ದೇಶದಲ್ಲಿ ಕೊರೋನಾ ಅಬ್ಬರ ಜೋರಾಗಿದೆ. ನಿನ್ನೆ ಅಂದರೆ ಗುರುವಾರ ದೇಶದಲ್ಲಿ ದಾಖಲೆಯ 69,612 ಮಂದಿಗೆ ಕೊರೋನಾ ಸೋಂಕು ವಕ್ಕರಿಸಿದೆ. ಇದರೊಂದಿಗೆ 24,56,073ಕ್ಕೆ ಏರಿಕೆಯಾಗಿದ್ದು, ಶುಕ್ರವಾರ 25 ಲಕ್ಷ ಗಡಿ ದಾಟುವ ನಿರೀಕ್ಷೆ ಇದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಆ.14): ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳು ದಾಖಲೆಯ ಮಟ್ಟದಲ್ಲಿ ಏರಿಕೆ ಕಂಡಿದ್ದು, ಗುರುವಾರ 69,612 ಕೇಸ್ ದಾಖಲಾಗಿವೆ. ಇದು ಇದುವರೆಗೆ ದಾಖಲಾದ ದೈನಂದಿನ ಗರಿಷ್ಠ ಎನಿಸಿಕೊಂಡಿದೆ. ಈ ಮೂಲಕ ಸೋಂಕಿತರ ಸಂಖ್ಯೆ 24,56,073ಕ್ಕೆ ಏರಿಕೆಯಾಗಿದ್ದು, ಶುಕ್ರವಾರ 25 ಲಕ್ಷ ಗಡಿ ದಾಟುವ ನಿರೀಕ್ಷೆ ಇದೆ.
ಇದೇ ವೇಳೆ ಕೊರೋನಾಕ್ಕೆ 1010 ಮಂದಿ ಬಲಿಯಾಗಿದ್ದಾರೆ. 2ನೇ ಬಾರಿ ಕೊರೋನಾ ದೈನಂದಿನ ಮರಣ ಸಂಖ್ಯೆ 1 ಸಾವಿರ ಗಡಿ ದಾಟಿದೆ. ಈ ಮೂಲಕ ಮೃತರ ಸಂಖ್ಯೆ 48,078ಕ್ಕೆ ತಲುಪಿದ್ದು, 50 ಸಾವಿರದತ್ತ ಸಾಗುತ್ತಿದೆ.
undefined
ಈ ಮುನ್ನ ಆ.8ರಂದು 64,973 ಕೇಸ್ ದಾಖಲಾಗಿದ್ದು, ಈವರೆಗಿನ ದೈನಂದಿನ ಗರಿಷ್ಠ ಎನಿಸಿಕೊಂಡಿತ್ತು. ಗಮನಾರ್ಹ ಸಂಗತಿಯೆಂದರೆ 196 ದಿನಗಳ ಅಂತರದಲ್ಲಿ 24 ಲಕ್ಷ ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳು 1ರಿಂದ 1 ಲಕ್ಷ ತಲುಪಲು 139 ದಿನಗಳು ಬೇಕಾಗಿದ್ದವು. ಈಗ ಕೇವಲ ಎರಡು ದಿನಗಳ ಅಂತರದಲ್ಲೇ 1 ಲಕ್ಷಕ್ಕೂ ಅಧಿಕ ಕೊರೋನಾ ವೈರಸ್ ಪ್ರಕರಣಗಳು ದಾಖಲಾಗುತ್ತಿವೆ.
ರಾಜ್ಯದಲ್ಲಿ 2 ಲಕ್ಷಕ್ಕೇರಿದ ಕೊರೋನಾ ಸೋಂಕಿತರ ಸಂಖ್ಯೆ..!
ಇದೇ ವೇಳೆ ಕೊರೋನಾದಿಂದ ಒಂದೇ ದಿನ 56,888 ಮಂದಿ ಚೇತರಿಸಿಕೊಂಡಿದ್ದು, ಗುಣಮುಖರಾದವರ ಸಂಖ್ಯೆ 17,42,063ಕ್ಕೆ ಏರಿಕೆ ಆಗಿದೆ. ಈ ಮಧ್ಯೆ ಮಹಾರಾಷ್ಟ್ರದಲ್ಲಿ 11,813 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 5,60,126ಕ್ಕೆ ಏರಿಕೆ ಆಗಿದೆ. ತಮಿಳುನಾಡಿನಲ್ಲಿ ಕೊರೋನಾ ವೈರಸ್ 3,20,355ಕ್ಕೆ ತಲುಪಿದೆ.