20 ದಶಕಗಳ ಬಳಿಕ ನೆರೆಮನೆಗೆ ಉಗ್ರರು: ಭಾರತಕ್ಕೇನು ಆತಂಕ?

By Kannadaprabha NewsFirst Published Aug 17, 2021, 7:53 AM IST
Highlights

* 20 ದಶಕಗಳ ಬಳಿಕ ತಾಲಿಬಾನ್‌ ತೆಕ್ಕೆಗೆ ಆಫ್ಘನ್‌

* ನೆರೆಮನೆಗೆ ಉಗ್ರರು, ಭಾರತಕ್ಕೇನು ಆತಂಕ

* ಉಗ್ರರಿಗೆ ಚೀನಾ, ಪಾಕ್‌ ಬೆಂಬಲ

ನವದೆಹಲಿ(ಆ.17): 2 ದಶಕಗಳ ಬಳಿಕ ಅಷ್ಘಾನಿಸ್ತಾನವು ಮರಳಿ ತಾಲಿಬಾನ್‌ ಉಗ್ರರ ವಶವಾದ ಬೆನ್ನಲ್ಲೇ, ನೆರೆಯ ದೇಶವಾದ ಭಾರತದಲ್ಲೂ ಆತಂಕ ಸೃಷ್ಟಿಯಾಗಿದೆ. ಈ ಬೆಳವಣಿಗೆಯಿಂದ ತಕ್ಷಣಕ್ಕೆ ಭಾರತಕ್ಕೆ ಯಾವುದೇ ಅಪಾಯವಿಲ್ಲವಾದರೂ, ಉಗ್ರರಿಗೆ ಚೀನಾ ಮತ್ತು ಪಾಕಿಸ್ತಾನದ ಬೆಂಬಲ ಸಿಕ್ಕಿರುವುದು ಮುಂದಿನ ದಿನಗಳಲ್ಲಿ ಭಾರತಕ್ಕೂ ಅಪಾಯದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಆಷ್ಘಾನಿಸ್ತಾನದಲ್ಲಿ ಶಾಂತಿ ಮರುಸ್ಥಾಪನೆ ನಿಟ್ಟಿನಲ್ಲಿ 2 ದಶಕಗಳಿಂದ ಶ್ರಮಿಸಿದ್ದ ಭಾರತ, ಇದೀಗ ಆ ದೇಶವನ್ನು ಹೊಸ ದೃಷ್ಟಿಕೋನದಿಂದ ನೋಡಬೇಕಿದೆ. ಅಲ್ಲಿನ ಪ್ರತಿ ಬೆಳವಣಿಗೆಯನ್ನು ತನ್ನ ದೃಷ್ಟಿಕೋನದಲ್ಲಿ ಅವಲೋಕಿಸಬೇಕಿದೆ. ಅಷ್ಟಕ್ಕೂ ಭಾರತಕ್ಕೇಕೆ ಆತಂಕ ಎಂಬುದರ ನೋಟ ಇಲ್ಲಿದೆ.

Video: ಸ್ಮಶಾನಗಳ ಸಾಮ್ರಾಜ್ಯ ಅಫ್ಘಾನ್: ಕಾಬೂಲ್ ಏರ್‌ಪೋರ್ಟ್‌ನಲ್ಲಿ ಶವವಾದ ನಾಗರಿಕರು!

ಭಾರತದ ಹೂಡಿಕೆಗೆ ಅತಂತ್ರ

ಕಳೆದ 2 ದಶಕಗಳಿಂದ ಅಷ್ಘಾನಿಸ್ತಾನದಲ್ಲಿ ಕಟ್ಟಡಗಳು, ಶಿಕ್ಷಣ, ವೈದ್ಯಕೀಯ, ಕೃಷಿ ಮತ್ತು ವಿದ್ಯುತ್‌ ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಬಹಳಷ್ಟುಹೂಡಿಕೆ ಮಾಡಿದೆ. ಭಾರತ ಸುಮಾರು 2 ಲಕ್ಷ ಕೋಟಿ ರು. ಹಣವನ್ನು ಈವರೆಗೆ ಹೂಡಿಕೆ ಮಾಡಿದೆ. ಪ್ರಸ್ತುತ ಭಾರತ ಕಾಬೂಲ್‌ ನದಿಗೆ ಶಹ್‌ತೂಟ್‌ ಅಣೆಕಟ್ಟು ನಿರ್ಮಿಸುತ್ತಿದೆ. ಬಹಳಷ್ಟುಭಾರತೀಯರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗ ಅಷ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡಿರುವುದರಿಂದ ಈ ಯೋಜನೆಗಳು ಅರ್ಧಕ್ಕೆ ನಿಂತು ಹೋಗಬಹುದು. ಭಾರತದ ಹೂಡಿಕೆ ಸಂಪೂರ್ಣ ನಷ್ಟವಾಗುವ ಸಾಧ್ಯತೆ ಇದೆ.

