
ಪ್ರಾಣಿಗಳ ಅದ್ಭುತ ಲೋಕವನ್ನು ಹಲವು ವಿಡಿಯೋಗಳು ಸೆರೆ ಹಿಡಿದಿವೆ. ನ್ಯಾಚುರಲ್ ಜಿಯೋಗ್ರಾಫಿ, ಡಿಸ್ಕವರಿ ಇಂಡಿಯಾ, ಬಿಬಿಸಿ ಮುಂತಾದ ಚಾನೆಲ್‌ಗಳು ಪ್ರಾಣಿಗಳ ಪ್ರತಿಯೊಂದು ಸೂಕ್ಷ್ಮ ಚಲನಚಲನಗಳನ್ನು ಅವುಗಳ ಅಪರೂಪವೆನಿಸುವ ವರ್ತನೆಗಳನ್ನು ಸೆರೆ ಹಿಡಿದು ಪ್ರಾಣಿ ಪ್ರಿಯರಿಗೆ ನೀಡುತ್ತದೆ. ಅದೇ ರೀತಿ ಇಲ್ಲೊಂದು ವೀಡಿಯೋದಲ್ಲಿ ತನ್ನ ಸಂಗಾತಿಯ ಸಾವಿಗೆ ರೋಧಿಸಿದ ಹೆಣ್ಣು ಹುಲಿಯೊಂದರ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಬಿಸಿ ಡಾಕ್ಯುಮೆಂಟರಿಯಲ್ಲಿ ವಿವರಿಸಿದಂತೆ ಬಘಾನಿ ಹೆಸರಿನ ಹೆಣ್ಣು ಹುಲಿ ತನ್ನ ಸಂಗಾತಿಯ ಸಾವಿಗಾಗಿ ರೋಧಿಸಿದೆ. ಇದರ ಸಂಗಾತಿ ರಜೋರೆ ಮೃತಪಟ್ಟಿದ್ದರ ಅರಿವಿಲ್ಲದ ಈ ಹೆಣ್ಣು ಹುಲಿ ಬಘಾನಿ ನೀರಿನ ಮೂಲವೊಂದರ ಬಳಿ ಕುಳಿತು ತನ್ನ ಸಂಗಾತಿಯನ್ನು ಕರೆಯುವುದಕ್ಕೆ ಶುರು ಮಾಡಿದೆ. ಇತ್ತ ಹುಲಿಯನ್ನು ನೋಡಿ ಮರದ ಮೇಲಿದ್ದ ಕೋತಿಗಳು ಕಿರುಚುತ್ತಾ ಓಡುತ್ತಿದ್ದರೆ ಹುಲಿ ಬಘಾನಿ ಸಂಗಾತಿಗಾಗಿ ರೋಧಿಸುತ್ತಾ ಹುಡುಕಾಡುತ್ತಿದೆ. ಆದರೆ ಬಘಾನಿ ಎಷ್ಟು ಕರೆದರೂ ಸಂಗಾತಿ ರಜೋರೆಯ ಸುಳಿವಿಲ್ಲ. ಆದರೆ ಮೂರು ದಿನ ಕಳೆದರು ರಜೋರೆ ಕಾಣಿಸಿಕೊಳ್ಳದೇ ಹೋದಾಗ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸಲು ಆರಂಭಿಸಿದ್ದಾರೆ. ಅದರ ಹೆಜ್ಜೆ ಗುರುತುಗಳನ್ನು ಹುಡುಕುತ್ತಾ ಹೋದಾಗ ಕೊನೆಗಗೂ ರಜೋರೆ ಸಿಕ್ಕಿದ್ದ. ಆದರೆ ಜೀವಂತವಾಗಿ ಅಲ್ಲ, ಶವವಾಗಿ.
ಹುಲಿಗೆ ವಿಷವಿಟ್ಟಿದ ಗ್ರಾಮಸ್ಥರು
ಆತನನ್ನು ಯಾರೋ ಬೇಟೆಗಾರರು ಕೊಂದಿರಲಿಲ್ಲ, ಬದಲಾಗಿ ಗ್ರಾಮಸ್ಥರು ತಮ್ಮ ಸಾಕುಪ್ರಾಣಿಗಳನ್ನು ರಕ್ಷಿಸಿಕೊಳ್ಳುವುದಕ್ಕೆ ಹುಲಿಗೆ ವಿಷವಿಟ್ಟಿದ್ದರು. ಇದನ್ನು ಸೇವಿಸಿ ರಜೋರೆ ಪ್ರಾಣ ಬಿಟ್ಟಿದ್ದ. ಆದರೆ ಹೆಣ್ಣು ಹುಲಿ ಬಘಾನಿಗೆ ಈ ವಿಚಾರ ತಿಳಿದಿರಲಿಲ್ಲ, ಅದು ತನ್ನ ಸಂಗಾತಿಗಾಗಿ ಹಲವು ದಿನಗಳ ಕಾಲ ಹುಡುಕಾಟ ನಡೆಸಿ ರೋಧಿಸಲು ಶುರು ಮಾಡಿದೆ. ಕಾಡಿನಲ್ಲೆಲ್ಲಾ ಆತನಿಗಾಗಿ ಅಲೆದು ಕೂಗುವುದಕ್ಕೆ ಶುರು ಮಾಡಿದೆ. ಆತನಿಗಾಗಿ ಹುಡುಕಾಡಲು ಆರಂಭಿಸಿದೆ. ಆತನ ವಾಸನೆ ಅರಸಿ ದೂರ ದೂರ ಸಾಗಿದೆ. ಆದರೆ ರಜೋರೆ ಹೊರಟು ಹೋಗಿದ್ದ. ಆತನ ಸಾವಿನ ನಂತರ ಬಘಾನಿ ನಿರಂತರ ಮೂರು ದಿನಗಳ ಕಾಲ ಆತನಿಗಾಗಿ ಅಳುತ್ತಾ ಹುಡುಕಾಟ ನಡೆಸಿದ್ದು, ಈ ದೃಶ್ಯಗಳು ಬಿಬಿಸಿ ಡಾಕ್ಯುಮೆಂಟರಿಯಲ್ಲಿ ಸೆರೆಯಾಗಿದ್ದು, ನೋಡುಗರ ಕಣ್ಣಂಚನ್ನು ತೇವಗೊಳಿಸುತ್ತವೆ. ಅನೇಕರು ಈ ವೀಡಿಯೋ ನೋಡಿ ಭಾವುಕರಾಗಿದ್ದಾರೆ.
