ಸ್ವಚ್ಛ ಭಾರತ ಅಭಿಯಾನಕ್ಕಾಗಿ ಸರ್ಕಾರ ಕೋಟಿ ಕೋಟಿ ರೂಪಾಯಿಯನ್ನು ಖರ್ಚು ಮಾಡಿದೆ. ಸಾವಿರಾರು ಅಭಿಯಾನಗಳನ್ನು ನಡೆಸಿದೆ. ಸಾವಿರಾರು ರೀತಿಯಲ್ಲಿ ಜಾಗೃತಿ ಮೂಡಿಸಿದೆ. ಆದರೆ ಇದೆಲ್ಲವೂ ಕೆಲ ದಿನಗಳಿಗಷ್ಟೇ ಸೀಮಿತವಾಗಿದ್ದು, ಇವೆಲ್ಲವೂ ಎಲ್ಲೋ ಒಂದು ಕಡೆ ನೀರ ಮೇಲಿನ ಹೋಮದಂತೆ ವ್ಯರ್ಥವಾಗುವಂತಹ ಸ್ಥಿತಿ ಇದೆ. ಆದಾಗ್ಯೂ ಬಾಲಕನೋರ್ವನ ಸ್ವಚ್ಛತ್ತಾ ಕಾರ್ಯವೊಂದು ಭವಿಷ್ಯದ ಯುವ ಪ್ರಜೆಯ ಮೇಲೆ ಭರವಸೆ ಇಡುವಂತೆ ಮಾಡಿದೆ. ಅಲ್ಲದೇ ಭವಿಷ್ಯದ ಯುವ ಪೀಳಿಗೆಯ ಎಲ್ಲರೂ ಇದೇ ರೀತಿ ಇದ್ದರೆ ದೇಶ ಎಷ್ಟು ಸುಂದರವಾದಿತು ಎಂಬ ಹೊಸ ಕನಸನ್ನು ಬಿತ್ತಿದೆ. ಅಷ್ಟಕ್ಕೂ ಆ ಹುಡುಗ ಮಾಡಿದ್ದೇನು? ಕ್ಲೀನಿಂಗ್.
ಸ್ವಚ್ಛ ಭಾರತದ ಯುವ ರಾಯಭಾರಿಯಾಗುವ ಎಲ್ಲಾ ಅರ್ಹತೆ ಇರುವ ಪುಟ್ಟ ಹುಡುಗನ ಈ ಕಾರ್ಯದ ಬಗ್ಗೆ ಶುಭಂ ವರ್ಮಾ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡ ಘಟನೆಯ ಸಾರಾಂಶ ಇದಾಗಿದೆ. ನವೀನ್ ಗೋಸ್ವಾಮಿ ಎಂಬ ಯುವ ಉದ್ಯಮಿ ಇದನ್ನು ತಮ್ಮ ಲಿಂಕ್ಡಿನ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ದೆಹಲಿಯ ಮೆಟ್ರೋ ರೈಲಿನಲ್ಲಿ ಕೆಲ ದಿನಗಳ ಹಿಂದೆ ನಡೆದ ಘಟನೆ. ಶುಭಂ ವರ್ಮಾ ಎಂಬ ಹೆಸರಿನ ವ್ಯಕ್ತಿಯೊಬ್ಬರು ಮೆಟ್ರೋ ರೈಲಿನಲ್ಲಿ ಸಂಚರಿಸುತ್ತಿದ್ದರು. ಎಳೆಯ ಪ್ರಾಯದ ಹುಡುಗನೋರ್ವ ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ಅವರ ಪಕ್ಕದಲ್ಲೇ ಕುಳಿತಿದ್ದ. ಆತ ತನ್ನ ಬ್ಯಾಗ್‌ನಿಂದ ವಾಟರ್ ಬಾಟಲ್ ತೆಗೆಯುವಾಗ ಆಕಸ್ಮಿಕವಾಗಿ ಆತನ ಟಿಫಿನ್ ಬಾಕ್ಸ್ ನೆಲಕ್ಕೆ ಬಿದ್ದಿದೆ. ಜೊತೆಗೆ ಅದರಲ್ಲಿದ್ದ ಊಟವೆಲ್ಲ ಅಲ್ಲಿ ಚೆಲ್ಲಾಡಿದೆ.
