Spadex docking postphoned : ಜನವರಿ 9ಕ್ಕೆ ಮುಂದೂಡಲ್ಪಟ್ಟ ಬಾಹ್ಯಾಕಾಶ ಡಾಕಿಂಗ್ ಮೈಲಿಗಲ್ಲು - ಹೊಸ ಬೆಳವಣಿಗೆಗಳು

By Girish Linganna  |  First Published Jan 6, 2025, 4:14 PM IST

ಡಿಸೆಂಬರ್ 30, 2024ರಂದು ಇಸ್ರೋ ಉಡಾವಣೆಗೊಳಿಸಿದ ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್ (ಸ್ಪೇಡೆಕ್ಸ್) ಯೋಜನೆ ಕಕ್ಷೆಯಲ್ಲಿ ಎರಡು ಪ್ರತ್ಯೇಕ ಬಾಹ್ಯಾಕಾಶ ನೌಕೆಗಳನ್ನು ಜೋಡಿಸುವ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುವ ಉದ್ದೇಶ ಹೊಂದಿತ್ತು. ಜನವರಿ 7ರಂದು ಈ ಡಾಕಿಂಗ್ ಪ್ರಕ್ರಿಯೆಯನ್ನು ನಡೆಸಲು ಉದ್ದೇಶಿಸಲಾಗಿತ್ತಾದರೂ, ಇಸ್ರೋ ಈಗ ಅಧಿಕೃತವಾಗಿ ಡಾಕಿಂಗ್ ಪ್ರಕ್ರಿಯೆಯನ್ನು ಜನವರಿ 9ರಂದು ನಡೆಸಲಾಗುತ್ತದೆ ಎಂದು ಘೋಷಿಸಿದೆ.



(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಡಿಸೆಂಬರ್ 30, 2024ರಂದು ಇಸ್ರೋ ಉಡಾವಣೆಗೊಳಿಸಿದ ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್ (ಸ್ಪೇಡೆಕ್ಸ್) ಯೋಜನೆ ಕಕ್ಷೆಯಲ್ಲಿ ಎರಡು ಪ್ರತ್ಯೇಕ ಬಾಹ್ಯಾಕಾಶ ನೌಕೆಗಳನ್ನು ಜೋಡಿಸುವ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುವ ಉದ್ದೇಶ ಹೊಂದಿತ್ತು. ಜನವರಿ 7ರಂದು ಈ ಡಾಕಿಂಗ್ ಪ್ರಕ್ರಿಯೆಯನ್ನು ನಡೆಸಲು ಉದ್ದೇಶಿಸಲಾಗಿತ್ತಾದರೂ, ಇಸ್ರೋ ಈಗ ಅಧಿಕೃತವಾಗಿ ಡಾಕಿಂಗ್ ಪ್ರಕ್ರಿಯೆಯನ್ನು ಜನವರಿ 9ರಂದು ನಡೆಸಲಾಗುತ್ತದೆ ಎಂದು ಘೋಷಿಸಿದೆ. ಆದರೆ, ಉಡಾವಣಾ ಸಮಯವನ್ನು ಮಾತ್ರ ಇನ್ನೂ ಘೋಷಿಸಲಾಗಿಲ್ಲ. ಡಾಕಿಂಗ್ ಪ್ರಯೋಗದ ದಿನದಲ್ಲಿ ಬದಲಾವಣೆ ಆಗಿರುವುದಕ್ಕೆ ನಿಖರ ಕಾರಣಗಳನ್ನು ಇನ್ನೂ ತಿಳಿಸಿಲ್ಲವಾದರೂ, ಸಂಭಾವ್ಯ ತಾಂತ್ರಿಕ ಕಾರಣಗಳಿಂದಾಗಿ ಡಾಕಿಂಗ್ ಪ್ರಕ್ರಿಯೆಯನ್ನು ಮುಂದೂಡಲಾಗಿದೆ ಎಂದು ನಂಬಿಕಾರ್ಹ ಮೂಲಗಳು ತಿಳಿಸಿವೆ.

