2009ರ IPL ಮಾದರಿ ಅನುಸರಿಸಲು ಬಿಸಿಸಿಐ ಪ್ಲಾನ್..!

By Web DeskFirst Published Mar 16, 2020, 2:17 PM IST
Highlights

ಕೊರೋನಾ ವೈರಸ್ ಭೀತಿಯಿಂದಾಗಿ ಮಾರ್ಚ್ 29ರಿಂದ ಆರಂಭವಾಗಬೇಕಿದ್ದ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಏಪ್ರಿಲ್ 15ಕ್ಕೆ ಮುಂದೂಡಲ್ಪಟ್ಟಿದೆ. ಇದರ ಬೆನ್ನಲ್ಲೇ ಪಂದ್ಯಗಳನ್ನು ಕಡಿತಗೊಳಿಸುವ ಸಾಧ್ಯತೆಯಿದ್ದು, 2009ರ ಐಪಿಎಲ್ ಮಾದರಿ ಅನುಸರಿಸುವ ಸಾಧ್ಯತೆಯಿದೆ. ಏನದು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್.

ಮುಂಬೈ(ಮಾ.16): ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ವಿಶ್ವದಾದ್ಯಂತ ಪ್ರತಿಷ್ಠಿತ ಟೂರ್ನಿಗಳು, ಚಾಂಪಿಯನ್‌ಶಿಪ್‌ಗಳು ಮುಂದೂಡಲ್ಪಟ್ಟಿವೆ. ಕೊರೋನಾ ವಿಶ್ವದ ಶ್ರೀಮಂತ ಟಿ20 ಕ್ರಿಕೆಟ್‌ ಲೀಗ್‌ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಅನ್ನು ಸಹ ಬಿಟ್ಟಿಲ್ಲ. ಮಾರ್ಚ್ 29ರಿಂದ ಆರಂಭಗೊಳ್ಳಬೇಕಿದ್ದ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯನ್ನು ಬಿಸಿಸಿಐ ಏಪ್ರಿಲ್‌ 15ರ ವರೆಗೂ ಅಮಾನತುಗೊಳಿಸಿದೆ.

ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಕಾರ್ಯದರ್ಶಿ ಜಯ್‌ ಶಾ ಹಾಗೂ ಐಪಿಎಲ್‌ ಅಧ್ಯಕ್ಷ ಬ್ರಿಜೇಶ್‌ ಪಟೇಲ್‌ ಶನಿವಾರ ಎಲ್ಲಾ 8 ತಂಡಗಳ ಮಾಲಿಕರ ಜತೆ ಸಭೆ ನಡೆಸಿ ಪರಿಸ್ಥಿತಿ ಬಗ್ಗೆ ವಿವರಿಸಿದರು. ಜತೆಗೆ ಟೂರ್ನಿ ನಡೆಸಲು ಇರುವ ಆಯ್ಕೆಗಳನ್ನು ಸಹ ಪ್ರಸ್ತಾಪಿಸಲಾಯಿತು. ಇದೇ ವೇಳೆ ಸೋಂಕು ನಿಯಂತ್ರಣಕ್ಕೆ ಬಂದರೆ ಟೂರ್ನಿ ಆರಂಭಿಸಲು ಪರಾರ‍ಯಯ ದಿನಾಂಕಗಳನ್ನು ಸಹ ಬಿಸಿಸಿಐ ಗುರುತಿಸಿದೆ. ಏಪ್ರಿಲ್‌ 15, ಏಪ್ರಿಲ್‌ 21, ಏಪ್ರಿಲ್‌ 25, ಮೇ 1 ಹಾಗೂ ಮೇ 5 ಬಿಸಿಸಿಐ ಗುರುತಿಸಿರುವ ತಾತ್ಕಲಿಕ ದಿನಾಂಕಗಳು. ಪರಿಸ್ಥಿತಿ ಸುಧಾರಿಸಿದರೆ ಈ ಐದು ದಿನಗಳ ಪೈಕಿ ಒಂದು ದಿನದಂದು ಟೂರ್ನಿ ಆರಂಭಗೊಳ್ಳಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಈ ವರ್ಷ IPL ಆಯೋಜನೆ ಬೇಡವೆಂದ ವಿದೇಶಾಂಗ ಸಚಿವಾಲಯ..!

ಐಪಿಎಲ್‌ ಸುದೀರ್ಘ ಪಂದ್ಯಾವಳಿ ಆಗಿರುವ ಕಾರಣ, ಎಲ್ಲಾ 60 ಪಂದ್ಯಗಳನ್ನು ನಡೆಸಬೇಕಿದ್ದರೆ ಟೂರ್ನಿ ಕೊನೆ ಪಕ್ಷ ಏ.25ಕ್ಕೆ ಆರಂಭಗೊಳ್ಳಬೇಕು. ಆ ಗಡುವು ದಾಟಿದರೆ ಎಲ್ಲಾ ಪಂದ್ಯಗಳನ್ನು ಆಯೋಜಿಸುವುದು ಕಷ್ಟವಾಗಲಿದೆ. ಐಪಿಎಲ್‌ನಲ್ಲಿ ಡಬಲ್‌ ರೌಂಡ್‌ ರಾಬಿನ್‌ ಮಾದರಿಯನ್ನು ಅನುಸರಿಸುವ ಕಾರಣ, ಪ್ರತಿ ತಂಡ ಎದುರಾಳಿ ವಿರುದ್ಧ 2 ಪಂದ್ಯಗಳನ್ನು ಆಡಲಿದೆ. ಏ.25ರ ಗಡುವು ಮೀರಿದರೆ ಪಂದ್ಯಗಳ ಸಂಖ್ಯೆಯನ್ನು ಕಡಿತಗೊಳಿಸಬೇಕಾದ ಅನಿವಾರ್ಯತೆಗೆ ಬಿಸಿಸಿಐ ಸಿಲುಕಲಿದೆ.

