ಮಕ್ಕಳು ಹೋಗೋಕು ಹೆದರುತ್ತಿದ್ದ 'ಭೂತ ಬಂಗಲೆ'ಯಲ್ಲಿ ವಾಸವಿದ್ದ ಖ್ಯಾತ ಜಾದೂಗಾರ ಓಪಿ ಶರ್ಮ ನಿಧನ!

By Santosh NaikFirst Published Oct 16, 2022, 4:28 PM IST
Highlights

ವಿಶ್ವದ ಪ್ರಖ್ಯಾತ ಜಾದೂಗಾರರ ಸಾಲಿನಲ್ಲಿ ನಿಲ್ಲಬಹುದಾದ, ಕಣ್ಕಟ್ಟು ವಿದ್ಯೆಯಲ್ಲಿ ಪಾರಂಗತರಾಗಿದ್ದ ದೇಶದ ಖ್ಯಾತ ಜಾದೂಗಾರ ಓಪಿ ಶರ್ಮ ಶನಿವಾರ ನಿಧನರಾಗಿದ್ದಾರೆ. ಬಹಳ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿರುವ ಅವರು ಕಾನ್ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
 

ಕಾನ್ಪುರ (ಅ.16): ದೇಶದ ಪ್ರಖ್ಯಾತ ಜಾದೂಗಾರ, ಮಾಯಾನಗರಿಯ ಅನಭಿಷಿಕ್ತ ದೊರೆ ಎನಿಸಿಕೊಂಡಿದ್ದ ಓಪಿ ಶರ್ಮ ಶನಿವಾರ ರಾತ್ರಿ ನಿಧನರಾಗಿದ್ದಾರೆ. ಅಂದಾಜು 36, 500 ಶೋಗಳನ್ನು ಮಾಡಿದ್ದ ಓಪಿ ಶರ್ಮ ಅನಾರೋಗ್ಯದ ಕಾರಣದಿಂದಾಗಿ ಕಳೆದ 10 ದಿನಗಳಿಂದ ವೆಂಟಿಲೇಟರ್‌ನಲ್ಲಿದ್ದರು. ಕಾನ್ಪುರ ಮೂಲದವರಾದ ಓಪಿ ಶರ್ಮ, ಮೀರತ್‌ನೊಂದಿಗೆ ದೊಡ್ಡ ಮಟ್ಟದ ಸಂಬಂಧಹೊಂಡಿದ್ದರು.  ತಮ್ಮ ಜೀವನದುದ್ದಕ್ಕೂ ತಮ್ಮ ಮಾಂತ್ರಿಕ ಕಲೆಯಿಂದ ಇಲ್ಲಿನ ಜನರನ್ನು ರಂಜಿಸುತ್ತಿದ್ದ ಅವರ ಸಾವಿಗೆ, ದೇಶಾದ್ಯಂತ ಜಾದೂ ಅಭಿಮಾನಿಗಳು ಶೋಕ ವ್ಯಕ್ತಪಡಿಸಿದ್ದಾರೆ. ಕಿಡ್ನಿ ವೈಫಲ್ಯದ ಸಮಸ್ಯೆಯಿಂದ ಅವರು ಬಳಲುತ್ತಿದ್ದರು ಎಂದು ಹೇಳಲಾಗಿದೆ. ಅವರು ನಾಲ್ಕು ಜನ ಮಕ್ಕಳಾದ ಪ್ರೇಮ್‌ ಪ್ರಕಾಶ್‌ ಶರ್ಮ, ಸತ್ಯ ಪ್ರಕಾಶ್‌ ಶರ್ಮ, ಪಂಕನ್‌ ಪ್ರಕಾಶ್‌ ಶರ್ಮ, ಮಗಳು ರೇಣು ಹಾಗೂ ಪತ್ನಿ ಮೀನಾಕ್ಷಿ ಶರ್ಮ ಅವರನ್ನು ಅಗಲಿದ್ದಾರೆ. ಒಪಿ ಶರ್ಮ ಮೂಲತಃ ಕಾನ್ಪುರದ ಬಲಿಯಾ ನಗರದವರು. ಕಾನ್ಪುರದ ಬರ್ರಾದಲ್ಲಿ ಇವರ ಎರಡು ಮನೆಗಳು ಹೇಗಿತ್ತವೆಂದರೆ ಅದರ ಎದುರು ರಾತ್ರಿಯ ವೇಳೆ ಜನ ಹಾಗೂ ಚಿಕ್ಕ ಮಕ್ಕಳು ಹೋಗೋಕು ಹೆದರುತ್ತಿದ್ದರು. ಸಂಪೂರ್ಣವಾಗಿ ಭೂತಬಂಗಲೆಯ ರೀತಿಯಲ್ಲಿ ತಮ್ಮ ಮನೆಯನ್ನು ಅವರು ಕಟ್ಟಿದ್ದರು.



