
ಬೆಂಗಳೂರು (ಆ.20): ಭಾರತದ ಪ್ರಮುಖ ಐಟಿ ದೈತ್ಯ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ತನ್ನ ಉದ್ಯೋಗಿಗಳಿಗೆ ನೀಡಲಾಗಿರುವ ಲ್ಯಾಪ್‌ಟಾಪ್‌ಗಳಲ್ಲಿ 'ಡಿಜಿಟಲ್ ಯೂಸರ್ ಎಕ್ಸ್‌ಪೀರಿಯನ್ಸ್ ಮಾನಿಟರಿಂಗ್' (Digital User Experience Monitoring) ಎಂಬ ವಿಶೇಷ ಟೂಲ್ ಒಂದನ್ನು ಅಳವಡಿಸಿದೆ. ಈ ನಡೆ ಇದೀಗ ಉದ್ಯೋಗಿಗಳ ವಲಯದಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದ್ದು, ಇದನ್ನು ಡೇಟಾ ಭದ್ರತೆಗಾಗಿ ಬಳಸಲಾಗುತ್ತಿದೆಯೇ ಅಥವಾ ಸಿಬ್ಬಂದಿಗಳ ದಿನನಿತ್ಯದ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲು ತರಲಾಗಿದೆಯೇ ಎನ್ನುವ ಪ್ರಶ್ನೆಗಳು ಎದ್ದಿವೆ.
ಕಂಪನಿ ನೀಡಿದ ಲ್ಯಾಪ್‌ಟಾಪ್‌ಗಳಲ್ಲಿ ಅಳವಡಿಸಲಾಗಿರುವ ಈ ತಂತ್ರಜ್ಞಾನವು, ಉದ್ಯೋಗಿಗಳು ಯಾವೆಲ್ಲಾ ಆ್ಯಪ್‌ಗಳನ್ನು ಬಳಸುತ್ತಿದ್ದಾರೆ ಮತ್ತು ಪ್ರತಿಯೊಂದು ಆ್ಯಪ್‌ನಲ್ಲಿ ಎಷ್ಟು ಸಮಯ ಕಳೆಯುತ್ತಿದ್ದಾರೆ ಎನ್ನುವುದನ್ನು ಒಳಗೊಂಡಂತೆ ಹಲವು ಪ್ರಮುಖ ಮಾಹಿತಿಗಳನ್ನು ಟ್ರ್ಯಾಕ್ ಮಾಡಲು ಟಿಸಿಎಸ್‌ಗೆ ಅವಕಾಶ ನೀಡುತ್ತದೆ.
ಟಿಸಿಎಸ್ ಸಂಸ್ಥೆಯ ಈ ನಡೆಯನ್ನು ಆಂತರಿಕವಾಗಿ ಎರಡು ಕೋನಗಳಲ್ಲಿ ನೋಡಲಾಗುತ್ತಿದೆ. ಮೊದಲನೆಯದಾಗಿ ಕಂಪನಿಯ ಪ್ರಮುಖ ಡೇಟಾ ಸೋರಿಕೆಯಾಗುವುದನ್ನು (Data Leak) ತಡೆಯುವುದು. ಎರಡನೆಯದಾಗಿ, ಉದ್ಯೋಗಿಗಳ ಸಾಧನಗಳಲ್ಲಿ (Devices) ಅವರ ಚಟುವಟಿಕೆಗಳ ಮೇಲೆ ಹೆಚ್ಚಿನ ನಿಯಂತ್ರಣ ಮತ್ತು ನಿಗಾ ಹೊಂದುವುದು.
ಆದರೆ, ಈ ಕುರಿತು ಮಾಧ್ಯಮಗಳು ಕೇಳಿದ ಯಾವುದೇ ಪ್ರಶ್ನೆಗಳಿಗೆ ಟಿಸಿಎಸ್ ಕಂಪನಿ ಅಧಿಕೃತವಾಗಿ ಉತ್ತರಿಸಿಲ್ಲ. ಅಳವಡಿಸಲಾದ ಸಾಫ್ಟ್‌ವೇರ್‌ನ ಹೆಸರೇನು? ಅದನ್ನು ಪೂರೈಸಿದ ವೆಂಡರ್ ಯಾರು? ಸಾಫ್ಟ್‌ವೇರ್‌ನ ಸಾಮರ್ಥ್ಯವೇನು? ಉದ್ಯೋಗಿಗಳ ಯಾವ ಪ್ರಕಾರದ ಡೇಟಾವನ್ನು ಸಂಗ್ರಹಿಸಲಾಗುತ್ತಿದೆ? ಮತ್ತು ಕಂಪನಿಯ ಯಾರಿಗೆ ಈ ಮಾಹಿತಿಯನ್ನು ವೀಕ್ಷಿಸುವ ಅಧಿಕಾರವಿದೆ? ಎಂಬ ಯಾವುದೇ ಪ್ರಶ್ನೆಗೂ ಟಿಸಿಎಸ್ ಸ್ಪಷ್ಟನೆ ನೀಡಿಲ್ಲ.
