ರನ್‌ವೇ ಮೇಲೇ ವಿಮಾನ ಪ್ರಯಾಣಿಕರಿಗೆ ತಿಂಡಿ, ಊಟ: ಇಂಡಿಗೋಗೆ ಕೇಂದ್ರ ನೋಟಿಸ್‌

By Kannadaprabha News  |  First Published Jan 17, 2024, 7:39 AM IST

ವಿಮಾನ ನಿಲ್ದಾಣದಲ್ಲಿ ರನ್‌ವೇ ಮೇಲೆಯೇ ಕುಳಿತು ಪ್ರಯಾಣಿಕರು ತಿಂಡಿ, ಊಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಗೋ ಹಾಗೂ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಗಳಿಗೆ ನಾಗರಿಕ ವಿಮಾನಯಾನ ಸುರಕ್ಷತಾ ಪ್ರಾಧಿಕಾರ ಶೋಕಾಸ್‌ ನೋಟಿಸ್‌ ನೀಡಿದೆ.


ನವದೆಹಲಿ: ವಿಮಾನ ನಿಲ್ದಾಣದಲ್ಲಿ ರನ್‌ವೇ ಮೇಲೆಯೇ ಕುಳಿತು ಪ್ರಯಾಣಿಕರು ತಿಂಡಿ, ಊಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಗೋ ಹಾಗೂ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಗಳಿಗೆ ನಾಗರಿಕ ವಿಮಾನಯಾನ ಸುರಕ್ಷತಾ ಪ್ರಾಧಿಕಾರ ಶೋಕಾಸ್‌ ನೋಟಿಸ್‌ ನೀಡಿದೆ.

ದಟ್ಟ ಮಂಜು ಆವರಿಸಿದ್ದ ಪರಿಣಾಮ ಗೋವಾದಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೊ ವಿಮಾನವನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ದೀರ್ಘಕಾಲ ನಿಲ್ಲಿಸಿ ಪ್ರಯಾಣಿಕರಿಗೆ ಸೂಕ್ತ ಸೌಲಭ್ಯ ನೀಡಿರಲಿಲ್ಲ, ಶೌಚಾಲಯ, ಆಹಾರ, ವಿಶ್ರಾಂತಿಗೆ ಸೂಕ್ತ ಸೌಲಭ್ಯ ಸಿಗದ ಕಾರಣ ರನ್‌ವೇ ಮೇಲೆ ಕುಳಿತು ಪ್ರಯಾಣಿಕರು ತಿಂಡಿ, ಊಟ ಮಾಡುತ್ತ ವಿರಮಿಸುತ್ತಿದ್ದ ದೃಶ್ಯ ವೈರಲ್‌ ಆಗಿತ್ತು. ನಂತರ ಕೆಲವು ಪ್ರಯಾಣಿಕರು ವಿಮಾನಯಾನ ನಿರ್ವಹಣಾ ಸಂಸ್ಥೆಯ ಕುರಿತು ಆಕ್ರೋಶವನ್ನೂ ಹೊರಹಾಕಿದ್ದರು. ನಂತರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಸೋಮವಾರ ತಡರಾತ್ರಿ ಮಹತ್ವದ ಸಭೆ ನಡೆಸಿದ್ದರು. ಇದರ ಬೆನ್ನಲ್ಲೇ ಮಂಗಳವಾರ ಮುಂಜಾನೆ ಎರಡೂ ಸಂಸ್ಥೆಗಳಿಗೆ ವಿಮಾನಯಾನ ಸುರಕ್ಷತಾ ಪ್ರಾಧಿಕಾರ ನೋಟಿಸ್‌ ನೀಡಿದೆ.

Tap to resize

Latest Videos

ಇಂಡಿಗೋ ಪೈಲಟ್‌ಗೆ ಹಲ್ಲೆ ಮಾಡಿದ ವ್ಯಕ್ತಿ ಹನಿಮೂನ್‌ಗಾಗಿ ಗೋವಾಗೆ ಹೋಗ್ತಿದ್ದ!

ವಿಮಾನ ವಿಳಂಬದ ಸಮಯದಲ್ಲಿ ಅವ್ಯವಸ್ಥೆಗೆ ಆಕ್ರೋಶ

ವ್ಯಕ್ತವಾದ ಹಿನ್ನೆಲೆಯಲ್ಲಿ ವಿಮಾನಯಾನ ಸಚಿವಾಲಯ, ಬೆಂಗಳೂರು ಸೇರಿದಂತೆ ದೇಶದ 6 ಪ್ರಮುಖ (ಮೆಟ್ರೋ) ವಿಮಾನ ನಿಲ್ದಾಣಗಳಲ್ಲಿ ಆರು ಅಂಶಗಳ ಆಕ್ಷನ್ ಪ್ಲಾನ್ ಸಿದ್ದಪಡಿಸಿದೆ. ಇದರಲ್ಲಿ ವಾರ್‌ರೂಂ ಸ್ಥಾಪನೆ ಕೂಡ ಸೇರಿದೆ ಎಂದು ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.

