ಅಯೋಧ್ಯೆಯಲ್ಲಿ ಇಂದಿನ ಕಾರ್ಯಕ್ರಮ ಏನು: ಶ್ರೀರಾಮನ ಬಗ್ಗೆ ವಿಡಿಯೋ ಮಾಡಿ ಹಂಚಿಕೊಳ್ಳಿ: ಟ್ರಸ್ಟ್‌

By Kannadaprabha NewsFirst Published Jan 17, 2024, 8:41 AM IST
Highlights

ಅಯೋಧ್ಯೆಯಲ್ಲಿ 5 ಶತಮಾನಗಳ ಬಳಿಕ ರಾಮಮಂದಿರ ನಿರ್ಮಾಣವಾಗುತ್ತಿರುವ ಸಮಯದಲ್ಲಿ ಜನ ರಾಮನ ಬಗ್ಗೆ ಕಿರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಕು ಎಂದು ರಾಮಮಂದಿರ ಟ್ರಸ್ಟ್ ಸಲಹೆ ನೀಡಿದೆ.

ಅಯೋಧ್ಯೆ: ಅಯೋಧ್ಯೆಯಲ್ಲಿ 5 ಶತಮಾನಗಳ ಬಳಿಕ ರಾಮಮಂದಿರ ನಿರ್ಮಾಣವಾಗುತ್ತಿರುವ ಸಮಯದಲ್ಲಿ ಜನ ರಾಮನ ಬಗ್ಗೆ ಕಿರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಕು ಎಂದು ರಾಮಮಂದಿರ ಟ್ರಸ್ಟ್ ಸಲಹೆ ನೀಡಿದೆ. ವಿಡಿಯೋದಲ್ಲಿ ರಾಮನ ಬಗೆಗಿನ ಹಾಡು, ನೃತ್ಯ, ಕಿರು ನಾಟಕ, ಮಾತು, ಹೀಗೆ ನಿಮಗನಿಸಿದ್ದನ್ನು ವಿಡಿಯೋ ಮಾಡಿ  #ShriRam Homecoming ಎಂಬ ಹ್ಯಾಷ್‌ ಟ್ಯಾಗ್ ಜೊತೆಗೆ ಹಂಚಿಕೊಳ್ಳಲು ಸೂಚಿಸಿದೆ. ಅಲ್ಲದೇ ವಿಡಿಯೋ ಜತೆಗೆ ನಿಮ್ಮ ಹೆಸರು ಇರಲಿ ಎಂದು ಟ್ರಸ್ಟ್‌ ತಿಳಿಸಿದೆ.

ಮೊದಲ ದಿನ 11 ಅರ್ಚಕರಿಂದ ದಶವಿಧ ಸ್ನಾನ ಇಂದು ಗಣೇಶ ಪೂಜೆ, ತೀರ್ಥಪೂಜೆ ಕಾರ್ಯಕ್ರಮ
ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ರಾಮನ ವಿಗ್ರಹವನ್ನು ಕಾಣುವ ಕೋಟ್ಯಂತರ ಭಕ್ತರ ಕನಸು ನಸನಾಗುವ ಕ್ಷಣ ಕೊನೆಗೂ ಸನ್ನಿಹಿತವಾಗಿದೆ. ಜ.22 ರಂದು ನೂತನ ರಾಮ ಮಂದಿರದಲ್ಲಿ ನಡೆಸಲಾಗುತ್ತಿರುವ ಬಾಲರಾಮನ ವಿಗ್ರಹಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮಗಳಿಗೆ ಮಂಗಳವಾರ ಇಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಲಾಗಿದೆ. ಪ್ರಾಣ ಪ್ರತಿಷ್ಟಾಪನೆಯ ಕಾರ್ಯಕ್ರಮದ ಭಾಗವಾಗಿ ಮಂಗಳವಾರದಿಂದಲೇ ವಿವಿಧ ರೀತಿಯ ಪೂಜಾ ವಿಧಿಗಳನ್ನು ಅಯೋಧ್ಯೆಯ ರಾಮಮಂದಿರ ಆವರಣದಲ್ಲಿ ಆರಂಭಿಸಲಾಗಿದೆ.

Latest Videos

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಕೌಂಟ್‌ಡೌನ್: ರಾಮಧೂತ ಹನುಮಂತನ ಜನ್ಮಸ್ಥಳ ಅಂಜನಾದ್ರಿಗೆ ಬಿಗಿಭದ್ರತೆ!

