ಟರ್ಕಿ, ಅಜರ್‌ಬೈಜಾನ್‌ ವಿರುದ್ಧ ಭಾರತದಲ್ಲಿ ಆಕ್ರೋಶ ವ್ಯಕ್ತವಾಗಿರೋದ್ಯಾಕೆ?

Published : May 15, 2025, 07:37 AM IST
ಟರ್ಕಿ, ಅಜರ್‌ಬೈಜಾನ್‌ ವಿರುದ್ಧ ಭಾರತದಲ್ಲಿ ಆಕ್ರೋಶ ವ್ಯಕ್ತವಾಗಿರೋದ್ಯಾಕೆ?

ಸಾರಾಂಶ

ಪಾಕಿಸ್ತಾನವನ್ನು ಬೆಂಬಲಿಸಿದ್ದಕ್ಕಾಗಿ ಟರ್ಕಿ ಮತ್ತು ಅಜರ್‌ಬೈಜಾನ್‌ ವಿರುದ್ಧ ಭಾರತದಲ್ಲಿ ಬಹಿಷ್ಕಾರದ ಕರೆ. ಪ್ರವಾಸ ರದ್ದತಿಗಳು ಹೆಚ್ಚಿವೆ ಮತ್ತು ವ್ಯಾಪಾರ ಸ್ಥಗಿತಗೊಂಡಿದೆ.

ನವದೆಹಲಿ: ಭಾರತದ ವಿರುದ್ಧದ ಸಮರದಲ್ಲಿ ಪಾಕಿಸ್ತಾನ ಬೆಂಬಲಿಸಿದ ಟರ್ಕಿ ಮತ್ತು ಅಜರ್‌ಬೈಜಾನ್‌ ವಿರುದ್ಧ ಭಾರತದಲ್ಲಿ ಬಹಿಷ್ಕಾರ ಅಭಿಯಾನ ಆರಂಭವಾಗಿದೆ. ಟರ್ಕಿ ಬದಲು ನೆರೆಯ ಗ್ರೀಸ್‌ಗೆ, ಅಜರ್‌ಬೈಜಾನ್‌ ಬದಲು ಆರ್ಮೇನಿಯಾಕ್ಕೆ ಭೇಟಿ ನೀಡಿ ಎಂದು ಜಾಲತಾಣದಲ್ಲಿ ನೆಟ್ಟಿಗರು ಕರೆ ಆರಂಭಿಸಿದ್ದಾರೆ.

ಇದಕ್ಕೆ ಭಾರೀ ಪ್ರಮಾಣದಲ್ಲಿ ಬೆಂಬಲ ವ್ಯಕ್ತವಾಗಿದ್ದು, ಈಗಾಗಲೇ ಈ ಎರಡೂ ದೇಶಗಳಿಗೆ ಪ್ರವಾಸಕ್ಕೆ ಸಿದ್ದರಾಗಿದ್ದ ಭಾರೀ ಪ್ರಮಾಣದ ಜನರು ಪ್ರವಾಸ ರದ್ದು ಮಾಡಿದ್ದಾರೆ. ಕಳೆದ ಕೆಲ ದಿನಗಳಲ್ಲಿ ಈ ದೇಶಗಳ ಪ್ರವಾಸ ರದ್ದು ಪ್ರಮಾಣದಲ್ಲಿ ಶೇ.250ರಷ್ಟು ಭಾರೀ ಏರಿಕೆ ಕಂಡುಬಂದಿದೆ ಎಂದು ಪ್ರವಾಸಿ ಸೇವಾ ಸಂಸ್ಥೆಗಳಾದ ಮೇಕ್‌ ಮೈ ಟ್ರೀಪ್‌ ಮತ್ತು ಈಸ್‌ ಮೈ ಟ್ರೀಪ್‌ ಮಾಹಿತಿ ನೀಡಿವೆ. ಇನ್ನು ಕೆಲವು ಪ್ರವಾಸೋದ್ಯಮ ಸಂಸ್ಥೆಗಳಂತೂ ಸ್ವತಃ ತಾವೇ ಈ ಎರಡೂ ದೇಶಗಳಿಗೆ ಪ್ರವಾಸಿ ಸೇವೆ ರದ್ದು ಮಾಡಿವೆ.

