
ಕೊಯಂಬತ್ತೂರು: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ರಾಜಕೀಯ ಸೇರುವುದಕ್ಕಾಗಿ ತಮ್ಮ ಸರ್ಕಾರಿ ಕೆಲಸವನ್ನು ತೊರೆದವರು. ಬಿಜೆಪಿ ಸೇರಿದ ಅವರನ್ನು ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಕೂಡ ಮಾಡಲಾಗಿತ್ತು. ತಮಿಳುನಾಡಿನಲ್ಲಿ ನೆಲೆ ಕಾಣುವುದಕ್ಕೆ ಯತ್ನಿಸುತ್ತಿರುವ ಬಿಜೆಪಿ ಆಸೆಗೆ ಅಣ್ಣಾಮಲೈ ಅವರ ಸೇರ್ಪಡೆಯಿಂದ ಬಲ ಬಂದಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರು ತಮಿಳುನಾಡಿನ ಕೊಯಂಬತ್ತೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಡಿಎಂಕೆ ಅಭ್ಯರ್ಥಿ ವಿರುದ್ಧ ಸೋಲು ಕಂಡಿದ್ದರು ಕೂಡ ಬರೋಬ್ಬರಿ 4,47,608 ಮತಗಳನ್ನು ಸೆಳೆಯುವಲ್ಲಿ ಅವರು ಯಶಸ್ವಿಯಾಗಿದ್ದರು.
ರಾಜ್ಯದಲ್ಲಿ ಬಿಜೆಪಿಗಾಗಿ ಅವರು ತಳಮಟ್ಟದಲ್ಲಿ ಕೆಲಸ ಮಾಡಲು ಶುರು ಮಾಡಿದ್ದರು. ಆದರೆ ಅಷ್ಟರಲ್ಲಿ ಮುಂದಿನ ತಮಿಳುನಾಡು ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ರಾಷ್ಟ್ರಮಟ್ಟದ ಬಿಜೆಪಿ ನಾಯಕರು ಅಲ್ಲಿನ ಹಳೆಯ ಪ್ರಾದೇಶಿಕ ಪಕ್ಷ ಎಐಎಡಿಂಕೆ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಅಣ್ಣಾಮಲೈ ಅವರು ಎಐಎಡಿಎಂಕೆಯ ರಾಜಕಾರಣವನ್ನೂ ಕೂಡ ಟೀಕಿಸುತ್ತಾ ಬಂದವರು. ಹೀಗಾಗಿ ಪಕ್ಷ ರಾಷ್ಟ್ರಮಟ್ಟದಲ್ಲಿ ತಾವು ವಿರೋಧಿಸುತ್ತಿದ್ದ ಪಕ್ಷದೊಂದಿಗೆ ಒಪ್ಪಂದ ಮಾಡಿಕೊಂಡಾಗ ಅದನ್ನು ನಿರಾಕರಿಸಲು ಸಾಧ್ಯವಿರಲಿಲ್ಲ, ಅಣ್ಣಾಮಲೈ ಅವರ ಮಾತುಗಳನ್ನು ಕೇಳುವುದಕ್ಕೆ ಬಿಜೆಪಿ ನಾಯಕರು ಸಿದ್ಧರಿರಲಿಲ್ಲ. ಆದರೆ ಪಕ್ಷದ ಮೈತ್ರಿಯ ದೃಷ್ಟಿಯಿಂದ ಎಐಎಡಿಎಂಕೆಯ ಬಗ್ಗೆ ಏನೇನು ಮಾತನಾಡದಂತೆ ಅಣ್ಣಾಮಲೈ ಅವರಿಗೆ ಬಿಜೆಪಿ ತಾಕೀತು ಮಾಡಿತ್ತು. ಇತ್ತ ಎಐಎಡಿಂಎಂಕೆ ನಾಯಕರು ಇದನ್ನೇ ಬಳಸಿಕೊಂಡು ಅಣ್ಣಾಮಲೈ ಅವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದರು ಟೀಕಿಸಲು ಶುರು ಮಾಡಿದ್ದರು. ಹೀಗಿದ್ದರು ಅಣ್ಣಾಮಲೈ ಅವರು ಮೌನವಾಗಿದ್ದರು.