ರಾತ್ರಿಯಿಡೀ ಎಣ್ಣೆ ಪಾರ್ಟಿ, ಮಜಾ ಮಾಡಿದವರಿಗೆ ನಾಲ್ಕೇ ದಿನದಲ್ಲಿ ಕೊರೋನಾ ಶಾಕ್!

ಬಿಸಿಸಿಐ ಕೋಟ್ಯಂತರ ರುಪಾಯಿ ನಷ್ಟವನ್ನು ತಡೆಯಲು ತೆರೆ ಮರೆಯಲ್ಲೇ ಏನೆಲ್ಲಾ ಸಾಧ್ಯವೋ ಎಲ್ಲಾ ಕಸರತ್ತು ಮಾಡುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ ಹಾಗೂ ದೆಹಲಿ ಸರ್ಕಾರಗಳು ಪಂದ್ಯಗಳನ್ನು ಆಯೋಜಿಸಲು ಅನುಮತಿ ನಿರಾಕರಿಸುವ ಸುಳಿವು ನೀಡಿವೆ. ಹೀಗಾಗಿ 5 ಪರ್ಯಾಯ ಸ್ಥಳಗಳನ್ನು ಗುರುತಿಸಿ, ಅಲ್ಲಿನ ಕ್ರಿಕೆಟ್‌ ಸಂಸ್ಥೆಗಳಿಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳುವಂತೆ ಸೂಸಿಚಿದೆ.

2009ರ ಆವೃತ್ತಿ ಹೇಗೆ ನಡೆದಿತ್ತು?

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 2009ರಲ್ಲಿ ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರಗಳು ತಿಳಿಸಿದ್ದವು. ಈ ಕಾರಣ ಟೂರ್ನಿಯನ್ನು ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸಲಾಗಿತ್ತು. 2ನೇ ಆವೃತ್ತಿಯ ಐಪಿಎಲ್‌ನಲ್ಲಿ 37 ದಿನಗಳಲ್ಲಿ 59 ಪಂದ್ಯಗಳು ನಡೆದಿದ್ದವು. ಏ.18ರಂದು ಆರಂಭಗೊಂಡಿದ್ದ ಟೂರ್ನಿ ಮೇ 24ರಂದು ಮುಕ್ತಾಯಗೊಂಡಿತ್ತು.

ಟೂರ್ನಿಯಲ್ಲಿ 8 ತಂಡಗಳು ಪಾಲ್ಗೊಂಡಿದ್ದವು. 8 ನಗರಗಳಲ್ಲಿ ಪಂದ್ಯಗಳು ನಡೆದರೂ ಬಹುತೇಕ ಪಂದ್ಯಗಳನ್ನು ಡರ್ಬನ್‌ (17 ಪಂದ್ಯ) ಹಾಗೂ ಸೆಂಚೂರಿಯನ್‌ (12 ಪಂದ್ಯ)ನಲ್ಲಿ ನಡೆಸಲಾಗಿತ್ತು. ಜೋಹಾನ್ಸ್‌ಬರ್ಗ್‌ ಹಾಗೂ ಕೇಪ್‌ಟೌನ್‌ನಲ್ಲಿ ತಲಾ 8 ಪಂದ್ಯಗಳು ನಡೆದಿದ್ದವು. ಪೋರ್ಟ್‌ ಎಲೆಜೆಬೆತ್‌ನಲ್ಲಿ 7, ಈಸ್ಟ್‌ ಲಂಡನ್‌ನಲ್ಲಿ 4, ಕಿಂಬರ್ಲಿಯಲ್ಲಿ 3 ಹಾಗೂ ಬ್ಲೂಮ್‌ಫಾಂಟೈನ್‌ನಲ್ಲಿ 2 ಪಂದ್ಯಗಳನ್ನು ನಡೆಸಲಾಗಿತ್ತು. ಪ್ರತಿ ತಂಡ ಲೀಗ್‌ ಹಂತದಲ್ಲಿ 14 ಪಂದ್ಯಗಳನ್ನು ಆಡಿದ್ದವು. ಅಗ್ರ 4 ತಂಡಗಳು ಸೆಮಿಫೈನಲ್‌ ಪ್ರವೇಶಿಸಿದ್ದವು. ಫೈನಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 6 ರನ್‌ಗಳಿಂದ ಸೋಲಿಸಿ ಡೆಕ್ಕನ್‌ ಚಾರ್ಜಸ್ ಚಾಂಪಿಯನ್‌ ಆಗಿತ್ತು.

ಇದೇ ಮಾದರಿಯನ್ನು 2020ರ ಐಪಿಎಲ್‌ನಲ್ಲೂ ಅನುಸರಿಸಿದರೆ, ಏ.25ಕ್ಕೆ ಟೂರ್ನಿ ಆರಂಭಿಸಿ ಮೇ ತಿಂಗಳ ಅಂತ್ಯಕ್ಕೆ ಮುಕ್ತಾಯಗೊಳಿಸಬಹುದು ಎಂದು ಫ್ರಾಂಚೈಸಿ ಮಾಲಿಕರೊಬ್ಬರು ರಾಷ್ಟ್ರೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
 

click me!