ಅವಿವಾಹಿತ ಯುವಕರೇ ಟಾರ್ಗೆಟ್: 6 ಮದ್ವೆಯಾಗಿ 7ನೇ ಮದ್ವೆಗೆ ಸಿದ್ಧಗೊಳ್ತಿದ್ದ ಮಹಿಳೆಯ ಬಂಧನ

By Anusha Kb  |  First Published Dec 25, 2024, 6:51 PM IST

ಮದ್ವೆಯಾಗುವುದಾಗಿ ನಂಬಿಸಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ನಕಲಿ ಮದ್ವೆ  ಜಾಲವನ್ನು ಪೊಲೀಸರು ಬೇಧಿಸಿದ್ದಾರೆ. ಈಗಾಗಲೇ ಆರು ಮದುವೆಯಾಗಿ ಮೋಸ ಮಾಡಿದ್ದ ಮಹಿಳೆ ಏಳನೇ ಮದುವೆಗೆ ಸಿದ್ಧವಾಗುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾಳೆ.


ಮದ್ವೆಯ ಹೊಸ್ತಿಲಲ್ಲಿದ್ದು, ಹುಡ್ಗಿ ಸಿಗದೇ ಕಂಗಾಲಾಗಿರುವ ಪುರುಷರನ್ನೇ ಟಾರ್ಗೆಟ್ ಮಾಡಿ ವಂಚಿಸುವ ಮಹಿಳೆಯರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಹೀಗೆ ಅನೇಕರಿಗೆ ಮದ್ವೆ ಹೆಸರಲ್ಲಿ ಮೋಸ ಮಾಡಿದ ಕಿಲಾಡಿ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.  ಇದೊಂದು ದೊಡ್ಡ ಜಾಲವಾಗಿ ಕಾರ್ಯನಿರ್ವಹಿಸುತ್ತಿದ್ದು, ಇಬ್ಬರು ಮಹಿಳೆಯರು ಮಾತ್ರವಲ್ಲದೇ ಈ ಜಾಲದಲ್ಲಿದ್ದ ಹಲವು ಪುರುಷರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಬಂದದಲ್ಲಿ ಈ ಘಟನೆ ನಡೆದಿದೆ. ಬಂಧಿತ ಮಹಿಳೆ ಆರು ಮದ್ವೆಯಾಗಿದ್ದು, ಇದುವರೆಗೆ ಆದ ಮದ್ವೆಗಳಲ್ಲಿ ಮದ್ವೆಯಾದ ಮನೆಗಳಲ್ಲಿ ಚಿನ್ನಾಭರಣ ಹಣ ದೋಚಿ ಪರಾರಿಯಾಗಿದ್ದಳು. ಈಗ ಇದೇ ರೀತಿಯ 7ನೇ ಮದ್ವೆಗೆ ಸಿದ್ಧಗೊಳ್ಳುತ್ತಿದ್ದ ವೇಳೆ ಆಕೆ ಪೊಲೀಸರ ಬಲೆಗೆ ಬಿದ್ದಿದ್ದಾಳೆ ಎಂದು ಬಂದದ ಹೆಚ್ಚುವರಿ ಪೊಲೀಸ್ ಸೂಪರಿಟೆಂಡೆಂಟ್  ಶಿವರಾಜ್ ಮಾಹಿತಿ ನೀಡಿದ್ದಾರೆ. 

