ದೆಹಲಿಯಲ್ಲಿ ಮತ್ತೆ ಮಾಸ್ಕ್ ಕಡ್ಡಾಯ, ನಿಯಮ ಉಲ್ಲಂಘಿಸಿದರೆ ₹500 ದಂಡ

By Suvarna News  |  First Published Apr 20, 2022, 3:18 PM IST

*ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾಸ್ಕ್ ಕಡ್ಡಾಯ,
*ಕೋವಿಡ್‌ ಪ್ರಕರಣ ದಿಢೀರ್‌ ಹೆಚ್ಚಳ: ಆತಂಕ
*ಹೊಸ ತಳಿ ಕಾರಣವೇ ಎಂಬುದರ ಪತ್ತೆಗೆ ಟೆಸ್ಟ್‌


ನವದೆಹಲಿ (ಏ. 20): ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (DDMA) ಬುಧವಾರ ರಾಷ್ಟ್ರ ರಾಜಧಾನಿ ದೆಹಲಿಯ ಸಾರ್ವಜನಿಕ ಸ್ಥಳಗಳಲ್ಲಿ ಮತ್ತೆ ಮಾಸ್ಕ್‌ಗಳನ್ನು ಕಡ್ಡಾಯಗೊಳಿಸಲು ನಿರ್ಧರಿಸಿದೆ. ಕೋವಿಡ್ -19 ಪ್ರಕರಣಗಳಲ್ಲಿ ಗಣನೀಯ ಏರಿಕೆ ಬೆನ್ನಲ್ಲೇ ಮಾಸ್ಕ್‌ ನಿಯಮ  ಉಲ್ಲಂಘಿಸುವವರಿಗೆ ₹500 ದಂಡ ವಿಧಿಸುವುಸದಾಗಿ ಪ್ರಾಧಿಕಾರ ತಿಳಿಸಿದೆ.  ಎಲ್‌ಜಿ ಅನಿಲ್ ಬೈಜಾಲ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಕಂದಾಯ ಸಚಿವ ಕೈಲಾಶ್ ಗಹ್ಲೋಟ್ ಮತ್ತು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದ ಡಿಡಿಎಂಎ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಏಪ್ರಿಲ್ ಆರಂಭದಲ್ಲಿ  ಕೋವಿಡ್‌ ಪ್ರಕರಣಗಳು ಇಳಿಮುಖವಾಗುತ್ತಿದ್ದ ಹಿನ್ನೆಲೆಯಲ್ಲಿ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವೂ  ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಕಡ್ಡಾಯ ಎಂಬ ನಿಯಮವನ್ನು ರದ್ದುಗೊಳಿಸಿತ್ತು. ಇನ್ನು ಇದೇ ರೀತಿ ಮಹಾರಾಷ್ಟ್ರದಲ್ಲಿ ಏ.2 ರಿಂದ ಎಲ್ಲ ಕೋವಿಡ್‌ ಸಂಬಂಧಿತ ನಿರ್ಬಂಧನೆಯನ್ನು ತೆಗೆದು ಹಾಕಲಾಗಿದೆ.

Tap to resize

Latest Videos

undefined

ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (ಎಸ್‌ಒಪಿ) ಗಳಿಗೆ ಅನುಗುಣವಾಗಿ ಶಾಲೆಗಳು, ಮಾರುಕಟ್ಟೆಗಳು ಮತ್ತು ಇತರ ಆರ್ಥಿಕ ಚಟುವಟಿಕೆಗಳನ್ನು ಮುಂದುವರಿಸಲು ಡಿಡಿಎಂಎ ನಿರ್ಧರಿಸಿದೆ ಎಂದು  ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಸೋಂಕು ಹರಡುವುದನ್ನು ತಡೆಯಲು ಮೆಟ್ರೋ ನಿಲ್ದಾಣಗಳು, ಮಾರುಕಟ್ಟೆಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ಪರೀಕ್ಷೆಗಳನ್ನು ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. 

ಇದನ್ನೂ ಓದಿ: 'ಮಾಸ್ಕ್ ಧಾರಣೆ ನಿಯಮ ರದ್ದು ಆತುರದ ನಿರ್ಧಾರ: ದೇಶ ಇನ್ನೂ ಕೋವಿಡ್‌ನಿಂದ ಪೂರ್ಣ ಮುಕ್ತವಾಗಿಲ್ಲ'

ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಮತ್ತು ಕೋವಿಡ್ -19 ಪ್ರೋಟೋಕಾಲ್‌ಗಳನ್ನು ಜಾರಿಗೊಳಿಸುವಲ್ಲಿ ಜಾಗೃತಿ ಮೂಡಿಸಲು  ಮಾರುಕಟ್ಟೆಗಳು ಮತ್ತು ಇತರ ಜನನಿಬಿಡ ಸ್ಥಳಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು  ಕೈಗೊಳ್ಳಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ. ಮದುವೆ ಕಾರ್ಯಕ್ರಮಗಳು ಮತ್ತು ಪ್ರದರ್ಶನಗಳಂತಹ ಸಾಮಾಜಿಕ ಕೂಟಗಳ ಮೇಲೆ ನಿಗಾ ಇಡಲು ಸಂಬಂಧಿಸಿದ ಇಲಾಖೆಗಳಿಗೆ ತಿಳಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. 

