ಮೂರನೇ ಅವಧಿಗೆ ಪ್ರಧಾನಿಯಾಗುವ ಮುನ್ನ..... ಅಂದುಕೊಂಡಷ್ಟು ಸುಗಮ ಹಾದಿಯಲ್ಲಿದ್ದಾರಾ ಮೋದಿ?

By Gowthami K  |  First Published Jun 5, 2024, 5:58 PM IST

 ಮೋದಿ ಅವರ ಚುನಾವಾಣಾ ಪೂರ್ವ ಮಾತು ಮತ್ತು 'ಅಬ್ ಕಿ ಬಾರ್, 400 ಪಾರ್' (400ರ ಗಡಿ ದಾಟುವ ವಿಶ್ವಾಸ) ಎಂಬ ಅದಮ್ಯ ವಿಶ್ವಾಸಕ್ಕೆ ತಕ್ಕಂತೆ ಈ ಚುನಾವಾಣಾ ಫಲಿತಾಂಶ ಇಲ್ಲದಿರುವುದು ಸತ್ಯವಾಗಿದೆ.


ಗಿರೀಶ್ ಲಿಂಗಣ್ಣ
ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ 

2024ರ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುವ ಜೊತೆಗೆ, ದೇಶ ಯಾವ ದಾರಿಯಲ್ಲಿ ಸಾಗಬೇಕು ಎಂಬ ಮತದಾರನ ತೀರ್ಮಾನವೂ ಪ್ರಕಟವಾಗಿದೆ. ದೇಶದ ಚುಕ್ಕಾಣಿ ಯಾರ ಕೈಗೆ ಕೊಡಬೇಕು ಎಂಬ ದೃಢ ನಿರ್ಧಾರ, ಮತದಾರ ನೀಡಿದ ಈ ತೀರ್ಮಾನದಲ್ಲಿ ಕಂಡುಬಂದಂತಿಲ್ಲ. ಅದರಲ್ಲೂ ದೇಶವನ್ನು 10 ವರ್ಷಗಳ ಕಾಲ ಆಳಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟಕ್ಕೆ ಈ ಫಲಿತಾಂಶ ತುಸು ಚಿಂತೆಗೆ ಕಾರಣವಾಗಿದೆ. ಆದರೆ ಮೈತ್ರಿಕೂಟವು ಸರ್ಕಾರ ರಚಿಸಲು ಅಗತ್ಯವಿರುವ ಬಹುಮತ ಹೊಂದಿರುವುದು ಕೊಂಚ ಸಮಾಧಾನದ ಸಂಗತಿಯಾಗಿದೆ.

Tap to resize

Latest Videos

undefined

ಕೇಸರಿ ಭದ್ರಕೋಟೆ ಕರಾವಳಿ ಜಿಲ್ಲೆಗಳಲ್ಲಿ ಅತ್ಯಧಿಕ ನೋಟಾ ಓಟು, ದಕ್ಷಿಣ ಕನ್ನಡ ರಾಜ್ಯಕ್ಕೆ ಫಸ್ಟ್!

2024ರ ಲೋಕಸಭಾ ಚುನಾವಣೆ ಫಲಿತಾಂಶವು ನರೇಂದ್ರ ಮೋದಿ ಅವರ ವ್ಯಕ್ತಿತ್ವದ ಸುತ್ತ ಸೃಷ್ಟಿಯಾಗಿದ್ದ ಶ್ರೇಷ್ಠತೆಯ ಗ್ರಹಿಕೆಯನ್ನು  ಅನಿರೀಕ್ಷಿತವಾಗಿ ಕುಸಿಯುವಂತೆ ಮಾಡಿದೆ ಎಂಬ ಮಾತುಗಳೂ ಈಗ ಕೇಳಿಬರುತ್ತಿದ್ದು, ಈ ಫಲಿತಾಂಶ ಪ್ರಧಾನಿ ಮೋದಿ ಅವರಿಗೆ ವ್ಯಯಕ್ತಿಕವಾಗಿ ನಿರಾಶಾದಾಯಕವಾಗಿದ್ದವು ಎಂಬ ವಿಶ್ಲೇಷಣೆಗೆ ದಾರಿ ಮಾಡಿಕೊಟ್ಟಿದೆ. 

"ಒಂದು ಉದ್ದೇಶ ಈಡೇರಿಕೆಯ ಕಾರಣಕ್ಕೆ ನನ್ನನ್ನು ಕಳುಹಿಸಲಾಗಿದೆ.." ಎಂಬ ಮೋದಿ ಅವರ ಚುನಾವಾಣಾ ಪೂರ್ವ ಮಾತು ಮತ್ತು 'ಅಬ್ ಕಿ ಬಾರ್, 400 ಪಾರ್' (400ರ ಗಡಿ ದಾಟುವ ವಿಶ್ವಾಸ) ಎಂಬ ಅದಮ್ಯ ವಿಶ್ವಾಸಕ್ಕೆ ತಕ್ಕಂತೆ ಈ ಚುನಾವಾಣಾ ಫಲಿತಾಂಶ ಇಲ್ಲದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿರುವ ಸತ್ಯವಾಗಿದೆ.