Tap to resize

Latest Videos

ಯಾಕೆ ಜನವರಿ 7 ಡಾಕಿಂಗ್ ಪ್ರಕ್ರಿಯೆಗೆ ಮೊದಲ ಆಯ್ಕೆಯಾಗಿತ್ತು?

ಭಾರತದ ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್ (ಸ್ಪೇಡೆಕ್ಸ್) ಯೋಜನೆ ಜನವರಿ 7ರಂದು ಹೊಸ ಇತಿಹಾಸ ನಿರ್ಮಿಸಲು ಸಜ್ಜಾಗಿತ್ತು. ಈ ಯೋಜನೆ ಹೊಂದಿರುವ ಎರಡು ಸಣ್ಣ ಗಾತ್ರದ ಉಪಗ್ರಹಗಳಾದ ಎಸ್‌ಡಿಎಕ್ಸ್01 ಹಾಗೂ ಎಸ್‌ಡಿಎಕ್ಸ್02ಗಳು ಬಾಹ್ಯಾಕಾಶದಲ್ಲಿ ಸ್ವಾಯತ್ತ ರಾಂಡೇವೂ (rendezvous) ನಡೆಸಿ, ಕಕ್ಷೆಯಲ್ಲಿ ಡಾಕಿಂಗ್ ಪ್ರಕ್ರಿಯೆ ನಡೆಸಲಿವೆ. ಈ ಸಂಕೀರ್ಣವಾದ ಪ್ರಕ್ರಿಯೆ ಜನವರಿ 7ರಂದು ಬೆಳಗ್ಗೆ 9:00ರಿಂದ 10:00ರ ನಡುವೆ ನಡೆಯಬೇಕಿತ್ತು. ಈ ಪ್ರಕ್ರಿಯೆಯನ್ನು ಅತ್ಯಂತ ಕರಾರುವಾಕ್ಕಾದ ಯೋಜನೆಗಳು ಮತ್ತು ಕಕ್ಷೀಯ ಕಾರ್ಯಗಳ ನಿಖರ ಅರ್ಥೈಸಿಕೊಳ್ಳುವಿಕೆಗಳ ಸಮ್ಮಿಲನದಿಂದ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಮೊದಲಿಗೆ ಬಾಹ್ಯಾಕಾಶ ಡಾಕಿಂಗ್ ನಡೆಸಲು ಜನವರಿ 7ನೇ ದಿನಾಂಕವನ್ನೇ ಏಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು? ಇದರ ಉತ್ತರ, ಈ ಸೂಕ್ಷ್ಮ ಪ್ರಕ್ರಿಯೆಯನ್ನು ನಡೆಸಲು ಅವಶ್ಯಕವಾದ ವ್ಯವಸ್ಥೆಗಳು ಮತ್ತು ಸೂಕ್ತ ಪರಿಸ್ಥಿತಿಗಳ ಲಭ್ಯತೆಯಲ್ಲಿದೆ.

ಇದನ್ನೂ ಓದಿ: ಇಸ್ರೋ ಬಾಹ್ಯಾಕಾಶ ನಿಲ್ದಾಣಗಳ ಡಾಕಿಂಗ್‌ ಪ್ರಯೋಗ: ಇದರ ಯಶಸ್ಸಿನಲ್ಲಿದೆ ಭಾರತದ ಶ್ರೇಯಸ್ಸು

