Corona Vaccine: 4 ಕೋಟಿ ಜನರು ಒಂದು ಡೋಸು ಪಡೆದಿಲ್ಲ: ಕೇಂದ್ರ

By Govindaraj SFirst Published Jul 23, 2022, 8:50 AM IST
Highlights

ದೇಶದಲ್ಲಿ ಮತ್ತೆ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಸುಮಾರು 4 ಕೋಟಿ ಅರ್ಹ ಜನರು ಕೋವಿಡ್‌ ಲಸಿಕೆಯ ಒಂದು ಡೋಸನ್ನು ಕೂಡ ಪಡೆದುಕೊಂಡಿಲ್ಲ ಎಂಬ ಕಳವಳಕಾರಿ ವಿಚಾರ ಬೆಳಕಿಗೆ ಬಂದಿದೆ.

ನವದೆಹಲಿ (ಜು.23): ದೇಶದಲ್ಲಿ ಮತ್ತೆ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಸುಮಾರು 4 ಕೋಟಿ ಅರ್ಹ ಜನರು ಕೋವಿಡ್‌ ಲಸಿಕೆಯ ಒಂದು ಡೋಸನ್ನು ಕೂಡ ಪಡೆದುಕೊಂಡಿಲ್ಲ ಎಂಬ ಕಳವಳಕಾರಿ ವಿಚಾರ ಬೆಳಕಿಗೆ ಬಂದಿದೆ. ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ ಪವಾರ್‌, ‘ಜು. 18ರವರೆಗೆ 178 ಕೋಟಿ ಡೋಸು ಕೋವಿಡ್‌ ಲಸಿಕೆಯನ್ನು ಸರ್ಕಾರಿ ಲಸಿಕಾ ಕೇಂದ್ರದಲ್ಲಿ ಉಚಿತವಾಗಿ ವಿತರಿಸಲಾಗಿದೆ. 

ಆದರೆ ಇದೇ ವೇಳೆ ಸುಮಾರು 4 ಕೋಟಿ ಅರ್ಹ ಜನರು ಕೋವಿಡ್‌ ಲಸಿಕೆಯ ಒಂದು ಡೋಸನ್ನು ಪಡೆದುಕೊಂಡಿಲ್ಲ’ ಎಂದು ಮಾಹಿತಿ ನೀಡಿದ್ದಾರೆ. ‘ಭಾರತದ ಜನಸಂಖ್ಯೆಯ ಶೇ. 98ರಷ್ಟು ಜನರು ಒಂದು ಡೋಸು, ಶೇ.90 ರಷ್ಟು ಜನರು 2 ಡೋಸುಗಳನ್ನೂ ಪಡೆದುಕೊಂಡಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ 75 ದಿನಗಳ ಕಾಲ ಉಚಿತವಾಗಿ ಬೂಸ್ಟರ್‌ ನೀಡಲಾಗುವುದು’ ಎಂದು ಹೇಳಿದ್ದಾರೆ.

Free Booster Dose: ರಾಜ್ಯದಲ್ಲಿ ಉಚಿತ 3ನೇ ಡೋಸ್‌ ಕೋವಿಡ್‌ ಲಸಿಕೆ

ಕೋವಿಡ್‌ ಮತ್ತೆ ಏರಿಕೆ: 4ನೇ ಅಲೆ ಭೀತಿ ನಡುವೆ ದೇಶದಲ್ಲಿ ಮತ್ತೆ 20000ಕ್ಕೂ ಹೆಚ್ಚು ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಶುಕ್ರವಾರ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಒಟ್ಟು 21,880 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ಇದೇ ವೇಳೆ 60 ಸೋಂಕಿತರು ಸಾವಿಗೀಡಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,49,482ಕ್ಕೆ ಏರಿದೆ. 

ದೈನಂದಿನ ಪಾಸಿಟಿವಿಟಿ ದರವು ಶೇ.4.42ರಷ್ಟಿದ್ದು, ವಾರದ ಪಾಸಿಟಿವಿಟಿ ದರವು ಶೇ.4.51 ರಷ್ಟಿದೆ. ಚೇತರಿಕೆ ದರವು ಶೇ.98.46 ರಷ್ಟಿದೆ. ದೇಶದಲ್ಲಿ ಈವರೆಗೆ ಒಟ್ಟು 201.30 ಕೋಟಿ ಲಸಿಕೆಯ ಡೋಸುಗಳನ್ನು ವಿತರಿಸಲಾಗಿದೆ. 60 ಮೃತರ ಪೈಕಿ ಕೇರಳದಲ್ಲಿ 22, ಛತ್ತಿಸಗಢದ 7, ಮಹಾರಾಷ್ಟ್ರದ ಮತ್ತು ಬಂಗಾಳದ 6, ಹಿಮಾಚಲದ ಪ್ರದೇಶದ 3, ಆಸ್ಸಾಂ, ಗುಜರಾತ್‌, ಮಣಿಪುರ, ಮೇಘಾಲಯಗಳಲ್ಲಿ ತಲಾ ಇಬ್ಬರು ಸಾವಿಗೀಡಾಗಿದ್ದಾರೆ.

