ಚೀನಾಬ್ ನದಿ ಮೇಲೆ ನಿರ್ಮಿಸಿರುವ ‘ಗೋಲ್ಡನ್ ಜಾಯಿಂಟ್’ ಲೋಕಾರ್ಪಣೆಗೆ ಸಿದ್ಧವಾಗಿದೆ. ಇದು ಫ್ರಾನ್ಸ್‌ನ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರದ್ದಾಗಿದ್ದು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿ ಉದ್ಘಾಟನೆಗೆ ರೆಡಿಯಾಗಿರುವುದು ಗಮನಾರ್ಹ ಸಂಗತಿಯಾಗಿದೆ.
ನವದೆಹಲಿ: ಜಮ್ಮು ಕಾಶ್ಮೀರದ ಚೀನಾಬ್ ನದಿಯ ಮೇಲೆ ನಿರ್ಮಾಣವಾಗುತ್ತಿದ್ದ ಜಗತ್ತಿನ ಅತಿ ಎತ್ತರದ ರೈಲ್ವೆ ಸೇತುವೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಶುಭ ಗಳಿಗೆಯಲ್ಲಿ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಅದರೊಂದಿಗೆ, ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿ ಶ್ರೀನಗರಕ್ಕೆ ದೇಶದ ಇನ್ನಿತರ ಭಾಗದಿಂದ ರೈಲ್ವೆ ಸಂಪರ್ಕ ಕಲ್ಪಿಸುವ ಸನ್ನಿವೇಶ ಸನ್ನಿಹಿತವಾಗಿದೆ. ಹೀಗಾಗಿಯೇ ಇದು ದೇಶವನ್ನು ಜೋಡಿಸುವ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ರೈಲ್ವೆ ಸೇತುವೆ ಎರಡು ಭಾಗಗಳು ಮಧ್ಯಭಾಗದಲ್ಲಿ ಸೇರುವ ಗೋಲ್ಡನ್ ಜಾಯಿಂಟ್ ಕಾಮಗಾರಿಯನ್ನು ಶನಿವಾರ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದ್ದು, ಇದರೊಂದಿಗೆ ಯೋಜನೆಯ ಶೇ. 98ರಷ್ಟು ಕಾಮಗಾರಿ ಪೂರ್ಣಗೊಂಡಂತೆ ಆಗಿದೆ. ಉಗ್ರರ ಸ್ಫೋಟದ ತೀವ್ರತೆಯನ್ನೂ ತಡೆದುಕೊಳ್ಳುವ ಶಕ್ತಿ ಹೊಂದಿರುವ ಈ ಕಬ್ಬಿಣದ ಸೇತುವೆ ಫ್ರಾನ್ಸ್‌ನ ಐಫೆಲ್ ಟವರ್‌ಗಿಂತ 35 ಮೀಟರ್ ಹೆಚ್ಚು ಎತ್ತರವಿದೆ. ಈವರೆಗೆ ಜಗತ್ತಿನ ಅತಿ ಎತ್ತರದ ರೈಲ್ವೆ ಸೇತುವೆ ಎಂಬ ಹೆಗ್ಗಳಿಕೆ ಗಳಿಸಿದ್ದ ಚೀನಾದ ಬೇಪಾನ್‌ಜಿಯಾಂಗ್ ನದಿಯ ಮೇಲಿನ ಉಕ್ಕಿನ ಸೇತುವೆಯನ್ನು (275 ಮೀಟರ್ ಎತ್ತರ) ಇದು ಹಿಂದಿಕ್ಕಿ ನಂ.1 ಎತ್ತರದ ಸೇತುವೆ ಎಂಬ ಹಿರಿಮೆಗೆ ಪಾತ್ರವಾಗಿದೆ.
ಜಗತ್ತಿನ ಅತ್ಯಂತ ಎತ್ತರದ ರೈಲ್ವೇ ಸೇತುವೆ: ಕೆಲಸದ ಸಂಸ್ಕೃತಿ ಬದಲಾಗಿದೆ ಎಂದ ಮೋದಿ
ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತ್ಯದ್ಭುತ ಎಂಜಿನಿಯರಿಂಗ್ ಕೌಶಲದ ಪ್ರದರ್ಶನವೆಂದು ಹೇಳಲಾಗುವ ಈ ಸೇತುವೆಯು ನದಿಯ ನೀರಿನ ಮಟ್ಟದಿಂದ 359 ಮೀಟರ್ ಎತ್ತರವಿದೆ. 1.3 ಕಿ.ಮೀ. ಉದ್ದದ ಈ ಸೇತುವೆಯನ್ನು 2800 ಕೋಟಿ ರೂ. ವೆಚ್ಚದಲ್ಲಿ ಉತ್ತರ ರೈಲ್ವೆ ನಿರ್ಮಿಸಿದೆ. ಸೇತುವೆಯು ಎರಡು ಕಡೆಯಲ್ಲಿರುವ ಸಲಾಲ್ ಎ ಮತ್ತು ದುಗ್ಗಾ ರೈಲ್ವೆ ನಿಲ್ದಾಣಗಳ ನಡುವೆ ಸಂಪರ್ಕ ಕಲ್ಪಿಸಲಿದೆ. ಸೇತುವೆಯ ಮೇಲೆ ರೈಲ್ವೆ ಸಂಚಾರ ಇನ್ನಷ್ಟೇ ಆರಂಭವಾಗಬೇಕಿದೆ.
