ಅಮೆರಿಕದಲ್ಲಿ ಭಾರತೀಯ ಐಟಿ ಕಂಪನಿಗಳಿಗೆ ಬಿಗ್ ಶಾಕ್: ಗ್ರೀನ್ ಕಾರ್ಡ್ ಪ್ರೋಗ್ರಾಂನಿಂದ ಇನ್ಫೋಸಿಸ್, ಟಿಸಿಎಸ್, ವಿಪ್ರೋ, ಎಚ್‌ಸಿಎಲ್ ಸಸ್ಪೆಂಡ್‌

Published : Oct 08, 2026, 09:01 PM ISTUpdated : Oct 08, 2026, 09:04 PM IST
US suspends Infosys TCS

ಸಾರಾಂಶ

ಅಮೆರಿಕದಲ್ಲಿ ಗ್ರೀನ್ ಕಾರ್ಡ್ ನೀಡುವ 'ಪರ್ಮನೆಂಟ್ ಲೇಬರ್ ಸರ್ಟಿಫಿಕೇಶನ್ ಪ್ರೋಗ್ರಾಂ'ನಿಂದ ಇನ್ಫೋಸಿಸ್, ಟಿಸಿಎಸ್ ಸೇರಿದಂತೆ ಹಲವು ಐಟಿ ದೈತ್ಯ ಕಂಪನಿಗಳನ್ನು ಅಮಾನತುಗೊಳಿಸಲಾಗಿದೆ. ಈ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪದ ಮೇಲೆ ಅಮೆರಿಕ ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿದೆ.

ನ್ಯೂಯಾರ್ಕ್‌ (ಅ.8): ಅಮೆರಿಕದಲ್ಲಿ ಉದ್ಯೋಗದಲ್ಲಿರುವ ಲಕ್ಷಾಂತರ ವಿದೇಶಿ ನೌಕರರಿಗೆ ಹಾಗೂ ಜಾಗತಿಕ ಐಟಿ ಸೇವಾ ಸಂಸ್ಥೆಗಳಿಗೆ ಭಾರಿ ಆಘಾತ ಎದುರಾಗಿದೆ. ವಿದೇಶಿ ಉದ್ಯೋಗಿಗಳಿಗೆ ಅಮೆರಿಕದಲ್ಲಿ ಖಾಯಂ ನಿವಾಸದ ಹಕ್ಕು (ಗ್ರೀನ್ ಕಾರ್ಡ್) ಕಲ್ಪಿಸುವ ಪ್ರಮುಖ ನಿಯಮಾವಳಿಯಾದ 'ಪರ್ಮನೆಂಟ್ ಲೇಬರ್ ಸರ್ಟಿಫಿಕೇಶನ್ ಪ್ರೋಗ್ರಾಂ'ನಿಂದ (PERM) ಭಾರತದ ಪ್ರಮುಖ ಐಟಿ ದೈತ್ಯ ಸಂಸ್ಥೆಗಳಾದ ಇನ್ಫೋಸಿಸ್, ಟಿಸಿಎಸ್ (TCS), ವಿಪ್ರೋ ಮತ್ತು ಎಚ್‌ಸಿಎಲ್ ಸೇರಿದಂತೆ ಹಲವು ದೈತ್ಯ ಕಂಪನಿಗಳನ್ನು ಅಮೆರಿಕದ ಕಾರ್ಮಿಕ ಇಲಾಖೆಯು ಅಮಾನತುಗೊಳಿಸಿದೆ.