ಪ್ರದೀಪ್‌ ಈಶ್ವರ್ ಕೆಲವೇ ಕ್ಷಣಗಳಲ್ಲಿ ರಾಜೀನಾಮೆ, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್!

ಈ ಬಾರಿಯ ಲೋಕ ಸಮರದಲ್ಲಿ ಬಿಜೆಪಿ ನಿರೀಕ್ಷಿಸಿದ ಫಲಿತಾಂಶ ಗಳಿಸದಿರಲು ಅನೇಕ ಕಾರಣಗಳನ್ನು ನೋಡಬಹುದು. ಈ ಪೈಕಿ ಹಿಂದುಳಿದ ವರ್ಗದಲ್ಲಿ ಕಂಡುಬಂದ ಸಂವಿಧಾನದ ಸಂಭಾವ್ಯ ಬದಲಾವಣೆಯ ಭಯ ಕೂಡ ಒಂದು ಎಂದು ಹೇಳಬಹುದು. ಸಂವಿಧಾನ ಬದಲಾವಣೆಯ ಅಪಾಯದ  ಬಗ್ಗೆ ಹಿಂದುಳಿದ ವರ್ಗದಲ್ಲಿ ಒಂದು ರೀತಿಯ ಆತಂಕ ಇತ್ತು ಎಂಬುದರತ್ತ ಈ ಫಲಿತಾಂಶ ಬೊಟ್ಟು ಮಾಡುತ್ತದೆ.

ಆದಗ್ಯೂ, ಒಟ್ಟಾರೆ ಫಲಿತಾಂಶವನ್ನು ವಿಶ್ಲೇಷಿಸಿದಾಗ ಭಾರತೀಯ ಜನತಾ ಪಕ್ಷ (ಬಿಜೆಪಿ)ವು, ಇತರ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ ಗಮನಾರ್ಹ ಸಾಧನೆ ಮಾಡಿದೆ. ಎನ್.ಡಿ.ಎ ಮೈತ್ರಿಕೂಟದ ಪ್ರಮುಖ ಪಾಲುದಾರ ಪಕ್ಷವಾಗಿರುವ ಬಿಜೆಪಿ, ಒಟ್ಟು 240 ಲೋಕಸಭಾ ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಇದಕ್ಕೆ ವಿರುದ್ಧವಾಗಿ ಇಂಡಿಯನ್ ನ್ಯಾಶನಲ್ ಡೆವಲಪ್‌ಮೆಂಟಲ್ ಇನ್‌ಕ್ಲೂಸಿವ್ ಅಲೈಯನ್ಸ್‌ (I.N.D.I.A) ಮೈತ್ರಿಕೂಟದ ಪ್ರಮುಖ ಪಾಲುದಾರ ಪಕ್ಷವಾಗಿರುವ ಕಾಂಗ್ರೆಸ್, ಒಟ್ಟು 99 ಸ್ಥಾನಗಳಲ್ಲಿ ಗೆದ್ದಿದೆ.

73ರ ಪ್ರಾಯದ ಪ್ರಧಾನಿ ಮೋದಿ ಇಡೀ ದೇಶ ಸುತ್ತಿ ಚುನಾವಣಾ ಪ್ರಚಾರ ಮಾಡಿದ್ದರು. ಪರಿಣಾಮವಾಗಿ ದೇಶದ ಮತದಾರರ ಪೈಕಿ ಬಹುತೇಕರು ಮೋದಿ ಮೇಲಿನ  ತಮ್ಮ ನಂಬಿಕೆಯನ್ನು ಮತ್ತೊಮ್ಮೆ ಖಚಿತಪಡಿಸಿದ್ದಾರೆ. ಮೋದಿಯವರು ಸತತ ಮೂರನೇ ಅವಧಿಗೆ ಪ್ರಧಾನಿಯಾಗುವ ಹಾದಿಯಲ್ಲಿದ್ದು, ಈ ಸಾಧನೆ ಮಾಡಿದ ದೇಶದ ಎರಡನೇ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.

ಸ್ವತಃ ಮೋದಿಯವರು ಈ ಸಾಧನೆಯನ್ನು ಭಾರತದ ರಾಜಕೀಯ ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ. ಆದರೆ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗಮನಾರ್ಹ ಸೀಟುಗಳನ್ನು ಕಳೆದುಕೊಂಡಿರುವುದರಿಂದ, ಸರ್ಕಾರ ರಚಿಸಲು ಅವರು ಇತರ ಮಿತ್ರಪಕ್ಷಗಳ ಮರ್ಜಿ ಕಾಯಬೇಕಿರುವುದು ಅನಿವಾರ್ಯವಾಗಿದೆ. 