ಈ ಮಧ್ಯೆ ಬಿಜೆಪಿ ಹಾಗೂ ಅಣ್ಣಾಮಲೈ ಅವರ ಮಧ್ಯೆ ಎಲ್ಲವೂ ಸರಿ ಇಲ್ಲ, ಅವರು ಹೊಸ ಪಕ್ಷವೊಂದನ್ನು ಕಟ್ಟುತ್ತಾರೆ ಎಂಬ ವದಂತಿಗಳು ಹಬ್ಬಿದ್ದವು. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಣ್ಣಾಮಲೈ ಅವರು ಪ್ರತಿಕ್ರಿಯಿಸಿದ್ದು, ಹೊಸ ಪಕ್ಷ ಸ್ಥಾಪಿಸುವ ವಿಚಾರಕ್ಕೆ ಸಂಬಂಧಿಸಿದ ವರದಿಗಳನ್ನು ತಳ್ಳಿ ಹಾಕಿದ್ದಾರೆ. ಆದರೆ ಪಕ್ಷದ ಸಂಘಟನೆಯ ವಿಚಾರದಲ್ಲಿ ತಮ್ಮ ಪಾತ್ರದ ಬಗ್ಗೆ ಪಕ್ಷದ ಜೊತೆ ಸಂಘರ್ಷವಿದೆ ಎಂಬ ಬಗ್ಗೆ ಅವರು ಒಪ್ಪಿಕೊಂಡಿದ್ದು, ಯಾರನ್ನೂ ಕೂಡ ತಲೆಗೆ ಗನ್ ಇಟ್ಟು ಪಕ್ಷದಲ್ಲಿ ಉಳಿಯಿರಿ ಎಂದು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಹಾಗೆಯೇ ತಮಿಳುನಾಡಿನಲ್ಲಿ ಎನ್‌ಡಿಎಯ(ಬಿಜೆಪಿ) ಬೆಳವಣಿಗೆಯ ಬಗ್ಗೆ ಕೊಯಮತ್ತೂರಿನಲ್ಲಿ ಪತ್ರಕರ್ತರು ಅಣ್ಣಾಮಲೈ ಅವರನ್ನು ಕೇಳಿದಾಗ ನಾನು ಕೂಡ ಬಿಜೆಪಿಯ ಕಾರ್ಯಕರ್ತನಾಗಿ ಕಾಯುತ್ತಿದ್ದೇನೆ ಮತ್ತು ಗಮನಿಸುತ್ತಿದ್ದೇನೆ ಎಂದು ಹೇಳಿದರು.
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಗೆಲ್ಲಬೇಕು ಎಂಬ ಸರ್ವಾನುಮತದ ಅಭಿಪ್ರಾಯವನ್ನು ನಾವೆಲ್ಲರೂ ಹೊಂದಿದ್ದೇವೆ. ಮುತ್ತುರಾಮಲಿಂಗ ತೇವರ್ ಅವರ ಸ್ಮಾರಕದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ನಾವು ಹಲವಾರು ರಾಜಕೀಯ ಬೆಳವಣಿಗೆಗಳನ್ನು( (ಎಐಎಡಿಎಂಕೆ ಬಂಡುಕೋರರ ಒಗ್ಗೂಡುವಿಕೆ) ಕಂಡಿದ್ದೇವೆ. ನಾನು ಬಿಜೆಪಿಗೆ ಸೇರಿರುವುದರಿಂದ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಶುದ್ಧ ರಾಜಕೀಯವನ್ನು ನೀಡುತ್ತಾರೆ ಎಂಬ ವಿಶ್ವಾಸದಿಂದ ಅದರ ಭಾಗವಾಗಿ ಮುಂದುವರಿಯುತ್ತಿರುವುದರಿಂದ ನಾನು ಕುತೂಹಲದಿಂದ ಕಾಯುತ್ತಿದ್ದೇನೆ. ಇಲ್ಲದಿದ್ದರೆ ನಾನು ನನ್ನ ಕೆಲಸವನ್ನು ತ್ಯಜಿಸಿ ಪಕ್ಷದ ಕಾರ್ಯಕರ್ತನಾಗುವ ಅಗತ್ಯವಿರಲಿಲ್ಲ ಎಂದು ಅಣ್ಣಾಮಲೈ ಹೇಳಿದರು.
