'ಮಹಾರತ್ನ' ಎಚ್ಎಎಲ್ ಇನ್ನಷ್ಟು ಸಾಧನೆ ಮೆರೆಯಲಿ: 85ನೇ ಸಂಸ್ಥಾಪನಾ ದಿನದಂದು ಯದುವೀರ್ ಒಡೆಯರ್ ಶ್ಲಾಘನೆ
ಮೂಲತಃ ಹಿಂದೂಸ್ತಾನ್ ಏರ್‌ಕ್ರಾಫ್ಟ್ ಲಿಮಿಟೆಡ್ ಎಂಬ ಹೆಸರು ಹೊಂದಿದ್ದ ಎಚ್ಎಎಲ್, ಡಿಸೆಂಬರ್ 23, 1940ರಂದು ಬೆಂಗಳೂರಿನಲ್ಲಿ ಸ್ಥಾಪನೆಗೊಂಡಿತು. ಎಚ್ಎಎಲ್ ಅನ್ನು ಮೈಸೂರು ಸಂಸ್ಥಾನದ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಹಯೋಗದಲ್ಲಿ ವಾಲ್‌ಚಂದ್ ಹೀರಾಚಂದ್ ಅವರು ಸ್ಥಾಪಿಸಿದ್ದರು.
ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಇಂದು ತನ್ನ 85ನೇ ಸಂಸ್ಥಾಪನಾ ದಿನವನ್ನು ಆಚರಿಸಿತು. ಎಚ್ಎಎಲ್ ಗೌರವಾನ್ವಿತ ಮಹಾರತ್ನ ಸ್ಥಾನಮಾನ ಪಡೆದ ಬಳಿಕ, ಇಂದು ಇದೇ ಮೊದಲ ಬಾರಿಗೆ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಿತು. ಈ ವಿಶೇಷ ಸಂದರ್ಭದಲ್ಲಿ, ಎಚ್ಎಎಲ್ ಸಂಸ್ಥೆಯ ಮಾಜಿ ಮುಖ್ಯಸ್ಥರುಗಳು, ವ್ಯವಸ್ಥಾಪಕ ನಿರ್ದೇಶಕರುಗಳು, ಸಿಇಒಗಳು, ಹಾಗೂ ಇತರ ಪ್ರಮುಖ ವ್ಯಕ್ತಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮ, ಎಚ್ಎಎಲ್ ಸಂಸ್ಥೆಯ ಭವಿಷ್ಯದ ದಿಕ್ಕು, ಎಚ್ಎಎಲ್ ಅಭಿವೃದ್ಧಿ ಮತ್ತು ಯಶಸ್ಸನ್ನು ಕಾಪಾಡಿಕೊಳ್ಳಲು ಬೇಕಾದ ಕಾರ್ಯತಂತ್ರಗಳತ್ತ ಕೇಂದ್ರೀಕೃತವಾಗಿತ್ತು.
ಅಕ್ಟೋಬರ್ 14, 2024ರಂದು ಎಚ್ಎಎಲ್ ಗೌರವಯುತ ಮಹಾರತ್ನ ಸ್ಥಾನಮಾನವನ್ನು ಸಂಪಾದಿಸಿತು. ಈ ಮಹಾರತ್ನ ಸ್ಥಾನಮಾನ ಸಂಸ್ಥೆಯೊಂದನ್ನು ಅದರ ಉದ್ದಿಮೆಯಲ್ಲಿ ಪ್ರಮುಖ ಸಂಸ್ಥೆ ಎಂದು ಗುರುತಿಸುತ್ತದೆ. ಭಾರತದ ಸಂಭಾವ್ಯ ಬಹುರಾಷ್ಟ್ರೀಯ ಸಂಸ್ಥೆಗಳಾಗಿ (ಎಂಎನ್‌ಸಿ) ಬೆಳೆಯುವ ಸಾಮರ್ಥ್ಯ ಹೊಂದಿರುವ ಸಂಸ್ಥೆಗಳನ್ನು ಗುರುತಿಸಿ, ಈ ಗೌರವ ನೀಡಲಾಗುತ್ತದೆ. ಮಹಾರತ್ನ ಸ್ಥಾನಮಾನ ಕೇವಲ ಎಚ್ಎಎಲ್ ಸಂಸ್ಥೆಯ ಮೌಲ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಹೆಚ್ಚಿನ ಸ್ವಾಯತ್ತತೆ, ಮತ್ತು ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ನೀಡಿ, ನಾವೀನ್ಯತೆ, ಅಭಿವೃದ್ಧಿ ಮತ್ತು ಅಂತಾರಾಷ್ಟ್ರೀಯ ಸ್ಪರ್ಧಾತ್ಮಕತೆ ಸಾಧಿಸಲು ಬೆಂಬಲ ನೀಡಿ, ಇತರ 'ನವರತ್ನ' ಸಂಸ್ಥೆಗಳಿಗೆ ಸ್ಫೂರ್ತಿ ನೀಡುತ್ತದೆ.