ವ್ಯಾಪಾರ ಸ್ಥಗಿತ
ಪಾಕಿಸ್ತಾನವನ್ನು ಬೆಂಬಲಿಸಿದ ಟರ್ಕಿಗಳಿಗೆ ಬಿಸಿ ಮುಟ್ಟಿಸುವ ಕೆಲವನ್ನು ಭಾರತೀಯ ವ್ಯಾಪಾರಿಗಳು ಈಗಾಗಲೇ ಆರಂಭಿಸಿದ್ದಾರೆ. ಪುಣೆಯ ಮಸಾಲೆ ಮತ್ತು ಡ್ರೈಫ್ರೂಟ್ಸ್‌ ಸಂಘ, ಟರ್ಕಿಯಿಂದ ಆಮದಾಗುವ ಏಪ್ರಿಕಾಟ್ ಮತ್ತು ಹೇಜಲ್‌ನಟ್‌ ಅನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದೆ.

ಸಾಹಿಬಾಬಾದ್ ಮಂಡಿ, ಘಾಜಿಯಾಬಾದ್‌, ಹಿಮಾಚಲದ ಆ್ಯಪಲ್‌ ಗ್ರೋವರ್ಸ್‌ ಸೊಸೈಟಿ ಸೇರಿದಂತೆ ಹಲವು ಹಣ್ಣಿನ ವ್ಯಾಪಾರಿಗಳು ಸಹ ಟರ್ಕಿಯ ಸೇಬು ಆಮದನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ.

ಅತ್ತ ಭಾರತದ ಅಮೃತಶಿಲೆ ಆಮದಿನಲ್ಲಿ ಶೇ.70ರಷ್ಟು ಟರ್ಕಿಯಿಂದಲೇ ಬರುತ್ತಿದ್ದರೂ ಅದನ್ನು ನಿಲ್ಲಿಸಲು ಉದಯಪುರದ ವರ್ತಕರು ನಿರ್ಧರಿಸಿದ್ದಾರೆ. ಭಾರತ ಟರ್ಕಿಯಿಂದ 14-16 ಟನ್‌ ಅಮೃತಶಿಲೆಯನ್ನು ಆಮದು ಮಾಡಿಕೊಳ್ಳುತ್ತದೆ.

2 ದೇಶಗಳ ಜತೆ ಭಾರತ ವ್ಯಾಪಾರ
2024-25ರಲ್ಲಿ ಭಾರತದಿಂದ ಟರ್ಕಿಗೆ 44 ಸಾವಿರ ಕೋಟಿ ರು. ಮೌಲ್ಯದ ವಸ್ತು ರಫ್ತಾಗಿದೆ. ಇದರಲ್ಲಿ ಖನಿಜ ಇಂಧನ, ತೈಲ, ವಿದ್ಯುತ್ ಉಪಕರಣ, ವಾಹನದ ಬಿಡಿಭಾಗಗಳು, ರಾಸಾಯನಿಕ, ಔಷಧ ಸೇರಿದೆ. ಇನ್ನು ಟರ್ಕಿಯಿಂದ ಭಾರತಕ್ಕೆ 24 ಸಾವಿರ ಕೋಟಿ ರು. ಮೌಲ್ಯದ ಸರಕು ಆಮದಾಗಿದೆ. ಅವುಗಳಲ್ಲಿ ಸೇಬು, ಅಮೃತಶಿಲೆ, ಚಿನ್ನ, ತರಕಾರಿ, ರಾಸಾಯನಿಕ, ಮುತ್ತು ಮುಖ್ಯವಾದವು. ಇದೇ ಅವಧಿಯಲ್ಲಿ ಅಜರ್‌ಬೈಜಾನ್‌ಗೆ ಭಾರತದಿಂದ 734 ಕೋಟಿ ರು. ಮೌಲ್ಯದ ವಸ್ತುಗಳು ರಫ್ತಾಗಿದೆ. ಭಾರತದಿಂದ ಅಜರ್‌ಬೈಜಾನ್‌ಗೆ ತಂಬಾಕು, ಟೀ, ಕಾಫಿ, ಪೇಪರ್‌, ಪ್ಲಾಸ್ಟಿಕ್‌ ಇತ್ಯಾದಿಗಳು ರಫ್ತಾಗುತ್ತವೆ. ಅಂತೆಯೇ, ಅಜರ್‌ಬೈಜಾನ್‌ನಿಂದ ಭಾರತಕ್ಕೆ 16 ಕೋಟಿ ರು. ಮೌಲ್ಯದ ಸರಕು ಆಮದಾಗಿದ್ದು, ಇದರಲ್ಲಿ ಪ್ರಾಣಿಗಳ ಆಹಾರ, ಸಾವಯವ ರಾಸಾಯನಿಕ, ತೈಲ, ಸುಗಂಧ ದ್ರವ್ಯ, ಚರ್ಮ ಇತ್ಯಾದಿ ಸೇರಿದೆ.