ಇದನ್ನು ನೋಡಿದ ಶುಭಂ ಅವರು ಇನ್ನು ಇಡೀ ದಿನ ಇದೇ ರೀತಿ ಈ ಆಹಾರವೆಲ್ಲಾ ಹೀಗೆ ಇಲ್ಲಿ ಉಳಿಯಲಿದೆ. ಇದನ್ನು ಯಾರೂ ಸ್ವಚ್ಛ ಮಾಡಲು ಪ್ರಯತ್ನಿಸುವುದಿಲ್ಲ ಎಂದು ಯೋಚಿಸುತ್ತಾ ಕುಳಿತಿದ್ದಾರೆ. ಆದರೆ ಇವರ ಯೋಚನೆಗೆ ಬ್ರೇಕ್ ಹಾಕುವಂತೆ ಮಾಡಿದ್ದು, ಯುವಕನ ಕಾರ್ಯ, ಯುವಕ ಮಾಡಿದ ಕೆಲಸ ಇವರನ್ನು ಕ್ಷಣ ಕಾಲ ದಂಗಾಗುವಂತೆ ಮಾಡಿದೆ. ಟಿಫನ್ ಬಾಕ್ಸ್‌ನಿಂದ ಬಿದ್ದು ಮೆಟ್ರೋದಲ್ಲಿ ಚೆಲ್ಲಾಡಿದ ಆಹಾರ ನನ್ನದೇ ಆದರೂ ಮೆಟ್ರೋ ರೈಲು ನನ್ನದಲ್ಲ ನಾನೇಕೆ ಸ್ವಚ್ಛ ಮಾಡಲಿ ಎಂದು ಭಾವಿಸದ ಈ ನವ ತರುಣ ಕೂಡಲೇ ತನ್ನ ಬ್ಯಾಗ್‌ನಲ್ಲಿದ್ದ ಪುಸ್ತಕವೊಂದನ್ನು ಹೊರಗೆ ತೆಗೆದು ಅದರಿಂದ ಹಾಳೆಯೊಂದನ್ನು ಕಿತ್ತು ಮೆಟ್ರೋ ರೈಲಿನ ನೆಲದಲ್ಲಿ ಬಿದ್ದ ಎಲ್ಲಾ ಆಹಾರವನ್ನು ಅಲ್ಲಿಂದ ತೆಗೆದಿದ್ದಾನೆ. ಅಲ್ಲದೇ ಅಷ್ಟಕ್ಕೆ ಸುಮ್ಮನಿರದೇ ತನ್ನ ಬ್ಯಾಗ್‌ನಿಂದ ಕರ್ಚಿಫ್ ತೆಗೆದ ಆತ ತನ್ನ ಕರವಸ್ತ್ರದಿಂದ ಆ ನೆಲವನ್ನು ಒರೆಸಿ ಸಂಪೂರ್ಣವಾಗಿ ಸ್ವಚ್ಛ ಮಾಡಿದ್ದಾನೆ. ಹೀಗೆ ಮಾಡಿದ ನಮ್ಮ ಹೀರೋನ ಹೆಸರು ಪ್ರಾಂಜಲ್ ದುಬೆ. ಎಂದು ಶುಭಂ ವರ್ಮಾ ಬರೆದುಕೊಂಡಿದ್ದಾಗಿ ನವೀನ್ ಗೋಸ್ವಾಮಿ ಫೇಸ್‌ಬುಕ್‌ನಲ್ಲಿ ಹೇಳಿಕೊಂಡಿದ್ದಾರೆ.
Clean India: ಕಸ ಆಯ್ದ ಕೇಂದ್ರ ಸಚಿವ ಅನುರಾಗ್ ಠಾಕೂರ್, ತಿಂಗಳಿಗೆ 75ಕೆಜಿಯ ಟಾರ್ಗೆಟ್!
ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ವರ್ಮಾ ಅವರು, ಸ್ವಚ್ಛ ಭಾರತದ ಸೆಮಿನಾರ್‌ಗೆ ಸರ್ಕಾರ ಕೋಟ್ಯಾಂತರ ರೂಪಾಯಿ ಖರ್ಚು ಮಾಡುವುದು ಬೇಕಾಗಿಲ್ಲ. ಆದರೆ ದೇಶದ ಮುಂದಿನ ಪ್ರಜೆಗಳೆನಿಸಿದ ಯುವ ಸಮುದಾಯ ಈ ಬಾಲಕ ದುಬೆಯಂತೆ ದೇಶವನ್ನು ಸ್ವಚ್ಛ ಹಾಗೂ ಹಸಿರುಮಯವಾಗಿಸುತ್ತೇವೆ ಎಂದು ಪ್ರತಿಜ್ಞೆ ಮಾಡಿದರೆ ಸಾಕು. ಸ್ವಚ್ಛ ಭಾರತಕ್ಕೆ ನಿಜವಾಗಿಯೂ ಹೇಳಿ ಮಾಡಿಸಿದಂತಹ ಹೊಸ ರಾಯಭಾರಿ ಇವರಾಗುವುದಿಲ್ಲವೇ ಎಂದು ಅವರು ಬರೆದುಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, ಅನೇಕರು ಈ ನವ ತರುಣನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಮೋದಿ ಶೈಲಿ ಅನುಸರಿಸಿದ ತಾಲಿಬಾನ್: ಸ್ವಚ್ಛ ಅಪ್ಘಾನಿಸ್ತಾನ ಮಿಷನ್ ಆರಂಭ!