ವಿಜಯ ದಿವಸದ ಸಂಭ್ರಮಕ್ಕೆ ಪ್ರತಿಭಟನೆ, ಉದ್ವಿಗ್ನತೆಗಳ ಕರಿನೆರಳು
ಮೂಲತಃ ಹಿಂದೂಸ್ತಾನ್ ಏರ್‌ಕ್ರಾಫ್ಟ್ ಲಿಮಿಟೆಡ್ ಎಂಬ ಹೆಸರು ಹೊಂದಿದ್ದ ಎಚ್ಎಎಲ್, ಡಿಸೆಂಬರ್ 23, 1940ರಂದು ಬೆಂಗಳೂರಿನಲ್ಲಿ ಸ್ಥಾಪನೆಗೊಂಡಿತು. ಎಚ್ಎಎಲ್ ಅನ್ನು ಮೈಸೂರು ಸಂಸ್ಥಾನದ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಹಯೋಗದಲ್ಲಿ ವಾಲ್‌ಚಂದ್ ಹೀರಾಚಂದ್ ಅವರು ಸ್ಥಾಪಿಸಿದ್ದರು. ವಾಲ್‌ಚಂದ್ ಹೀರಾಚಂದ್ ಅವರು ಸಂಸ್ಥೆಯ ಮೊದಲ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಬೆಂಗಳೂರಿನ ಎಚ್ಎಎಲ್ ಕಾರ್ಖಾನೆಯನ್ನು ನ್ಯೂಯಾರ್ಕ್‌ನ ಇಂಟರ್ನ್ಯಾಷನಲ್ ಏರ್‌ಕ್ರಾಫ್ಟ್ ಕಾರ್ಪೋರೇಷನ್ನಿನ ವಿಲಿಯಂ ಡಿ ಪಾವ್ಲೀ ಅವರ ನೆರವಿನಿಂದ ಸ್ಥಾಪಿಸಲಾಯಿತು. ಪಾವ್ಲೀ ಅವರು ಅಮೆರಿಕಾದಿಂದ ಅಪಾರ ಸಂಖ್ಯೆಯ ಯಂತ್ರೋಪರಣಗಳನ್ನು ಭಾರತಕ್ಕೆ ರವಾನಿಸಲು ನೆರವಾದರು.
ಹಾರ್ಲೊ ಪಿಸಿ-5 ಎನ್ನುವುದು ಎಚ್ಎಎಲ್ ಸಂಸ್ಥೆ ತಯಾರಿಸಿದ ಮೊತ್ತ ಮೊದಲ ವಿಮಾನವಾಗಿತ್ತು. ಎಪ್ರಿಲ್ 2, 1942ರಂದು ಸರ್ಕಾರ ಮೈಸೂರು ಸಂಸ್ಥಾನ, ಸೇಠ್ ವಾಲ್‌ಚಂದ್ ಹೀರಾಚಂದ್, ಮತ್ತಿತರರಿಂದ ಷೇರುಗಳನ್ನು ಖರೀದಿಸಿ, ಎಚ್ಎಎಲ್ ಅನ್ನು ಸರ್ಕಾರಿ ಸ್ವಾಮ್ಯಕ್ಕೆ ಒಳಪಡಿಸಿತು. ಆ ಬಳಿಕ ಸಂಸ್ಥೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಯಿತು. ಸಮಾರಂಭದ ಮುಖ್ಯ ಅತಿಥಿ, ಮೈಸೂರು ರಾಜಮನೆತನದ ಸದಸ್ಯರು, ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತನ್ನ ಭಾಷಣದಲ್ಲಿ 1940ರಲ್ಲಿ ವಾಲ್‌ಚಂದ್ ಹೀರಾಚಂದ್ ಅವರಿಂದ ಸ್ಥಾಪನೆಗೊಂಡ ಬಳಿಕ, ಎಚ್ಎಎಲ್ ಸಾಗಿಬಂದ ಹಾದಿಯನ್ನು ಸ್ಮರಿಸಿದರು.