ರಾಜ್ಯದಲ್ಲಿ ಮೈತ್ರಿಕೂಟದ ರಚನೆಯ ಬಗ್ಗೆ ಪತ್ರಕರ್ತರು ಕೇಳಿದಾಗ ಆ ಬಗ್ಗೆ ಪ್ರತಿಕ್ರಿಯಿಸಲು ನನಗೆ ಅಧಿಕಾರವಿಲ್ಲ ಎಂದು ಹೇಳಿದ ಅವರು, ನನಗೆ ಇಷ್ಟವಾದರೆ ನಾನು ಉಳಿಯುತ್ತೇನೆ ಅಥವಾ ಇಷ್ಟವಿಲ್ಲದಿದ್ದರೆ ನಾನು ರಾಜೀನಾಮೆ ನೀಡಿ ಕೃಷಿ ಮಾಡುವುದನ್ನು ಮುಂದುವರಿಸುತ್ತೇನೆ. ಸಮಯ ಬಂದಾಗ ನಾನು ಮಾತನಾಡುತ್ತೇನೆ. ತಲೆಯ ಮೇಲೆ ಬಂದೂಕನ್ನು ಹಿಡಿದು ಯಾರನ್ನೂ ಪಕ್ಷದಲ್ಲಿ ಉಳಿಯುವಂತೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಇದು ಸ್ವಯಂಪ್ರೇರಿತ ಕಾರ್ಯವಿಧಾನ. ನಾವು ನಮ್ಮ ಸ್ವಂತ ಹಣವನ್ನು ಖರ್ಚು ಮಾಡುವ ಮೂಲಕ ರಾಜಕೀಯದಲ್ಲಿದ್ದೇವೆ ಎಂದು ಹೇಳಿದರು. ನಾನು ಯಾವಾಗಲೂ ನೇರವಾಗಿ ಮಾತನಾಡುತ್ತೇನೆ. ನಾನು ಇನ್ನೂ ಕಾಯಲು ಸಿದ್ಧನಿದ್ದೇನೆ. ನಾನು ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಮಾತನಾಡುವ ಸಾಂಪ್ರದಾಯಿಕ ರಾಜಕಾರಣಿಯಲ್ಲ ಎಂದು ಅವರು ಹೇಳಿದರು.
ಪಕ್ಷವನ್ನು ಪ್ರಾರಂಭಿಸುವ ಸಾಧ್ಯತೆಯ ಕುರಿತು ಕೇಳಿದಾಗ ಪ್ರತಿಕ್ರಿಯಿಸಿದ ಅವರು, ನಾನು ಯಾವುದೇ ರಾಜಕೀಯ ಬೆಂಬಲವಿಲ್ಲದ ಕೃಷಿಕ ಕುಟುಂಬದಿಂದ ಬಂದ ಮೊದಲ ತಲೆಮಾರಿನ ರಾಜಕಾರಣಿ. ನಾನು ಹೊಸ ಪಕ್ಷವನ್ನು ಪ್ರಾರಂಭಿಸುವುದು ಹೇಗೆ? ನನ್ನ ಮಿತಿಯ ಬಗ್ಗೆ ನನಗೆ ತಿಳಿದಿದೆ. ಪ್ರಧಾನಿ ನರೇಂದ್ರ ಮೋದಿಯವರ ಮೇಲಿನ ನನ್ನ ವಿಶ್ವಾಸ ಉಳಿದಿದೆ. ಕೆಲವೊಮ್ಮೆ ನಾನು ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ಮಾತನಾಡುತ್ತಿದ್ದೇನೆ. ನಾಯಕರು ಹೇಳುತ್ತಿರುವುದರಿಂದ ನನ್ನ ಆತ್ಮಸಾಕ್ಷಿ ಬೇರೇನನ್ನಾದರೂ ಹೇಳುವಾಗ ನಾನು ಏನನ್ನಾದರೂ ಹೇಳುತ್ತೇನೆ. ಆದರೂ, ಕೆಲವು ವಿಷಯಗಳನ್ನು ನಾವು ಸಹಿಸುವುದಿಲ್ಲ. ಕಾದು ನೋಡೋಣ. ಒಳ್ಳೆಯದು ಆಗುತ್ತದೆ ಎಂದು ಅಣ್ಣಾಮಲೈ ಹೇಳಿದ್ದಾರೆ.
ಅನೇಕ ಎಐಎಡಿಎಂಕೆ ನಾಯಕರು ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದು ಹೇಳಿದ ಅಣ್ಣಾಮಲೈ, ಅಮಿತ್ ಶಾ ಅವರಿಗೆ ನಾನು ನೀಡಿದ ಮಾತಿನಿಂದಾಗಿ ನಾನು ಮೌನವಾಗಿದ್ದೇನೆ. ನಾನು ಅವರಿಗೆ ತಿರುಗೇಟು ನೀಡುವುದಕ್ಕೆ ಕೇವಲ 2 ನಿಮಿಷ ಸಾಕು, ಎಲ್ಲರಿಗೂ ಮಿತಿ ಇದೆ, ಲಕ್ಷ್ಮಣ ರೇಖೆ ಇದೆ ಸಮಯ ಬಂದಾಗ ನಾನು ಮಾತನಾಡುತ್ತೇನೆ ಎಂದು ಅವರು ಹೇಳಿದರು.
ಇದನ್ನೂ ಓದಿ: ರಾಷ್ಟ್ರ ಮಟ್ಟದ ಕಬ್ಬಡಿ ಆಟಗಾರ ತೇಜ್‌ಪಾಲ್ ಗುಂಡೇಟಿಗೆ ಬಲಿ
ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಕೆಲಸ ಮಾಡ್ತಿದ್ದ 26 ವರ್ಷ ಭಾರತೀಯ ಯುವಕ ಪೊಲೀಸರ ಗುಂಡೇಟಿಗೆ ಬಲಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