ಟರ್ಕಿ, ಅಜರ್‌ಬೈಜಾನ್‌ ದುಸ್ಸಾಹಸ
2023ರ ಫೆಬ್ರವರಿಯಲ್ಲಿ ಭೂಕಂಪದಿಂದ ತತ್ತರಿಸಿದ್ದ ಟರ್ಕಿಗೆ ಭಾರತ ‘ಆಪರೇಷನ್‌ ದೋಸ್ತ್‌’ ಹೆಸರಿನಲ್ಲಿ ನೆರವಾಗಿತ್ತು. ಆದರೆ ಅದನ್ನೆಲ್ಲ ಮರೆತು ಇದೀಗ ಉಗ್ರರ ಸ್ವರ್ಗ ಪಾಕಿಸ್ತಾನದ ಬೆನ್ನಿಗೆ ನಿಲ್ಲುವ ಮೂಲಕ ಟರ್ಕಿ ಭಾರತಕ್ಕೆ ಮಿತ್ರದ್ರೋಹವೆಸಗಿದೆ. ಸಾಲದ್ದಕ್ಕೆ, ಭಾರತದ ವಿರುದ್ಧ ಬಳಸಲು ತನ್ನ ಡ್ರೋನ್‌ಗಳನ್ನೂ ಪಾಕಿಸ್ತಾನಕ್ಕೆ ನೀಡಿದೆ. ಪಹಲ್ಗಾಂ ದಾಳಿಗೆ ಪ್ರತ್ಯುತ್ತರವಾಗಿ ಪಾಕ್‌ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರಲದಲ್ಲಿರುವ ಉಗ್ರನೆಲೆಗಳ ಮೇಲೆ ಭಾರತ ನಡೆಸಿದ ಪ್ರಹಾರವನ್ನು ಟರ್ಕಿ ಮತ್ತು ಅಜರ್ಬೈಜಾನ್‌ ರಾಷ್ಟ್ರಗಳು ಖಂಡಿಸಿದ್ದವು.

ಟರ್ಕಿ, ಅಜೆರ್ಬೈಜನ್ ಸ್ನೇಹವೇಕೆ?:
ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರ ಒಟ್ಟೋಮನ್ ಸಾಮ್ರಾಜ್ಯದ ಆಧುನಿಕ ಆವೃತ್ತಿಯನ್ನು ನಿರ್ಮಿಸುವ ಮೂಲಕ ಮತ್ತು ಇಸ್ಲಾಮಿಕ್ ಜಗತ್ತನ್ನು ಆಳುವ ಕನಸಿಗೆ ಪಾಕಿಸ್ತಾನ ನೀರೆರೆದುಕೊಂಡು ಬಂದಿದೆ. ಹಾಗಾಗಿ ಸಹಜವಾಗಿಯೇ ಟರ್ಕಿ ಪಾಕಿಸ್ತಾನದ ಬೆಂಬಲಕ್ಕೆ ನಿಂತಿದೆ. ಇನ್ನು, ತನ್ನ ವೈರಿ ದೇಶ ಅರ್ಮೇನಿಯಾಕ್ಕೆ ಭಾರತ ಶಸ್ತ್ರಾಸ್ತ್ರ ಪೂರೈಸುತ್ತಿದೆ ಎಂಬ ಕಾರಣಕ್ಕೆ ಅಜರ್‌ಬೈಜಾನ್ಗೆ ಕೋಪವಿದ್ದು, ಪಾಕ್‌ ಕಡೆ ಮೈತ್ರಿ ಹಸ್ತ ಚಾಚಿದೆ. ಜೊತೆಗೆ ಅದು ಟರ್ಕಿಯೊಂದಿಗೆ ರಾಜತಾಂತ್ರಿಕ, ಆರ್ಥಿಕ, ಸಾಂಸ್ಕೃತಿಕ ಸಂಬಂಧವನ್ನು ಹೊಂದಿದೆ. ಹಾಗಾಗಿ ಪಾಕಿಸ್ತಾನವನ್ನು ಬೆಂಬಲಿಸುವ ಅನಿವಾರ್ಯತೆ ಹೊಂದಿದೆ. ಅಲ್ಲದೆ, 2020ರಲ್ಲಿ ಅರ್ಮೆನಿಯಾ ವಿರುದ್ಧ ಯುದ್ಧ ನಡೆದಾಗ ಪಾಕಿಸ್ತಾನ ಅಜೆರ್ಬೈಜನ್‌ಗೆ ಬೆಂಬಲ ಘೋಷಿಸಿತ್ತು. ಸೈನಿಕ ಸಹಾಯ ನೀಡುವುದಾಗಿಯೂ ತಿಳಿಸಿತ್ತು.

