ಶಿಕ್ಷಕರ ನೇಮಕ ಹಗರಣ: ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಬಂಧನ!

By Santosh Naik  |  First Published Jul 23, 2022, 10:32 AM IST

ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ವಿಚಾರಣೆ ಈಗ ಸಚಿವರ ಮಟ್ಟಕ್ಕೆ ತಲುಪಿದೆ. ಶುಕ್ರವಾರ ಜಾರಿ ನಿರ್ದೇಶನಾಲಯ ಸಚಿವ ಪಾರ್ಥ ಚಟರ್ಜಿ ಅವರಿಗೆ ಸಂಬಂಧಪಟ್ಟ ಫ್ಲ್ಯಾಟ್‌ನ ಮೇಲೆ ದಾಳಿ ನಡೆಸಿ ಬರೋಬ್ಬರಿ 21 ಕೋಟಿ ರೂಪಾಯಿ ವಶಪಡಿಸಿಕೊಂಡಿತ್ತು. ಹಣವನ್ನು ಗುಡ್ಡೆ ಹಾಕಿರುವ ಚಿತ್ರಗಳು ವೈರಲ್ ಆಗಿದ್ದವು.
 


ಕೋಲ್ಕತ್ತಾ(ಜುಲೈ 23):  ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣದ ತನಿಖೆ ಈಗ ಸಚಿವರ ಮಟ್ಟಕ್ಕೆ ತಲುಪಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ಸಚಿವ ಹಾಗೂ ಮಮತಾ ಬ್ಯಾನರ್ಜಿ ಅವರ ಬಲಗೈ ಬಂಟ ಎಂದೇ ಗುರುತಿಸಿಕೊಂಡಿದ್ದ ಪಾರ್ಥ ಚಟರ್ಜಿ ಅವರ ಮನೆಯಲ್ಲಿ ಇಡಿ ತಂಡ ಶುಕ್ರವಾರದಿಂದ ತನಿಖೆ ನಡೆಸುತ್ತಿದೆ. ಶನಿವಾರ ಮುಂಜಾನೆಯ ವೇಳೆ ಪಾರ್ಥ ಚಟರ್ಜಿ ಅವರನ್ನು ಜಾರಿ ನಿರ್ದೇಶನಾಲಯ ಬಂಧನ ಮಾಡಿದೆ. ಅನಾರೋಗ್ಯದ ಕಾರಣ ನೀಡಿ ಪಾರ್ಥ ಚಟರ್ಜಿ ಬಂಧನದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರಾದರೂ, ಇಬ್ಬರು ವೈದ್ಯರ ತಂಡ ಅವರನ್ನು ಪರಿಶೀಲನೆ ಮಾಡಿದ ಬಳಿಕ ಬಂಧನ ಮಾಡಲಾಗಿದೆ. ಮಾಹಿತಿಯ ಪ್ರಕಾರ, ಬಂಧನದ ನಂತರ ಪಾರ್ಥ ಚಟರ್ಜಿಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಕರೆದೊಯ್ಯಲಾಗುತ್ತಿದೆ. ಪಾರ್ಥ್ ಅವರನ್ನು ಕೋಲ್ಕತ್ತಾದ ಸಿಜಿಒ ಕಾಂಪ್ಲೆಕ್ಸ್‌ಗೆ ಕರೆದೊಯ್ಯಲಾಗುತ್ತದೆ ಎಂದು ಹೇಳಲಾಗಿದೆ. ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಅವರ ನಿಕಟವರ್ತಿ ಅರ್ಪಿತಾ ಮುಖರ್ಜಿ ಅವರ ಮನೆ ಮೇಲೂ ಇಡಿ ದಾಳಿ ನಡೆಸಿದೆ. ಅವರ ಮನೆಯಲ್ಲಿ 21 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ. ಅದರೊಂದಿಗೆ 50 ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನಾಭರಣಗಳೂ ಪತ್ತೆಯಾಗಿವೆ.

ಅರ್ಪಿತಾ ಚಟರ್ಜಿಯನ್ನೂ ಕೂಡ ಈ ಪ್ರಕರಣದಲ್ಲಿ ಬಂಧಿಸಬಹುದು ಎಂದು ಹೇಳಲಾಗಿದೆ. ಕಲ್ಕತ್ತಾ ಹೈಕೋರ್ಟ್‌ನ ಸೂಚನೆಯ ಮೇರೆಗೆ ತಂಡವೊಂದು ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದ ನೇಮಕಾತಿ ಹಗರಣದ ಆರೋಪಿ ಪಾರ್ಥ್ ಅವರ ಮನೆಗೆ ತಡರಾತ್ರಿ ತಲುಪಿತ್ತು.

