆಯುವುದರಿಂದ ಭಯದಿಂದಾಗಿ ಫೇಲ್ ಆಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ವಿದ್ಯಾರ್ಥಿಗಳನ್ನು ಫೇಲ್ ಮಾಡುವ ಉದ್ದೇಶ ಇದಲ್ಲ. ಆದರೆ ಅವರಿಗೆ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸುವ ಆತ್ಮವಿಶ್ವಾಸ ಹುಟ್ಟಲಿ ಎಂಬ ಕಾರಣಕ್ಕೆ ಚಿಂತನೆ ನಡೆದಿದೆ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್, ಬಸವರಾಜ ಮತ್ತಿಮೂಡ, ಶಕೀಲ ನಮೋಶಿ, ಅಮರನಾಥ ಪಾಟೀಲ್ ಇದ್ದರು.