ರಾಂಡೇವೂ ವಿಂಡೋ

ಈಗ ಡಾಕಿಂಗ್ ಪ್ರಕ್ರಿಯೆ ನಡೆಸಲು ಆಯ್ಕೆ ಮಾಡಿಕೊಂಡಿರುವ ದಿನ ಮತ್ತು ಸಮಯ ಮಹತ್ವದ 'ರಾಂಡೇವೂ ವಿಂಡೋ'ವನ್ನು ಪ್ರತಿನಿಧಿಸುತ್ತವೆ. ಅಂದರೆ, ಆ ದಿನ ಮತ್ತು ಸಮಯದಲ್ಲಿ, ಚೇಸರ್ (ಎಸ್‌ಡಿಎಕ್ಸ್01) ಮತ್ತು ಟಾರ್ಗೆಟ್ (ಎಸ್‌ಡಿಎಕ್ಸ್02) ಉಪಗ್ರಹಗಳು ಅತ್ಯಂತ ಸಮರ್ಪಕವಾಗಿ ಹೊಂದಿಕೆಯಾಗುತ್ತವೆ. ಹಾಗೆಂದು, ಈ ವಿಂಡೋ ಹಾಗೇ ಸುಮ್ಮನೆ ಆಯ್ಕೆಯಾಗಿರುವುದಲ್ಲ. ಇದಕ್ಕಾಗಿ ಭೂಮಿಯ ಗುರುತ್ವಾಕರ್ಷಣಾ ಸೆಳೆತ, ಬಾಹ್ಯಾಕಾಶ ನೌಕೆಗಳ ಆರಂಭಿಕ ಕಕ್ಷೆಗಳು, ಮತ್ತು ಅವುಗಳನ್ನು ಜೊತೆಯಾಗಿಸಲು ಅವಶ್ಯಕವಾದ ನಿಖರ ಚಲನೆಗಳನ್ನು ಜಾಗರೂಕವಾಗಿ ಲೆಕ್ಕಾಚಾರ ಮಾಡಿ, ಆ ಬಳಿಕವೇ ದಿನವನ್ನು ನಿಗದಿಪಡಿಸಲಾಗಿದೆ. ಇಬ್ಬರು ನೃತ್ಯಗಾರರು ಅತ್ಯಂತ ವೇಗವಾಗಿ ಚಲಿಸುತ್ತಾ, ವೈಭವೋಪೇತವಾದ ಬಾಲ್ ರೂಮ್ ಒಂದರಲ್ಲಿ ನೃತ್ಯ ಪ್ರದರ್ಶಿಸುವುದನ್ನು ಕಲ್ಪನೆ ಮಾಡಿಕೊಳ್ಳಿ. ಇಲ್ಲಿನ ರಾಂಡೇವೂ ವಿಂಡೋ ಎಂದರೆ, ಅವರಿಬ್ಬರು ನೃತ್ಯಪಟುಗಳು ಪರಸ್ಪರ ಕೈ ಹಿಡಿದುಕೊಳ್ಳಲು ಸಾಧ್ಯವಾಗುವ ರೀತಿಯಲ್ಲಿ ಇಬ್ಬರೂ ಇರುವ ಸ್ಥಾನವಾಗಿದೆ.

ಬೆಳಕಿನ ಪರಿಸ್ಥಿತಿಗಳು

ಬಾಹ್ಯಾಕಾಶ ನೌಕೆಯ ಸೆನ್ಸರ್‌ಗಳು, ಸಂವಹನ ಉಪಕರಣಗಳು, ಮತ್ತು ಸ್ವತಃ ಡಾಕಿಂಗ್ ಪ್ರಕ್ರಿಯೆ ಸೇರಿದಂತೆ, ಬಾಹ್ಯಾಕಾಶ ನೌಕೆ ಹೊಂದಿರುವ ಎಲ್ಲ ವ್ಯವಸ್ಥೆಗಳಿಗೆ ಶಕ್ತಿ ಒದಗಿಸಲು ಸೂರ್ಯನ ಬೆಳಕು ಅತ್ಯವಶ್ಯಕವಾಗಿದೆ. ಜನವರಿ 7ರಂದು ಸೂರ್ಯನ ಬೆಳಕು ಬಾಹ್ಯಾಕಾಶ ನೌಕೆಗಳಿಗೆ ಅತ್ಯಂತ ಸೂಕ್ತವಾಗಿರುತ್ತದೆ. ಅಂದು ಉಪಗ್ರಹಗಳಿಗೆ ಬೇಕಾಗುವಷ್ಟು ಸೂರ್ಯನ ಬೆಳಕಿನ ಲಭ್ಯತೆ ಇರುತ್ತದೆ. ಇದು ಸಾಕಷ್ಟು ವಿದ್ಯುತ್ ಶಕ್ತಿಯನ್ನು ಒದಗಿಸುವುದು ಮಾತ್ರವಲ್ಲದೆ, ಚೇಸರ್ ಹೊಂದಿರುವ ನ್ಯಾವಿಗೇಶನ್ (ಸಂಚರಣಾ) ವ್ಯವಸ್ಥೆಗೆ ಟಾರ್ಗೆಟ್ ಉಪಗ್ರಹದ ಬಳಿ ಸಾಗಿದಂತೆ ಸ್ಪಷ್ಟವಾಗಿ ಗೋಚರಿಸುವಂತೆ ಮಾಡುತ್ತದೆ.