ಬಿಜೆಪಿಯು ಸರಳ ಬಹುಮತಕ್ಕೆ ಅಗತ್ಯವಿರುವ 272 ಸ್ಥಾನಗಳನ್ನು ಗಳಿಸುವಲ್ಲಿ ವಿಫಲವಾಗಿದೆ. ಒಟ್ಟು 543 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 240 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದೆ. 2019ರ ಲೋಕಸಭೆ ಚುನಾವಣೆಯಲ್ಲಿ 303 ಕ್ಷೇತ್ರಗಳಲ್ಲಿ ದಿಗ್ವಿಜಯ ಸಾಧಿಸಿದ್ದ ಬಿಜೆಪಿ ಈ ಬಾರಿ 63 ಸೀಟುಗಳನ್ನು ಕಡಿಮೆ ಪಡೆದಿದೆ. ಎನ್.ಡಿ.ಎ ಮೈತ್ರಿಕೂಟದ  ಇತರ ಪಕ್ಷಗಳು ಒಟ್ಟು 53 ಕ್ಷೇತ್ರಗಳನ್ನು ಗೆದ್ದುಕೊಂಡಿರುವುದರಿಂದ, 293 ಸಂಖ್ಯಾಬಲದ ನೆರವಿನಿಂದ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೇರುವುದು ಸುಲಭವಾಗಿದೆ.

ಗುಜರಾತ್‌ನ ಮುಖ್ಯಮಂತ್ರಿಯಾಗಿ ಮತ್ತು ಭಾರತದ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರು, ಈ ಹಿಂದಿನ ಚುನಾವಣೆಗಳಲ್ಲಿ ಪೂರ್ಣ ಬಹುಮತದ ಫಲಿತಾಂಶವನ್ನಷ್ಟೇ ಪಡೆದುಕೊಂಡಿದ್ದರು. ಆದರೆ ಕಳೆದ 10 ವರ್ಷಗಳಿಂದ ಭಾರತದ ರಾಜಕೀಯದ ಅತ್ಯಂತ ಪ್ರಬಲ ವ್ಯಕ್ತಿಯಾಗಿ ಹೊರಹೊಮ್ಮಿದ್ದ ಅವರಿಗೆ, ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶಗಳು ಹಿನ್ನಡೆಯಾಗಿ ಕಂಡಿದ್ದಾರೆ ಅಚ್ಚರಿ ಏನಿಲ್ಲ.

ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ ನೇತೃತ್ವದ ಇಂಡಿಯನ್ ನ್ಯಾಶನಲ್ ಡೆವಲಪ್‌ಮೆಂಟಲ್ ಇನ್‌ಕ್ಲೂಸಿವ್ ಅಲೈಯನ್ಸ್‌ಗೆ (I.N.D.I.A) ಈ ಫಲಿತಾಂಶ ಅನಿರೀಕ್ಷಿತ ಹುರುಪು ನೀಡಿದೆ. ಚುನಾವಣಾ ಪೂರ್ವ  ಮತ್ತು ಮತದಾನೋತ್ತರ ಸಮೀಕ್ಷೆಗಳನ್ನು ಸುಳ್ಳಾಗಿಸಿ I.N.D.I.A ಮೈತ್ರಿಕೂಟ ಹೆಚ್ಚಿನ ಸ್ಥಾನಗಳನ್ನು ಗೆದ್ದಿರುವುದು ಗಮನಾರ್ಹವಾಗಿದೆ. ಈ ಮೈತ್ರಿಕೂಟದಲ್ಲಿ ಕಾಂಗ್ರೆಸ್ 99 ಸ್ಥಾನಗಳಲ್ಲಿ ಗೆದ್ದಿದ್ದರೆ , ಇತರ ಪಕ್ಷಗಳು 133 ಕ್ಷೇತ್ರಗಳಲ್ಲಿ ಜಯ ಸಾಧಿಸಿವೆ. ಈ ಮೈತ್ರಿಕೂಟ ಒಟ್ಟು 232 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ.

ಇನ್ನು ಲೋಕ ಚುನಾವಣೆಯ ಫಲಿತಾಂಶವು ದೇಶದ ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿದ್ದು, ಹೊಸ ಸರ್ಕಾರ ರಚನೆಯಾಗುವವರೆಗೂ ಅನಿಶ್ಚಿತತೆ ಮುಂದುವರೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಮೋದಿ ಅವರು ಅಧಿಕಾರದ ಮೇಲಿನ ತಮ್ಮ ಹಿಡಿತವನ್ನು ಬಲಪಡಿಸಿದರೂ, ಅವರ ರಾಜಕೀಯ ಪ್ರಭಾವಕ್ಕೆ ಒಂದು ಇತಿಮಿತಿ ಇದೆ ಎಂಬುದನ್ನು ತೋರಿಸುವಲ್ಲಿ ಯಶಸ್ವಿಯಾಗಿರುವುದಕ್ಕೆ ಪ್ರತಿಪಕ್ಷ ಪಾಳೆಯದಲ್ಲಿ ಸಂತಸ ಎದ್ದು ಕಾಣುತ್ತಿದೆ. 