ಸಾಮಾನ್ಯವಾಗಿ ನಾವು ವಿಶೇಷವಾಗಿ ಭಾರತೀಯರು ಸಾರ್ವಜನಿಕ ಆಸ್ತಿಯನ್ನು ನಮ್ಮದು, ನಮ್ಮ ತೆರಿಗೆಯಿಂದ ಅಭಿವೃದ್ಧಿ ಆದಂತಹ ಆಸ್ತಿ ಇದರಲ್ಲೂ ನಮ್ಮದು ಪಾಲಿದೆ. ಈ ವಸ್ತುವನ್ನು ಹಾಳು ಮಾಡಬಾರದು ಎಂದು ಭಾವಿಸುವುದು ತೀರಾ ಕಡಿಮೆ. 100 ರಲ್ಲಿ ಒಬ್ಬರು ಇಬ್ಬರೋ ಈ ರೀತಿ ಕಾಳಜಿ ಹೊಂದಿರುವವರು ಇರುತ್ತಾರೆ ಇದೇ ಕಾರಣಕ್ಕೆ ಸರ್ಕಾರಿ ಸ್ವಾಮ್ಯದು ಎನಿಸಿದ್ದ ನಮ್ಮ ಸರ್ಕಾರಿ ಆಸ್ಪತ್ರೆಗೆ, ಸರ್ಕಾರಿ ಶಾಲೆಗಳು, ಸರ್ಕಾರಿ ಕಚೇರಿಗಳು, ಸರ್ಕಾರಿ ವಾಹನಗಳು, ಎಷ್ಟೇ ಸವಲತ್ತು ನೀಡಿದರೂ ಎಷ್ಟು ಖರ್ಚು ಮಾಡಿದರು ನೋಡಲು ಕೆಟ್ಟ ಸ್ಥಿತಿಯಲ್ಲಿರುತ್ತದೆ. ಇದಕ್ಕೆ ನಾವೇ ಕಾರಣರೂ ಎಂದರೂ ತಪ್ಪಾಗಲಾರದು, ಯಾರಾದರೂ ಸಾರ್ವಜನಿಕ ಆಸ್ತಿಗೆ ತೊಂದರೆ ಮಾಡುತ್ತಿದ್ದರೆ ನಮ್ಮದಲ್ಲ ಎಂಬಂತೆ ಕಣ್ಣು ಮುಚ್ಚಿ ಕುಳಿತುಕೊಳ್ಳುತ್ತಾರೆ. ಅದೇ ಸ್ವಂತ ಆಸ್ತಿ ಆದಲ್ಲಿ ಕೋರ್ಟ್ ಕೇಸ್ ಎಂದೂ ವರ್ಷ ಪೂರ್ತಿ ಕುಣಿಯಲು ಸಿದ್ಧವಿರುತ್ತೇವೆ. ನಮ್ಮದೇ ತೆರಿಗೆ ಹಣದಲ್ಲಿ ನಿರ್ಮಾಣವಾಗುವ ಈ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳು ಶಾಲೆಗಳು, ವಸತಿಗೃಹಗಳ ಬಗ್ಗೆ ಇದು ನಮ್ಮದೇ ಎಂಬ ಭಾವನೆ ಎಲ್ಲಿಯವರೆಗೂ ಪ್ರತಿಯೊಬ್ಬರಲ್ಲಿ ಬರುವುದಿಲ್ಲವೋ ಅಲ್ಲಿಯವರೆಗೆ ಸರ್ಕಾರದೆನಿಸಿರುವ ಎಲ್ಲಾ ವಸ್ತುಗಳ ಸ್ಥಿತಿ ಶೋಚನೀಯವೇ ಆಗಿರುತ್ತದೆ. ಇಂತಹ ಸ್ಥಿತಿ ಇರುವ ನಮ್ಮ ದೇಶದಲ್ಲಿ ಈ ಪುಟ್ಟ ಬಾಲಕನ ಈ ಸ್ವಚ್ಛತಾ ಅಭಿಯಾದ ನಡೆ ಎಲ್ಲರಿಗೂ ಮಾದರಿಯಾಗಿದ್ದು, ಯುವ ಪೀಳಿಗೆಯ ಎಲ್ಲರೂ ಹೀಗೆ ಬೆಳೆದಲ್ಲಿ ದೇಶ ಸುಭಿಕ್ಷವಾಗುವುದರಲ್ಲಿ ಎರಡು ಮಾತಿಲ್ಲ ಅಲ್ಲವೇ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