ಭೂ ನಿಯಂತ್ರಣ ಕೇಂದ್ರದೊಡನೆ ಸಂವಹನ

ಇಸ್ರೋದ ಭೂ ಕೇಂದ್ರಗಳೊಡನೆ, ಅದರಲ್ಲೂ ಬೆಂಗಳೂರಿನಲ್ಲಿರುವ ಐಎಸ್‌ಟಿಆರ್‌ಎಸಿ ಜೊತೆಗೆ ಬಾಹ್ಯಾಕಾಶ ನೌಕೆ ಅಡಚಣೆಯಿಲ್ಲದ ಸಂವಹನದಲ್ಲಿರುವುದು ಅತ್ಯಂತ ಮುಖ್ಯವಾಗಿದೆ. ಈಗ ಆಯ್ಕೆ ಮಾಡಿಕೊಂಡಿರುವ ದಿನ ಮತ್ತು ಸಮಯ, ಸಂವಹನಕ್ಕೆ ಸಾಕಷ್ಟು ಪೂರಕವಾಗಿದ್ದು, ಭೂ ನಿಯಂತ್ರಣ ಕೇಂದ್ರಗಳಿಗೆ ಡಾಕಿಂಗ್ ಪ್ರಕ್ರಿಯೆಯನ್ನು ವಾಸ್ತವ ಸಮಯದಲ್ಲಿ ಗಮನಿಸುತ್ತಾ, ಅಗತ್ಯವಿರುವ ಆದೇಶಗಳನ್ನು ನೀಡಲು, ಅವಶ್ಯಕತೆ ಎದುರಾದರೆ ಮಧ್ಯ ಪ್ರವೇಶಿಸಲು ಸಾಧ್ಯವಾಗುತ್ತದೆ. ಇಂತಹ ನಿರಂತರ ಸಂಪರ್ಕ ಹೊಂದುವುದರಿಂದ, ಬಾಹ್ಯಾಕಾಶದಲ್ಲಿನ ಸಂಕೀರ್ಣ ಪ್ರಕ್ರಿಯೆಯ ಮೇಲೆ ಒಂದು ಕಣ್ಣು ಮತ್ತು ಮಾರ್ಗದರ್ಶನ ನೀಡುವ ಕೈ ಇರುವಂತೆ ಮಾಡಲಾಗುತ್ತದೆ.

ಟಾರ್ಗೆಟ್ ಉಪಗ್ರಹದ ಸಿದ್ಧತೆ ಮತ್ತು ಸುರಕ್ಷತೆ

ಟಾರ್ಗೆಟ್ ಉಪಗ್ರಹ ತನ್ನದೇ ಆದ ಪ್ರಯೋಗಗಳನ್ನು ನಡೆಸುತ್ತಿರಬಹುದು, ಅಥವಾ ನಿರ್ದಿಷ್ಟ ಕಾರ್ಯಾಚರಣಾ ಅವಶ್ಯಕತೆಗಳನ್ನು ಹೊಂದಿರಬಹುದು. ಡಾಕಿಂಗ್ ಪ್ರಕ್ರಿಯೆಯ ಸಮಯವನ್ನು ಜಾಗರೂಕವಾಗಿ ನಿರ್ಧರಿಸಲಾಗಿದ್ದು, ಈ ವೇಳೆ ಟಾರ್ಗೆಟ್ ಸರಿಯಾದ ಸ್ಥಾನದಲ್ಲಿದ್ದು, ಚೇಸರ್ ಉಪಗ್ರಹವನ್ನು ಸ್ವೀಕರಿಸಲು ಸಿದ್ಧವಾಗಿರುತ್ತದೆ. ಅದಲ್ಲದೆ, ಈಗ ಆಯ್ಕೆ ಮಾಡಿಕೊಂಡಿರುವ ಸಮಯ, ಉಪಗ್ರಹಗಳು ಬಾಹ್ಯಾಕಾಶ ತ್ಯಾಜ್ಯಗಳಿಗೆ ಡಿಕ್ಕಿಯಾಗುವ ಅಪಾಯಗಳನ್ನು ಕಡಿಮೆಗೊಳಿಸಿ, ಅಗತ್ಯ ಚಲನೆಗಳಿಗಾಗಿ ಇಂಧನ ದಕ್ಷತೆಯನ್ನು ಹೆಚ್ಚಿಸುತ್ತದೆ.

