
ನವದೆಹಲಿ (ಮೇ.28): ಕೊರೋನಾ ಸೋಂಕಿತರಲ್ಲಿ ಕಾಣಿಸಿಕೊಳ್ಳುತ್ತಿರುವ ಬ್ಲ್ಯಾಕ್, ವೈಟ್ ಮತ್ತು ಯಲ್ಲೋ ಫಂಗಸ್‌ನ ಅಡ್ಡ ಪರಿಣಾಮಗಳ ಕುರಿತಾಗಿ ನಾನಾ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ, ವೈಟ್ ಫಂಗಸ್, ಮಹಿಳಾ ರೋಗಿಯೊಬ್ಬರ ಕರುಳಿನಲ್ಲಿ ಹಲವು ರಂಧ್ರಗಳನ್ನು ಮಾಡಿರುವ ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಬಿಳಿಯ ಫಂಗಸ್‌ನಿಂದಾಗಿ ಒಂದು- ಎರಡು ರಂಧ್ರಗಳು ಕಾಣಿಸಿಕೊಂಡಿದ್ದ ಪ್ರಕರಣಗಳು ವರದಿಯಾಗಿದ್ದವಾದರೂ, ಇಷ್ಟೊಂದು ಪ್ರಮಾಣದಲ್ಲಿ ರಂಧ್ರ ಪತ್ತೆ ಇದೇ ಮೊದಲು ಎಂದು ಶ್ರೀ ಗಂಗಾರಾಮ್ ಆಸ್ಪತ್ರೆಯ ಡಾ.ಅನಿಲ್ ಅರೋರಾ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಡಾ.ಅರೋರಾ, ‘ಮೇ 13ರಂದು ತೀವ್ರ ಹೊಟ್ಟೆನೋವು, ವಾಂತಿ, ಮಲಬದ್ಧತೆಯಿಂದಾಗಿ 49 ವರ್ಷ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರು. ಸಿ.ಟಿ. ಸ್ಕ್ಯಾನ್ ವೇಳೆ ಹೊಟ್ಟೆಯ ಭಾಗದಲ್ಲಿ ಗಾಳಿ ಮತ್ತು ಕಿಬ್ಬೊಟ್ಟೆಯ ಭಾಗದಲ್ಲಿ ದ್ರವ ಪದಾರ್ಥ ಕಂಡುಬಂದಿತ್ತು. ಇದು ಸಣ್ಣ ಕರುಳಿನ ಭಾಗದಲ್ಲಿ ರಂಧ್ರವಾಗಿರುವುದರ ಸುಳಿವು ನೀಡಿತ್ತು. ಕೂಡಲೇ ಮಹಿಳೆಯ ಹೊಟ್ಟೆಗೆ ಪೈಪ್ ಹಾಕಿ ದ್ರವವನ್ನು ಹೊರಗೆ ತೆರೆಯಲಾಗಿತ್ತು. ಮರುದಿನವೇ ಆಕೆಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.
ದಾಳಿ ಇಟ್ಟಿದೆ ಯೆಲ್ಲೋ ಫಂಗಸ್: ಕಪ್ಪು, ಬಿಳಿ ಶಿಲೀಂಧ್ರಕ್ಕಿಂತಲೂ ಡೇಂಜರ್! ..
ಈ ವೇಳೆ ಆಕೆಯ ಅನ್ನನಾಳದ ಕೆಳ ತುದಿಯಲ್ಲಿ ರಂಧ್ರವಾಗಿರುವುದು ಕಂಡುಬಂದಿತ್ತು. ಅಲ್ಲದೆ ಸಣ್ಣ ಕರುಳಿನ ಸಣ್ಣ ಭಾಗವೊಂದು ಗ್ಯಾಂಗ್ರಿನ್‌ಗೆ ತುತ್ತಾಗಿದ್ದು ಕಂಡುಬಂದಿತ್ತು. ಜೊತೆಗೆ ಹೊಟ್ಟೆಯ ಕೆಲ ಭಾಗದಲ್ಲಿ ಸಣ್ಣ ಸಣ್ಣ ಗಾಯದಂಥ ಗುರುತುಗಳಿದ್ದು, ಒಂದೆಡೆಯಿಂದ ಸಣ್ಣ ಪ್ರಮಾಣದಲ್ಲಿ ದ್ರವ ಸೋರಿಕೆಯಾಗುತ್ತಿದ್ದದು ಗೋಚರಿಸಿತ್ತು. ತಕ್ಷಣವೇ ರಂಧ್ರಗಳನ್ನು ಅತ್ಯಂತ ಕ್ಲಿಷ್ಟಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸಿ, ಸಣ್ಣ ಕರುಳಿನ ಭಾಗವೊಂದನ್ನು ಬಯಾಪ್ಸಿಗೆ ಕಳುಹಿಸಲಾಗಿತ್ತು. ಅದರ ವರದಿಯಲ್ಲಿ ವೈಟ್ ಫಂಗಸ್‌ನಿಂದಾಗಿ ಸಣ್ಣಕರುಳಿನ ಗೋಡೆಯಲ್ಲಿ ಗಂಭೀರ ಪ್ರಮಾಣದ ಹುಣ್ಣು ಮತ್ತು ರಂಧ್ರವಾಗಿರುವುದು ಖಚಿತವಾಗಿತ್ತು ಎಂದು ತಿಳಿಸಿದ್ದಾರೆ.
ನಂತರ ಆಕೆಗೆ ಸೂಕ್ತ ಚಿಕಿತ್ಸೆ ನೀಡಿದ ಬಳಿಕೆ ಆಕೆ ಚೇತರಿಸಿಕೊಂಡಿದ್ದರು. ಆದರೆ ಮತ್ತೆ ಆಕೆಯಲ್ಲಿ ಸಮಸ್ಯೆ ಕಾಣಿಸಿಕೊಂಡ ಪರಿಣಾಮ 2ನೇ ಬಾರಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಇದೀಗ ಆಕೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಡಾ.ಅರೋರಾ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