ಫಲಿತಾಂಶ ಪ್ರಕಗೊಂಡ ನಂತರ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ  Xನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಮೋದಿ, ಈ ಚುನಾವಣಾ ಫಲಿತಾಂಶವು ದೇಶದ ಪ್ರಜಾಪ್ರಭುತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಎನ್.ಡಿ.ಎ ಮೈತ್ರಿಕೂಟವು ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಏರುತ್ತಿರುವುದು, ಭಾರತದ ರಾಜಕೀಯ ಇತಿಹಾಸದಲ್ಲಿ ಒಂದು ಗಮನಾರ್ಹ ಮೈಲಿಗಲ್ಲು ಎಂದು ಮೋದಿ ಬಣ್ಣಿಸಿದ್ದಾರೆ.

ಮೋದಿ ಅವರ ಈ ಹೇಳಿಕೆಯನ್ನು ಸೌಮ್ಯ ವ್ಯಾಖ್ಯಾನ ಎಂದು ಬಣ್ಣಸಿರುವ ರಾಜಕೀಯ ವಿಶ್ಲೇಷಕರು, ಸದ್ಯದ ಪರಿಸ್ಥಿತಿಗೆ ಮೋದಿ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ. ತಮ್ಮ ಪ್ರಧಾನಿ ಪಟ್ಟಕ್ಕೆ ಎದುರಾಗಬಹುದಾದ ವಿರೋಧವನ್ನು ನಿಗ್ರಹಿಸುವುದು ಮೋದಿ ಅವರ ಮೊದಲ ಆದ್ಯತೆ ಆಗಿರುವಂತೆ ತೋರುತ್ತಿದೆ. ಇದಕ್ಕಾಗಿ ತಮ್ಮ ಹಿಂದೂ ರಾಷ್ಟ್ರೀಯತಾವಾದಿ ಸಿದ್ಧಾಂತದ ಪ್ರತಿಪಾದಕರಲ್ಲದ ಎನ್.ಡಿ.ಎ ಮೈತ್ರಿಕೂಟದ ಸಮ್ಮಿಶ್ರ ಪಾಲುದಾರರ ಮರ್ಜಿ ಕಾಯುವ ಅನಿವಾರ್ಯತೆ ಮೋದಿ ಅವರದ್ದಾಗಿದೆ.

ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಜನತಾ ದಳ (ಯುನೈಟೆಡ್) ಹೊಸ ಸರ್ಕಾರ ರಚನೆಯಲ್ಲಿ ಕಿಂಗ್‌ಮೇಕರ್‌ಗಳಾಗಿ ಹೊರಹೊಮ್ಮಿವೆ.  ಆಂಧ್ರಪ್ರದೇಶದಲ್ಲಿ ಟಿಡಿಪಿ 16 ಮತ್ತು ಬಿಹಾರದಲ್ಲಿ ಜೆಡಿಯು 12 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಈ ಪಕ್ಷಗಳು ಮುಂದಿನ ಸರ್ಕಾರ ರಚನೆಯಲ್ಲಿ  ಅತ್ಯಂತ ಪ್ರಮುಖ ಪಾತ್ರವನ್ನು ನಿರ್ವಹಿಸಲಿವೆ. 

ಜಾತ್ಯತೀತತೆಯ  ತಮ್ಮ ಬದ್ಧತೆಗೆ ಟಿಡಿಪಿ ಮತ್ತು ಜೆಡಿಯು ಬಲವಾಗಿ ಅಂಟಿಕೊಂಡಿವೆ. ಭಾರತದ ಆಡಳಿತದಲ್ಲಿ ಬಹುಸಂಖ್ಯಾತ ವಿಚಾರಧಾರೆಗೆ ಆದ್ಯತೆ ನೀಡುವ ಪ್ರಧಾನಿ ಮೋದಿಯವರ ಪ್ರಯತ್ನಗಳನ್ನು ವಿರೋಧಿಸುವವರಲ್ಲಿ, ಟಿಡಿಪಿ ಮತ್ತು ಜೆಡಿಯು ಪಕ್ಷಗಳ ನಿಲುವು ಭರವಸೆಯನ್ನು ಹುಟ್ಟುಹಾಕುತ್ತಿರುವುದು ಸುಳ್ಳಲ್ಲ.

