ಉತ್ತರಪ್ರದೇಶ, ಮಧ್ಯಪ್ರದೇಶ ಬಳಿಕ ದೆಹಲಿಗೂ ತಲುಪಿದ ಬುಲ್ಡೋಜರ್!

Published : Apr 20, 2022, 04:04 PM IST
ಉತ್ತರಪ್ರದೇಶ, ಮಧ್ಯಪ್ರದೇಶ ಬಳಿಕ ದೆಹಲಿಗೂ ತಲುಪಿದ ಬುಲ್ಡೋಜರ್!

ಸಾರಾಂಶ

ಈ ದಿನಗಳಲ್ಲಿ ಬುಲ್ಡೋಜರ್ ದೇಶದಲ್ಲಿ ಸಾಕಷ್ಟು ಸುದ್ದಿಮಾಡಿದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಬಿಕ್ರು ಘಟನೆಯ ಆರೋಪಿ ವಿಕಾಸ್ ದುಬೆ ಅವರ ಕೋಠಿಯಿಂದ ಹೊರಟ ಬುಲ್ಡೋಜರ್ ಇದೀಗ ದೆಹಲಿಯ ಜಹಾಂಗೀರ್ ಪುರಿ ವರೆಗೆ ತಲುಪಿದೆ. ಇತ್ತೀಚೆಗೆ ಗಲಭೆಯ ವಿಚಾರದಲ್ಲಿ ಸುದ್ದಿಯಾಗಿದ್ದ ಜಹಾಂಗೀರ್ ಪುರಿ ವಲಯದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ ಮನೆಗಳನ್ನು ಉತ್ತರ ದೆಹಲಿ ಮಹಾನಗರ ಪಾಲಿಕೆ ಬುಲ್ಡೋಜರ್ ಬಳಸಿ ಧ್ವಂಸ ಮಾಡಿದೆ.  

ನವದೆಹಲಿ (ಏ.20): ಇತ್ತೀಚೆಗೆ ಗಲಭೆಯ ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದ ದೆಹಲಿಯ ಜಹಾಂಗೀರ್‌ಪುರಿ (Jahangirpuri) ಪ್ರದೇಶದಲ್ಲಿ ಬುಧವಾರ ಉತ್ತರ ದೆಹಲಿ ಮಹಾನಗರ ಪಾಲಿಕೆಯು ಅಕ್ರಮವಾಗಿ ನಿರ್ಮಾಣ ಮಾಡಿದ್ದ ಮನೆಗಳನ್ನು ಬುಲ್ಡೋಜರ್ ಗಳನ್ನು (bulldozer ) ಬಳಸಿ ಧ್ವಂಸ ಮಾಡಿತು. ಎರಡು ಗಂಟೆಗಳ ಕಾಲ ಕಾರ್ಯಾಚರಣೆಯಲ್ಲಿ, ಅನೇಕ ಮನೆಗಳು ಮತ್ತು ಅಂಗಡಿಗಳ ಭಾಗಗಳನ್ನು ಕೆಡವಲಾಯಿತು. 

ಇದುವರೆಗೆ ಉತ್ತರ ಪ್ರದೇಶದಲ್ಲಿ (Uttar Pradesh) ಮಾತ್ರ ಬುಲ್ಡೋಜರ್ ಬಗ್ಗೆ ಚರ್ಚೆ ನಡೆಯುತ್ತಿತ್ತು ಆದರೆ ಈಗ ಬೇರೆ ರಾಜ್ಯಗಳಲ್ಲೂ ಇದು ಚರ್ಚೆಗೆ ಗ್ರಾಸವಾಗಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್  (Uttar Pradesh CM Yogi Adityanath)ಅವರ 'ಬುಲ್ಡೋಜರ್ ಮಾದರಿ' ಈಗ ಇತರ ರಾಜ್ಯಗಳೂ ಅಳವಡಿಸಿಕೊಳ್ಳುತ್ತಿವೆ.  2022 ರ ವಿಧಾನಸಭಾ ಚುನಾವಣೆಯಲ್ಲಿ, ಬುಲ್ಡೋಜರ್‌ಗಳು ಉತ್ತರ ಪ್ರದೇಶದಲ್ಲಿ ಚರ್ಚಿತ ವಿಷಯವಾಗಿದ್ದವು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ 'ಬುಲ್ಡೋಜರ್ ಬಾಬಾ' ಎಂದೂ ಕರೆಯಲಾಗತ್ತು. ಈ ಹೆಸರನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರೇ ನೀಡಿದ್ದರು.