Tap to resize

Latest Videos

ಅರ್ಪಿತಾ ಅಲ್ಲದೆ ಇಡಿ ಹಲವೆಡೆ ದಾಳಿ ನಡೆಸಿತ್ತು. ಮಾಣಿಕ್ ಭಟ್ಟಾಚಾರ್ಯ, ಅಲೋಕ್ ಕುಮಾರ್ ಸರ್ಕಾರ್, ಕಲ್ಯಾಣ್ ಮೋಯ್ ಗಂಗೂಲಿ ಮುಂತಾದವರ ಹೆಸರುಗಳು ಈ ಪಟ್ಟಿಯಲ್ಲಿ ಸೇರಿವೆ. ಬಂಗಾಳದ ಶಿಕ್ಷಣ ನೇಮಕಾತಿ ಹಗರಣದಲ್ಲಿ ಇವರೆಲ್ಲರ ಸಂಪರ್ಕ ಬಯಲಿಗೆ ಬಂತು. ಆದರೆ ಅರ್ಪಿತಾ ಅವರ ಮನೆಗೆ 21 ಕೋಟಿ ನಗದು ಸಿಕ್ಕಿದ್ದು ಅವರ ವಿರುದ್ಧ ದೊಡ್ಡ ಕ್ರಮ ಕೈಗೊಳ್ಳಲಾಗಿದೆ. ದಾಳಿ ವೇಳೆ ಅರ್ಪಿತಾ ಮನೆಯಿಂದ 20 ಫೋನ್‌ಗಳನ್ನು ಇಡಿ ವಶಪಡಿಸಿಕೊಂಡಿದೆ. ಅರ್ಪಿತಾ ಆ ಫೋನ್‌ಗಳನ್ನು ಬಳಸಿ ಏನು ಮಾಡುತ್ತಿದ್ದಳು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆ ಕಾರಣದಿಂದ ಇಡಿ ಆಕೆಯನ್ನೂ ಕೂಡ ಈ ತನಿಖೆಯಲ್ಲಿ ಸೇರಿಸಿದೆ.

ಶಿಕ್ಷಕ ನೇಮಕ ಹಗರಣ: ಬಂಗಾಳ ಮಂತ್ರಿ ಆಪ್ತೆ ಮನೇಲಿ 20 ಕೋಟಿ ಕ್ಯಾಷ್‌!

ಅರೆಸ್ಟ್‌ ಮೆಮೋಗೆ ಸಹಿ ಹಾಕಿದ ಪಾರ್ಥ ಚಟರ್ಜಿ: ಇಡಿ ಅಕ್ರಮ ಹಣ ವರ್ಗಾವಣೆ ವಿಚಾರವಾಗಿ ಕೆಲಸ ಮಾಡುತ್ತದೆ. ಮತ್ತು ಈ ಇಲಾಖೆಯು ಅಕ್ರಮ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ಮಾಡುತ್ತದೆ. ಅರೆಸ್ಟ್‌ ಮೆಮೋ ಎಂದರೆ ಇಡಿ ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರವನ್ನು ನೀಡದೇ ಇದ್ದಲ್ಲಿ ಅವನ್ನು ಬಂಧನ ಮಾಡಲಾಗುತ್ತದೆ ಪಾರ್ಥ ಚಟರ್ಜಿ ವಿಚಾರದಲ್ಲೂ ಇದೇ ರೀತಿ ಆಗಿದೆ. ಆ ಕ್ಷಣದಲ್ಲಿ ಅವರು ಇದಕ್ಕೆ ಸಮರ್ಪಕವಾದ ಉತ್ತರವನ್ನು ನೀಡಿಲ್ಲ. ಇಡಿಯ ಬಂಧನ ಸರಿಯೋ ತಪ್ಪೋ ಎನ್ನುವುದನ್ನು ನ್ಯಾಯಾಲಯ ನಿರ್ಧಾರ ಮಾಡುತ್ತದೆ.

ಪಿಎಸ್‌ಐ ನೇಮಕಾತಿ ಹಗರಣ: ಅಮೃತ್‌ ಪೌಲ್‌ ವಿಚಾರಣೆಯ ಇನ್‌ಸೈಡ್‌ ಡೀಟೆಲ್ಸ್

 

ಏನಿದು ಹಗರಣ: ಪಶ್ಚಿಮ ಬಂಗಾಳ ಸರ್ಕಾರದ ಸಚಿವರ ವಿರುದ್ಧ ತೆಗೆದುಕೊಂಡಿರುವ ಈ ಸಂಪೂರ್ಣ ಕ್ರಮವು ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದೆ. ಈ ನೇಮಕಾತಿ ಪ್ರಕ್ರಿಯೆಯು 2016 ರಲ್ಲಿ ಪ್ರಾರಂಭವಾಯಿತು. ನಕಲಿ ವಿಧಾನದಿಂದ ಒಎಂಆರ್‌ ಶೀಟ್‌ ಅನ್ನು ತಿದ್ದುವ ಮೂಲಕ ನೇಮಕಾತಿಯನ್ನು ಅಕ್ರಮವಾಗಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಲಕ್ಷಾಂತರ ರೂಪಾಯಿ ಲಂಚ ಪಡೆದು, ಫೇಲ್‌ ಆಗುವಂತವರನ್ನೂ ಪಾಸ್‌ ಮಾಡಲಾಗಿದೆ. ಈ ಘಟನೆಯಲ್ಲಿ ಶಿಕ್ಷಣ ಸಚಿವರೇ ನೇರವಾಗಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಲ್ಲಿ ಹಲವರು ಭಾಗಿಯಾಗಿದ್ದು, ಶೀಘ್ರ ಬಂಧಿಸಲಾಗುವುದು ಎಂದು ಹೇಳಲಾಗುತ್ತಿದೆ.ಈ ಘಟನೆಯಲ್ಲಿ ಶಿಕ್ಷಣ ಸಚಿವರೇ ನೇರವಾಗಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಲ್ಲಿ ಹಲವರು ಭಾಗಿಯಾಗಿದ್ದು, ಶೀಘ್ರ ಬಂಧಿಸಲಾಗುವುದು ಎಂದು ಹೇಳಲಾಗುತ್ತಿದೆ.

click me!