ಮೂರು ಬಾರಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಭಾರತದ ಐಟಿ ಕ್ಷೇತ್ರದ ಬೆಳವಣಿಗೆಯಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆದರೆ ಭ್ರಷ್ಟಾಚಾರದ ಆರೋಪದಡಿ ಕಳೆದ ವರ್ಷ ಸೆರೆವಾಸ ಅನುಭವಿಸಿರುವ ನಾಯ್ಡು, ಈ ಬಾರಿಯ ಲೋಕಸಭೆ ಮತ್ತು ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ.  74 ವರ್ಷದ ನಾಯ್ಡು ಅವರು ಮತ್ತೊಂದು ಅವಧಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. 

ಇನ್ನು ಬಿಜೆಪಿಯ ಎರಡನೇ ಪ್ರಮುಖ ಪಾಲುದಾರ ಪಕ್ಷ ಜೆಡಿಯು ಬಿಹಾರದಲ್ಲಿ ಉತ್ತಮ ಫಲಿತಾಂಶ ಪಡೆದಿದೆ. ಆದರೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪದೇ  ಪದೇ ಮೈತ್ರಿಕೂಟ ಬದಲಿಸುವ ಚಾಳಿ, ಬಿಜೆಪಿ ಹೈಕಮಾಂಡ್ ಚಿಂತೆಗೆ ಕಾರಣವಾಗಿರುವುದು ಸುಳ್ಳಲ್ಲ. ಹೊಸ ಮೈತ್ರಿಗಳನ್ನು ರಚಿಸುವ ಮೂಲಕ ರಾಜಕೀಯವಾಗಿ ಪಿಟಿದೇಳುವ ನಿತೀಶ್ ಕುಮಾರ್, ಈ ಬಾರಿಯ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. 

ಪ್ರಧಾನಿ ಮೋದಿ ಮತ್ತು ಬಿಜೆಪಿಗೆ ಅನಿರೀಕ್ಷಿತ ಹೊಡೆತ ಬಿದ್ದಿರುವುದು ಉತ್ತರ ಪ್ರದೇಶದಲ್ಲಿ. ಒಟ್ಟು 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಈ ರಾಜ್ಯ, ಯಾರನ್ನು ದೆಹಲಿ ಗದ್ದುಗೆಯ ಮೇಲೆ ಕೂರಿಸಬೇಕು ಎಂಬ ತೀರ್ಮಾನ ಕೈಗೊಳ್ಳುವ ಸಾಮರ್ಥ್ಯ ಹೊಂದಿದೆ. ಬಿಜೆಪಿ ಈ ಬಾರಿ ಕೇವಲ  33 ಸ್ಥಾನಗಳನ್ನು ಗೆದ್ದುಕೊಂಡಿದೆ. ಪ್ರತಿಪಕ್ಷ ಸಮಾಜವಾದಿ ಪಕ್ಷ 37 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

ಅಯೋಧ್ಯೆಯ ರಾಮಮಂದಿರ ಇರುವ ಫೈಜಾಬಾದ್ ಕ್ಷೇತ್ರದಲ್ಲಿ, ಪಕ್ಷದ ಅಭ್ಯರ್ಥಿ ಸೋತಿರುವುದು ಬಿಜೆಪಿ ಮತ್ತು ಮೋದಿ ಅವರ ಆತಂಕಕ್ಕೆ ಕಾರಣವಾಗಿದೆ. ಹಿಂದುತ್ವ ಪ್ರತಿಪಾದನೆಗೆ ಬೇಕಾಗಿದ್ದ ಅತ್ಯಂತ ಪ್ರಮುಖ ಕ್ಷೇತ್ರ ಕೈ ತಪ್ಪಿರುವುದು ಕಮಲ ಪಾಳೆಯದಲ್ಲಿ ಬೇಸರಕ್ಕೆ ಕಾರಣವಾಗಿದೆ. ಚುನಾವಣೆಗೂ ಮೊದಲೇ ನಡೆದ ಭವ್ಯ ರಾಮ ಮಂದಿರದ  ಉದ್ಘಾಟನೆಯು, ಹಿಂದುತ್ವದ ಪ್ರತಿಪಾದಕರನ್ನು ಮತ್ತು ಹೊಸ ಮತದಾರರನ್ನು ಸೆಳೆಯಲಿದೆ ಎಂಬ ಬಿಜೆಪಿ ನಿರೀಕ್ಷೆ ಹುಸಿಯಾಗಿದೆ. 