“ಇದಲ್ಲದೆ, ಕೋವಿಡ್ -19 ರ ಬಿ.1.10 ಮತ್ತು ಬಿ.1.12 ರೂಪಾಂತರಗಳು ಹೆಚ್ಚು ಹರಡುತ್ತವೆ ಎಂದು ಹೇಳಲಾಗಿರುವುದರಿಂದ ಪರಿಸ್ಥಿತಿಯ ಮೇಲೆ ನಿಗಾ ಇಡಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆಸ್ಪತ್ರೆಯ ಪ್ರವೃತ್ತಿಯನ್ನು ಮುಂದಿನ ಹದಿನೈದು ದಿನಗಳವರೆಗೆ ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ ಮತ್ತು ಎಲ್ಲಾ ಆರ್‌ಟಿ-ಪಿಸಿಆರ್ ಪಾಸಿಟಿವ್ ಮಾದರಿಗಳ ಜಿನೋಮ್ ಸಿಕ್ವೆಂಸಿಂಗ್ ನಡೆಸಲಾಗುವುದು,” ಎಂದು ಅಧಿಕಾರಿ ಹೇಳಿದ್ದಾರೆ. 

ದಿಲ್ಲಿ ಸೋಂಕು ಏರಿಕೆ: ದೇಶಕ್ಕೆ ಮುನ್ನೆಚ್ಚರಿಕೆ: ದಿಲ್ಲಿ ಹಾಗೂ ಸುತ್ತಲಿನ ರಾಜಧಾನಿ ವಲಯದಲ್ಲಿ ಏಕಾಏಕಿ ಕೋವಿಡ್‌ ಸಂಖ್ಯೆ ಏರಿಕೆ ಆಗತೊಡಗಿದೆ. ಇದು ದೇಶಕ್ಕೆ ಮುನ್ನೆಚ್ಚರಿಕೆಯಂತಿದೆ. ಸೋಂಕು ಏರಿಕೆಗೆ ಹೆಚ್ಚು ಸೋಂಕುಕಾರಕವಾಗಿರುವ ಇತ್ತೀಚಿನ ಕೋವಿಡ್‌ ತಳಿಯಾದ ‘ಎಕ್ಸ್‌ಇ’ ಕಾರಣವೆ ಅಥವಾ ಇನ್ನಾವುದೋ ಹೊಸ ಕೋವಿಡ್‌ ತಳಿ ಕಾರಣವೇ ಎಂಬುದರ ಪತ್ತೆಗೆ ಸರ್ಕಾರ ಮುಂದಾಗಿದೆ.

ಇದನ್ನೂ ಓದಿ: ಮಾಸ್ಕ್ ಕಡ್ಡಾಯ ನಿಮಯ ಹಿಂತೆಗೆಯಬೇಕೆ? ಜನಸಾಮಾನ್ಯರ ಅಭಿಪ್ರಾಯವೇನು?

ಹೀಗಾಗಿ ಕೋವಿಡ್‌ ಸೋಂಕಿತರ ಸ್ಯಾಂಪಲ್‌ಗಳನ್ನು ಜೀನೋಮ್‌ ಸೀಕ್ವೆನ್ಸಿಂಗ್‌ ಪರೀಕ್ಷೆಗೆ ಕಳಿಸಲಾಗಿದೆ. ಇನ್ನೊಂದು ವಾರದಲ್ಲಿ ಇದರ ವರದಿ ಬರುವ ನಿರೀಕ್ಷೆಯಿದೆ. ದಿಲ್ಲಿಯಲ್ಲಿ ಕಳೆದ 1 ವಾರದಿಂದ ಕೋವಿಡ್‌ ಏರುತ್ತಿದೆ. ಮಂಗಳವಾರ ಇತ್ತೀಚಿನ ತಿಂಗಳಲ್ಲೇ ಗರಿಷ್ಠ ಎನ್ನಬಹುದಾದ 642 ಪ್ರಕರಣ ವರದಿಯಾಗಿದ್ದು, ಪಾಸಿಟಿವಿಟಿ ದರ ಶೇ.4.4ರಷ್ಟುದಾಖಲಾಗಿದೆ. 

ಈ ಹಿಂದೆ ಗುಜರಾತ್‌ನಲ್ಲಿ ‘ಎಕ್ಸ್‌ಇ’ ತಳಿ ಪತ್ತೆಯಾಗಿದ್ದರೂ ಅಲ್ಲಿ ಸೋಂಕು ವ್ಯಾಪಿಸಿರಲಿಲ್ಲ. ಆದರೆ ದಿಲ್ಲಿ ಹಾಗೂ ರಾಜಧಾನಿ ವಲಯದಲ್ಲಿ ಮಾತ್ರ ಸೋಂಕು ದಿಢೀರ್‌ ವ್ಯಾಪಿಸುತ್ತಿದೆ. ಹೀಗಾಗಿ ಇದು ಹೊಸ ತಳಿಯ ಕೊರೋನಾ ವೈರಾಣುವೇ ಎಂಬ ಅನುಮಾನಕ್ಕೆ ಕಾರಣವಾಗಿದೆ. ಸೀಕ್ವೆನ್ಸಿಂಗ್‌ ವರದಿ ಬಂದ ಬಳಿಕ ಈ ಅನುಮಾನಕ್ಕೆ ಪರಿಹಾರ ಸಿಗಲಿದೆ.

click me!