ಬೆಂಗಳೂರು ಏರ್‌ಪೋರ್ಟಲ್ಲಿ ಟರ್ಕಿ ಕಂಪನಿಯಿಂದ ಸೇವೆ
ಬೆಂಗಳೂರಿನಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ 1 ಮತ್ತು 2ನೇ ಟರ್ಮಿನಲ್‌ಗಳಲ್ಲಿ ಟರ್ಕಿ ಮೂಲದ ಕಂಪನಿಯಾದ ಸೆಲೆಬಿ, ಬ್ರಿಡ್ಜ್ ಮೌಂಟೆಡ್ ಸಲಕರಣೆಗಳ ಸ್ಥಾಪಿನೆ ಮತ್ತು ನಿರ್ವಹಣೆಯ ಸೇವೆಯನ್ನು 2022ರಿಂದ ಒದಗಿಸುತ್ತಿದೆ. ಈ ಕಂಪನಿ ದೇಶದ ಇನ್ನೂ ಕೆಲ ವಿಮಾನ ನಿಲ್ದಾಣಗಳಿಗೂ ಈ ಸೇವೆಯನ್ನು ನೀಡುತ್ತಿದೆ.

ಟರ್ಕಿ ವಿವಿ ಜತೆಗಿನ ಜೆಎನ್‌ಯು ಎಂಒಯು ರದ್ದು
ಪಾಕ್‌ ಪರವಾಗಿ ನಿಂತು ಎಲ್ಲಾ ಕ್ಷೇತ್ರಗಳಲ್ಲಿ ಭಾರತದಿಂದ ಪೆಟ್ಟು ತಿನ್ನುತ್ತಿರುವ ಟರ್ಕಿಯ ಇನೋನು ವಿಶ್ವವಿದ್ಯಾಲಯದ ಜತೆಗಿನ ಶೈಕ್ಷಣಿಕ ತಿಳುವಳಿಕೆ ಪತ್ರ(ಎಂಒಯು)ವನ್ನು ಜವಾಹರಲಾಲ್‌ ವಿವಿ, ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ ರದ್ದುಪಡಿಸಿದೆ. ಅಂತರ್ ಸಾಂಸ್ಕೃತಿಕ ಸಂಶೋಧನೆ ಮತ್ತು ಸಹಯೋಗವನ್ನು ಹೆಚ್ಚಿಸುವ ಸಲುವಾಗಿ ಅಧ್ಯಾಪಕರ ಮತ್ತು ವಿದ್ಯಾರ್ಥಿಗಳ ವಿನಿಮಯ ಸೇರಿದಂತೆ ಇನೋನು ವಿವಿ ಜತೆ ಜೆಎನ್‌ಯು 3 ವರ್ಷದ ಹಿಂದೆ ಎಂಒಯುಗೆ ಸಹಿ ಹಾಕಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..