ಯೋಗಿ ಸರ್ಕಾರದಲ್ಲಿ ಬುಲ್ಡೋಜರ್‌ಗಳ ಬಳಕೆ ಪ್ರಮಾಣದಿಂದ ಸಿಕ್ಕಷ್ಟು ಕೀರ್ತಿ ಬೇರೆ ಯಾವ ರಾಜ್ಯದಲ್ಲಿಯೂ ಕಂಡು ಬಂದಿರಲಿಲ್ಲ. ಚುನಾವಣೆಯ ಆರಂಭದ ಪ್ರಚಾರಗಳಲ್ಲಿ ಬುಲ್ಡೋಜರ್ ಗಳನ್ನು ಬಿಜೆಪಿ ಬಳಸಿಕೊಂಡಿರಲಿಲ್ಲ. ಯಾವಾಗ ಅಖಿಲೇಶ್ ಯಾದವ್ ಇದೇ ವಿಚಾರವನ್ನು ಇಟ್ಟುಕೊಂಡು ಟೀಕೆ ಮಾಡಲು ಆರಂಭಿಸಿದರೋ, ಅಂದಿನಿಂದ ಬುಲ್ಡೋಜರ್ ಅನ್ನು ಪ್ರಚಾರದ ತಂತ್ರವನ್ನಾಗಿ ಮಾಡಿಕೊಂಡು ಉತ್ತರ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲುವು ಕಂಡಿತ್ತು.

ಆದರೆ, ಈಗ ಈ ಬುಲ್ಡೋಜರ್ ಉತ್ತರ ಪ್ರದೇಶದ ಹೊರಗೆ ಬೇರೆ ರಾಜ್ಯಗಳಲ್ಲೂ ಓಡಲಾರಂಭಿಸಿದೆ. ಗಲಭೆಕೋರರು ಹಾಗೂ ಕಲ್ಲು ತೂರಾಟಗಾರರ ವಿರುದ್ಧ ಇದನ್ನು ಬಳಸಲಾಗುತ್ತಿದೆ. ಉತ್ತರ ಪ್ರದೇಶದ ಮೂಲಕ ಬುಲ್ಡೋಜರ್ ಮಧ್ಯಪ್ರದೇಶದ ಖರ್ಗೋನ್, ನಂತರ ಗುಜರಾತ್‌ನ ಖಂಭತ್, ಬಳಿಕ ಉತ್ತರಾಖಂಡ್ ತಲುಪಿ ಈಗ ದೆಹಲಿಯಲ್ಲಿ ಗಮನಸೆಳೆದಿದೆ.