ಮೊದಲ ದಿನ 11 ಅರ್ಚಕರ ತಂಡ ಪ್ರಾಯಶ್ಚಿತ್ತ ಸಮಾರಂಭ ಮತ್ತು ದಶವಿಧ ಸ್ನಾನ ಕಾರ್ಯಕ್ರಮಗಳನ್ನು ನಡೆಸಿದೆ. ಟ್ರಸ್ಟಿ ಅನಿಲ್ ಮಿಶ್ರಾ ಹಾಗೂ ಅವರ ಪತ್ನಿ ಉಷಾ ಮಿಶ್ರಾ ಅವರು 'ಯಜಮಾನತ್ವ' ವಹಿಸಿದ್ದರು. ಈ ಕುರಿತು ಮಂಗಳವಾರ ಇಲ್ಲಿ ಮಾಹಿತಿ ನೀಡಿದ ರಾಮದೇಗುಲದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್, 'ಮಂಗಳವಾರದಿಂದ ಅನುಷ್ಠಾನ ಆರಂಭವಾಗಿದ್ದು, ಇದು ಜ.22ರವರೆಗೂ ನಡೆಯಲಿದೆ' ಎಂದು ತಿಳಿಸಿದರು. ಪ್ರಾಣ ಪ್ರತಿಷ್ಠಾಪನೆಯ 2ನೇ ದಿನವಾದ ಬುಧವಾರ ಇಂದು ಮೊದಲಿಗೆ ವಿಘ್ನ ವಿನಾಶಕ ಗಣೇಶನಿಗೆ ಪೂಜೆ ಸಲ್ಲಿಸಿ ಬಳಿಕ ರಾಮಲಲ್ಲಾ ವಿಗ್ರಹದ ಪರಿಸರ ಪ್ರವೇಶ ಕಾರ್ಯಕ್ರಮ ನಡೆಸಲಾಗುವುದು. ಬಳಿಕ ತೀರ್ಥ ಪೂಜೆ ನಡೆಯಲಿದೆ.

'ಪೂಜಿಸಲೆಂದೇ' ಕನ್ನಡ ಭಕ್ತಿಗೀತೆಗೆ ಮೋದಿ ಮೆಚ್ಚುಗೆ

ಚೆನ್ನೈ: ಪ್ರಖ್ಯಾತ ಶಾಸ್ತ್ರೀಯ ಸಂಗೀತ ಗಾಯಕಿ, ಭರತನಾಟ್ಯ ಕಲಾವಿದೆ ಹಾಗೂ ಆಹುತಿ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕಿ ಶಿವಶ್ರೀ ಸ್ಕಂದ ಪ್ರಸಾದ್ ಹಾಡಿದ್ದ ಕನ್ನಡ ಭಕ್ತಿಗೀತೆ 'ಪೂಜಿಸಲೆಂದೇ...' ಹಾಡನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿ ಮೆಚ್ಚುಗೆ ಸೂಚಿಸಿದ್ದಾರೆ. ಮಂಗಳವಾರ ಟ್ವಿಟ್ ಮಾಡಿರುವ ಪ್ರಧಾನಿ ಮೋದಿ, 'ಕನ್ನಡದಲ್ಲಿ ಶಿವಶ್ರೀ ಅವರ ಸುಶ್ರಾವ್ಯ ಗಾಯನ ಪ್ರಭು ರಾಮನೆಡೆಗಿನ ಭಕ್ತಿಯನ್ನು ತೋರ್ಪಡಿಸುತ್ತದೆ. ಇಂತಹ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗುತ್ತವೆ' ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.  ಪೂಜಿಸಲೆಂದೇ ಹೂಗಳ ತಂದೆ ಹಾಡನ್ನು ಚಿ. ಉದಯಶಂಕರ್ ಕನ್ನಡದ ಎರಡು ಕನಸು ಚಿತ್ರಕ್ಕಾಗಿ ಸಾಹಿತ್ಯ ರಚಿಸಿದ್ದರು ಮತ್ತು ರಾಜನ್ ನಾಗೇಂದ್ರ ಸ್ವರ ಸಂಯೋಜನೆಯಲ್ಲಿ ಖ್ಯಾತ ಹಿನ್ನೆಲೆಯ ಗಾಯಕಿ ಎಸ್ ಜಾನಕಿ ಹಾಡಿದ್ದರು.

ರಾಮ ಮಂದಿರದ ಉದ್ಘಾಟನೆ ವೇಳೆ ಉಗ್ರ ದಾಳಿಗೆ ಪ್ಲಾನ್, ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ!

