ಪ್ರಾಣಿ ಹಿಂಸೆ ಮಾಡಿದರೆ 5 ವರ್ಷ ಜೈಲು: ಈವರೆಗೆ ಕೇವಲ 50 ರು. ದಂಡ ಇತ್ತು!

Published : Feb 07, 2021, 07:50 AM IST
ಪ್ರಾಣಿ ಹಿಂಸೆ ಮಾಡಿದರೆ 5 ವರ್ಷ ಜೈಲು: ಈವರೆಗೆ ಕೇವಲ 50 ರು. ದಂಡ ಇತ್ತು!

ಸಾರಾಂಶ

ಪ್ರಾಣಿ ಹಿಂಸೆ ಮಾಡಿದರೆ 5 ವರ್ಷ ಜೈಲು| ಜತೆಗೆ 75 ಸಾವಿರ ರು. ದಂಡ| ಕೇಂದ್ರದಿಂದ ಕರಡು ಸಿದ್ಧ| ಈವರೆಗೆ ಕೇವಲ 50 ರು. ದಂಡ ಇತ್ತು!| ಹೆಚ್ಚಿನ ದಂಡ, ಶಿಕ್ಷೆ: ರಾಜೀವ್‌ ಚಂದ್ರಶೇಖರ್‌ ಪ್ರಶ್ನೆಗೆ ಕೇಂದ್ರ ಸಚಿವ ಗಿರಿರಾಜ್‌ ಉತ್ತರ

ನವದೆಹಲಿ(ಫೆ.07): ಪ್ರಾಣಿಗಳನ್ನು ಹಿಂಸಿಸಿದರೆ 50 ರು. ದಂಡ ತೆತ್ತು ಪಾರಾಗುವ ಕಾಲ ದೂರವಾಗುವುದು ಸನ್ನಿಹಿತವಾಗಿದೆ. 60 ವರ್ಷ ಹಿಂದಿನ ಪ್ರಾಣಿ ಹಿಂಸೆ ತಡೆ ಕಾಯ್ದೆಗೆ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಸಜ್ಜಾಗಿದ್ದು, ಇದರ ಪ್ರಕಾರ ಪ್ರಾಣಿಗಳನ್ನು ಹಿಂಸಿಸಿ ಸಾವಿಗೆ ಕಾರಣರಾದವರಿಗೆ 5 ವರ್ಷದವರೆಗೆ ಜೈಲು ಶಿಕ್ಷೆಯಾಗಲಿದೆ. ಜತೆಗೆ, 75 ಸಾವಿರ ರು.ವರೆಗೆ ದಂಡ ಅಥವಾ ಪ್ರಾಣಿಯ ಬೆಲೆಯ 3 ಪಟ್ಟು ದಂಡ ಬೀಳಲಿದೆ. ಸರ್ಕಾರವು ಹೊಸ ತಿದ್ದುಪಡಿ ಕಾಯ್ದೆಯ ಕರಡು ಸಿದ್ಧಪಡಿಸಿದೆ. ಶೀಘ್ರದಲ್ಲೇ ಇದನ್ನು ಬಿಡುಗಡೆ ಮಾಡಿ ಸಾರ್ವಜನಿಕರ ಅನಿಸಿಕೆಗೆ ಆಹ್ವಾನಿಸಲಾಗುತ್ತದೆ.

3 ವಿಭಾಗವಾರು ಪ್ರಾಣಿಗಳ ವಿಂಗಡಣೆ

ಕರಡಿನಲ್ಲಿ, ‘ಸಣ್ಣ ಗಾಯ, ಅಂಗವೈಕಲ್ಯಕ್ಕೆ ಕಾರಣವಾಗುವ ಹಿಂಸೆ ಹಾಗೂ ಹಿಂಸೆಯಿಂದ ಪ್ರಾಣಿಯ ಸಾವು’- ಎಂಬ 3 ವಿಭಾಗಗಳಲ್ಲಿ ಪ್ರಾಣಿ ಹಿಂಸೆಯನ್ನು ವರ್ಗೀಕರಿಸಲಾಗಿದೆ. ಹಿಂಸೆಯ ತೀವ್ರತೆಗೆ ಅನುಗುಣವಾಗಿ ಕನಿಷ್ಠ 750 ರು.ನಿಂದ 75 ಸಾವಿರ ರು.ವರೆಗೆ ದಂಡ ಬೀಳಲಿದೆ ಹಾಗೂ 5 ವರ್ಷದವರೆಗೆ ಜೈಲು ಸಜೆ ವಿಧಿಸಲಾಗುತ್ತದೆ.

