ಮುಂದಿನ ಎರಡು ವರ್ಷದೊಳಗೆ 16,000 ಪೊಲೀಸ್ ಪೇದೆಗಳು ಹಾಗೂ 630 ಪಿಎಸ್ಐಗಳನ್ನು ನೇಮಕಾತಿ ಮಾಡಿಕೊಳ್ಳುವುದಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಹತ್ವದ ಘೋಷಣೆ ಮಾಡಿದ್ದಾರೆ.
ಕಲಬುರಗಿ, (ಸೆ, 23): ಎರಡು ವರ್ಷದೊಳಗೆ 16,000 ಪೊಲೀಸ್ ಪೇದೆಗಳು ಹಾಗೂ 630 ಪಿಎಸ್ಐಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಕಲಬುರಗಿಯಲ್ಲಿ ಭಾನುವಾರ ಪಿಎಸ್ಐ ಹಾಗೂ ಆರ್ಎಸ್ಐ ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಈಗಾಗಲೇ 6,000 ಪೇದೆಗಳ ಭರ್ತಿ ಚಾಲನೆಯಲ್ಲಿದೆ. ಈ ಕುರಿತು ಹೈಕೋರ್ಟ್ಗೂ ಮಾಹಿತಿ ನಿಡಲಾಗಿದೆ. ಹಣಕಾಸು ಇಲಾಖೆಯೂ ನೇಮಕಾತಿಗೆ ಒಪ್ಪಿಗೆ ಸೂಚಿಸಿದೆ ಎಂದು ಸ್ಪಷ್ಟಪಡಿಸಿದರು.
ಜಾಬ್ಸ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪೊಲೀಸ್ ಇಲಾಖೆ ಸುಧಾರಣೆಗೆ ದೃಢ ಹೆಜ್ಜೆ ಇಡಬೇಕಾಗಿದೆ. ಹೀಗಾಗಿ ಬರುವ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಇಡಲಾಗುವುದು. ಮುಖ್ಯವಾಗಿ ಸೈಬರ್ ಕ್ರೈಂ ಪಡೆಯನ್ನು ಬಲಪಡಿಸಬೇಕಾಗಿದೆ. ಇದನ್ನು ತಾಂತ್ರಿಕವಾಗಿ ಮತ್ತಷ್ಟು ಸುಧಾರಿಸಲಾಗುವುದು ಎಂದರು.
ಮುಂದಿನ ಎರಡ್ಮೂರು ವರ್ಷದೊಳಗೆ ಪೊಲಿಸರಿಗೆ ಶೇ 60 ರಷ್ಟು ಮನೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಇದೇ ವೇಳೆ ತಿಳಿಸಿದರು.
ಔರಾದಕರ್ ವರದಿ ಜಾರಿಗೆ ಸರ್ಕಾರ ಬದ್ಧವಿದೆ. ಈ ಕುರಿತು ಶೀಘ್ರ ಅಧಿಸೂಚನೆ ಹೊರಡಿಸಲಾಗುವುದು. ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಜೈಲರ್ ಸಿಬ್ಬಂದಿಗಳನ್ನು ಹೊರಗಿಡಲಾಗಿತ್ತು. ಆದರೆ ತಾವು ಬಂದ ಮೇಲೆ ಎರಡು ಸುತ್ತಿನ ಸಭೆ ನಡೆಸಿ ಇವರನ್ನೂ ಸೇರಿಸಲಾಗಿದೆ ಎಂದು ತಿಳಿಸಿದರು.