ಪೊಲೀಸರ ಪ್ರಕಾರ, ಈ ಬಂಧಿತ ಇಬ್ಬರು ಮಹಿಳೆಯರಲ್ಲಿ ಪೂನಾಂ ಎಂಬಾಕೆ ವಧುವಿನಂತೆ ಪೋಸ್‌ ಕೊಟ್ಟರೆ ಮತ್ತೊಬ್ಬ ಮಹಿಳೆ ಸಂಜನಾ ಗುಪ್ತ ವಧುವಿನ ತಾಯಿಯಂತೆ ನಾಟಕ ಮಾಡ್ತಿದ್ಲು, ಹಾಗೆಯೇ ಈ ಜಾಲದಲ್ಲಿದ್ದ ಇನ್ನಿಬ್ಬರು ಪುರುಷರಾದ ವಿಮಲೇಶ್ ವರ್ಮಾ ಹಾಗೂ ಧರ್ಮೇಂದ್ರ ಪ್ರಜಾಪತಿ ಎಂಬುವವರು, ಮದ್ವೆಗಾಗಿ ಹುಡುಗಿ ಹುಡುಕುತ್ತಿರುವ ಅವಿವಾಹಿತ ಹುಡುಗರನ್ನ ಹುಡುಕಿ ಪೂನಂಗೆ ಪರಿಚಯ ಮಾಡಿಸುತ್ತಿದ್ದರು. ಬರೀ ಇಷ್ಟೇ ಅಲ್ಲ ವಧುವನ್ನು ಹುಡುಕಿ ಕೊಟ್ಟಿದ್ದೇವೆ ಎಂದು ಹೇಳಿಕೊಂಡು ಹುಡುಗರ ಕಡೆಯಿಂದ ವಿಮಲೇಶ್ ವರ್ಮಾ ಹಾಗೂ ಧರ್ಮೇಂದ್ರ ಪ್ರಜಾಪತಿ ಹಣ ವಸೂಲಿ ಮಾಡುತ್ತಿದ್ದರು. ಇದಾದ ನಂತರ ಸರಳವಾದ ಕೋರ್ಟ್ ಮ್ಯಾರೇಜ್ ನಡೆಯುತ್ತಿತ್ತು. ಮದ್ವೆಯಾದ ನಂತರ ವಧು ಪೂನಂ ವರನ ಮನೆಗೆ ಹೋಗುತ್ತಿದ್ದಳು. ಅಲ್ಲದೇ ವರನ ವಿಶ್ವಾಸ ಗಳಿಸುತ್ತಿದ್ದ ಆಕೆ ಅಲ್ಲಿ ಸಮಯ ಸಂದರ್ಭ ನೋಡಿಕೊಂಡು ಯಾರು ಇಲ್ಲದ ವೇಳೆ ಚಿನ್ನಾಭರಣ ಹಣವನ್ನು ಕಸಿದು ಅಲ್ಲಿಂದ ಓಡಿ ಹೋಗುತ್ತಿದ್ದಳು. 

Tap to resize

Latest Videos

undefined

ಈ ಹಿಂದೆ ಆರು ಬಾರಿ ಇವರು ಈ ರೀತಿ ಮದ್ವೆ ನಾಟಕವಾಡಿ ಮನೆಗಳನ್ನು ದೋಚಿ ಓಡಿ ಹೋಗಿದ್ದು, 7ನೇ ಮದ್ವೆಯಾಗಲು ಸಿದ್ಧವಾಗುತ್ತಿದ್ದ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಶಂಕರ್ ಉಪಾಧ್ಯಾಯ ಎಂಬುವವರು ಪೂನಾಂ ಹಾಗೂ ಗ್ಯಾಂಗ್ ಬಗ್ಗೆ ದೂರು ನೀಡಿದ್ದಾರೆ. ಅವರು ಹೇಳುವಂತೆ ಶಂಕರ್‌ ಅವಿವಾಹಿತರಾಗಿದ್ದು, ಮದ್ವೆಯಾಗಲು ಹುಡುಗಿ ಹುಡುಕುತ್ತಿದ್ದರು. ಈ ವೇಳೆ ವಿಮಲೇಶ್ ಪರಿಚಯವಾಗಿದ್ದು, ಆತ ಶಂಕರ್‌ ಉಪಾಧ್ಯಾಯ ಅವರ ಬಳಿ ನಿಮಗೆ ಮದುವೆಯಾಗುತ್ತದೆ ಆದರೆ ನೀವು 1.5 ಲಕ್ಷ ರೂಪಾಯಿ ನೀಡಬೇಕು ಎಂದು ಡೀಲ್ ಕುದುರಿಸಿದ್ದ. ಇದಕ್ಕೆ ಶಂಕರ್‌ ಉಪಾಧ್ಯಾಯ ಅವರು ಕೂಡ ಒಪ್ಪಿಕೊಂಡಿದ್ದರು. 