ಮೇಲ್ಜಾತಿಗಳ ರಾಮ ಮಂದಿರದ ಮೇಲಿನ ಹಕ್ಕು ಪ್ರತಿಪಾದನೆ, ಕೆಲವು ಕೆಳ ಜಾತಿಗಳಲ್ಲಿ ಅಸಮಾಧಾನ ಮೂಡಲು ಕಾರಣವಾಗಿದೆ. ಹಿಂದೂ ಕೆಳ  ವರ್ಗದ ಜನತೆ ಬಿಜೆಪಿಯಿಂದ ದೂರ ಸರಿಯಲು ಇದು ಒಂದು ಪ್ರಮುಖ ಕಾರಣ ಎಂಬುದು ಸ್ಥಳಿಯ ಬಿಜೆಪಿ ಕಾರ್ಯಕರ್ತರ ಅಭಿಪ್ರಾಯವಾಗಿದೆ.  

ರಾಮ ಮಂದಿರದ ವಿಷಯದಲ್ಲಿ ಪ್ರಧಾನಿ ಮೋದಿ ಅವರು ಮೇಲ್ಜಾತಿಯ ಹಿತಾಸಕ್ತಿಗಳಿಗೆ ಒತ್ತು ನೀಡುತ್ತಿದ್ದಾರೆ ಎಂಬ ಪ್ರತಿಪಕ್ಷಗಳ ಆರೋಪ, ಚುನಾವಣೆಯಲ್ಲಿ ಬಿಜೆಪಿಗೆ ಪೆಟ್ಟು ನೀಡಿದೆ ಎನ್ನಲಾಗುತ್ತಿದೆ. ಹಿಂದುಳಿದವರ ಮೇಲಿನ ದಬ್ಬಾಳಿಕೆ ಕೊನೆಗಾಣಿಸಲು ಈ ಚುನಾವಣೆ ಕೊನೆಯ ಅವಕಾಶವೆಂಬ ಪ್ರತಿಪಕ್ಷಗಳ ಪ್ರಚಾರ, ಚುನಾವಣೆಯಲ್ಲಿ ಕೆಲಸ ಮಾಡಿದೆ ಎಂದು ಬಿಬಿಸಿ ವರದಿ ಮಾಡಿದೆ.

ಇನ್ನು ಕಳೆದ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಭಾರತದ ಒಟ್ಟು129 ಲೋಕಸಭಾ ಕ್ಷೇತ್ರಗಳ ಪೈಕಿ, ಬಿಜೆಪಿ 29 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ ಈ ಬಾರಿ ಈ ಸಂಖ್ಯೆಯನ್ನು ಮೀರಲು ಬಿಜೆಪಿಗೆ ಕಷ್ಟವಾಗಿದೆ. ಕೇರಳದಲ್ಲಿ ಈ ಬಾರಿ ಮೋದಿ ಸಾಧನೆ ಗಮನಾರ್ಹವಾಗಿದೆ. ಕೇರಳದಲ್ಲಿ ಒಂದು ಖಾತೆಯನ್ನು ತೆರೆಯುವ ಮೂಲಕ ಬಿಜೆಪಿ ಗಮನ ಸೆಳೆದಿದೆ.

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ದೊಡ್ಡ ಹಿನ್ನಡೆ ಎಂದರೆ ತಮಿಳುನಾಡಿನ 40 ಸ್ಥಾನಗಳ ಪೈಕಿ ಒಂದರಲ್ಲೂ ಗೆಲ್ಲದಿರುವುದು. ಮೋದಿ ಈ ಬಾರಿ ತಮಿಳುನಾಡಿನಲ್ಲಿ ಬಿರುಸಿನ ಪ್ರಚಾರ ನಡೆಸಿದ್ದರು. ಚುನಾವಣೆ ಹತ್ತಿರವಾಗುತ್ತಿದ್ದಂತೆ ಕನ್ಯಾಕುಮಾರಿಯಲ್ಲಿ ಎರಡು ದಿನಗಳ ಕಾಲ ಧ್ಯಾನ ಮಾಡಿದ್ದ ಮೋದಿ ಅವರನ್ನು, ತಮಿಳುನಾಡಿನ ಜನತೆ ಒಪ್ಪಿಕೊಂಡಿಲ್ಲ ಎಂಬುದು ಚುನಾವಣಾ ಫಲಿತಾಂಶದಿಂದ ಸ್ಪಷ್ಟವಾಗಿದೆ.