ಭಾರತೀಯರ ರಕ್ಷಣೆ

ಅಷ್ಘಾನಿಸ್ತಾನದಲ್ಲಿ ವಾಸಿಸುತ್ತಿರುವ ಭಾರತೀಯರ ರಕ್ಷಣೆ ಮಾಡುವುದು ಭಾರತದ ಆದ್ಯತೆಯಾಗಲಿದೆ. ಜಲಾಲಾಬಾದ್‌, ಕಂದಹಾರ್‌, ಹೆರಾತ್‌ ಮುಂತಾದ ಕಡೆ ವಾಸಿಸುತ್ತಿರುವ ಭಾರತೀಯರನ್ನು ರಕ್ಷಿಸುವ ಕೆಲಸ ಮಾಡಬೇಕಾಗಿದೆ. 2200ಕ್ಕೂ ಹೆಚ್ಚು ಭಾರತೀಯ ನಾಗರೀಕರನ್ನು ಪ್ರಸ್ತುತ ತಾಲಿಬಾನಿಗಳು ಹಿಡಿತದಲ್ಲಿದ್ದಾರೆ. ಇಲ್ಲಿಯವರೆಗೂ ಭಾರತೀಯರನ್ನು ರಕ್ಷಿಸುವುದಾಗಿ ತಾಲಿಬಾನಿಗಳು ಹೇಳಿಲ್ಲ.

ಸ್ಥಳವಿಲ್ಲದಿದ್ದರೂ ವಿಮಾನವೇರಿದ ಅಫ್ಘನ್ನರು: ಟೇಕ್‌ ಆಫ್ ಆಗ್ತಿದ್ದಂತೆಯೇ ಮೂವರು ಕೆಳಕ್ಕೆ!

ಉಗ್ರವಾದಕ್ಕೆ ನೆರವು

ಈಗಾಗಲೇ 500ಕ್ಕೂ ಹೆಚ್ಚು ಅಲ್‌ ಖೈದಾ ಉಗ್ರಗಾಮಿಗಳಿಗೆ ತಾಲಿಬಾನಿಗಳು ಆಶ್ರಯ ನೀಡಿದ್ದಾರೆ. ಅಂತಾರಾಷ್ಟ್ರೀಯ ಉಗ್ರಗಾಮಿ ಸಂಘಟನೆಗಳಾದ ಲಷ್ಕರ್‌-ಎ-ತೋಯ್ಬಾ, ಅಲ್‌-ಖೈದಾ, ಹಕ್ಕಾನಿ ಗುಂಪುಗಳು ಇನ್ನೂ ಬೆಳೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಕಾಶ್ಮೀರದಲ್ಲಿ ಆಕ್ರಮಣ ನಡೆಸುತ್ತಿರುವ ಉಗ್ರಗಾಮಿಗಳಿಗೆ ಮತ್ತಷ್ಟುತರಬೇತಿ ನೀಡುವ ಸಾಧ್ಯತೆ ಇದೆ.

ಕಾಶ್ಮೀರಕ್ಕೂ ಆತಂಕ

ಕಾಶ್ಮೀರದಲ್ಲಿ ನಡೆಯುತ್ತಿದ್ದ ಉಗ್ರಗಾಮಿ ಚಟುವಟಿಕೆಗಳನ್ನು ಅಷ್ಘಾನಿಸ್ತಾನದಲ್ಲಿ ಕುಳಿತು ಕೆಲವರು ನಿರ್ವಹಿಸುತ್ತಿದ್ದರು. ಈಗ ಅಷ್ಘಾನಿಸ್ತಾನ ತಾಲಿಬಾನಿಗಳ ವಶವಾಗಿರುವುದರಿಂದ ಉಗ್ರಗಾಮಿಗಳಿಗೆ ಮತ್ತಷ್ಟುಅನುಕೂಲ ಉಂಟಾಗಲಿದೆ. ಕಳೆದ ಕೆಲವು ತಿಂಗಳಿನಿಂದ ಕಾಶ್ಮೀರದಲ್ಲಿ ಹಲವು ಉಗ್ರರನ್ನುಭಾರತ ಕೊಂದಿತ್ತು. ಈ ಸೇಡು ತೀರಿಸಿಕೊಳ್ಳಲು ತಾಲಿಬಾನಿಗಳು ಮತ್ತಷ್ಟುಉಗ್ರಗಾಮಿ ಚಟುವಟಿಕೆ ನಡೆಸುವ ಸಾಧ್ಯತೆ ಹೆಚ್ಚಿದೆ.

ಮಾದಕ ವಸ್ತು ಜಾಲ

ತಾಲಿಬಾನಿಗಳ ಆದಾಯದ ಪ್ರಮುಖ ಮೂಲ ಅಫೀಮು. 2020ರಲ್ಲಿ ಪ್ರಪಂಚದಲ್ಲಿ ಮಾರಾಟವಾದ ಮಾದಕವಸ್ತುಗಳಲ್ಲಿ ಶೇ.85ರಷ್ಟುಆಷ್ಘಾನಿಸ್ತಾನದಿಂದ ಬಂದುದಾಗಿತ್ತು. ಆಷ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಅಫೀಮನ್ನು ಬೆಳೆದು ಭಾರತದಲ್ಲೂ ಮಾರಾಟ ಜಾಲವನ್ನು ಹೆಚ್ಚು ಮಾಡಬಹುದು. ತಾಲಿಬಾನಿಗಳು ಅತಿ ಹೆಚ್ಚು ಆದಾಯವನ್ನು ಅಫೀಮಿನಿಂದಲೇ ಪಡೆಯುತ್ತಿರುವುದರಿಂದ ಅದರ ಮಾರಾಟವನ್ನು ಹೆಚ್ಚಿಸಲು ಪ್ರಯತ್ನಿಸುತ್ತದೆ. ಭಾರತವು ಉಗ್ರವಾದದೊಂದಿಗೆ ಮಾದಕವಸ್ತು ಮಾರಾಟದ ವಿರುದ್ಧವೂ ಸಮರ ಸಾರಬೇಕಾದ ಅನಿವಾರ್ಯತೆ ಎದುರಾಗುತ್ತದೆ.

click me!