ಶನಿವಾರ ಈ ಮದ್ವೆ ದಲ್ಲಾಳಿ ವಿಮಲೇಶ್, ಶಂಕರ್‌ಗೆ ಕರೆ ಮಾಡಿ ಶಂಕರ್‌ನನ್ನು ಕೋರ್ಟ್‌ಗೆ ಕರೆದು ಅಲ್ಲಿ ಈ ನಕಲಿ ವಧು ಪೂನಂ ಪಾಂಡೆಯನ್ನು  ಆತನಿಗೆ ಪರಿಚಯಿಸಿದ್ದ. ಇದಾದ ನಂತರ ಇವರು ಶಂಕರ್ ಬಳಿ 1.5 ಲಕ್ಷ ರೂ ನೀಡಲು ಬೇಡಿಕೆ ಇರಿಸಿದ್ದರು. ಈ ವೇಳೆ ಶಂಕರ್ ಉಪಾಧ್ಯಾಯ ಅವರಿಗೆ ಏನೋ ಸಂಶಯ ಬಂದಿದ್ದು, ವಧು ಪೂನಂ ಹಾಗೂ ಆಕೆಯ ತಾಯಿಯಂತೆ ನಟಿಸುತ್ತಿದ್ದ ಸಂಜನಾಳ ಆಧಾರ್ ಕಾರ್ಡ್ ನೀಡುವಂತೆ ಕೇಳಿದ್ದಾರೆ. ಅವರ ವರ್ತನೆ ನೋಡಿ ನನಗೆ ಸಂಶಯ ಬಂದಿತ್ತು. ಅವರು ನನಗೆ ಮೋಸ ಮಾಡಲು ಯತ್ನಿಸಿದ್ದರು. ನಾನು ಮದ್ವೆಯಾಗಲು ನಿರಾಕರಿಸಿದಾಗ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು. ಈ ವೇಳೆ ನನಗೆ ಯೋಚನೆ ಮಾಡಲು ಸಮಯಬೇಕು ಎಂದು ಹೇಳಿ ನಾನು ಅಲ್ಲಿಂದ ಹೋಗಿದ್ದೆ ಎಂದು ಶಂಕರ್ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದಾದ ಹೆಚ್ಚುವರಿ ಪೊಲೀಸ್ ಸೂಪರಿಟೆಂಡೆಂಟ್ ಶಿವ ರಾಜ್ ಪ್ರತಿಕ್ರಿಯಿಸಿದ್ದು, ಆರೋಪಿಗಳು ಮದ್ವೆ ಹೆಸರಲ್ಲಿ ಮೋಸ ಮಾಡ್ತಿದ್ದಾರೆ ಎಂದು ದೂರು ಬಂದಿತ್ತು. ನಾವು ತಕ್ಷಣವೇ ನಮ್ಮ ತಂಡವನ್ನು ಎಚ್ಚರಿಸಿ ನಾಲ್ವರನ್ನು ಬಂಧಿಸಿದ್ದೇವೆ. ಅವರಲ್ಲಿ ಇಬ್ಬರು ಮಹಿಳೆಯರು, ಇವರು ಅವಿವಾಹಿತ ಯುವಕರನ್ನು ಮದ್ವೆಯ ಹೆಸರಲ್ಲಿ ಮೋಸ ಮಾಡಿ ಬಳಿಕ ಸಮಯ ನೋಡಿ ಅವರ ಮನೆಯಲ್ಲಿ ಚಿನ್ನಾಭರಣ ಹಣ ದೋಚಿ ಪರಾರಿಯಾಗ್ತಿದ್ರು ಎಂದು ಪೊಲೀಸರು ಹೇಳಿದ್ದಾರೆ. 

click me!