ವಿದೇಶಿ ನೌಕರರಿಗೆ ಗ್ರೀನ್ ಕಾರ್ಡ್ ಮತ್ತು ಖಾಯಂ ನಿವಾಸ ಕಲ್ಪಿಸುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಈ ಸರ್ಕಾರಿ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿರುವ ಅಮೆರಿಕ ಸರ್ಕಾರವು ಈ ಕಠಿಣ ಕ್ರಮ ಕೈಗೊಂಡಿದೆ. ಭಾರತೀಯ ಮೂಲದ ಸಂಸ್ಥೆಗಳ ಜೊತೆಗೆ 'ಮೈಕ್ರೋಸಾಫ್ಟ್' ಮತ್ತು 'ಅಡೋಬ್'ನಂತಹ ಜಾಗತಿಕ ಟೆಕ್ ದೈತ್ಯ ಸಂಸ್ಥೆಗಳನ್ನೂ ಈ ಯೋಜನೆಯಿಂದ ಅಮಾನತುಗೊಳಿಸಲಾಗಿದೆ. ಇದರ ಜೊತೆಗೆ ಅಮೆರಿಕದ 9 ಪ್ರಮುಖ ವಿಶ್ವವಿದ್ಯಾಲಯಗಳ ವಿರುದ್ಧವೂ ತನಿಖೆ ಆರಂಭಿಸಲಾಗಿದೆ.

ವ್ಯಾಪಕ ತನಿಖೆ ಮತ್ತು ಕಠಿಣ ಕ್ರಮ

ಈ ಕುರಿತು ಅಧಿಕೃತವಾಗಿ ಮಾಹಿತಿ ನೀಡಿರುವ ಅಮೆರಿಕದ ಕಾರ್ಮಿಕ ಕಾರ್ಯದರ್ಶಿ ಕೀತ್ ಸೋಂಡರ್ಲಿಂಗ್, "ಕಾಪಾಡ್ ಗ್ರೂಪ್‌ನ ಅಡಿಯಲ್ಲಿ ಬರುವ ಕಾಗ್ನಿಜೆಂಟ್, ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS), ವಿಪ್ರೋ, ಎಚ್‌ಸಿಎಲ್ ಹಾಗೂ ಕ್ಯಾಪ್‌ಜೆಮಿನಿ ಸಂಸ್ಥೆಗಳನ್ನು ಈ ಪ್ರೋಗ್ರಾಂನಿಂದ ಅಮಾನತುಗೊಳಿಸಲಾಗಿದೆ. ಪ್ರಸ್ತುತ ಹಲವು ಫೆಡರಲ್ ತನಿಖೆಗಳು ನಡೆಯುತ್ತಿರುವುದರಿಂದ ಮೈಕ್ರೋಸಾಫ್ಟ್ ಮತ್ತು ಅಡೋಬ್ ಸಂಸ್ಥೆಗಳ ವಿರುದ್ಧವೂ ಈ ಕ್ರಮ ಜರುಗಿಸಲಾಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಮೈಕ್ರೋಸಾಫ್ಟ್ ಸಂಸ್ಥೆಯ ನಡೆಯನ್ನು ತೀವ್ರವಾಗಿ ಖಂಡಿಸಿದ ಸೋಂಡರ್ಲಿಂಗ್, "ದುರದೃಷ್ಟವಶಾತ್ ಅಮೆರಿಕದಲ್ಲಿದ್ದುಕೊಂಡು ಈ ವ್ಯವಸ್ಥೆಯನ್ನು ಮೈಕ್ರೋಸಾಫ್ಟ್‌ಗಿಂತ ಹೆಚ್ಚು ದುರ್ಬಳಕೆ ಮಾಡಿಕೊಂಡ ಮತ್ತೊಂದು ಕಂಪನಿಯೇ ಇಲ್ಲ" ಎಂದು ವಾಗ್ದಾಳಿ ನಡೆಸಿದ್ದಾರೆ.