ಮರಳಿದ ಸಮ್ಮಿಶ್ರ ಯುಗ: ಭಾರತದ ರಾಜಕೀಯ ಕ್ಷೇತ್ರವು ಅಸ್ತವ್ಯಸ್ತ ಸಮ್ಮಿಶ್ರ ಸರ್ಕಾರಗಳ ಇತಿಹಾಸವನ್ನು ಹೊಂದಿದೆ. ಆದಾಗ್ಯೂ ಈ ಸಮ್ಮಿಶ್ರ ಸರ್ಕಾರಗಳು 1990ರ ದಶಕದ ಆರಂಭದಲ್ಲಿ ಮತ್ತು 2000ರ ದಶಕದಲ್ಲಿ ಕೆಲವು ಆರ್ಥಿಕ ಸುಧಾರಣೆಗಳನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಆದರೆ 2014ರಲ್ಲಿ ಸುಭದ್ರ  ಸರ್ಕಾರ ರಚನೆಯಾದ ಬಳಿಕ, ಭಾರತದಲ್ಲಿ ಇನ್ನು ಸಮ್ಮಿಶ್ರ ಸರ್ಕಾರಗಳ ಯುಗ ಮುಗಿಯುತು ಎಂದು ವಿಶ್ಲೇಷಿಸಲಾಗಿತ್ತು. ಆದರೆ 2024ರಲ್ಲಿ ದೇಶ ಮತ್ತೆ ಸಮ್ಮಿಶ್ರ ಸರ್ಕಾರವನ್ನು ಕಾಣುವಂತಾಗಿದೆ.

ಪ್ರಧಾನೀ ಮೋದಿ ಈ ಬಾರಿ ಮಿತ್ರಪಕ್ಷಗಳ ಮೇಲೆ ಹೆಚ್ಚು ಅವಲಂಬಿತರಾಗಲಿದ್ದಾರೆ. ಮಿತ್ರಪಕ್ಷಗಳನ್ನು ನಿರ್ಲಕ್ಷಿಸಿದರೆ ಸರ್ಕಾರವು ಪತನಕ್ಕೆ ಗುರಿಯಾಗಲಿದೆ. 2014 ಮತ್ತು 2019ರಲ್ಲಿ ಸರ್ವಶಕ್ತ ಎಂದು ಗುರುತಿಸಿಕೊಂಡಿದ್ದ ಬಿಜೆಪಿ ಇದೀಗ ಮಿತ್ರಪಕ್ಷಳೊಂದಿಗೆ ಹೊಂದಿಕೊಂಡು ಹೋಗುವ ಗುಣವನ್ನು ಬೆಳೆಸಿಕೊಳ್ಳಬೇಕಿದೆ.

ಬಲಗೊಂಡ ಪ್ರತಿಪಕ್ಷಗಳು: 2014ರಿಂದ ಧ್ವನಿ ಕಳೆದುಕೊಂಡಿದ್ದ ಪ್ರತಿಪಕ್ಷಗಳು ಈ ಬಾರಿ ಮೈಕೊಡವಿಕೊಂಡು ಎದ್ದಿವೆ. ಅದರಲ್ಲೂ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಪಾಲಿಗಂತೂ ಈ ಚುನಾವಣಾ ಫಲಿತಾಂಶ ಹೊಸ ಚೈತನ್ಯ ನೀಡಿದೆ. ಚುನಾವಣೆ ಸಮೀಪಿಸುತ್ತಿದ್ದಂತೇ I.N.D.I.A ಮೈತ್ರಿಕೂಟದಿಂದ ನಿತೀಶ್  ಕುಮಾರ್ ಹೊರ ನಡೆದಿದ್ದರು. ಇಂತಹ ಕೆಲವು ಅಡೆತಡೆಗಳ ನಡುವೆಯೂ ಪ್ರತಿಪಕ್ಷ ಮೈತ್ರಿಕೂಟ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡಿದೆ.  

 ಸೀಮಿತ ಸಂಪನ್ಮೂಲ ಮತ್ತು ಮಾಧ್ಯಮ ಪ್ರಸಾರದ ಹೊರತಾಗಿಯೂ, ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಪಕ್ಷ ಮೈತ್ರಿಕೂಟ ಪ್ರಬಲ ಪೈಪೋಟಿ ನೀಡಿದೆ. ಬಿಜೆಪಿಯು ಪ್ರಸ್ತುತ ಭಾರತದ 4,000ಕ್ಕೂ ಅಧಿಕ ರಾಜ್ಯ ವಿಧಾನಸಭೆ ಸೀಟುಗಳ ಪೈಕಿ ಕೇವಲ ಮೂರನೇ ಒಂದು ಭಾಗವನ್ನು ಮಾತ್ರ ಹೊಂದಿದ್ದು, ಪ್ರಾದೇಶಿಕ ಪಕ್ಷಗಳನ್ನೂ ಒಳಗೊಂಡ I.N.D.I.A ಮೈತ್ರಿಕೂಟಕ್ಕೆ ಉಜ್ವಲ ಭವಿಷ್ಯ ಕಾಣುತ್ತಿದ್ದರೆ ಅಚ್ಚರಿ ಏನಿಲ್ಲ. ಮುಂಬರುವ 14 ತಿಂಗಳುಗಳಲ್ಲಿ ಒಟ್ಟು ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಎಲ್ಲಾ ರಾಜ್ಯಗಳಲ್ಲೂ ತೀವ್ರ ಸ್ಪರ್ಧೆ ಕಾಣಲಿದೆ ಎಂದು ನಿರೀಕ್ಷಿಸಲಾಗಿದೆ.

