
ನವದೆಹಲಿ(ಆ.14): ಕೊರೋನಾ ಭೀತಿಯ ನಡುವೆಯೇ 74ನೇ ಸ್ವಾತಂತ್ರ್ಯ ದಿನಾಚರಣೆಗೆ ದೇಶ ಸಜ್ಜಾಗಿದೆ. ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸ್ವಾತಂತ್ರ್ಯ ಸಂಭ್ರಮಕ್ಕೆ ಸಾಂಕ್ರಾಮಿಕ ರೋಗವೊಂದು ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಿನ ಜನಸಂದಣಿ ಇಲ್ಲದೆಯೇ ಕಾರ್ಯಕ್ರಮ ಆಯೋಜನೆಗೆ ನಿರ್ಧರಿಸಲಾಗಿದೆ. ಜೊತೆಗೆ ಕೊರೋನಾ ಕಾಲದಲ್ಲಿ ತಮ್ಮ ಜೀವದ ಹಂಗು ತೊರೆದು ಇತರರ ಪ್ರಾಣ ಕಾಪಾಡಲು ನೆರವಾಗುತ್ತಿರುವ ಕೊರೋನಾ ಯೋಧರನ್ನೇ ಈ ಬಾರಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಹ್ವಾನಿಸಲು ಕೇಂದ್ರ ಸರ್ಕಾರ ಸೂಚಿಸಿದೆ. ಹೀಗಾಗಿ ಅವರೇ ಈ ಬಾರಿಯ ಮುಖ್ಯ ಆಕರ್ಷಣೆಯಾಗಲಿದ್ದಾರೆ.
ಕಾರ್ಯಕ್ರಮಕ್ಕೆ ಪ್ರತಿವರ್ಷದಂತೆ ಯೋಧರು, ಸ್ವಾತಂತ್ರ್ಯ ಹೋರಾಟಗಾರರು, ಸಮಾಜದ ಗಣ್ಯರ ಜೊತೆಗೆ ಈ ವರ್ಷ ವೈದ್ಯರು, ಸ್ವಚ್ಛತಾ ಕಾರ್ಮಿಕರು ಮೊದಲಾದ ಕೊರೋನಾ ಯೋಧರನ್ನು ಹೆಚ್ಚಾಗಿ ಆಹ್ವಾನಿಸಿ ಅವರನ್ನು ಗೌರವಿಸಬೇಕು ಎಂದು ಸರ್ಕಾರ ಹೇಳಿದೆ. ಕೇಂದ್ರದ ಈ ಸೂಚನೆಗೆ ಬಹುತೇಕ ರಾಜ್ಯಗಳು ಸಮ್ಮತಿಸಿದ್ದು, ದೆಹಲಿಯಲ್ಲಿ ವೈದ್ಯರು ಮತ್ತು ಪ್ಮಾಸ್ಮಾ ದಾನಿಗಳನ್ನು ಮತ್ತು ಮಹಾರಾಷ್ಟ್ರದಲ್ಲಿ ವೈದ್ಯರು ಹಾಗೂ ಸ್ವಚ್ಛತಾ ಕಾರ್ಮಿಕರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ. ವಿವಿಧ ರಾಜ್ಯಗಳು ಕೂಡ ಇದೇ ರೀತಿಯ ಕ್ರಮ ಕೈಗೊಂಡಿವೆ.
ಸುದೀರ್ಘ ದಿನ ಪೂರೈಸಿದ ಕಾಂಗ್ರೇಸೇತರ ಪ್ರಧಾನಿ; ಮತ್ತೊಂದು ದಾಖಲೆ ಬರೆದ ಮೋದಿ!
ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿರುವ ಮುಖ್ಯ ಕಾರ್ಯಕ್ರಮಕ್ಕೂ ಆಯ್ದ ಗಣ್ಯರನ್ನು ಮಾತ್ರವೇ ಆಹ್ವಾನಿಸಲು ನಿರ್ಧರಿಸಲಾಗಿದೆ. ಜೊತೆಗೆ ಮುಖ್ಯ ಕಾರ್ಯಕ್ರಮದಲ್ಲಿ ಗಣ್ಯರಿಗೆ ಭದ್ರತೆ ಒದಗಿಸುವ 300ಕ್ಕೂ ಹೆಚ್ಚು ಪೊಲೀಸರನ್ನು ಕಳೆದ ಒಂದು ವಾರಗಳಿಂದ ಪ್ರತ್ಯೇಕವಾಗಿ ಇರಿಸಿ, ಅವರನ್ನು ಕೊರೋನಾದಿಂದ ರಕ್ಷಿಸುವ ಕೆಲಸವನ್ನು ಈಗಾಗಲೇ ಮಾಡಲಾಗಿದೆ.
ಇನ್ನು ದೇಶದ ವಿವಿಧ ರಾಜ್ಯಗಳಲ್ಲೂ ಇದೇ ರೀತಿಯ ಸುರಕ್ಷತಾ ಕ್ರಮಗಳನ್ನು ಆಧರಿಸಿ ಕಾರ್ಯಕ್ರಮ ರೂಪಿಸುವಂತೆ ಈಗಾಗಲೇ ಕೇಂದ್ರ ಸರ್ಕಾರ ಸೂಚಿಸಿದೆ. ಎಲ್ಲಾ ಆಹ್ವಾನಿತರಿಗೂ ಮಾಸ್ಕ್ ಕಡ್ಡಾಯ, ಮಕ್ಕಳು ಮತ್ತು ಹಿರಿಯರಿಗೆ ಪ್ರವೇಶ ನಿಷಿದ್ಧ, ಹೆಚ್ಚು ಜನರನ್ನು ಸೇರಿಸದೇ ಕಾರ್ಯಕ್ರಮ ಆಯೋಜನೆ ಮಾಡಬೇಕು. ಕಾರ್ಯಕ್ರಮಗಳು ಜನರಿಗೆ ತಲುಪಿಸಲು ತಂತ್ರಜ್ಞಾನವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು. ಆತ್ಮನಿರ್ಭರ ಭಾರತ ಇಡೀ ಕಾರ್ಯಕ್ರಮದ ಮುಖ್ಯ ವಿಷಯ ಸೂಚಿಯಾಗಿರಬೇಕು ಎಂದು ಸೂಚಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