ಧನ್ಯವಾದ ಹೇಳಿದ ಶಿವಶ್ರೀ:
ಇದಕ್ಕೆ ಧನ್ಯವಾದ ಸಲ್ಲಿಸಿರುವ ಶಿವಶ್ರೀ ಸ್ಕಂದಪ್ರಸಾದ್, 'ಪ್ರಧಾನಿ ನರೇಂದ್ರ ಮೋದಿಯೇ ನನ್ನ ಗಾಯನದ ಬಗ್ಗೆ ಮೆಚ್ಚುಗೆ ಸೂಚಿಸಿರುವುದು ನನ್ನ ಕಲ್ಪನೆಗೂ ಮೀರಿದ ಗೌರವದ ವಿಷಯವಾಗಿದೆ. ಇದು ನನಗೆ ಅತ್ಯಂತ ಸಂತೋಷದ ಕ್ಷಣವಾಗಿದ್ದು, ಸ್ವತಃ ಶ್ರೀರಾಮನೇ ನನ್ನನ್ನು ಹರಸಿದಷ್ಟು ಹರ್ಷಗೊಂಡಿದ್ದೇನೆ' ಎಂದು ಟ್ವಿಟ್ ಮಾಡಿದ್ದಾರೆ. 

ಲೇಪಾಕ್ಷಿಗೆ ಪ್ರಧಾನಿ ಭೇಟಿ

ನವದೆಹಲಿ:ಪ್ರಾಣಪ್ರತಿಷ್ಠಾಪನೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವ ನಡುವೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ, ರಾಮಾಯಣದ ಐತಿಹ್ಯವುಳ್ಳ ಆಂಧ್ರಪ್ರದೇಶದ ಲೇಪಾಕ್ಷಿ ವೀರಭದ್ರ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಪಂಚೆ, ಶಲ್ಯ ಧರಿಸಿದ್ದ ಭಸ್ಮಧಾರಿ ಮೋದಿ, ದೇವರ ನಾಮಗಳನ್ನು ಭಜಿಸಿದರು ಹಾಗೂ ದೇಗುಲದ ಪುರೋಹಿತರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಬಳಿಕ ಸಮಾರಂಭವೊಂದರಲ್ಲಿ ಅವರು ಮಾತನಾಡಿ ಇಡೀ ದೇಶ ಇಂದು ರಾಮಮಯವಾಗಿದೆ ಎಂದು ಹರ್ಷಿಸಿದರು. ಲೇಪಾಕ್ಷಿ ರಾಮಾಯಣ ಕಥಾಹಂದರದಲ್ಲಿ ಐತಿಹಾಸಿಕ ಸ್ಥಳವಾಗಿ ಗುರುತಿಸಲ್ಪಟ್ಟಿದೆ. ಜಟಾಯು ಎಂಬ ಬೃಹತ್ ಹದ್ದು ರಾವಣನಿಂದ ಸೀತೆಯನ್ನು ರಕ್ಷಿಸಲು ತೆರಳಿ ರಾವಣನಿಂದ ತನ್ನ ರೆಕ್ಕೆಯನ್ನು  ಕತ್ತರಿಸಲ್ಪಟ್ಟು ಈ ಸ್ಥಳದಲ್ಲೇ ಬಿದ್ದಿತೆಂದು ನಂಬಲಾಗಿದೆ. 

ರಾಮಮಂದಿರದ ವಿಷಯದಲ್ಲಿ ಕಾಂಗ್ರೆಸ್ ಮೂರ್ಖತನ : ನಾನಂತೂ ಅಯೋಧ್ಯೆಗೆ ಹೋಗ್ತೇನೆ: ಸಂಸದ ಪ್ರಜ್ವಲ್ ರೇವಣ್ಣ

ಪ್ರಧಾನಿ ಮೋದಿ ದಕ್ಷಿಣ ಭಾರತದಲ್ಲಿ 2 ದಿನ ಪ್ರವಾಸ ಕೈಗೊಂಡಿದ್ದು, ಇಂದು ಕೇರಳದ ಗುರುವಾಯೂರು, ರಾಮಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.  ಪ್ರಾಣ ಪ್ರತಿಷ್ಠಾಪನೆ ಮಾಡುವ ಸಲುವಾಗಿ ಮೋದಿ 11 ದಿನಗಳ ವಿಶೇಷ ಅನುಷ್ಠಾನ ಆಚರಣೆ ಮಾಡುತ್ತಿದ್ದಾರೆ.

click me!