ಈ ವರ್ಷ ನಡೆಯಲಿರುವ ಮಹಾರಾಷ್ಟ್ರ, ಜಾರ್ಖಂಡ್ ಮತ್ತು ಹರಿಯಾಣ ರಾಜ್ಯಗಳವಿಧಾನಸಭೆ ಚುನಾವಣೆಯಲ್ಲಿ, ಬಿಜೆಪಿಯು I.N.D.I.A ಮೈತ್ರಿಕೂಟದ ಕಡೆಯಿಂದ ಬಿಜೆಪಿ ಗಮನಾರ್ಹ ಸವಾಲುಗಳನ್ನು ಎದುರಿಸಬಹುದು. ಅದೇ  ರೀತಿ ದೆಹಲಿ ಮತ್ತು ಬಿಹಾರ ಚುನಾವಣೆಗಳಲ್ಲೂ  ಬಿಜೆಪಿಗೆ I.N.D.I.A  ಮೈತ್ರಿಕೂಟದ ಕಡೆಯಿಂದ ಕಠಿಣ ಸ್ಪರ್ಧೆ ಎದುರಾಗುವ ಸಂಭವನೀಯತೆ ಹೆಚ್ಚಿದೆ.

3ನೇ ಅವಧಿಯ ಸವಾಲುಗಳು: ಜಾಗತಿಕ ಮಟ್ಟದಲ್ಲಿ ಭಾರತದ ಘನತೆ ಹೆಚ್ಚಿರುವ ಈ ಸಂದರ್ಭದಲ್ಲಿ, ಪ್ರಧಾನಿ ಮೋದಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟದ ಸರ್ಕಾರ ಹೊಸ ಸವಾಲುಗಳನ್ನು ಎದುರಿಸಬೇಕಿದೆ. ಆರ್ಥಿಕತೆಯು ಬೆಳವಣಿಗೆಗೆ ವೇಗ ನೀಡುವುದಕ್ಕೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ. ಖಾಸಗಿ ಮತ್ತು ಸಾರ್ವಜನಿಕ ವಲಯಕ್ಕೆ ಚೈತನ್ಯ ತುಂಬಬೇಕಿದ್ದು, ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸಲು ಹಲವು ಕ್ರಾಂತಿಕಾರಿ ಬದಲಾವಣೆಯನ್ನು ನಾವು ಹೊಸ ಸರ್ಕಾರದಿಂದ ನಿರೀಕ್ಷಿಸಬಹುದಾಗಿದೆ.

ಇದೇ ವೇಳೆ ಬಹುಸಂಖ್ಯಾತ  ರಾಜಕಾರಣ ನೀತಿಯಿಂದ ದೂರವಾಗಿರುವ ಅಲ್ಪಸಂಖ್ಯಾತರನ್ನು ಹತ್ತಿರಕ್ಕೆ ಕರೆತರುವ ಕೆಲಸ ಆಗಬೇಕಿದೆ. ಅಲ್ಲದೇ  ಭಿನ್ನ ಧ್ವನಿಗಳನ್ನು ಹತ್ತಿಕ್ಕುವ ಆರೋಪದಿಂದ ಈ ಬಾರಿ ಎನ್.ಡಿ.ಎ ಸರ್ಕಾರ ಮುಕ್ತವಾಗಬೇಕಿದೆ. ಪ್ರತಿಪಕ್ಷಗಳನ್ನು ಹಣಿಯಲು ಸರ್ಕಾರಿ ಯಂತ್ರಗಳ ದುರುಪಯೋಗದ ಅರೋಪದಿಂದಲೂ ಮುಕ್ತವಾಗುವ ಅವಕಾಶ ಮೋದಿ ಸರ್ಕಾರಕ್ಕೆ ದೊರೆತಿದೆ. 

ಯಾವುದೇ ಅನಿರೀಕ್ಷಿತ ಘಟನೆಗಳು ಸರ್ಕಾರವನ್ನು ಅದರ ಉದ್ದೇಶಿತ ಹಾದಿಯಿಂದ ದೂರವಿಡಬಹುದು ಮತ್ತು ಅದರ ಭವಿಷ್ಯದ ಯೋಜನೆಗಳಿಗೆ ಅಡ್ಡಿಪಡಿಸಬಹುದು. ಈ ಕಾರಣಕ್ಕೆ ಪ್ರಧಾನಿ ಮೋದಿ ಮತ್ತು ಎನ್.ಡಿ.ಎ ಮೈತ್ರಿಕೂಟ ಎಚ್ಚರಿಕೆಯಿಂದ ಹೆಜ್ಜೆ ಇಡಲಿದೆ ಎಂದು ನಿರೀಕ್ಷಿಸಲಾಗಿದೆ.

click me!