3ನೇ ಡೋಸ್‌ ಪಡೆದಿದ್ದು ಬರೀ 15% ಜನ: ರಾಜ್ಯದಲ್ಲಿ ಕೊರೋನಾ ಲಸಿಕೆಯ ಮುನ್ನೆಚ್ಚರಿಕಾ (ಮೂರನೇ) ಡೋಸ್‌ಗೆ ಅರ್ಹತೆ ಪಡೆದವರ ಪೈಕಿ ಶೇ.15ರಷ್ಟು ಮಂದಿ ಮಾತ್ರವೇ ಲಸಿಕೆ ಪಡೆದಿದ್ದು, ಬರೋಬ್ಬರಿ 1.3 ಕೋಟಿ ಮಂದಿ (ಶೇ.85 ರಷ್ಟು) ದೂರ ಉಳಿದಿದ್ದಾರೆ! ಉಚಿತವಾಗಿ ಮೂರನೇ ಡೋಸ್‌ ನೀಡಿದರೂ ಶೇ.30ರಷ್ಟು ಆರೋಗ್ಯ ಕಾರ್ಯಕರ್ತರು, ಶೇ.40ರಷ್ಟು ಮುಂಚೂಣಿ ಕಾರ್ಯಕರ್ತರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯ ರಾಜ್ಯದಲ್ಲಿ ಹೊಸ ಪ್ರಕರಣಗಳು ಏರಿಕೆಯಾಗುತ್ತಿದ್ದು, ಒಮಿಕ್ರೋನ್‌ ರೂಪಾಂತರಿಯ ಉಪತಳಿಗಳು ಪತ್ತೆಯಾಗಿವೆ. ಈ ನಡುವೆ ಮುನ್ನೆಚ್ಚರಿಕಾ ಡೋಸ್‌ ಅಭಿಯಾನ ಮಂಕಾಗಿರುವುದು ಆತಂಕ ಮೂಡಿಸಿದೆ.

Corona Crisis: ಕೋವಿಡ್‌ ಸೋಂಕು ಪತ್ತೆಯಾದರೆ ಸೀಲ್‌ಡೌನ್‌ ಇಲ್ಲ

ಸದ್ಯ ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ1.6 ಕೋಟಿ ಜನರು ಮೂರನೇ ಡೋಸ್‌ಗೆ ಅರ್ಹರಿದ್ದಾರೆ. ಆದರೆ, ಈವರೆಗೂ 26 ಲಕ್ಷ ಮಂದಿ (ಶೇ.15ರಷ್ಟು) ಮಾತ್ರವೇ ಮೂರನೇ ಡೋಸ್‌ ಪಡೆದಿದ್ದಾರೆ. 1.34 ಕೋಟಿ ಮಂದಿ ಎರಡನೇ ಡೋಸ್‌ ಪಡೆದು ಒಂಬತ್ತು ತಿಂಗಳು ಪೂರ್ಣಗೊಂಡಿದ್ದರೂ ಮೂರನೇ ಡೋಸ್‌ ಪಡೆದಿಲ್ಲ. ಅಲ್ಲದೇ, 6.5 ಲಕ್ಷ ಆರೋಗ್ಯ ಕಾರ್ಯಕರ್ತರ ಪೈಕಿ 4.71 ಲಕ್ಷ ಮಂದಿ, 7.1 ಲಕ್ಷ ಮುಂಚೂಣಿ ಕಾರ್ಯಕರ್ತರ ಪೈಕಿ 4.4 ಲಕ್ಷ ಮಂದಿ ಮಾತ್ರ ಮೂರನೇ ಡೋಸ್‌ ಪಡೆದಿದ್ದು, ಈ ಎರಡೂ ವಲಯದಲ್ಲಿ ಐದು ಲಕ್ಷ ಮಂದಿ ಇಂದಿಗೂ ಮೂರನೇ ಡೋಸ್‌ನಿಂದ ದೂರ ಉಳಿದಿದ್ದಾರೆ.

click me!