ಉಧಮ್‌ಪುರ, ಶ್ರೀನಗರ, ಬಾರಾಮುಲ್ಲಾ ರೇಲ್ ಲಿಂಕ್ ಯೋಜನೆಯ ಅಂಗವಾಗಿ ಈ ಸೇತುವೆ ನಿರ್ಮಾಣಗೊಂಡಿದೆ. ಹಿಮಾಲಯದಲ್ಲಿ ಭಾರಿ ಪ್ರಮಾಣದ ಕಲ್ಲು ಬಂಡೆಗಳು ಹಾಗೂ ಮಣ್ಣನ್ನು ಅಗೆದು ರೇಲ್ ಲಿಂಕ್ ಯೋಜನೆ ಕೈಗೊಳ್ಳಲಾಗಿದೆ. ಆಫ್ಕಾನ್ಸ್ ಎಂಬ ನಿರ್ಮಾಣ ಕಂಪನಿ ಸೇತುವೆಯ ನಿರ್ಮಾಣದ ಗುತ್ತಿಗೆ ಪಡೆದಿತ್ತು. ತೀವ್ರತರ ಭೂಕಂಪನ ಹಾಗೂ ಹವಾಮಾನ ವೈಪರೀತ್ಯಗಳನ್ನೂ ತಡೆದುಕೊಳ್ಳುವ ಸಾಮರ್ಥ್ಯ ಈ ಸೇತುವೆಗಿದೆ ಎಂದು ನಿರ್ಮಾಣ ಕಂಪನಿಯ ಎಂಜಿನಿಯರ್‌ಗಳು ಹೇಳಿಕೊಂಡಿದ್ದಾರೆ.
ವಿಶ್ವದ ಅತೀ ಎತ್ತರದ ರೈಲು ಸೇತುವೆ ಕಮಾನು ಕಾಮಗಾರಿ ಪೂರ್ಣ; ಹೆಚ್ಚಾಯ್ತು ಕಾಶ್ಮೀರದ ಸೌಂದರ್ಯ!
ಗೋಲ್ಡನ್ ಜಾಯಿಂಟ್ ಕಾಮಗಾರಿ ಪೂರ್ಣಗೊಂಡಿದ್ದು, ಈಗ ಸೇತುವೆಯ ಮೇಲೆ ಟ್ರ್ಯಾಕ್‌ಗಳನ್ನು ಹಾಕಲು ಎಂಜಿನಿಯರ್‌ಗಳಿಗೆ ದಾರಿ ಮಾಡಿಕೊಡಲಿದೆ. ಅದರ ಮೇಲಿನ ಟ್ರ್ಯಾಕ್‌ಗಳೊಂದಿಗೆ, ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಕಾಶ್ಮೀರವನ್ನು ರೈಲು ಜಾಲದ ಮೂಲಕ ಭಾರತದ ಉಳಿದ ಭಾಗಗಳೊಂದಿಗೆ ಸಂಪರ್ಕಿಸಲಾಗುತ್ತದೆ. ಈ ಸಂಬಂಧ ಹರ್ಷ ವ್ಯಕ್ತಪಡಿಸಿದ ಯುಎಸ್‌ಬಿಆರ್‌ಎಲ್ ಕೊಂಕಣ ರೈಲ್ವೇಸ್‌ನ ಮುಖ್ಯ ಆಡಳಿತಾಧಿಕಾರಿ ಸುರೇಂದರ್ ಮಾಹಿ, "ಇದು ನಮಗೆಲ್ಲರಿಗೂ ಬಹಳ ದೊಡ್ಡ ಯೋಜನೆಯಾಗಿದೆ. ಇಲ್ಲಿಗೆ ತಲುಪಲು ನಾವು ಸೇತುವೆಗಳು ಮತ್ತು ಸುರಂಗಗಳನ್ನು ಹೊಂದಿರುವ 26 ಕಿಮೀ ಅಪ್ರೋಚ್ ರಸ್ತೆಗಳನ್ನು ನಿರ್ಮಿಸಬೇಕಾಗಿತ್ತು. ಎಂಜಿನಿಯರ್‌ಗಳು ಹಲವಾರು ಸವಾಲುಗಳನ್ನು ಎದುರಿಸಿದರು. ಆದರೆ ಅಂತಿಮವಾಗಿ ಭಾರತದ ಜನರಿಗೆ ಎಂಜಿನಿಯರಿಂಗ್ ಅದ್ಭುತವನ್ನು ಉಡುಗೊರೆಯಾಗಿ ನೀಡಿದರು ಎಂದು ಹೇಳಿದರು.
ಜಗತ್ತಿನ ಅತಿ ಎತ್ತರದ ರೈಲ್ವೆ ಸೇತುವೆಯ ವಿಶೇಷತೆ
- ಭಾರತದ ಎಂಜಿನಿಯರಿಂಗ್ ಅದ್ಭುತ
ಸೇತುವೆಯ ಉದ್ದ - 1.3 ಕಿ.ಮೀ.
ಸೇತುವೆಯ ಎತ್ತರ - 359 ಮೀ.
ಸೇತುವೆ ನಿರ್ಮಾಣ ವೆಚ್ಚ - 2800 ಕೋಟಿ ರೂ.
ವೇಗದಲ್ಲಿ ರೈಲ್ವೆ ಸಂಚಾರ ಸಾಮರ್ಥ್ಯ - 266 ಕಿ.ಮೀ.
ಕಂಬಗಳ ಮೇಲೆ ನಿರ್ಮಾಣವಾದ ಸೇತುವೆ - 17
ಉಕ್ಕು ಬಳಕೆ - 28660 ಟನ್
ಸೇತುವೆಯ ಕಮಾನಿನ ತೂಕ - 10619 ಟನ್
ಮೈನಸ್ 40 ಡಿಗ್ರಿ ಚಳಿಯನ್ನೂ ತಡೆದುಕೊಳ್ಳುವ ಸೇತುವೆ
ಈ ಸೇತುವೆಯ ಕನಿಷ್ಠ ಬಾಳಿಕೆ - 120 ವರ್ಷ