ಐಟಿ ಹಾಗೂ ಬಿಸಿನೆಸ್ ಪ್ರೊಸೆಸ್ ಮ್ಯಾನೇಜ್‌ಮೆಂಟ್ (BPM) ಕಂಪನಿಗಳು ಉದ್ಯೋಗಿ ಮಾನಿಟರಿಂಗ್ ಟೂಲ್‌ಗಳನ್ನು ವರ್ಷಗಳಿಂದ ಬಳಸುತ್ತಾ ಬಂದಿವೆಯಾದರೂ, ಟಿಸಿಎಸ್ ಈ ಹಠಾತ್ ಬದಲಾವಣೆಯ ಕುರಿತು ತನ್ನ ಸಿಬ್ಬಂದಿಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಈ ಕಮ್ಯುನಿಕೇಶನ್ ಕೊರತೆಯೇ ಇದೀಗ ಸಾಲು ಸಾಲು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಈ ಕುರಿತು ಮಾತನಾಡಿರುವ ಇಐಐಆರ್‌ಟ್ರೆಂಡ್ (EIIRTrend) ಸಿಇಒ ಪರೀಕ್ಷ್ ಜೈನ್, "ಯೂಸರ್ ಡಿಜಿಟಲ್ ಅನುಭವ ಸರಿಯಾಗಿದೆಯೇ? ಅಪ್ಲಿಕೇಶನ್ ಸರಿಯಾಗಿ ಕೆಲಸ ಮಾಡುತ್ತಿದೆಯೇ ಅಥವಾ ಹ್ಯಾಂಗ್ ಆಗುತ್ತಿದೆಯೇ? ಮತ್ತು ಪ್ರತಿಯೊಂದು ಆ್ಯಪ್‌ನಲ್ಲಿ ಎಷ್ಟು ಸಮಯ ವಿನಿಯೋಗಿಸಲಾಗುತ್ತಿದೆ? ಎಂಬುದನ್ನು ಅರ್ಥಮಾಡಿಕೊಳ್ಳುವುದು ಈ ಸಾಫ್ಟ್‌ವೇರ್‌ನ ಉದ್ದೇಶವಾಗಿರಬಹುದು. ಕ್ಲೈಂಟ್ ನೆಟ್‌ವರ್ಕ್ ನಿರ್ವಹಿಸುವಾಗ ಇದೊಂದು ಪ್ರಮುಖ ನಿಯತಾಂಕವಾಗಿರುತ್ತದೆ. ಆದರೆ, ಹೌದು, ಕಂಪನಿಯು ಬಯಸಿದರೆ ಇದನ್ನು ಉದ್ಯೋಗಿಗಳ ಮೇಲೆ ಕಣ್ಣಿಡುವ ಸ್ಪೈವೇರ್ ಅಥವಾ ಸರ್ವೇಲೆನ್ಸ್ ಟೂಲ್ ಆಗಿಯೂ ಬಳಸಬಹುದು" ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕವಾಗಿ ಐಟಿ ಕಂಪನಿಗಳ ಮೇಲೆ ಗ್ರಾಹಕರ ಸೂಕ್ಷ್ಮ ಡೇಟಾವನ್ನು ರಕ್ಷಿಸುವ ಭಾರಿ ಒತ್ತಡವಿದೆ. ಆದರೆ ಈ ರೀತಿಯ ಟೂಲ್‌ಗಳ ಮೂಲಕ ಪ್ರತಿಯೊಬ್ಬ ಉದ್ಯೋಗಿಯ ಕೆಲಸದ ಸಮಯ ಮತ್ತು ಆ್ಯಪ್ ಬಳಕೆಯನ್ನು ವ್ಯಕ್ತಿಗತ ಮಟ್ಟದಲ್ಲಿ ಸಂಗ್ರಹಿಸಿದರೆ ಅದು ಅವರ ಖಾಸಗಿತನಕ್ಕೆ ಧಕ್ಕೆ ತರುತ್ತದೆ ಎನ್ನಲಾಗಿದೆ.