ಈಗಿನ ಕಾಯ್ದೆಯ ಪ್ರಕಾರ, ಪ್ರಾಣಿಗಳನ್ನು ಹೊಡೆದರೆ, ಒದ್ದರೆ, ಚಿತ್ರಹಿಂಸೆ ನೀಡಿದರೆ, ಹಸಿವಿನಿಂದ ಬಳಲಿಸಿದರೆ- ಕೇವಲ 10 ರು.ನಿಂದ 50 ರು.ವರೆಗೆ ದಂಡ ವಿಧಿಸಲಾಗುತ್ತದೆ. ಕ್ರೂರತೆಗೆ ಅನುಗುಣವಾಗಿ ವಿವಿಧ ರೀತಿಯ ಶಿಕ್ಷೆ ಇಲ್ಲ. ಕಾಯ್ದೆಯಲ್ಲಿ, ಮನುಷ್ಯನ ಹೊರತಾದ ಯಾವುದೇ ಜೀವಿಯನ್ನು ಪ್ರಾಣಿ ಎಂದು ಪರಿಗಣಿಸಲಾಗಿದೆ.

ಸಂಸದ ರಾಜೀವ್‌ ಚಂದ್ರಶೇಖರ್‌ ಪ್ರಶ್ನೆಗೆ ಉತ್ತರ

ರಾಜ್ಯಸಭೆಯಲ್ಲಿನ ಕರ್ನಾಟಕದ ಬಿಜೆಪಿ ಸಂಸದ ರಾಜೀವ್‌ ಚಂದ್ರಶೇಖರ್‌ ಅವರು ಕೇಳಿದ ಪ್ರಶ್ನೆಗೆ ಮಾಹಿತಿ ನೀಡಿರುವ ಪಶುಸಂಗೋಪನೆ ಸಚಿವ ಗಿರಿರಾಜ್‌ ಸಿಂಗ್‌, ‘1960ರ ಪ್ರಾಣಿ ಹಿಂಸೆ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕಿದೆ. ಕರಡು ರೂಪಿಸಲಾಗುತ್ತಿದ್ದು, ಹೆಚ್ಚಿನ ದಂಡ ಹಾಗೂ ಜೈಲು ಶಿಕ್ಷೆ ವಿಧಿಸುವ ಉದ್ದೇಶವಿದೆ’ ಎಂದು ಹೇಳಿದ್ದಾರೆ. ಕೇರಳದಲ್ಲಿ ಇತ್ತೀಚೆಗೆ ಅನಾನಸ್‌ ಹಣ್ಣಿನಲ್ಲಿ ದುಷ್ಕರ್ಮಿಗಳು ಇರಿಸಿದ್ದ ಪಟಾಕಿಯು ಆನೆಯ ಬಾಯಿಯಲ್ಲಿ ಸಿಡಿದ ಪರಿಣಾಮ ಆನೆ ಮೃತಪಟ್ಟಿತ್ತು. ಈ ಕುರಿತಂತೆ ರಾಜೀವ್‌ ಚಂದ್ರಶೇಖರ್‌ ಪ್ರಶ್ನೆ ಕೇಳಿದ್ದರು.

ಕರ್ನಾಟಕ ನಂ.4:

ಕಳೆದ 5 ವರ್ಷದಲ್ಲಿ ಪ್ರಾಣಿ ಹಿಂಸೆ ನಡೆದ ಪ್ರಕರಣಗಳ ವಿಚಾರಣೆ ಅತಿ ಹೆಚ್ಚು (52) ತಮಿಳುನಾಡಿನಲ್ಲಿ ನಡೆಯುತ್ತಿವೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ (43), ಕೇರಳ (15), ಕರ್ನಾಟಕ (14), ತೆಲಂಗಾಣ (13) ಹಾಗೂ ರಾಜಸ್ಥಾನ (12) ಇವೆ. ಒಟ್ಟಾರೆ 316 ಪ್ರಕರಣಗಳ ವಿಚಾರಣೆ ಕೋರ್ಟ್‌ಗಳಲ್ಲಿ ನಡೆದಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ಭಾರತ-ಆಫ್ರಿಕಾ ಫೈನಲ್ ಫೈಟ್ - ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