ಓಪಿ ಶರ್ಮ (OP Sharma) ಅವರ ನಿಧನದ ಬೆನ್ನಲ್ಲೇ ಬರ್ರಾದಲ್ಲಿರುವ ಅವರ ಭೂತ ಬಂಗಲೆಯ ಮುಂದೆ ಜನ ಸೇರಲು ಆರಂಭಿಸಿದ್ದರು. ದೇಶದ ದೊಡ್ಡ ಜಾದೂಗಾರ ಓಪಿ ಶರ್ಮಾ ಅವರು ಭೂತ ಬಂಗಲೆಯಲ್ಲಿ ವಾಸವಿದ್ದರು. ಅವರ ಬಂಗಲೆ ಪ್ರವೇಶಿಸುವ ಮುನ್ನ ಸಾಮಾನ್ಯ ಜನ ನೂರು ಬಾರಿ ಯೋಚನೆ ಮಾಡುತ್ತಿದ್ದರು. ಮಕ್ಕಳು ರಾತ್ರಿ ಬಂಗಲೆಯ ಮುಂದೆ ಹೋಗಲು ಕೂಡ ಭಯಪಡುತ್ತಿದ್ದರು. ಭೂತ ಬಂಗಲೆಯಲ್ಲಿ ಸುತ್ತಲೂ ವಿಚಿತ್ರವಾದ ಆಕಾರವನ್ನು ಮಾಡಲಾಗಿದೆ. ಮುಖ್ಯ ದ್ವಾರದಲ್ಲಿ ಜೇಡರ ಬಲೆ ವಿನ್ಯಾಸ ಮಾಡಲಾಗಿದ್ದರೆ. ಒಳಹೊಕ್ಕುವ ಮಾರ್ಗವನ್ನು ದೈತ್ಯಾಕಾರದ ಬಾಯಿಯೊಳಗೆ ಹೋದಂತೆ ವಿನ್ಯಾಸ ಮಾಡಲಾಗಿತ್ತು. ರಾತ್ರಿಯ ಕತ್ತಲಲ್ಲಿ ತಲೆಬುರುಡೆ ಆಕಾರದ ಆಕೃತಿಯ ಕಣ್ಣುಗಳಲ್ಲಿ ಕೆಂಪು ದೀಪಗಳು (Bhoot Bungalow) ಉರಿಯುತ್ತಿದ್ದವು. ಇದರಿಂದಾಗಿ ಅವರ ಬಂಗಲೆ ಇನ್ನಷ್ಟು ಭಯಾನಕವಾಗಿ ಕಾಣುತ್ತಿತ್ತು.

Latest Videos

ಲವರ್‌ ಜತೆ ಸಿಕ್ಕಿಬಿದ್ದ ಗಂಡ: ಜನರ ನಡುವೆ ಚಳಿ ಬಿಡಿಸಿದ ಪತ್ನಿ..!

ಓಪಿ ಶರ್ಮಾ ಅವರ ಮಗ ಸತ್ಯಪ್ರಕಾಶ್ ಶರ್ಮಾ ಮಾತನಾಡಿದ್ದು, ತಂದೆಗೆ ಎರಡು ವರ್ಷಗಳ ಹಿಂದೆ ಕೋವಿಡ್‌ ಬಂದಿತ್ತು. ಆದರೆ, ಅವರು ಚೇತರಿಸಿಕೊಂಡಿದ್ದರು. ನಂತರ ಅವರಲ್ಲಿ ಮೂತ್ರಪಿಂಡದ ತೊಂದರೆ (kidney failure) ಕಾಣಿಸಿಕೊಂಡಿತು. ಕಳೆದ ಎರಡು ವರ್ಷಗಳಿಂದ ವಾರಕ್ಕೆ ಎರಡು ಬಾರಿ ಅವರಿಗೆ ಡಯಾಲಿಸಿಸ್‌ (Shahenshah e Jadu) ಮಾಡಲಾಗುತ್ತಿತ್ತು. ಕಳೆದ ಒಂದು ವಾರ ಅವರು ಐಸಿಯುನಲ್ಲಿದ್ದರು. ಶನಿವಾರ ಇದ್ದಕ್ಕಿದ್ದಂತೆ ಅವರು ಅಸ್ವಸ್ಥರಾಗಿದ್ದಾರೆ. ರಾತ್ರಿ 11 ಗಂಟೆಯ ವೇಳೆಗೆ ಅವರು ನಿಧನರಾದರು ಎಂದು ತಿಳಿಸಿದ್ದಾರೆ.