ಈ ಕುರಿತು ಟೀಟ್ ಮಾಡಿ, 'ದೇಶದ ಪ್ರಮುಖ 6 ಮೆಟ್ರೊ ನಗರಗಳ ವಿಮಾನ ನಿಲ್ದಾಣಗಳಲ್ಲಿ ತುರ್ತು ನಿರ್ವಹಣೆಗೆ ವಾರ್ ರೂಂ ತೆರೆಯಲಾಗುವುದು. ಅಲ್ಲದೆ ಆ ನಿಲ್ದಾಣಗಳಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯನ್ನು ಸುರಕ್ಷತೆಗೆ ನಿಯೋಜಿ ಸಲಾಗುವುದು. ಅಲ್ಲದೆ ಈ ವಿಮಾನ ನಿಲ್ದಾಣಗಳು ದಿನಕ್ಕೆ 3 ಬಾರಿ ತಾವು ತೆಗೆದುಕೊಂಡ ಕ್ರಮಗಳನ್ನು ವಿಮಾನಯಾನ ಸಚಿವಾಲಯಕ್ಕೆ ವರದಿ ನೀಡಬೇಕು' ಎಂದಿದ್ದಾರೆ. ವಿಶೇಷವಾಗಿ ದೆಹಲಿ ಏರ್‌ಪೋರ್ಟ್‌ಗೆ ಸಂಬಂಧಿಸಿದಂತೆ ರನ್‌ವೇ 29-ಎಲ್‌ನ್ನು 3ನೇ ಕೆಟಗರಿಗೆ ಉನ್ನತೀಕರಿಸಲಾಗಿದ್ದು, ಅದರಿಂದ ಮಂಜು ಆವರಿಸಿದ ಸಮಯದಲ್ಲೂ ವಿಮಾನ ಹಾರಿಸಬಹುದಾಗಿದೆ. ಈ ಸೌಲಭ್ಯವನ್ನು ಮಂಗಳವಾರದಿಂದಲೇ ಲೋಕಾರ್ಪಣೆ ಮಾಡಲಾಗಿದೆ. ಜೊತೆಗೆ ದೆಹಲಿ ಏರ್‌ಪೋರ್ಟ್‌ ರನ್‌ವೇ 10/28ನ್ನೂ ಸಹ ಕೆಟಗರಿ-3ಕ್ಕೆ ಮೇಲ್ದರ್ಜೆಗೇರಿಸಲಾಗುತ್ತದೆ.

ಚಳಿ ಮಂಜಿನಿಂದಾಗಿ ವಿಮಾನ ವಿಳಂಬ: ವಿಚಾರ ತಿಳಿಸಿದ ಪೈಲಟ್ ಮೇಲೆ ಪ್ರಯಾಣಿಕನಿಂದ ಹಲ್ಲೆ

ಏನಿದು ವಾರ್ ರೂಂ?
ಭಾರತದ ಪ್ರಮುಖ 6 ಮೆಟ್ರೊ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ತುರ್ತು ಸೌಲಭ್ಯ ಅಗತ್ಯವಿದ್ದಾಗ ಆದ್ಯತೆಯ ಮೇರೆಗೆ ಸಮಸ್ಯೆಗಳನ್ನು ಪರಿಹರಿಸಲು ವಾರ್ ರೂಂಗಳನ್ನು ತೆರೆಯಲಾಗುತ್ತದೆ. ಪ್ರಯಾಣಿಕರಿಗೆ ಅನಾನುಕೂಲವಾಗುವುದನ್ನು ನಿಗ್ರಹಿಸುವ ದೃಷ್ಟಿಯಲ್ಲಿ ಇವು ಕಾರ್ಯ ನಿರ್ವಹಿಸುತ್ತವೆ.

ವಿಳಂಬದ ಕುರಿತು ನಿಖರ ಮಾಹಿತಿಗೆ ಡಿಜಿಸಿಎ ಸೂಚನೆ

ನವದೆಹಲಿ: ದಟ್ಟ ಮಂಜು ಮತ್ತು ಇತರ ಪ್ರತಿಕೂಲ ಹವಾಮಾನದ ಸಮಯದಲ್ಲಿ ವಿಮಾನ ವಿಳಂಬದ ಕುರಿತು ಪ್ರಯಾಣಿಕರಿಗೆ ನಿಖರ ಮಾಹಿತಿ ತಿಳಿಸಲು ವಿಮಾನ ಸಂಸ್ಥೆಗಳು ಸಿಬ್ಬಂದಿಗಳನ್ನು ನಿಯೋಜಿಸುವಂತೆ ವಿಮಾನಯಾನ ನಿಯಂತ್ರಣ ಪ್ರಾಧಿಕಾರ(ಡಿಜಿಸಿಎ) ಆದೇಶಿಸಿದೆ. ಅನಿವಾರ್ಯ ಸಂದರ್ಭಗಳಲ್ಲಿ ವಿಮಾನಗಳನ್ನು ಮೂರು ಗಂಟೆಗೂ ಹೆಚ್ಚು ಕಾಲ ವಿಳಂಬ ಮಾಡುವುದಾದರೆ ಆ ಕುರಿತು ಪ್ರಯಾಣಿಕರಿಗೆ ನಿಖರ ಮಾಹಿತಿ ತಿಳಿಸಿ ಸೂಕ್ತ ಸಂವಹನ ನಡೆಸಲು ಗ್ರಾಹಕ ಸ್ನೇಹಿ ಸಿಬ್ಬಂದಿಗಳನ್ನು ನಿಯೋಜಿಸಬೇಕು ಎಂದು ಡಿಜಿಸಿಎ ಮಾರ್ಗಸೂಚಿ ಹೊರಡಿಸಿದೆ.

ದೆಹಲಿ ಸೇರಿದಂತೆ ಅನೇಕ ವಿಮಾನ ನಿಲ್ದಾಣಗಳಲ್ಲಿ ವಿಮಾನ ವಿಳಂಬದ ಕುರಿತು ಸಮರ್ಪಕ ಮಾಹಿತಿ ನೀಡದೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.

click me!