2017ರಲ್ಲಿ ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ರಚನೆಯಾದಾಗ ಇಲ್ಲಿಂದ ಬುಲ್ಡೋಜರ್‌ ಪಯಣ ಆರಂಭವಾಯಿತು. ಯೋಗಿ ಸರ್ಕಾರ ಬಂದ ನಂತರ ಕ್ರಿಮಿನಲ್‌ಗಳು ಮತ್ತು ಮಾಫಿಯಾಗಳ ಮನೆಗಳನ್ಬು ಬುಲ್ಡೋಜರ್ ಗಳನ್ನು ಬಳಸಿ ಕೆಡವಲಾಯಿತು. ಜುಲೈ 2020 ರಲ್ಲಿ ಕಾನ್ಪುರದ ಬಿಕ್ರು ಎಂಬಲ್ಲಿ ವಿಕಾಸ್ ದುಬೆಯನ್ನು ಹಿಡಿಯಲು ಹೋದ ಪೊಲೀಸರ ಮೇಲೆ ದೊಡ್ಡ ದಾಳಿ ನಡೆದಿತ್ತು. ಈ ದಾಳಿಯಲ್ಲಿ 8 ಪೊಲೀಸರು ಹುತಾತ್ಮರಾಗಿದ್ದರು. ಈ ಘಟನೆಯ ನಂತರ ವಿಕಾಸ್ ದುಬೆ ಪರಾರಿಯಾಗಿದ್ದ. ಇದಾದ ನಂತರ, ಆಡಳಿತವು ವಿಕಾಸ್ ದುಬೆ ಅವರ, ಬಿಕ್ರುವಿನ ಕೋಠಿಯಲ್ಲಿದ್ದ ಮನೆಯನ್ನು ಬುಲ್ಡೋಜರ್ ಬಳಸಿ ಧ್ವಂಸ  ಮಾಡಿತ್ತು. ಇಲ್ಲಿಂದ ಅಪರಾಧಿಗಳ ಅಕ್ರಮ ಆಸ್ತಿಯ ಮೇಲೆ ಬುಲ್ಡೋಜರ್ ಓಡಿಸುವ ಕಥೆ ಪ್ರಾರಂಭವಾಯಿತು ಎಂದು ಹೇಳಲಾಗಿದೆ.

ವರದಿಗಳ ಪ್ರಕಾರ, ಉತ್ತರ ಪ್ರದೇಶದ ಯೋಗಿ ಸರ್ಕಾರವು ಎರಡು ಡಜನ್‌ಗೂ ಹೆಚ್ಚು ಮಾಫಿಯಾ ಡಾನ್ ಗಳ ಮನೆಗಳ ಮೇಲೆ ಬುಲ್ಡೋಜರ್ ಬಳಸಿ ಪ್ರಹಾರ ಮಾಡಿದ್ದು ಈವರೆಗೂ 1500 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಯನ್ನು ವಶಪಡಿಸಿಕೊಂಡಿದೆ. 2017 ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇಲ್ಲಿಯವರೆಗೆ 67 ಸಾವಿರ ಎಕರೆಗೂ ಹೆಚ್ಚು ಭೂಮಿಯನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ ಎಂದು ಫೆಬ್ರವರಿ 2021 ರಲ್ಲಿ ಸರ್ಕಾರವು ವಿಧಾನ ಪರಿಷತ್ತಿಗೆ ತಿಳಿಸಿತ್ತು.

ಯೋಗಿಯ 'ಬುಲ್ಡೋಜರ್ ಮಾಡೆಲ್' ಅವರನ್ನು 'ಬುಲ್ಡೋಜರ್ ಬಾಬಾ' ಎನ್ನುವ ಹೆಸರನ್ನು ನೀಡಿತ್ತು. ಜನವರಿಯಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಖಿಲೇಶ್ ಯಾದವ್ ಅವರಿಗೆ ಈ ಹೆಸರನ್ನು ನೀಡಿದ್ದರು. ಕೆಲವು ದಿನಗಳ ಹಿಂದೆ ಪ್ರತಾಪಗಢದ ರೈಲ್ವೇ ನಿಲ್ದಾಣದಲ್ಲಿ ಶೌಚಾಲಯದ ನಿರ್ವಾಹಕನೊಬ್ಬ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ. ಆರೋಪಿಯ ಸುಳಿವು ಸಿಗದಿದ್ದಾಗ ಪೊಲೀಸರು ಬುಲ್ಡೋಜರ್‌ನೊಂದಿಗೆ ಆರೋಪಿಯ ಮನೆಗೆ ತಲುಪಿದ್ದರು. ಕೆಲವೇ ಗಂಟೆಗಳ ಬಳಿಕ ಆರೋಪಿಯೇ ಠಾಣೆಗೆ ಬಂದು ಶರಣಾಗಿದ್ದ.