ಭಾರತದಲ್ಲಿ ಹುಲಿಗಳು 1990 ರ ದಶಕದಿಂದಲೂ ಬೇಟೆಗಾರರಿಂದ ಗುರಿಯಾಗಿದ್ದು, 2005 ಮತ್ತು 2009 ರಲ್ಲಿ ಎರಡು ಹುಲಿ ಮೀಸಲು ಪ್ರದೇಶಗಳಲ್ಲಿ ಹುಲಿಗಳ ನಾಶವಾಗಿದೆ. 2001–2021 ರ ಅವಧಿಯಲ್ಲಿ ಭಾರತದಿಂದ ಪಡೆದ ಮಾಹಿತಿಯ ಪ್ರಕಾರ ಹುಲಿ ಚರ್ಮವು ಹೆಚ್ಚಾಗಿ ವ್ಯಾಪಾರವಾಗುವ ದೇಹದ ಭಾಗವಾಗಿದ್ದು, ನಂತರ ಉಗುರುಗಳು, ಮೂಳೆಗಳು ಮತ್ತು ಹಲ್ಲುಗಳು ಕಳ್ಳಸಾಗಣೆಯಾಗುತ್ತವೆ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮತ್ತು ಅಸ್ಸಾಂ ರಾಜ್ಯಗಳ ಮೂಲಕ ಈ ಕಳ್ಳಸಾಗಣೆ ನಡೆಯುತ್ತವೆ ಎಂದು ವರದಿಯಾಗಿದ್ದವು.
ಹುಲಿಗಳು ಸಾಮಾನ್ಯವಾಗಿ ವರ್ಷಪೂರ್ತಿ, ವಿಶೇಷವಾಗಿ ನವೆಂಬರ್ ಮತ್ತು ಏಪ್ರಿಲ್ ನಡುವೆ ಸಂತಾನೋತ್ಪತಿಕ್ರಿಯೆ ನಡೆಸುತ್ತವೆ. ಹುಲಿಗಳು ಸಾಮಾನ್ಯವಾಗಿ ಬೇಟೆಯಾಡಿದ ಪ್ರಾಣಿಗಳನ್ನು 183 ಮೀ (600 ಅಡಿ) ಗಿಂತ ಹೆಚ್ಚು ದೂರದಲ್ಲಿರುವ ಖಾಸಗಿ, ಸಾಮಾನ್ಯವಾಗಿ ಸಸ್ಯವರ್ಗವಿರುವ ಸ್ಥಳಕ್ಕೆ ಸಾಗಿಸುತ್ತವೆ. ಹಾಗೆಯೇ ಅವು ಸಂಪೂರ್ಣವಾಗಿ ಬೆಳೆದ ಎಮ್ಮೆಯ ಮೃತದೇಹವನ್ನು ಸ್ವಲ್ಪ ದೂರದವರೆಗೆ ಎಳೆಯುವಷ್ಟು ಬಲಶಾಲಿಯಾಗಿರುತ್ತವೆ. ಬೇಟೆಯನ್ನು ತಿನ್ನುವ ಮೊದಲು ಸ್ವಲ್ಪ ಸಮಯ ವಿಶ್ರಾಂತಿ ಪಡೆಯುತ್ತವೆ ಇವು ಒಂದು ಅವಧಿಯಲ್ಲಿ 50 ಕೆಜಿ (110 ಪೌಂಡ್) ಮಾಂಸವನ್ನು ಸೇವಿಸಬಹುದು.
ಇದನ್ನೂ ಓದಿ: ಮೊಸಳೆ ಬಂದಿದೆ ಎಂದ್ರು ಬಾರದ ಅರಣ್ಯ ಸಿಬ್ಬಂದಿ: ಯುವಕ ಏನ್ ಮಾಡ್ದಾ ನೋಡಿ
ಇದನ್ನೂ ಓದಿ: ಪೋಷಕರ ತಿರಸ್ಕಾರಕ್ಕೆ ಚಿಂತೆಗೀಡಾಯ್ತಾ ಆಗಷ್ಟೇ ಜನಿಸಿದ ಹೆಣ್ಣು ಮಗು: ಈ ವೀಡಿಯೋ ನೋಡಿದ್ರೆ ನೀವು ಅಳ್ತೀರಾ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