ಪೂರ್ವಾಂಚಲ ಎಕ್ಸ್‌ಪ್ರೆಸ್‌ ವೇಯಲ್ಲಿ 230 ಕಿ.ಮೀ ವೇಗದಲ್ಲಿ ಕಂಟೇನರ್‌ಗೆ ಬಡಿದ BMW, ನಾಲ್ವರು ಛಿದ್ರ!

ತಮ್ಮ ಮಾಂತ್ರಿಕತೆಯ ಮೂಲಕ, ದೇಶ ಹಾಗೂ ದೇಶದ ಜನರು ಸಂತೋಷದಿಂದ ಇರಬೇಕು ಎಂದು ಅವರು ಹೇಳಿದ್ದರು. ಅವರು ಸ್ವತಃ ಹರ್ಷಚಿತ್ತದಿಂದ, ಸ್ನೇಹಪರ ಮತ್ತು ಉತ್ಸಾಹಭರಿತ ವ್ಯಕ್ತಿಯಾಗಿದ್ದರು. ದೇಶದೆಲ್ಲೆಡೆಯಿಂದ ಶ್ರದ್ಧಾಂಜಲಿ ಸಂದೇಶಗಳು ಬರುತ್ತಿವೆ. ಇದರೊಂದಿಗೆ ಮಾಟಮಂತ್ರದ ಮುಸುಕನ್ನು ಹೊರತೆಗೆದ ಅವರು ಮೂಢನಂಬಿಕೆಯಿಂದ ದೂರವಿರುವಂತೆ ಸಲಹೆಯನ್ನೂ ನೀಡುತ್ತಿದ್ದರು ಎಂದಿದ್ದಾರೆ. ಓಪಿ ಶರ್ಮ ಅವರ ಜನಪ್ರಿಯತೆಯನ್ನು ಬಳಸಿಕೊಳ್ಳುವ ಉದ್ದೇಶದಲ್ಲಿ ಸಮಾಜವಾದಿ ಪಕ್ಷವು 2002ರಲ್ಲಿ ಗೋವಿಂದ್ ನಗರದಿಂದ ಅವರನ್ನು ವಿಧಾನಸಭೆ ಚುನಾವಣೆಗೆ ಟಿಕೆಟ್‌ ನೀಡಿತ್ತು. 2019ರಲ್ಲಿ ಅವರು ಬಿಜೆಪಿ ಸೇರಿದ್ದರು. 1952 ಏಪ್ರಿಲ್‌ 1 ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ಜನಿಸಿದ್ದ ಓಪಿ ಶರ್ಮ, ಮುಂಬೈನಲ್ಲಿ ತಮ್ಮ ಮೊದಲ ಮ್ಯಾಜಿಕ್‌ ಪ್ರದರ್ಶನ ನೀಡಿದ್ದರು. ಅವರಿಗೆ ಜಾದೂವಿನ ಶೆಷಹನ್‌ಶಾ "ಶಾಹೆನ್‌ಶಾ ಇ ಜಾದೂ" ಎನ್ನುವ ಶ್ರೇಷ್ಠ ಬಿರುದನ್ನೂ ನೀಡಲಾಗಿತ್ತು. ಇಂಡಿಯನ್‌ ಮ್ಯಾಜಿಕ್‌ ಮೀಡಿಯಾ ಸರ್ಕಲ್‌ 2001ರಲ್ಲಿ ರಾಷ್ಟ್ರೀಯ ಮ್ಯಾಜಿಕ್‌ ಅವಾರ್ಡ್‌ ಗೌರವವನ್ನೂ ನೀಡಿತ್ತು.

click me!