ರಾಮಸೇತುಗೆ ಸಿಗಲಿದೆಯೇ ರಾಷ್ಟ್ರೀಯ ಪಾರಂಪರಿಕ ಸ್ಥಾನ?

By Kannadaprabha NewsFirst Published Jan 20, 2023, 8:00 AM IST
Highlights

ರಾಮಾಯಣದ ಕಾಲದಲ್ಲಿ ಲಂಕೆಗೆ ಹೋಗಲು ಶ್ರೀರಾಮ ನಿರ್ಮಿಸಿದ ಎನ್ನಲಾದ ರಾಮಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕ ಎಂದು ಘೋಷಿಸುವ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ನವದೆಹಲಿ: ರಾಮಾಯಣದ ಕಾಲದಲ್ಲಿ ಲಂಕೆಗೆ ಹೋಗಲು ಶ್ರೀರಾಮ ನಿರ್ಮಿಸಿದ ಎನ್ನಲಾದ ರಾಮಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕ ಎಂದು ಘೋಷಿಸುವ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಗುರುವಾರ ಕೇಂದ್ರ ಸರ್ಕಾರ ಈ ಮಾಹಿತಿ ನೀಡಿದೆ. ಇದೇ ವೇಳೆ, ಅಗತ್ಯಬಿದ್ದರೆ ನೀವು ಕೇಂದ್ರ ಸರ್ಕಾರಕ್ಕೆ ಈ ಕುರಿತು ಹೆಚ್ಚಿನ ಮಾಹಿತಿ ನೀಡಬಹುದು ಎಂದು ಸುಬ್ರಮಣಿಯನ್‌ ಸ್ವಾಮಿ ಅವರಿಗೆ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರ ಪೀಠ ಹೇಳಿದೆ.

ಅದಕ್ಕೆ ಉತ್ತರಿಸಿದ ಸುಬ್ರಮಣಿಯನ್‌ ಸ್ವಾಮಿ (Subramanian Swamy), ‘ನಾನು ಯಾರನ್ನೂ ಭೇಟಿ ಮಾಡುವುದಿಲ್ಲ. ಇದು ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲೇ ಇತ್ತು. ಅವರೇ ಆರು ವಾರಗಳಲ್ಲಿ ನಿರ್ಧರಿಸಲಿ. ನಾನು ಮತ್ತೆ ಸುಪ್ರೀಂಕೋರ್ಟ್ಗೇ ಬರುತ್ತೇನೆ’ ಎಂದು ಹೇಳಿದರು. ಅದಕ್ಕೆ ಒಪ್ಪಿದ ಸುಪ್ರೀಂಕೋರ್ಟ್‌, ಕೇಂದ್ರ ಸರ್ಕಾರ (central government) ತೆಗೆದುಕೊಳ್ಳುವ ನಿರ್ಧಾರ ನಿಮಗೆ ತೃಪ್ತಿ ತರದಿದ್ದರೆ ಮಧ್ಯಂತರ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿತು.

ಸಂಸ್ಕೃತಿ ಸಚಿವಾಲಯದ ಪರಿಶೀಲನೆ:

ವಿಚಾರಣೆಯ ವೇಳೆ ಕೇಂದ್ರ ಸರ್ಕಾರದ ಪರವಾಗಿ ಸುಪ್ರೀಂಕೋರ್ಟ್‌ ಗೆ ಮಾಹಿತಿ ಸಲ್ಲಿಸಿದ ಸಾಲಿಸಿಟರ್‌ ಜನರಲ್‌ (Solicitor General) ತುಷಾರ್‌ ಮೆಹ್ತಾ (Tushar Mehta), ರಾಮಸೇತುವಿಗೆ ರಾಷ್ಟ್ರೀಯ ಪಾರಂಪರಿಕ ಸ್ಮಾರಕ ಸ್ಥಾನಮಾನ ನೀಡುವ ಕುರಿತಾದ ಪ್ರಕ್ರಿಯೆ ಕೇಂದ್ರ ಸಂಸ್ಕೃತಿ ಸಚಿವಾಲಯದಲ್ಲಿ (Union Ministry of Culture) ಪ್ರಗತಿಯಲ್ಲಿದೆ ಎಂದು ಹೇಳಿದರು. ಅದನ್ನು ಪುರಸ್ಕರಿಸಿದ ನ್ಯಾಯಪೀಠ, ಮುಂದಿನ ವಿಚಾರಣೆಯನ್ನು ಫೆಬ್ರವರಿಯಲ್ಲಿ ನಡೆಸುವುದಾಗಿ ಹೇಳಿತು.

ರಾಮಸೇತುವಿನ ಮೋಹಕ ದೃಶ್ಯ ಆಸ್ವಾದಿಸಿದ ಜನ!

ಶ್ರೀಲಂಕಾದ ಮನ್ನಾರ್‌ ದ್ವೀಪ ಹಾಗೂ ತಮಿಳುನಾಡಿನ ಪಂಬನ್‌ ದ್ವೀಪದ ನಡುವೆ ಸಮುದ್ರದಡಿ ಇರುವ ಬೆಣಚುಕಲ್ಲುಗಳ ಸಾಲಿನ ರೂಪದ ಸೇತುವೆಯಂತಹ ರಚನೆಯನ್ನು ರಾಮಸೇತು ಅಥವಾ ಆ್ಯಡಂ ಬ್ರಿಜ್‌ ಎಂದು ಕರೆಯಲಾಗುತ್ತದೆ. ಅದನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕ ಎಂದು ಘೋಷಿಸಲು ಸುಬ್ರಮಣಿಯನ್‌ ಸ್ವಾಮಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಆ ಕುರಿತು 2019ರಲ್ಲಿ ಸಭೆ ನಡೆಸಿದ್ದ ಅಂದಿನ ಸಂಸ್ಕೃತಿ ಸಚಿವ ಪ್ರಹ್ಲಾದ್‌ ಪಟೇಲ್‌, ರಾಮಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕ ಎಂದು ಘೋಷಿಸಲು ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ನಂತರ ಯಾವುದೇ ಪ್ರಗತಿಯಾಗಿಲ್ಲ ಎಂದು ಸುಪ್ರೀಂಕೋರ್ಟ್‌ನಲ್ಲಿ ಸುಬ್ರಮಣಿಯನ್‌ ಸ್ವಾಮಿ ಆಪಾದಿಸಿದ್ದಾರೆ.

ರಾಮಸೇತು ಇತ್ತು ಎನ್ನಲಾಗದು, ಕುರುಹು ಇದೆ: ಕೇಂದ್ರ ಸರ್ಕಾರ; ಕಾಂಗ್ರೆಸ್‌ ಆಕ್ರೋಶ

click me!