ಡ್ರೈವಿಂಗ್‌ ಟೆಸ್ಟ್‌ ಇಲ್ಲದೆ ಇನ್ನು ಡಿಎಲ್‌?: ಕೇಂದ್ರದಿಂದ ಕರಡು ಅಧಿಸೂಚನೆ

By Suvarna News  |  First Published Feb 7, 2021, 8:02 AM IST

ಡ್ರೈವಿಂಗ್‌ ಟೆಸ್ಟ್‌ ಇಲ್ಲದೆ ಇನ್ನು ಡಿಎಲ್‌?| ನಿರ್ದಿಷ್ಟ ಕೇಂದ್ರಗಳಲ್ಲಿ ತರಬೇತಿ ಪಡೆದವರಿಗೆ ಪರೀಕ್ಷೆ ಇಲ್ಲ| ಕೇಂದ್ರದಿಂದ ಕರಡು ಅಧಿಸೂಚನೆ| ಆಕ್ಷೇಪಣೆಗೆ ಆಹ್ವಾನ


ನವದೆಹಲಿ(ಫೆ.07): ವಾಹನ ಚಾಲನಾ ಪರವಾನಗಿ ಪಡೆಯಲು ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ)ಗಳಿಗೆ ಸೇರಿದ ಕಠಿಣ ಪಥದಲ್ಲಿ ವಾಹನ ಓಡಿಸಬೇಕು ಎಂಬ ನಿಯಮವನ್ನು ಶೀಘ್ರದಲ್ಲೇ ಸಡಿಲಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ನಿರ್ದಿಷ್ಟತರಬೇತಿ ಕೇಂದ್ರಗಳಲ್ಲಿ ನುರಿತ ತರಬೇತಿ ಪಡೆದ ನಾಗರಿಕರಿಗೆ ಆರ್‌ಟಿಒಗಳು ನಡೆಸುವ ಚಾಲನಾ ಪರೀಕ್ಷೆಯಿಂದ ವಿನಾಯಿತಿ ನೀಡಲು ಹೊರಟಿದೆ. ಈ ಸಂಬಂಧ ಕರಡು ಅಧಿಸೂಚನೆಯೊಂದನ್ನು ಪ್ರಕಟಿಸಿದ್ದು, ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಿದೆ.

ರಸ್ತೆ ಸಾರಿಗೆ ಸಚಿವಾಲಯವು 2025ರೊಳಗೆ ಅಪಘಾತಗಳ ಸಂಖ್ಯೆಯನ್ನು ಅರ್ಧದಷ್ಟುಕಡಿಮೆ ಮಾಡಲು ಮುಂದಾಗಿದೆ. ಇತ್ತೀಚೆಗೆ ನಡೆದ ರಸ್ತೆ ಸುರಕ್ಷತಾ ಮಂಡಳಿ ಸಭೆಯಲ್ಲಿ ಮಾತನಾಡಿದ್ದ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು, ರಸ್ತೆ ಅಪಘಾತ ತಗ್ಗಿಸುವುದು ಹಂತಹಂತದ ಪ್ರಕ್ರಿಯೆಯಲ್ಲ. ತಕ್ಷಣವೇ ಇದನ್ನು ಅತ್ಯುನ್ನತ ಆದ್ಯತೆಯಾಗಿ ಪರಿಗಣಿಸಬೇಕು ಎಂದು ಹೇಳಿದ್ದರು. ಸ್ವೀಡನ್‌ನಲ್ಲಿ ಅಪಘಾತಗಳ ಬಗ್ಗೆ ಶೂನ್ಯ ಸಹಿಷ್ಣುತೆ ಇದೆ ಎಂದೂ ಉದಾಹರಣೆ ನೀಡಿದ್ದರು.

Latest Videos

undefined

ಯೋಜನೆಯ ಉದ್ದೇಶವೇನು?

ಚಾಲನಾ ತರಬೇತಿ ಕೇಂದ್ರಗಳಿಗೆ ಸರ್ಕಾರದಿಂದ ಮಾನ್ಯತೆ ನೀಡುವುದು. ಇಂತಹ ಕೇಂದ್ರಗಳಲ್ಲಿ ತರಬೇತಿ ಪಡೆಯುವ ನಾಗರಿಕರಿಗೆ ಆರ್‌ಟಿಒ ಅಧಿಕಾರಿಗಳು ನಡೆಸುವ ಪರೀಕ್ಷೆಯಿಂದ ವಿನಾಯಿತಿ ನೀಡುವುದಾಗಿದೆ. ಇದರಿಂದ ವಿಶೇಷ ತರಬೇತಿ ಪಡೆದ ಚಾಲಕರು ಸೃಷ್ಟಿಯಾಗುತ್ತಾರೆ. ತನ್ಮೂಲಕ ರಸ್ತೆ ಅಪಘಾತಗಳು ತನ್ನಿಂತಾನೆ ತಗ್ಗುತ್ತವೆ ಎಂಬುದು ಸರ್ಕಾರದ ಆಶಯ.

ಯಾರಿಗೆ ಅವಕಾಶ?

ಹಾಲಿ ವಾಹನ ಚಾಲನೆ ಕಲಿಸಿಕೊಡಲು ದೇಶಾದ್ಯಂತ ಡ್ರೈವಿಂಗ್‌ ಸ್ಕೂಲ್‌ಗಳು ಇವೆ. ಅಂತಹ ಕೇಂದ್ರಗಳ ಮೂಲಸೌಕರ್ಯ ಪರಿಶೀಲಿಸಿ ಅಥವಾ ಹೊಸ ಕೇಂದ್ರಗಳಿಗೆ ಕೇಂದ್ರ ಸರ್ಕಾರ ಮಾನ್ಯತೆ ನೀಡಲಿದೆ. ಮಾನ್ಯತೆ ಪಡೆದ ಕೇಂದ್ರಗಳಲ್ಲಿ ವಾಹನ ಚಾಲನೆ ಕಲಿಯುವ ನಾಗರಿಕರಿಗೆ ಆರ್‌ಟಿಒ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ. ಮಿಕ್ಕಂತೆ, ಮಾನ್ಯತೆ ಪಡೆಯದ ಕೇಂದ್ರಗಳಲ್ಲಿ ವಾಹನ ಚಾಲನೆ ಕಲಿಯುವವರಿಗೆ ಪರೀಕ್ಷೆ ಮುಂದುವರಿಯಲಿದೆ ಎಂದು ಹೇಳಲಾಗಿದೆ.

ತರಬೇತಿ ಕೇಂದ್ರ ಹೀಗಿರಬೇಕು

ವಾಹನ ಚಾಲನೆ ಕಲಿಕಾ ಕೇಂದ್ರ ಎಂಬುದು ಕೌಶಲ್ಯಾಭಿವೃದ್ಧಿ ಸೌಲಭ್ಯ. ಅಲ್ಲಿ ಭೂಮಿ, ಕಟ್ಟಡ, ಚಾಲನಾ ಪರೀಕ್ಷಾ ಪಥ, ವಾಹನ, ಸಿಮ್ಯುಲೇಟರ್‌, ವರ್ಕ್ಶಾಪ್‌ ಮತ್ತಿತರೆ ಮೂಲಸೌಕರ್ಯಗಳು ಇರಬೇಕಾಗುತ್ತದೆ ಎಂದು ರಸ್ತೆ ಸಾರಿಗೆ ಸಚಿವಾಲಯ ತಿಳಿಸಿದೆ. ಜ.29ರಂದು ಕರಡು ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಇದೀಗ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲಾಗಿದೆ.

click me!