ಭಾರತದ ರಕ್ಷಣಾ ವಲಯಕ್ಕೆ ಎಚ್ಎಎಲ್ ನೀಡಿರುವ ಮಹತ್ತರ ಕೊಡುಗೆಗಳನ್ನು ಶ್ಲಾಘಿಸಿದ ಯದುವೀರ್ ಒಡೆಯರ್, ಎಚ್ಎಎಲ್ ಇನ್ನಷ್ಟು ಪ್ರಗತಿಯನ್ನು ಸಾಧಿಸಲು, ನಾವೀನ್ಯತೆಗಳನ್ನು ಸಾಧಿಸಲು, ಭಾರತದ ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ಎಚ್ಎಎಲ್ ಪ್ರಯತ್ನಗಳನ್ನು ಮುಂದುವರಿಸಬೇಕೆಂದು ಕರೆ ನೀಡಿದರು. ಈ ಸಮಾರಂಭದಲ್ಲಿ 'ಫ್ಲೈಟ್ಸ್ ಆಫ್ ಇನ್ಸ್ಪಿರೇಶನ್: ಎಚ್ಎಎಲ್ಸ್ ಮಹಾರತ್ನ ಸ್ಟೋರಿ' ಎಂಬ ವಿಶೇಷ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಈ ಪುಸ್ತಕ ಎಚ್ಎಎಲ್ ಸಾಗಿಬಂದ ಹಾದಿ, ಸಾಧನೆಗಳನ್ನು ಬಿಂಬಿಸಿ, ಮಹಾರತ್ನ ಸ್ಥಾನಮಾನ ಪಡೆಯಲು ಕಾರಣವಾದ ಮೈಲಿಗಲ್ಲುಗಳನ್ನು ಗುರುತಿಸಿದೆ. ಕುತೂಹಲಕಾರಿ ರೀತಿಯಲ್ಲಿ ಮೂಡಿಬಂದಿರುವ ಈ ಕೃತಿ, ಸಂಸ್ಥೆಯ ಪ್ರಗತಿ ಮತ್ತು ದೇಶಕ್ಕೆ ಅದು ನೀಡಿರುವ ಕೊಡುಗೆಗಳನ್ನು ವಿಸ್ತೃತವಾಗಿ ವಿವರಿಸಿದೆ. ಇದು ದೇಶದ ಜನರಿಗೆ ಸ್ಫೂರ್ತಿ ತುಂಬಲಿದೆ. ಎಚ್ಎಎಲ್ ಸಿಎಂಡಿ ಡಾ. ಡಿ ಕೆ ಸುನಿಲ್ ಸಂಸ್ಥೆಯ ಭವಿಷ್ಯದ ಗುರಿಗಳನ್ನು ವಿವರಿಸುತ್ತಾ, ಸಂಸ್ಥೆ ಮುಂದಿನ ದಿನಗಳಲ್ಲಿ ಜಾಗತಿಕ ಹಂತ ತಲುಪುವ ಗುರಿ ಹೊಂದಿದೆ ಎಂದರು. ಅವರು ತಂತ್ರಜ್ಞಾನ ನಿರ್ದೇಶಿತ ಮತ್ತು ಜನ ಕೇಂದ್ರಿತ ಯೋಜನೆಗಳನ್ನು ಕೈಗೊಂಡು, ಸಂಸ್ಥೆಯ ಕಾರ್ಯಾಚರಣೆಗಳನ್ನು ಮರುವಿನ್ಯಾಸಗೊಳಿಸಿ ದಕ್ಷತೆ ಹೆಚ್ಚಿಸಲಾಗುವುದು ಎಂದರು.
ಭಾರತದ ರಾಷ್ಟ್ರೀಯ ಬಾಹ್ಯಾಕಾಶ ದಿನ: ಚಂದ್ರನಂಗಳ ದಾಟಿ, ಜನಜೀವನದಲ್ಲಿ ಬದಲಾವಣೆ ತರುವ ಸಾಧನೆ
ಭವಿಷ್ಯದಲ್ಲಿ ರಫ್ತು ಹೆಚ್ಚಳಕ್ಕೆ ಉತ್ತೇಜನ ನೀಡಿ, ಎಚ್ಎಎಲ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ನೆರವಾಗಲಿದೆ. ಸಂಸ್ಥೆಯ ಮಾಜಿ ಸಿಎಂಡಿಗಳು ಎಚ್ಎಎಲ್ ಸಂಸ್ಥೆಯಲ್ಲಿನ ತಮ್ಮ ಅವಧಿಯ ಸ್ಮರಣೀಯ ಅನುಭವಗಳನ್ನು ಹಂಚಿಕೊಂಡರು. ಅವರು ಕಳೆದ ವರ್ಷಗಳಲ್ಲಿ ಎಚ್ಎಎಲ್ ಸಾಧಿಸಿದ ಪ್ರಗತಿಯನ್ನು ಶ್ಲಾಘಿಸಿದರು. ಅವರು ಎಚ್ಎಎಲ್ ಸಿಬ್ಬಂದಿಗಳಿಗೆ ಭವಿಷ್ಯದ ಸವಾಲುಗಳು ಮತ್ತು ಅವಕಾಶಗಳಿಗೆ ಸದಾ ಸಿದ್ಧವಾಗಿರುವಂತೆ ಕರೆ ನೀಡಿದರು. ಭಾರತೀಯ ಸಶಸ್ತ್ರ ಪಡೆಗಳ ಅವಶ್ಯಕತೆಗಳನ್ನು ಸೂಕ್ತ ಸಮಯದಲ್ಲಿ, ಸಮರ್ಥವಾಗಿ ಪೂರೈಸುವ ಅವಶ್ಯಕತೆಯನ್ನು ಅವರು ವಿವರಿಸಿದರು. ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಶ್ರೀ ಎ ಬಿ ಪ್ರಧಾನ್ ಅವರು ಧನ್ಯವಾದ ಸಮರ್ಪಿಸಿದರು.