ಟಿಸಿಎಸ್‌ನಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಇಷ್ಟೊಂದು ಭಾರಿ ಪ್ರಮಾಣದ ಸಿಬ್ಬಂದಿಯ ಕಾರ್ಯಚಟುವಟಿಕೆಯ ಡೇಟಾವನ್ನು ಟ್ರ್ಯಾಕ್ ಮಾಡುವುದು ಮತ್ತು ವಿಶ್ಲೇಷಿಸುವುದೇ ಕಂಪನಿಗೆ ಮತ್ತೊಂದು ಕಾರ್ಯಾಚರಣೆಯ ಹಾಗೂ ಡೇಟಾ ನಿರ್ವಹಣೆಯ ಸವಾಲಾಗಲಿದೆ. ಈ ಸಾಫ್ಟ್‌ವೇರ್ ಮೂಲಕ ಲಭ್ಯವಾಗುವ ಡೇಟಾವನ್ನು ವ್ಯಕ್ತಿಗತವಾಗಿ ಲಿಂಕ್ ಮಾಡಲಾಗುತ್ತಿದೆಯೇ ಅಥವಾ ಐಟಿ ಭದ್ರತಾ ತಂಡಕ್ಕೆ ಕ್ರೋಢೀಕರಿಸಿ ನೀಡಲಾಗುತ್ತಿದೆಯೇ ಅಥವಾ ಮ್ಯಾನೇಜರ್‌ಗಳಿಗೆ ಪ್ರವೇಶ ನೀಡಲಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಕಳೆದ ವರ್ಷ ಪ್ರಸಿದ್ಧ ಕಾಫ್ನಿಝೆಂಟ್ ಕಂಪನಿಯು 'ಪ್ರೋಹ್ಯಾನ್ಸ್' (ProHance) ಎಂಬ ವರ್ಕ್‌ಫೋರ್ಸ್ ಮಾನಿಟರಿಂಗ್ ಟೂಲ್ ಬಳಸಿ ಸುದ್ದಿಯಾಗಿತ್ತು. ಈ ಸಾಫ್ಟ್‌ವೇರ್ ಉದ್ಯೋಗಿಗಳು ಲ್ಯಾಪ್‌ಟಾಪ್ ಲಾಗಿನ್ ಆದ ಸಮಯ, ಬಳಸಿದ ಆ್ಯಪ್/ವೆಬ್‌ಸೈಟ್ ಹಾಗೂ ಕೆಲಸ ಮಾಡದೆ ಸುಮ್ಮನೆ ಕುಳಿತ (Inactivity) ಸಮಯವನ್ನು ಟ್ರ್ಯಾಕ್ ಮಾಡುತ್ತಿತ್ತು. ಆದರೆ ಕಾಫ್ನಿಝೆಂಟ್ ಇದನ್ನು ಉದ್ಯೋಗಿಗಳ ಕಾರ್ಯಕ್ಷಮತೆ ಅಳೆಯಲು ಬಳಸುತ್ತಿಲ್ಲ, ಕೇವಲ ಕ್ಲೈಂಟ್‌ಗಳ ವಿನಂತಿಯ ಮೇರೆಗೆ ಪ್ರಕ್ರಿಯೆಯ ದಕ್ಷತೆ ತಿಳಿಯಲು ಬಳಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿತ್ತು.
ಕೆಲವು ತಿಂಗಳ ಹಿಂದೆಯಷ್ಟೇ ಟಿಸಿಎಸ್ ತನ್ನ ಸೈಬರ್ ಸೆಕ್ಯುರಿಟಿ ಪಾಲುದಾರ ಸಂಸ್ಥೆಯಾದ 'ಝಡ್‌ಸ್ಕೇಲರ್' ಜೊತೆಗಿನ ಒಪ್ಪಂದವನ್ನು ವಿಸ್ತರಿಸಿ 'ಟಿಸಿಎಸ್ ವರ್ಕ್‌ಸ್ಪೇಸ್ ಎಕ್ಸ್‌ಪೀರಿಯನ್ಸ್ ಸ್ಟುಡಿಯೋ' ಅನ್ನು ಬಿಡುಗಡೆ ಮಾಡಿತ್ತು. ಇದು 'ಝೀರೋ-ಟ್ರಸ್ಟ್ ಸೆಕ್ಯುರಿಟಿ' ಮತ್ತು 'ಡಿಜಿಟಲ್ ಎಕ್ಸ್‌ಪೀರಿಯನ್ಸ್ ಮಾನಿಟರಿಂಗ್' ಸೌಲಭ್ಯ ಹೊಂದಿದೆ ಎಂದು ತಿಳಿಸಲಾಗಿತ್ತು. ಪ್ರಸ್ತುತ ಉದ್ಯೋಗಿಗಳ ಲ್ಯಾಪ್‌ಟಾಪ್‌ಗೆ ಹಾಕಲಾಗಿರುವ ಟೂಲ್ ಇದೇ ಝಡ್‌ಸ್ಕೇಲರ್ ತಂತ್ರಜ್ಞಾನವೇ ಎಂಬುದು ಅಧಿಕೃತವಾಗಿ ದೃಢಪಟ್ಟಿಲ್ಲ.