ಅಮೆರಿಕನ್ ಉದ್ಯೋಗಿಗಳನ್ನು ತೆಗೆದು ವಿದೇಶಿಗರಿಗೆ ಅವಕಾಶ: ಜೆ.ಡಿ. ವ್ಯಾನ್ಸ್ ಆಕ್ರೋಶ

ಈ ವಿಚಾರವಾಗಿ ಮಾತನಾಡಿರುವ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, "ಅರ್ಹ ಅಮೆರಿಕನ್ ಉದ್ಯೋಗಿಗಳು ಸಿಗುತ್ತಿಲ್ಲ ಎಂದು ಅಮೆರಿಕ ಸರ್ಕಾರಕ್ಕೆ ಲಿಖಿತ ಪ್ರಮಾಣಪತ್ರ ಸಲ್ಲಿಸಿದ್ದ ಮೈಕ್ರೋಸಾಫ್ಟ್ ಸಂಸ್ಥೆಯು, 2025ರ ಒಂದೇ ವರ್ಷದಲ್ಲಿ ಬರೋಬ್ಬರಿ 6,000 ಅಮೆರಿಕನ್ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿತ್ತು (Layoff). ಆದರೆ, ಅದೇ ಸಮಯದಲ್ಲಿ ಸಂಸ್ಥೆಯು 6,000ಕ್ಕೂ ಹೆಚ್ಚು ಎಚ್-1ಬಿ (H-1B) ವೀಸಾಗಳಿಗೆ ಅನುಮೋದನೆ ಪಡೆದುಕೊಂಡಿತ್ತಲ್ಲದೆ, 3,682 'PERM' ಅರ್ಜಿಗಳನ್ನು ಸಲ್ಲಿಸಿತ್ತು" ಎಂದು ಅಂಕಿ-ಅಂಶಗಳ ಸಮೇತ ವಿವರಿಸಿದ್ದಾರೆ.

ವಿಶೇಷವೆಂದರೆ, ಮೈಕ್ರೋಸಾಫ್ಟ್ ಸಲ್ಲಿಸಿದ್ದ ಈ 'PERM' ಅರ್ಜಿಗಳ ಪೈಕಿ ಸುಮಾರು 1,000 ಅರ್ಜಿಗಳು, ಕಂಪನಿಯು ಯಾವ ಹುದ್ದೆಗಳಿಂದ ಅಮೆರಿಕನ್ ಉದ್ಯೋಗಿಗಳನ್ನು ವಜಾಗೊಳಿಸಿತ್ತೋ ಅದೇ ಹುದ್ದೆಗಳಿಗೆ ಸಂಬಂಧಿಸಿದ್ದಾಗಿದ್ದವು ಎಂದು ವ್ಯಾನ್ಸ್ ಆರೋಪಿಸಿದ್ದಾರೆ. "ಸ್ಥಳೀಯ ಅಮೆರಿಕನ್ ನೌಕರರಿಂದ ಭರ್ತಿ ಮಾಡಲು ಸಾಧ್ಯವಾಗದ ಹುದ್ದೆಗಳಿಗೆ ಮಾತ್ರ ಜಗತ್ತಿನ 'ಅತ್ಯುತ್ತಮ ನೌಕರರನ್ನು' ಅಮೆರಿಕಕ್ಕೆ ಕರೆತರಲು ಎಚ್-1ಬಿ ವೀಸಾ ವ್ಯವಸ್ಥೆಯನ್ನು ತರಲಾಗಿತ್ತು. ಆದರೆ ಪ್ರಸ್ತುತ ಈ ಯೋಜನೆ ಸಂಪೂರ್ಣ ಅಕ್ರಮ ಮತ್ತು ವಂಚನೆಯಿಂದ ಕೂಡಿದೆ" ಎಂದು ವ್ಯಾನ್ಸ್ ಕಿಡಿಕಾರಿದ್ದಾರೆ.