ಬಾಹ್ಯಾಕಾಶದ ಸಂಕೀರ್ಣ ನೃತ್ಯ

ಬಾಹ್ಯಾಕಾಶ ಡಾಕಿಂಗ್ ಒಂದು ಜಾಗರೂಕವಾಗಿ ಆಯೋಜಿಸುವ ಪ್ರಕ್ರಿಯೆಯಾಗಿದೆ. ಟಾರ್ಗೆಟ್ ಉಪಗ್ರಹದಿಂದ ಮೂಲತಃ 20 ಕಿಲೋಮೀಟರ್ ದೂರದಲ್ಲಿರುವ, ಪ್ರತಿ ಗಂಟೆಗೆ 28,800 ಕಿಲೋಮೀಟರ್ ವೇಗದಲ್ಲಿ ಸಾಗುವ ಚೇಸರ್ ಉಪಗ್ರಹ, ಕ್ರಮೇಣ ಟಾರ್ಗೆಟ್ ಜೊತೆಗಿನ ಅಂತರವನ್ನು ಕಡಿಮೆಗೊಳಿಸುತ್ತಾ ಸಾಗಿ, ಕೊನೆಗೆ ತನ್ನ ವೇಗವನ್ನು ಪ್ರತಿ ಸೆಕೆಂಡಿಗೆ ಕೆಲವು ಸೆಂಟಿಮೀಟರ್‌ಗಳಿಗೆ ಇಳಿಸಿ, ಯಾವುದೇ ಡಿಕ್ಕಿ ಸಂಭವಿಸದಂತೆ ನೋಡಿಕೊಳ್ಳುತ್ತದೆ. ಈ ಅಂತಿಮ ಡಾಕಿಂಗ್ ಪ್ರಕ್ರಿಯೆಗಾಗಿ, ಎರಡು ಬಾಹ್ಯಾಕಾಶ ನೌಕೆಗಳು ಅತ್ಯಂತ ನಿಖರವಾಗಿ ಹೊಂದಿಕೊಂಡಿರಲಿವೆ. ಆ ಬಳಿಕ, ಸುರಕ್ಷಿತ ಸಂಪರ್ಕ ಸಾಧಿಸುವ ಸಲುವಾಗಿ, 'ಕ್ಯಾಪ್ಚರ್ ಮೆಕ್ಯಾನಿಸಂ' ಪ್ರಕ್ರಿಯೆ ನಡೆಸಲಾಗುತ್ತದೆ.