ಖಾರ್ಗೋನ್‌ನಲ್ಲಿ ಮನೆ ಧ್ವಂಸಗೊಂಡವರಿಗೆ ಮನೆ: ಬುಲ್ಡೋಜರ್‌ ಬಳಕೆಗೆ ಸಿಎಂ ಸಮರ್ಥನೆ

ಇತ್ತೀಚೆಗೆ ಮಧ್ಯಪ್ರದೇಶದ ಶೆಯೋಪುರ್ ನಲ್ಲಿ ಬಾಲಕಿಯ ಮೇಲೆ ಗ್ಯಾಂಗ್ ರೇಪ್ ಮಾಡಿದ್ದ ಆರೋಪಿಯ ಮನೆ ಹಾಗೂ ಗದ್ದೆಯನ್ನು ಬುಲ್ಡೋಜರ್ ಬಳಸಿ ಧ್ವಂಸ ಮಾಡಲಾಗಿತ್ತು. ಇಂಥವೇ ಎರಡು ಪ್ರಕರಣದಲ್ಲಿ ಬುಲ್ಡೋಜರ್ ಗಳನ್ನು ಬಳಸಿಕೊಳ್ಳಲಾಗಿತ್ತು. ಖರ್ಗೋನ್ ನಲ್ಲಿ ರಾಮನವಮಿ ಮೆರವಣಿಗೆ ಮೇಲೆ ಕಲ್ಲುತೂರಾಟ ನಡೆಸಿ ಗಲಭೆಗೆ ಕಾರಣವಾಗಿದ್ದ ಆರೋಪಿಗಳ ಮನೆಗಳನ್ನೂ ಮಧ್ಯಪ್ರದೇಶ ಸರ್ಕಾರ ಬುಲ್ಡೋಜರ್ ಬಳಸಿ ಕೆಡವಿ ಹಾಕಿತ್ತು.  ಆ ಬಳಿಕ, ಗುಜರಾತ್, ಉತ್ತರಾಖಂಡ್ ಹಾಗೂ ಬಿಹಾರದಲ್ಲೂ ಇದನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗಿತ್ತು.

ರಾಮನವಮಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ, ಆರೋಪಿಗಳಿಗೆ ಬುಲ್ಡೋಜರ್ ಡ್ರಿಲ್!

ಇದೀಗ ದೆಹಲಿಯ ಜಹಾಂಗೀರಪುರಿಯಲ್ಲಿಯೂ ಬುಲ್ಡೋಜರ್ ದಾಳಿ ನಡೆದಿದೆ. ಹನುಮ ಜಯಂತಿಯ ದಿನ ಜಹಾಂಗೀರಪುರಿಯಲ್ಲಿ ಹಿಂಸಾಚಾರ ನಡೆದಿದೆ. ಈ ಹಿಂಸಾಚಾರದ ನಂತರ, ಈಗ ಇಲ್ಲಿಯೂ ಅಕ್ರಮ ನಿವೇಶನಗಳ ಮೇಲೆ ಬುಲ್ಡೋಜರ್‌ಗಳನ್ನು ನಡೆಸಲಾಗುತ್ತಿದೆ. ಬುಧವಾರ ಬೆಳಗ್ಗೆಯಿಂದಲೇ 9 ಬುಲ್ಡೋಜರ್ ಗಳನ್ನು ಬಳಸಿ ಕಾರ್ಯಾಚರಣೆ ನಡೆಸಲಾಗಿದೆ. ಪರಿಸ್ಥಿತಿ ನಿಭಾಯಿಸಲು 1500ಕ್ಕೂ ಹೆಚ್ಚು ಯೋಧರನ್ನು ನಿಯೋಜಿಸಲಾಗಿದೆ. ಆದರೆ, ಸುಪ್ರೀಂ ಕೋರ್ಟ್ ಬುಲ್ಡೋಜರ್ ಬಳಕೆಯನ್ನು ನಿಷೇಧಿಸಿದೆ. ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಸುಪ್ರೀಂ ಕೋರ್ಟ್‌ನ ಆದೇಶಕ್ಕಾಗಿ ಕಾಯುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