ವಿಶ್ವವಿದ್ಯಾಲಯಗಳ ಮೇಲೆಯೂ ತನಿಖಾ ಅಸ್ತ್ರ

ಕಾರ್ಮಿಕ ಇಲಾಖೆಯ ಈ ಕ್ರಮವು ಕೇವಲ ಐಟಿ ಕಂಪನಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಪ್ರಸಿದ್ಧ ಹಾರ್ವರ್ಡ್‌, ಯೇಲ್ ಹಾಗೂ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಗಳು ಸೇರಿದಂತೆ ಒಟ್ಟು 9 ಪ್ರಮುಖ ಅಮೆರಿಕನ್ ವಿಶ್ವವಿದ್ಯಾಲಯಗಳ ವಿರುದ್ಧವೂ ತನಿಖೆಗೆ ಆದೇಶಿಸಲಾಗಿದೆ. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಅಮೆರಿಕಕ್ಕೆ ಕರೆತಂದು, ಸ್ಥಳೀಯ ಅಮೆರಿಕನ್ನರ ವೇತನ ಪ್ರಮಾಣವನ್ನು ಕುಗ್ಗಿಸುವ (Wage Undercutting) ಕೆಲಸದಲ್ಲಿ ಈ ಶಿಕ್ಷಣ ಸಂಸ್ಥೆಗಳು ಭಾಗಿಯಾಗಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಈಗಾಗಲೇ ಈ ವಿಚಾರವಾಗಿ ಸಂಬಂಧಪಟ್ಟ ಸಂಸ್ಥೆಗಳಿಗೆ ಸಮನ್ಸ್ ಮತ್ತು ಸಬ್‌ಪೀನಾ (Subpoena) ಜಾರಿಗೊಳಿಸಲಾಗಿದೆ ಎಂದು ಕಾರ್ಮಿಕ ಇಲಾಖೆಯ ಇನ್ಸ್ಪೆಕ್ಟರ್ ಜನರಲ್ ಆಂಥೋನಿ ಡಿ'ಎಸ್ಪೊಸಿಟೊ ಸ್ಪಷ್ಟಪಡಿಸಿದ್ದಾರೆ. ಆದರೆ, ಅಮೆರಿಕ ಸರ್ಕಾರದ ಈ ದಿಢೀರ್ ನಡೆ ಮತ್ತು ಅಮಾನತು ಕ್ರಮದ ಕುರಿತು ಮೈಕ್ರೋಸಾಫ್ಟ್ ಅಥವಾ ಭಾರತೀಯ ಐಟಿ ಸಂಸ್ಥೆಗಳು ತಕ್ಷಣಕ್ಕೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಅಮೆರಿಕದಲ್ಲಿ ಉದ್ಯೋಗದಲ್ಲಿರುವ ಮತ್ತು ಗ್ರೀನ್ ಕಾರ್ಡ್ ನಿರೀಕ್ಷೆಯಲ್ಲಿದ್ದ ಲಕ್ಷಾಂತರ ಭಾರತೀಯ ಐಟಿ ಉದ್ಯೋಗಿಗಳಿಗೆ ಈ ಬೆಳವಣಿಗೆ ಭಾರಿ ಆತಂಕ ತಂದೊಡ್ಡಿದೆ.

PREV
Read more Articles on
click me!

Recommended Stories

ಟಿಸಿಎಸ್, ವಿಪ್ರೋ, ಇನ್ಫೋಸಿಸ್‌ ಫ್ರೆಶರ್‌ಗಳ ವಾರ್ಷಿಕ ಸ್ಯಾಲರಿ ಪ್ಯಾಕೇಜ್‌ಗಿಂತ ದುಬಾರಿ iPhone Duo, ಭಾರೀ ವೈರಲ್‌ ಆದ ಪೋಸ್ಟ್‌
ಐಟಿ ಉದ್ಯೋಗಿಗಳ ಪ್ರೈವೆಸಿಗೆ ಬಿತ್ತು ಕನ್ನ: ಲ್ಯಾಪ್‌ಟಾಪ್‌ಗಳಲ್ಲಿ ಮಾನಿಟರಿಂಗ್ ಸಾಫ್ಟ್‌ವೇರ್ ಹಾಕಿ ಟ್ರ್ಯಾಕ್‌ ಮಾಡಲು ಆರಂಭಿಸಿದ ಟಿಸಿಎಸ್!