ಭಾರತೀಯ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರೀ ಜಿಗಿತ

ಸ್ಪೇಡೆಕ್ಸ್ ಯೋಜನೆ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಬೆಳೆಯುತ್ತಿರುವ ಭಾರತದ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಡಾಕಿಂಗ್ ಪ್ರಕ್ರಿಯೆಯ ದಿನದಲ್ಲಿ ಬದಲಾವಣೆ ಆಗಿದ್ದರೂ, ಬಾಹ್ಯಾಕಾಶದಲ್ಲಿ ಡಾಕಿಂಗ್ ನಡೆಸುವ ಸಾಮರ್ಥ್ಯವನ್ನು ಭಾರತ ಯಶಸ್ವಿಯಾಗಿ ಪ್ರದರ್ಶಿಸಿದರೆ, ಕಕ್ಷೀಯ ಇಂಧನ ಮರು ಪೂರಣ, ದೊಡ್ಡದಾದ ಬಾಹ್ಯಾಕಾಶ ವ್ಯವಸ್ಥೆಗಳ ನಿರ್ಮಾಣ, ಮತ್ತು ಮಾನವ ಸಹಿತ ಬಾಹ್ಯಾಕಾಶ ಯಾನದಂತಹ ಭವಿಷ್ಯದ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಈ ಪ್ರಯೋಗ ಹಾದಿ ಮಾಡಿಕೊಡಲಿದೆ. ಇಸ್ರೋ ಬಹಳಷ್ಟು ಜಾಗರೂಕವಾಗಿ ಆಲೋಚಿಸಿ, ತಾಂತ್ರಿಕ ಪ್ರಾವೀಣ್ಯತೆಗಳನ್ನು ಬಳಸಿಕೊಂಡು, ಜನವರಿ 7ನೇ ತಾರೀಕಿನಂದು ಡಾಕಿಂಗ್ ನಡೆಸುವ ನಿರ್ಧಾರ ಕೈಗೊಂಡಿತ್ತು. ಆ ಮೂಲಕ, ಬ್ರಹ್ಮಾಂಡದ ಕಡೆಗಿನ ಭಾರತದ ಹಾದಿಯ ಹೊಸ ಅಧ್ಯಾಯ ಆರಂಭವಾಗುವ ಭರವಸೆ ಇತ್ತು.

ಜನವರಿ 9ಕ್ಕೆ ಮುಂದೂಡಲ್ಪಟ್ಟ ಡಾಕಿಂಗ್

ಡಾಕಿಂಗ್ ಮುಂದೂಡಿಕೆಗೆ ಅಧಿಕೃತ ಕಾರಣಗಳು ಲಭ್ಯವಾಗಿರದಿದ್ದರೂ, ಬಲ್ಲ ಮೂಲಗಳ ಪ್ರಕಾರ, ಸಂಭಾವ್ಯ ತಾಂತ್ರಿಕ ಕಾರಣಗಳಿಂದಾಗಿ ಪ್ರಯೋಗವನ್ನು ಜನವರಿ 9ಕ್ಕೆ ಮುಂದೂಡಲಾಗಿದೆ. ಇದು ಬಾಹ್ಯಾಕಾಶ ಯೋಜನೆಗಳಲ್ಲಿ ಸಹಜವಾಗಿದ್ದು, ಯೋಜನೆಯ ಒಟ್ಟಾರೆ ಯಶಸ್ಸಿಗಾಗಿ ಒಂದಷ್ಟು ಹೊಂದಾಣಿಕೆಗಳು ಮತ್ತು ಬದಲಾವಣೆಗಳನ್ನು ಕೈಗೊಳ್ಳಬೇಕಾಗುತ್ತದೆ.

'ಮಹಾರತ್ನ' ಎಚ್ಎಎಲ್ ಇನ್ನಷ್ಟು ಸಾಧನೆ ಮೆರೆಯಲಿ: 85ನೇ ಸಂಸ್ಥಾಪನಾ ದಿನದಂದು ಯದುವೀರ್ ಒಡೆಯರ್ ಶ್ಲಾಘನೆ

ಮಾಹಿತಿಗಾಗಿ ಕಾದು ನೋಡೋಣ!

ಇಸ್ರೋ ಈಗ ತನ್ನ ಐತಿಹಾಸಿಕ ಪ್ರಯೋಗಕ್ಕೆ ಸಿದ್ಧತೆ ನಡೆಸುತ್ತಿದ್ದು, ನಾವು ಸ್ಪೇಡೆಕ್ಸ್ ಯೋಜನೆಯ ಮೇಲೆ ಕುತೂಹಲದ ಕಣ್ಣಿಟ್ಟಿರೋಣ. ಈ ಮೂಲಕ ಭಾರತ ತನ್ನ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಒಂದು ದೊಡ್ಡ ಹೆಜ್ಜೆಯನ್ನು ಮೂಡಿಸಲಿದೆ!

click me!